” ಗೋವಿಲ್ಲದೆ ನಾವಿಲ್ಲ” – ಜನರಿಗಿದರ ಅರಿವಾಗದೇ?

ಲೇಖನ

 

ಗವತ್ತು ಗೋವಿಗೆ ಚಿತ್ರಹಿಂಸೆ ಕೊಡುವ ವೀಡೀಯೋ ನೋಡಿ, ಅತ್ಯಂತ ಸಂಕಟವಾಗಿ, “ದೇವರೇ ಗೋವಂಶವನ್ನೇ ನಿಲ್ಲಿಸಿಬಿಡು ಎಂದು ಪ್ರಾಥಿಸುತ್ತೇನೆ. ಭಾರತದಲ್ಲಿನ್ನು ಈ ಚಿತ್ರಹಿಂಸೆ ಜಾಸ್ತಿ ಆಗ್ತಾನೇ ಹೋಗತ್ತೆ. ಕರುಳು ಕಿತ್ತು ಬರುವಷ್ಟು ದುಃಖ ಆಗ್ತಾ ಇದೆ” ಎಂದು ನಮ್ಮ ಅತ್ಯಂತ ಕಿರಿಯ ನಿಕಟವರ್ತಿಯೊಬ್ಬರಲ್ಲಿ ತಿಳಿಸಿದೆ.

 

ಹಾಗಾದರೆ ಮೊದಲು “ಗೋವಿನ ಉತ್ಪನ್ನ ಬಳಸುವುದನ್ನು ಬಿಡ್ತೇನೆ ಎಂಬ ಸಂಕಲ್ಪ ಮಾಡಿ, ಅದನ್ನು ತ್ಯಜಿಸಿಬಿಡಿ. ಆಮೇಲೆ ಪ್ರಾರ್ಥನೆ ಮಾಡುವಿರಂತೆ” ಎಂದರವರು.

 

“ಗೋವಿನ ಉತ್ಪನ್ನ ಬಳಸುತ್ತಾ, ಗೋವಂಶ ನಿಲ್ಲಿಸುವಂತೆ ದೇವರನ್ನು ಪ್ರಾರ್ಥಿಸುವದಕ್ಕೆ ನಿಮಗೆ ಯಾವ ನೈತಿಕತೆ ಇರುತ್ತೆ?” ಅಂತ ಅವರು ಪ್ರಶ್ನೆ ಮಾಡಿದರು.

 

ಹಾಗಾದರೆ ನೋಡಿಯೇ ಬಿಡೋಣ. ಗೋವಿನ ಉತ್ಪನ್ನ ಬಳಸದೇ, ಯಾವ ಯಾವ ಪದಾರ್ಥ ಸಿಗಬಹುದು ಎಂದು ಪಟ್ಟಿ ಮಾಡಲು ಹೊರಟೆ.

 

ಅಸಾಧ್ಯದ ಮಾತಾಯಿತು. ಕೊನೆಗೆ ಪಟ್ಟಿಯಲ್ಲಿ ಬರೆಯಲು ಸಿಕ್ಕಿದ್ದು ನಾವು ಉಸಿರಾಡುವ ‘ವಾಯು’ ಮಾತ್ರ. ಈ ವಾಯುವಿನ ಶುದ್ಧಿಯೂ ಗೋವುಗಳ ಉಸಿರಿನಿಂದ ಸಾಧ್ಯ ಎಂಬುದನ್ನು ಕೇಳಿ ಮಾತೇ ಹೊರಡದಾಯಿತು.

 

ಯಾವುದೇ ಪದಾರ್ಥ ತೆಗೆದುಕೊಳ್ಳಿ- ಅಕ್ಕಿ, ಬೇಳೆ, ಸಕ್ಕರೆ, ಬೆಲ್ಲ, ಗೋಧಿ, ತರಕಾರಿ, ಹಣ್ಣುಹಂಪಲು. ಮತ್ತೆಲ್ಲವನ್ನೂ ಬೆಳೆಸಲು ಗೊಬ್ಬರವಾಗಿ ಗೋವಿನ ಸಗಣಿ ಬೇಕು. ಯಾವುದೇ ಬೆಳೆಗಳಿಗೆ ಕ್ರಿಮಿಕೀಟಗಳು ಬರದಂತೆ ತಡೆಯಲು ಗೋಮೂತ್ರ ಬೇಕು.

 

ಬ್ರೆಡ್, ಬಿಸ್ಕಿಟ್, ಚಾಕಲೇಟ್, ಸಿಹಿ ತಿಂಡಿ, ಚಕ್ಕುಲಿ ಇತರ ಯಾವುದೇ ತಿಂಡಿ ತಯಾರಿಸಲು ಹಾಲು, ಬೆಣ್ಣೆ ಅಥವಾ ತುಪ್ಪ ಬೇಕೇ ಬೇಕು.

 

ಭೂಮಿಯನ್ನು ಫಲವತ್ತಾಗಿ ಮಾಡಲು ಗೋವಿನ ಸಗಣಿ ಮತ್ತು ಗೋಮೂತ್ರವೇ ಬೇಕಾಗುತ್ತದೆ. ಇಲ್ಲವೆಂದರೆ ರಾಸಾಯನಿಕ ಗೊಬ್ಬರ ಬಳಸಿ ತಯಾರಿಸಿದ ಅಕ್ಕಿ, ಬೇಳೆ, ಕಾಳು, ಸಕ್ಕರೆ, ಬೆಲ್ಲ, ಹಣ್ಣುಹಂಪಲು ಸಿಗುತ್ತದೆ, ಆದರೆ ಅದರ ದುಷ್ಪರಿಣಾಮ ಆರೋಗ್ಯದ ಮೇಲೆ ಉಂಟಾಗುವುದು.

 

ಅಲ್ಲಿ ಉಪಯೋಗಿಸುತ್ತಿರುವ ರಾಸಾಯನಿಕ ಗೊಬ್ಬರ ನಮ್ಮ ಮಣ್ಣು ಮತ್ತು ನೆಲವನ್ನೊಂದೇ ಹಾಳು ಮಾಡುವುದಲ್ಲದೇ, ಬೆಳೆ ಬೆಳೆಸಲು ಉಪಯೋಗಿಸಿದ ರಾಸಾಯನಿಕ ಮತ್ತು ಗಿಡಕ್ಕೆ ಸಿಂಪಡಿಸುವ ಪೆಸ್ಟಿಸೈಡ್ ಅಂತರ್ಜಲವನ್ನೂ ಕೆಡಿಸುತ್ತಿದೆ.

 

ಇದು ಯಾವ ಸರಕಾರಕ್ಕೂ, ಪ್ರಗತಿಪರರಿಗೂ, ರಾಜಕೀಯದವರಿಗೂ ಅರ್ಥವಾಗಲೊಲ್ಲದು.
‘ಗೋವಿಲ್ಲದೆ ನಾವಿಲ್ಲ’ ಅಂತ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾತು ಜನರಿಗೂ, ಸರಕಾರಕ್ಕೂ ಅರ್ಥವಾಗುವ ಸಮಯದಲ್ಲಿ ಭಾರತದಲ್ಲಿ ಗೋವು ಉಳಿಯುವುದೇ ಇಲ್ಲವೇನೋ!

Author Details


Srimukha

Leave a Reply

Your email address will not be published. Required fields are marked *