ಅಕ್ಷಯದ ಅನುಗ್ರಹ – ಮುಷ್ಟಿಭಿಕ್ಷೆ : ಶ್ರೀಮತಿ ಪ್ರಸನ್ನಾ ವಿ. ಚೆಕ್ಕೆಮನೆ ಧರ್ಮತ್ತಡ್ಕ

ಲೇಖನ

ಆದಿಶಂಕರರಿಂದ ಸ್ಥಾಪಿಸಲ್ಪಟ್ಟು ಅವಿಚ್ಛಿನ್ನವಾಗಿ ಮುಂದುವರಿದಿರುವ ಶ್ರೀರಾಮಚಂದ್ರಾಪುರಮಠದ ಮೂವತ್ತಾರನೆಯ ಯತಿವರರಾದ ಶ್ರೀರಾಘವೇಶ್ವರಭಾರತೀ ಶ್ರೀಗಳ ಶಿಷ್ಯರು ನಾವು ಎಂಬುದೇ ಮನಸ್ಸಿಗೆ ಪರಮಾಪ್ತವಾದ ವಿಚಾರ.

 

ಸಮಾಜದ ಅಭಿವೃದ್ಧಿಯನ್ನೇ ಪರಮಗುರಿಯನ್ನಾಗಿಸಿಕೊಂಡ ಶ್ರೀಗಳು ಕೈಗೊಂಡಿರುವ ಯೋಜನೆಗಳು ಹಲವಾರು. ಆ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿರುವ ಮಾರ್ಗ ನಿಜಕ್ಕೂ ವಿಶಿಷ್ಟ ಹಾಗೂ ಅದ್ಭುತ.

 

ಸವೆದು ಹೋಗುತ್ತಿದ್ದ ಪ್ರೀತಿ, ವಿಶ್ವಾಸ, ಮಾನವೀಯತೆಯ ಸರಪಣಿಗೆ ಹೊಸ ರೂಪುರೇಷೆ ಕೊಟ್ಟು, ಸಮಾಜದ ಎಲ್ಲರನ್ನೂ ಒಂದೇ ರೀತಿಯ ಮಮತೆಯ ಕೊಂಡಿಯಿಂದ ಬೆಸೆದು, ಶಿಷ್ಯಭಕ್ತರಿಗೆ ಸೂಕ್ತ ಮಾರ್ಗದರ್ಶನವಿತ್ತು, ಸಹಜೀವನದ ಮಹತ್ತ್ವವನ್ನು ಮನಗಾಣಿಸಿ ಧರ್ಮಸ್ಥಾಪನೆಗಾಗಿ ಅಹರ್ನಿಶಿ ಶ್ರಮಿಸುವ ಶ್ರೀಗುರುಗಳ ಶಿಷ್ಯರಾಗಿರುವುದು ನಮ್ಮ ಪೂರ್ವಜನ್ಮದ ಸುಕೃತವೇ ಸರಿ.

 

ಶಿಷ್ಯಕೋಟಿಗೆ ಮಾತೆಯ ಮಮತೆಯಿತ್ತು ಕಾಯುವ ಶ್ರೀಗಳು ಮಾತೆಯರಿಗಾಗಿಯೇ ನೀಡಿದ ಒಂದು ವಿಶಿಷ್ಟ ಯೋಜನೆಯೇ ಮುಷ್ಟಿಭಿಕ್ಷೆ.
“ಪೂರ್ಣ ತುಷ್ಟಿಗೊಂದು ಮುಷ್ಟಿ” ಎಂಬುದೇ ಈ ಯೋಜನೆಯ ಆಶಯ.

 

ಈ ಮಹತ್ತಾದ ಯೋಜನೆ ಇಂದು ಸಾವಿರಾರು ಜನರ ಹೊಟ್ಟೆಯ ಹಸಿವನ್ನು ನೀಗಿಸಿದೆ. ಈಗಲೂ ನೀಗಿಸುತ್ತಿದೆ.
ಹಸಿದವರಿಗೆ ಅನ್ನಕ್ಕಿಂತ ಮಿಗಿಲಾಗಿ ಯಾವುದೂ ಇಲ್ಲ. ಅದರಲ್ಲಿ ಅಮ್ಮನ ಕೈತುತ್ತು ದೊರಕಿದರೆ ಅದಕ್ಕೂ ಮಿಗಿಲಾದ ಭಾಗ್ಯವಿಲ್ಲ. ಅಂತಹ ಕಾರ್ಯವೇ ಈ ಮುಷ್ಟಿಭಿಕ್ಷೆ.

 

ಮುಷ್ಟಿಭಿಕ್ಷೆ ಯೋಜನೆಯು ಮನೆಮನೆಗಳಲ್ಲಿರುವ ಮಾತೆಯರು ಅನ್ನ ತಯಾರಿಸುವುದಕ್ಕಿಂತ ಮೊದಲು ಊಟದ ಅಕ್ಕಿಯಲ್ಲಿಯೇ ಒಂದು ಹಿಡಿ ಅಕ್ಕಿಯನ್ನು ತೆಗೆದಿರಿಸಿ, ಅದನ್ನು ಸಂಗ್ರಹಿಸಿ ಅರ್ಹ ಫಲಾನುಭವಿಗಳಿಗೆ ನೀಡುವಂತಹ ಕಾರ್ಯ.

 

ಪ್ರತಿನಿತ್ಯವೂ ಮನೆಮನೆಗಳಲ್ಲಿ ಮಾತೆಯರು ಶ್ರೀಗುರುಗಳ ಚರಣಕಮಲದ ಸ್ಮರಣೆಯೊಂದಿಗೆ, ಶ್ರೀರಾಮದೇವರನ್ನೂ ಮನದಲ್ಲಿಯೇ ಪ್ರಾರ್ಥಿಸುತ್ತಾ ಪುನೀತ ಭಾವದೊಂದಿಗೆ ತೆಗೆದಿಡುವ ಒಂದು ಮುಷ್ಟಿ ಅಕ್ಕಿಯಲ್ಲಿ “ಅನಂತ ಮುಷ್ಟಿಯ ಆಶೀರ್ವಾದವಿದೆ” ಎಂಬ ಶ್ರೀಗುರುಗಳ ಪರಮಾನುಗ್ರಹವಿದೆ.

 

“ಒಂದು ಮುಷ್ಟಿ ತೆಗೆದಿಡು. ಮಿಕ್ಕಿದ್ದು ಅಮೃತವಾಗುತ್ತದೆ” ಎಂಬ ಶ್ರೀಗಳ ಭರವಸೆಯ ಬೆಂಬಲದೊಡನೆ
ಅನುದಿನವೂ ಸಮಷ್ಟಿಯ ಹಸಿವನ್ನು ಹೋಗಲಾಡಿಸಲು ಮಾತೆಯರು ತೆಗೆದಿರಿಸುವ ಒಂದು ಹಿಡಿ ಅಕ್ಕಿಯಲ್ಲಿ ತ್ಯಾಗ ಭಾವನೆ, ಸಮಾಜದ ನೆನಪು, ಗುರುಪೀಠದ ಸ್ಮರಣೆಗಳ ಭಕ್ತಿಭಾವ ಮಿಳಿತವಾಗಿದೆ.
ಭಕ್ತಿಯಲ್ಲಿ ನೆಂದ ಒಂದು ಹಿಡಿ ಅಕ್ಕಿ ಸಮರ್ಪಿಸುವ ಪುಣ್ಯಕಾರ್ಯದಲ್ಲಿ ಆತ್ಮಸಂತೃಪ್ತಿಯ ಭಾವವಿದೆ. ಶ್ರೀಮಠದ ಕಾರ್ಯವೊಂದರಲ್ಲಿ ಸದ್ದಿಲ್ಲದೆ ಭಾಗವಹಿಸಿದ ಪವಿತ್ರ ಭಾವವು ಪ್ರತಿ ಮಾತೆಯ ಮನವನ್ನು ಪರಿಶುದ್ಧಗೊಳಿಸುತ್ತದೆ.

 

ಈ ರೀತಿಯಲ್ಲಿ ತೆಗೆದಿರಿಸಿದ ಅಕ್ಕಿಯನ್ನು ಮನೆಮನೆಗಳಿಂದ ಸಂಗ್ರಹಿಸಿ ಸೂಕ್ತ ಫಲಾನುಭವಿಗಳಿಗೆ ನೀಡಿದಾಗ ಅದು ಅಕ್ಷಯವಾದ ಅಮೃತಾನ್ನವಾಗಿ ಅವರಿಗೂ ಶ್ರೀಗುರುಗಳ ಕೃಪೆ ದೊರಕುವಂತಾಗುತ್ತದೆ.

 

“ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಅಸಹಾಯಕತೆಯಿಂದ ನರಳುವಂತಾಗಬಾರದು. ಅವರಿಗೂ ಧರ್ಮಸಂಸ್ಥೆಗಳಿಂದ ನೆರವು ದೊರಕಬೇಕು ” ಎಂಬ ಉದ್ದೇಶದೊಡನೆ ಈ ಮುಷ್ಟಿಭಿಕ್ಷೆಯ ಮೂಲಕ ಸಂಗ್ರಹಗೊಂಡ ಅಕ್ಕಿಯನ್ನು ಸಮಾಜದಲ್ಲಿ ಯಾರು ತೀರಾ ಕಷ್ಟದಲ್ಲಿದ್ದಾರೋ, ಯಾವ ಮನೆಯಲ್ಲಿ ಪುರುಷಾಶ್ರಯವಿಲ್ಲದೆ ದುಸ್ತರ ರೀತಿಯಲ್ಲಿ ಬದುಕು ಸಾಗಿಸುವ ಮಾತೆಯರಿದ್ದಾರೋ ಅಂತಹವರಿಗೆ ಇದನ್ನು ಉಚಿತವಾಗಿ ನೀಡಲಾಗುತ್ತದೆ.

 

ನೂರಾರು ಕುಟುಂಬಗಳು ಈ ಯೋಜನೆಯ ಮೂಲಕ ತುಷ್ಟಿಯನ್ನು ಪಡೆದಿದ್ದಾರೆ‌. ಸಹಸ್ರಾರು ಚಿಣ್ಣರ ಮಧ್ಯಾಹ್ನದ ಬಿಸಿಯೂಟವಾಗಿಯೂ ಈ ಅಕ್ಕಿ ವಿನಿಯೋಗವಾಗುತ್ತಿದೆ. ವಿದ್ಯಾರ್ಥಿ ನಿಲಯಗಳು, ಗೋಶಾಲೆಗಳಲ್ಲೂ ಇದರ ಉಪಯೋಗವನ್ನು ಪಡೆಯಲಾಗುತ್ತಿದೆ.

 

ಇಷ್ಟು ಮಾತ್ರವಲ್ಲದೆ ಎಲ್ಲಿ ಸಂತ್ರಸ್ತರಿದ್ದಾರೋ, ಪ್ರಾಕೃತಿಕ ವಿಕೋಪದಿಂದ ತೊಂದರೆಗೊಳಗಾದವರಿದ್ದಾರೋ ಅವರಿಗೂ ಶ್ರೀಮಠದ ಈ ಮಹತ್ತ್ವಪೂರ್ಣ ಯೋಜನೆಯ ಮೂಲಕ ಅಕ್ಕಿ ವಿತರಿಸಲಾಗುತ್ತದೆ. ಇಲ್ಲಿ ರಾಜ್ಯ, ಭಾಷೆ, ಜಾತಿಗಳ ತೊಡಕು ಎಂದಿಗೂ ಇಲ್ಲ ಎಂಬುದೇ ಇದರ ವೈಶಿಷ್ಟ್ಯ.

 

ಗುಜರಾತಿನ ಭೂಕಂಪವಾಗಿರಬಹುದು, ಕೊಡಗಿನ ಪ್ರವಾಹವೇ ಇರಬಹುದು. ಶ್ರೀಗುರುಗಳ ಕರುಣಾಕಟಾಕ್ಷ ಅಲ್ಲಿಗೂ ತಲುಪಿದೆ. ಮುಷ್ಟಿಭಿಕ್ಷೆಯ ಮೂಲಕ ಸಂಗ್ರಹವಾದ ಅಕ್ಕಿ ಅಲ್ಲಿ ಸಂತ್ರಸ್ತರಾದವರ ಹಸಿವನ್ನು ನೀಗಿಸಿದ ಪರಮಾನ್ನವಾಗಿದೆ.

 

ಶಾಲೆಯೊಂದರ ಮಧ್ಯಾಹ್ನದ ಬಿಸಿಯೂಟಕ್ಕೆ ಯಾವುದೋ ರೀತಿಯ ತೊಡಕುಂಟಾದಾಗ ಅಲ್ಲಿಗೂ ಈ ಅಕ್ಕಿಯ ವಿತರಣೆಯಾಗಿ ಇಡೀ ಸಮಾಜವೇ ಮುಷ್ಟಿಭಿಕ್ಷಾ ಯೋಜನೆಯ ಮಹತ್ತ್ವವನ್ನು ಅರಿಯುವಂತಾಗಿದ್ದು ಹೆಮ್ಮೆಯ ವಿಚಾರ.

 

“ತೀರಾ ಸಂಕಷ್ಟದಲ್ಲಿದ್ದಾಗ ಈ ಮುಷ್ಟಿಭಿಕ್ಷೆಯಿಂದ ದೊರಕಿದ ಅಕ್ಕಿಯನ್ನು ಸ್ವೀಕರಿಸುತ್ತಿದ್ದೆವು. ಈಗ ಸ್ವಾವಲಂಬಿಗಳಾಗಿದ್ದೇವೆ‌. ಶ್ರೀಗುರುಗಳ ಅನುಗ್ರಹದಿಂದ ದೊರೆತ ಅಮೃತಾನ್ನವು ನಮ್ಮಂತೆ ಇರುವ ಇತರರಿಗೆ ಸಹಾಯವಾಗಲಿ ಎಂಬ ಸದುದ್ದೇಶದಿಂದಲೇ ನಾವು ಈಗ ಅದರ ಪ್ರಯೋಜನವನ್ನು ಪಡೆದುಕೊಳ್ಳುತ್ತಾ ಇಲ್ಲ.”

 

ಇದು ಕೆಲವು ವರ್ಷಗಳ ಹಿಂದೆ ಮುಷ್ಟಿಭಿಕ್ಷಾ ಯೋಜನೆಯ ಫಲಾನುಭವಿಯಾಗಿದ್ದ ಒಬ್ಬ ಯುವಕನ ನುಡಿ.

 

“ಮಕ್ಕಳ ಹಸಿವಿನ ಕೂಗು ಮಾತೆಗಲ್ಲದೆ ಇನ್ನಾರಿಗೆ ಕೇಳಿಸುತ್ತದೆ. ಅಮ್ಮನ ವಾತ್ಸಲ್ಯ ನೀಡುವ ಶ್ರೀಗುರುಗಳಿಗೆ ನಮ್ಮ ನೋವು ಅರ್ಥವಾಗಿದೆ ಎಂಬುದರ ನಿದರ್ಶನವೇ ಈಗ ನಾವು ಸ್ವೀಕರಿಸುತ್ತಿರುವ ಈ ಮುಷ್ಟಿಭಿಕ್ಷೆಯ ಅಕ್ಕಿ.”
ಮುಷ್ಟಿಭಿಕ್ಷಾ ಸಹಕಾರ ಸ್ವೀಕರಿಸುತ್ತಿರುವ ಮಹಿಳೆಯೊಬ್ಬರ ಆನಂದಭಾಷ್ಪದ ಮಾತುಗಳು.

 

“ಮುಷ್ಟಿಭಿಕ್ಷೆಯ ಮೂಲಕ ದೊರಕಿದ ಅಕ್ಕಿಯ ಅನ್ನ ನಮಗೆ ಶ್ರೀಗುರುಗಳ ಆಶೀರ್ವಾದದ ಫಲ ಎಂಬ ನಂಬಿಕೆಯಿದೆ. ಇದರ ಒಂದೊಂದು ಕಾಳಿನಲ್ಲೂ ಅನಂತ ಅನುಗ್ರಹದ ಕೃಪೆಯಿದೆ ಎಂಬ ನೆಮ್ಮದಿಯೊಂದಿಗೆ ಇದನ್ನು ಸ್ವೀಕರಿಸುತ್ತಿದ್ದೇವೆ.ಮುಂದೊಂದು ದಿನ ಇದನ್ನು ಮರಳಿ ಸಮಾಜಕ್ಕೆ ಒಪ್ಪಿಸಲು ಶ್ರೀ ಗುರುಗಳ ಕಾರುಣ್ಯದಿಂದ ಸಾಧ್ಯ ಎಂಬ ಭರವಸೆ ನಮಗಿದೆ” ಎಂಬುದು ಮುಷ್ಟಿಭಿಕ್ಷೆಯ ಫಲಾನುಭವಿಗಳಿಗಳಾಗಿರುವ ಕುಟುಂಬವೊಂದರ ವಿದ್ಯಾರ್ಥಿನಿಯ ಭಕ್ತಿಭಾವ.

 

“ಸಂಕಷ್ಟದಲ್ಲಿರುವ ನಮ್ಮನ್ನು ಗುರುತಿಸಿ ಈ ಯೋಜನೆಯ ಮೂಲಕ ಸಹಾಯ ಮಾಡುತ್ತಿರುವ ಇಡೀ ಸಮಾಜಕ್ಕೆ ಕೃತಜ್ಞರಾಗಿದ್ದೇವೆ. ಅಮೃತಾನ್ನವುಣ್ಣುವ ನೆಮ್ಮದಿ ನಮಗಿದೆ” ಇದು ಇನ್ನೊಬ್ಬ ಮಾತೆಯ ನುಡಿ.

 

ಇವರೆಲ್ಲರ ಮಾತುಗಳನ್ನು ಕೇಳುವಾಗ ಶ್ರೀಗುರುಗಳ ಈ ಒಂದು ಅದ್ಭುತ ಯೋಜನೆಯ ಮಹತ್ತ್ವದ ಅರಿವಾಗುತ್ತದೆ. ನಮ್ಮ ನಡುವೆ ಇರುವ ಕುಟುಂಬಗಳೇ ಸಂಕಷ್ಟದಲ್ಲಿದ್ದಾರೆ ಎಂಬುದರ ಬಗ್ಗೆ ಜ್ಞಾನೋದಯವಾಗಿದ್ದೇ ಶ್ರೀಗುರುಗಳ ವಿವಿಧ ಯೋಜನೆಗಳಿಂದಾಗಿ ಎಂಬ ಸತ್ಯ ಕಣ್ಣ ಮುಂದಿನ ಕನ್ನಡಿಯಂತೆ ಗೋಚರಿಸುತ್ತದೆ.

 

ಮಾತೆಯರ ಮಮತೆಯ ತುತ್ತಿನಂತೆ ದೊರಕುವ ಒಂದು ಮುಷ್ಟಿ ಅಕ್ಕಿಯ ಮಹತ್ತ್ವ, ಅದರ ಹಿಂದೆ ಇರುವ ಶ್ರೀಗುರುಗಳ ಸಾಮಾಜಿಕ ಕಳಕಳಿ ಇಂದು ಜನಮಾನಸವನ್ನು ತಟ್ಟುವಲ್ಲಿ ಮತ್ತಷ್ಟು ಯಶಸ್ವಿಯಾಗಿ ಮುಂದುವರಿಯುತ್ತಿದೆ.

 

“ಒಂದು ಹಿಡಿ ಅಕ್ಕಿಯಿಂದ ಏನು ಮಾಡಲು ಸಾಧ್ಯ?” ಎಂಬ ಭಾವನೆಯಿದ್ದವರು ಸಹ ಈಗ ತಾವಾಗಿಯೇ ಮುಷ್ಟಿ ಅಕ್ಕಿ ತೆಗೆದಿರಿಸುವ ಮಹತ್ತ್ವಪೂರ್ಣ ಸಂಕಲ್ಪದಲ್ಲಿ ಭಾಗವಹಿಸುತ್ತಿದ್ದಾರೆ ಎಂಬುದು ಹೆಮ್ಮೆಯ ವಿಚಾರವೇ ಸರಿ.

 

ಶ್ರೀ ಸಂಸ್ಥಾನದವರ ಈ ಮಹತ್ತ್ವದ ಯೋಜನೆಯಲ್ಲಿ ಪಾಲ್ಗೊಳ್ಳುವ ಮೂಲಕ ಮಾತೆಯರು ಗುರುಪೀಠದ, ಶ್ರೀ ರಾಮದೇವರ ಅನುಗ್ರಹವನ್ನು ಪಡೆಯುತ್ತಿದ್ದಾರೆ.

 

ಇದು ಇನ್ನಷ್ಟು ವಿಸ್ತರಿಸುವಂತಾಗಿ ಮನೆ ಮನೆಗಳಲ್ಲೂ ಪ್ರತಿ ನಿತ್ಯ ಶ್ರೀಗುರುಗಳ, ಶ್ರೀರಾಮ ದೇವನ ಸ್ಮರಣೆಯಾಗಬೇಕಿದೆ. ಈ ಮೂಲಕ ಮನೆಗಳಲ್ಲಿ ನಾವು ಭುಜಿಸುವ ಅನ್ನವೂ ಅಮೃತಮಯವಾಗುತ್ತದೆ. ಅಮೃತವನ್ನುಂಡ ಜನರ ಸಾಧನೆಗಳೂ ಅನನ್ಯವಾಗುತ್ತದೆ. ಇದರಿಂದಾಗಿ ಸಮಾಜವೇ ರಾಮ ರಾಜ್ಯವಾಗುತ್ತದೆ.

 

ಭಕ್ತಿಯಿಂದ ಒಂದು ಮುಷ್ಟಿ ಅಕ್ಕಿ ಸಮರ್ಪಿಸೋಣ. ಅದು ಅಕ್ಷಯವಾಗುತ್ತಾ ಸಮಷ್ಟಿಯನ್ನು ತುಷ್ಟಿಗೊಳಿಸುವ ಕಾರ್ಯವನ್ನು ಕಂಡು ಆತ್ಮತೃಪ್ತಿ ಪಡೆಯೋಣ. ಶ್ರೀಗುರುಗಳ ಚರಣಗಳಿಗೆ ನಮಿಸುತ್ತಾ, ಶ್ರೀರಾಮಾನುಗ್ರಹವನ್ನು ಪಡೆಯುತ್ತಾ, ಬದುಕ ಪಾವನಗೊಳಿಸೋಣ.

Author Details


Srimukha

1 thought on “ಅಕ್ಷಯದ ಅನುಗ್ರಹ – ಮುಷ್ಟಿಭಿಕ್ಷೆ : ಶ್ರೀಮತಿ ಪ್ರಸನ್ನಾ ವಿ. ಚೆಕ್ಕೆಮನೆ ಧರ್ಮತ್ತಡ್ಕ

  1. ಅರ್ಹರಿಗೆ ಅನ್ನದಾನವೆನ್ನುವುದು ಸಂಪತ್ತಿನ ಸದ್ವಿನಿಯೋಗ; ಅದೂ, ‘ತಾನುಣ್ಣುವನ್ನದಲಿ ಪಾಲೀಯುವೆ’ ಎಂದರೆ ಅದು ಪರಮಾದರ್ಶ.

    ‘ಎನಗೆ ಜೀವನಲ್ಲಿ ಎಂದಿಂಗೂ ಯಾವ ಕಷ್ಟವೂ ಬಾರ’ ಎಂದು ಹೇಳಲು ಯಾರಾದರೂ ಶಕ್ಯರೇ!?! ಇಲ್ಲವಲ್ಲ?
    ನಾ ಪರರಿಗಿದ್ದರೆ, ಪರರು ನನಗೆ – ಎಂಬ ಸ್ವಾರ್ಥಕ್ಕಾಗಿ ಆದರೂ ಸರಿಯೇ.. ಎಲ್ಲರೂ ಮುಷ್ಠಿ ಭಿಕ್ಷೆ ಯೋಜನೆಯಲ್ಲಿ ಪಾಲುಗೊಳ್ಳೋಣ. 🙏

Leave a Reply

Your email address will not be published. Required fields are marked *