ಕೇರಳದ ತುತ್ತತುದಿ ಮತ್ತು ಕರ್ನಾಟಕದ ಪಾದಮೂಲದಲ್ಲಿರುವ ಗಡಿನಾಡು ಕಾಸರಗೋಡು. ೧೯೫೬ರಲ್ಲಿ ಕೇರಳದ ತೆಕ್ಕೆಗೆ ಸೇರಿದ ಈ ಊರು ೧೯೮೪ರಲ್ಲಿ ಜಿಲ್ಲಾಕೇಂದ್ರವಾಯ್ತು. ಹೆಚ್ಚುಕಡಿಮೆ ಹದಿಮೂರು ಲಕ್ಷ ಜನಸಂಖ್ಯೆ. ಸಂಖ್ಯಾ ಬಾಹುಳ್ಯದಲ್ಲಿ ಹಿಂದೂಗಳ ಅನಂತರದ ಸ್ಥಾನದಲ್ಲಿ ಮುಸ್ಲಿಮರಿದ್ದಾರೆ. ೩.೪೮ ಕೋಟಿ ಕೇರಳದ ಜನಸಂಖ್ಯೆ. `ಟೈಮ್ಸ್ ಆಫ್ ಇಂಡಿಯಾ’ ಮತ್ತು `ದಿ ಹಿಂದು’ ವರದಿ (೨೦೧೫-೨೦೧೬)ಗಳ ಪ್ರಕಾರ ಭಾರತ ದೇಶದಲ್ಲೇ ಅತ್ಯಧಿಕ ಬೀಫ್ (ಹಸು ಮತ್ತು ಕೋಣಗಳ ಮಾಂಸ) ಬಳಕೆಯಾಗುತ್ತಿರುವ ರಾಜ್ಯ ಕೇರಳ. ಸಂಖ್ಯಾ ಸಮೀಕ್ಷೆ: ೩೫,೩೨೪ ಸಾವಿರ ಮೆಟ್ರಿಕ್ ಟನ್ ಮಾಂಸ ಉತ್ಪಾದನೆಯಾಗಿದೆ (೧೯೯೫-೯೬). ೨೦೦೫-೨೦೦೬ ರಲ್ಲಿ ಇದು ಹೆಚ್ಚುಕಡಿಮೆ ದ್ವಿಗುಣಗೊಂಡಿತೆಂದೇ (೫೫,೯೨೩ ಮೆಟ್ರಿಕ್ ಟನ್) ಹೇಳಬಹುದು. ೨೦೧೧-೨೦೧೨ ರಲ್ಲಿ ಇದರ ಬಳಕೆ ೨,೪೧,೯೫೬.೬೪ ಮೆಟ್ರಿಕ್ ಟನ್ನುಗಳಷ್ಟಾಯಿತು. ಕೇರಳದ ಒಟ್ಟು ಜನಸಂಖ್ಯೆಯ ಶೇಕಡಾ ೮೦% ಜನರು ಮಾಂಸಾಹಾರಿಗಳು. ಹಿಂದೂಯೇತರರಷ್ಟೇ ಹಿಂದೂಗಳೂ ಗೋಮಾಂಸವನ್ನು ಇಷ್ಟಪಟ್ಟು ತಿನ್ನುತ್ತಾರೆ. ಕೇರಳದ ಹೆಚ್ಚಿನ ಎಲ್ಲ ಮಾಂಸಾಹಾರಿ ಹೋಟೆಲುಗಳಲ್ಲಿ ಬೆಳಗ್ಗಿನ ಉಪಹಾರಕ್ಕೆ ಮಲೆಯಾಳಿ ಶೈಲಿಯ ಪೋರೋಟ, ಎರ್ಚಿಕರಿ(ಪೋರೋಟ ಎಂದರೆ ಮೈದಾದಿಂದ ತಯಾರಿಸಿದ ದಪ್ಪನೆಯ ಚಪಾತಿ, ಎರ್ಚಿಕರಿ ಎಂದರೆ ಗೋಮಾಂಸದ ಪದಾರ್ಥ) ಇದ್ದೇ ಇರುತ್ತದೆ ಮತ್ತು ಅದು ಹತ್ತು ಘಂಟೆಯ ಹೊತ್ತಿಗೆ ಖಾಲಿಯೂ ಆಗಿಬಿಡುತ್ತದೆ. ೨೦೧೫-೨೦೧೬ರಲ್ಲಿ ಪಶುಸಂಗೋಪನಾ ಇಲಾಖೆ ಹೊರಡಿಸಿದ ದತ್ತಾಂಶ: ೧೧.೭ಲಕ್ಷ ಪ್ರೌಢ ಹಸು/ಕೋಣ ಮತ್ತು ೬೯,೧೭೦ ಎಳೆ ಕರುಗಳನ್ನು ಅಧಿಕೃತ ಕಸಾಯಿಖಾನೆಗಳಲ್ಲಿ ಕೊಲ್ಲಲಾಗಿದೆ. ಇದು ಕೇರಳ ರಾಜ್ಯವೊಂದರ ಅಂದಾಜು ಲೆಕ್ಕ ಮಾತ್ರ.
ಪರಮಪೂಜ್ಯ ಶ್ರೀಸಂಸ್ಥಾನದವರು ಹುಟ್ಟುಹಾಕಿದ ಗೋಸಂರಕ್ಷಣಾ ಆಂದೋಲನದ ಹಿನ್ನೆಲೆಯಲ್ಲಿ ಈ ಅಂಕಿ ಅಂಶಗಳನ್ನು ನೋಡುವಾಗ ಗೋವು ಎಂಬ ತಳಿ ಎಂತಹಾ ಅಪಾಯದಂಚಿಗೆ ಬಂದು ನಿಂತಿದೆ ಎಂಬುದು ಅರಿವಾಗುತ್ತದೆ. ಈ ಅಪಾಯದ ಅರಿವು ಮತ್ತು ಸಂರಕ್ಷಣೆಯ ಜವಾಬ್ದಾರಿ ಶ್ರೀಗಳಿಂದ ಸಾಕಾರಗೊಂಡ ಹಲವಾರು ಯೋಜನೆಗಳ ಮೂಲಕ ನಮ್ಮ ನರನಾಡಿಗಳನ್ನು ಹೊಕ್ಕಾಗ ಎಂತಹಾ ಅದ್ಭುತ ಕೆಲಸಗಳನ್ನು ನಾವು ಮಾಡಬಲ್ಲೆವು ಎಂಬುದಕ್ಕೆ ಉದಾಹರಣೆ ಈ ಲೇಖನ.
ಅದು ಮೊಗ್ರಾಲ್ ಪುತ್ತೂರು ಎನ್ನುವ ಸ್ಥಳ. ಕಾಸರಗೋಡು ಜಿಲ್ಲಾ ಕೇಂದ್ರದಿಂದ ಸುಮಾರು ಐದು ಕಿ.ಮೀ. ದೂರ. ಮುಸ್ಲಿಂ ಬಾಹುಳ್ಯದ ಪ್ರದೇಶ. ಮಂಗಳೂರು ಕಾಸರಗೋಡು ಹೆದ್ದಾರಿ ಬದಿಯಲ್ಲೇ ಕಸಾಯಿಖಾನೆಯಿದೆ. ಮೈಯ ರೋಮಗಳನ್ನೆಲ್ಲ ತೆಗೆಯಲ್ಪಟ್ಟ ಸಾಲು ಸಾಲು ಕೋಣಗಳು, ಎತ್ತುಗಳು ಆ ಶೆಡ್ಡಿನಲ್ಲಿ ಯಾವಾಗಲೂ ತುಂಬಿ ತುಳುಕುತ್ತಿರುತ್ತವೆ. ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರೆಲ್ಲರಿಗೂ ಸುಲಭದಲ್ಲಿ ಕಂಡು ಬರುವ ದೃಶ್ಯವಾಗಿತ್ತದು. ಬಹುಶಃ ಸಾರ್ವಜನಿಕರ ಪ್ರತಿಭಟನೆಗೆ ಹೆದರಿಯೋ ಅಥವಾ ಎಫ್.ಎಸ್.ಎಸ್.ಎ.ಐ ಇದರ ಕಠಿಣ ಕಾನೂನಿಗೆ ಹೆದರಿಯೋ ಈಗ ಕೆಲವು ತಿಂಗಳುಗಳಿಂದ ಆ ಕಸಾಯಿಖಾನೆಗೆ ತಡಿಕೆಗಳನ್ನು ಬಳಸುತ್ತಿದ್ದಾರೆ.
೨೦೧೬ ಜನವರಿ ಎರಡನೇ ಶನಿವಾರ. ಶ್ರೀಮಠದ ಕಾರ್ಯಕರ್ತ ಶ್ರೀಮುರಳಿ (ಅದೇ ಊರಿನವರು) ಆ ದಾರಿಯಲ್ಲಿ ಹೋಗುತ್ತಿದ್ದಾಗ ಅಕಸ್ಮಾತ್ತಾಗಿ ಬಿಳಿ ಬಣ್ಣದಂತೆ ತೋರುವ (ಮೈ ಪೂರ್ತಿ ಧೂಳಿನಿಂದ ಮುಚ್ಚಿ ಹೋಗಿ ಬಣ್ಣ ಗುರುತಿಸಲಾಗದಷ್ಟು ಮಸುಕಿ ಹೋಗಿತ್ತು) ಎತ್ತರದ ಹೋರಿಯೊಂದು ಕಣ್ಣಿಗೆ ಬೀಳುತ್ತದೆ. ಗೋಸಂರಕ್ಷಣಾ ಆಂದೋಲನದಲ್ಲಿ ಸಕ್ರಿಯನಾಗಿರುವ ಕಾರ್ಯಕರ್ತನ ಕರ್ತವ್ಯಪ್ರಜ್ಞೆ ಜಾಗರೂಕವಾಯಿತು. ದೂರದಿಂದಲೇ ಹೋರಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹೊಸನಗರ ಶ್ರೀಮಠದಲ್ಲಿದ್ದ ಮಹಾನಂದಿಯ ಹೋಲಿಕೆ ಕಾಣುತ್ತಿತ್ತು. ಅಲ್ಲಿಂದಲೇ ವಲಯದ ಅಧ್ಯಕ್ಷರಿಗೆ ಕರೆ ಹೋಗುತ್ತದೆ. ಗೋಪ್ರೇಮಿಗಳೊಂದಿಗೆ ಅಧ್ಯಕ್ಷರ ಆಗಮನ. ಓಂಗೋಲ್ ತಳಿಯ ಹೋರಿಯನ್ನು ಹೇಗಾದರೂ ಸರಿ, ರಕ್ಷಿಸಿಯೇ ಸಿದ್ಧ ಎಂಬ ದೃಢನಿರ್ಧಾರ. ಅಪಾಯವನ್ನು ಮೈಮೇಲೆ ಎಳೆದೊಂಡ ತಂಡ ಹೋರಿಯ ಭಾವಚಿತ್ರವನ್ನು ಕ್ಲಿಕ್ಕಿಸಿ ವಾಟ್ಸ್ಯಾಪ್ ಮೂಲಕ ಕಾಮದುಘಾ ಅಧ್ಯಕ್ಷ ಡಾ.ವೈ.ವಿ.ಕೃಷ್ಣಮೂರ್ತಿ, ಗೋಪ್ರೇಮಿ ಕುಮಾರಸುಬ್ರಹ್ಮಣ್ಯ ಪೈಸಾರಿ, ಗಣೇಶ ಮುಣ್ಚಿಕಾನ ಮುಂತಾದವರಿಗೆ ರವಾನಿಸುತ್ತದೆ. ಅಧ್ಯಕ್ಷರ ಬಳಗ ಕಸಯಿಖಾನೆಯ ಯಜಮಾನನೊಡನೆ ಮಾತನಾಡಿದಾಗ ಆತ ಹೇಳುತ್ತಾನೆ, ‘ಒಂದು ಹೋರಿಯಿಂದ ಒಂದೂಕಾಲು ಲಕ್ಷ ನಮಗೆ ಕಮಾಯಿ ಇದೆ.ಈಗಾಗಲೇ ಎರಡು ಹೋರಿಯನ್ನು ಕಸಾಯಿ ಮಾಡಿದ್ದೇವೆ. ಇದು ಸ್ವಲ್ಪ ಚಿಕ್ಕ ಪ್ರಾಯದ್ದು, ಮಾಂಸದ ಪ್ರಮಾಣ ಕಡಿಮೆಯೇ ಇರಬಹುದು. ಆದುದರಿಂದ ಒಂದು ಲಕ್ಷ ಕೊಟ್ಟರೆ ನಿಮಗೆ ಕೊಡುವ ಬಗ್ಗೆ ಯೋಚಿಸುತ್ತೇವೆ. ಸೋಮವಾರ ಬೆಳಗ್ಗೆ ಹತ್ತು ಘಂಟೆಯ ಮೊದಲು ದುಡ್ಡು ನಮ್ಮ ಕೈಸೇರಬೇಕು’
ವಿಷಯ ಕಾಮದುಘಾ ಸಂಚಾಲಕರಿಗೆ ರವಾನೆಯಾಗುತ್ತದೆ. ‘ಅಳಿವಿನಂಚಿನಲ್ಲಿರುವ ಓಂಗೋಲ್ ತಳಿಯ ರಕ್ಷಣೆಗೆ ಆದ್ಯತೆ ನೀಡಬೇಕೆಂದು ಶ್ರೀಗಳ ನಿರ್ದೇಶ ಬಂದಿದೆ, ಹಣದ ವ್ಯವಸ್ಥೆ ಮಾಡಲಾಗುವುದು’ ಎಂಬ ಉತ್ತರ ಬರುತ್ತದೆ. ರಾತ್ರಿಯಿಡೀ ವಲಯಾಧ್ಯಕ್ಷರ, ಪೈಸಾರಿಯವರ ಮೊಬೈಲ್ ರಿಂಗುಣಿಸುತ್ತಲೇ ಇತ್ತು. ವೈಯಕ್ತಿಕವಾಗಿಯೂ ಬ್ಯಾಂಕ್ ಮೂಲಕವೂ ದೇಣಿಗೆ ನೀಡ ಬಯಸುವ ದಾನಿಗಳಿಂದ ಬರುತ್ತಿದ್ದ ಕರೆಗಳಾಗಿದ್ದುವು. ಸಂಗ್ರಹವಾದ ಎರಡು ಲಕ್ಷ ರೂಪಾಯಿಗಳೊಂದಿಗೆ ಮಾರನೆದಿನ ಭಾನುವಾರ ವಲಯಾಧ್ಯಕ್ಷರ ಬಳಗ ವಾಹನದೊಂದಿಗೆ ಮತ್ತೆ ಕಸಾಯಿಖಾನೆಗೆ. ಅಧ್ಯಕ್ಷರು ಶ್ರೀಮಠದ ಸಮವಸ್ತ್ರದಲ್ಲಿದ್ದರು. ಹಳದಿ ಬಟ್ಟೆ, ಹಣೆಯಲ್ಲಿ ಕುಂಕುಮವನ್ನು ನೋಡಿದಾಗ ಕಸಾಯಿಖಾನೆಯ ಜನರು ಹೋರಿ ದೇವಸ್ಥಾನಕ್ಕಿರಬೇಕೆಂದು ಅಂದಾಜಿಸಿದರು. ಹೌದೆಂದರು ಹೋದವರು. ‘ಹಾಗಾದರೆ ಹೋರಿಯನ್ನು ಸ್ನಾನ ಮಾಡಿಸಿ ಕೊಡುತ್ತೇವೆ’ ಎಂದರು. `ಸರಿ’ ಎಂದಿತು ಅಧ್ಯಕ್ಷ ಬಳಗ. ಅದುವರೆಗೂ ತಲೆ ತಗ್ಗಿಸಿಯೇ ನಿಂತಿದ್ದ ಎತ್ತು ಒಮ್ಮೆ ತಲೆಯೆತ್ತಿ ಬಂದವರನ್ನು ನೋಡಿತು. ಯಾವುದೇ ತಕರಾರಿಲ್ಲದೆ ಸ್ನಾನಕ್ಕೆ ಒಡಂಬಟ್ಟಿತು. ಒಂದು ಲಕ್ಷವನ್ನು ಎಣಿಸಿ ನೋಡಿದ ಕಸಾಯಿಗಾರ ಹನ್ನೆರಡು ಸಾವಿರಗಳನ್ನು ವಾಪಾಸು ಮಾಡಿ ತನ್ನ ಜನಗಳೊಂದಿಗೆ ಹೋರಿಯನ್ನು ವಾಹನಕ್ಕೆ ಹತ್ತಿಸುತ್ತಾನೆ. ಗಜ ಗಾಂಭೀರ್ಯದಿಂದ ಹೋರಿ ತನ್ನ ರಕ್ಷಕ ಪಡೆಯನ್ನು ಕೂಡಿಕೊಳ್ಳುತ್ತದೆ.
ಶ್ರೀಮಠದ ಅಂಗ ಸಂಸ್ಥೆಯಾದ ಬದಿಯಡ್ಕ (ಕಾಸರಗೋಡು) ವಿದ್ಯಾಪೀಠಕ್ಕೆ ಹೋರಿಯನ್ನು ಕರೆತರಲಾಯಿತು (ಅಲ್ಲಿ ಮಂಡಲ ಸಭೆ ನಡೆಯುತ್ತಿತ್ತು). ಶ್ರೀಗಳ ನಿರ್ದೇಶಕ್ಕೋಸ್ಕರ ಕಾರ್ಯಪಡೆ ಸಿದ್ಧವಾಗಿತ್ತು. ಉಪ್ಪಿನಂಗಡಿ ಸಮೀಪದ ಕಾಂಚನದಲ್ಲಿ ಶ್ರೀಸಂಸ್ಥಾನದವರ ಮೊಕ್ಕಾಂ. ಅಲ್ಲಿಗೆ ತರುವಂತೆ ಸಂಚಾಲಕರಿಂದ ಕರೆ. ಮೊತ್ತಮೊದಲು ಹೋರಿಯನ್ನು ನೋಡಿದ ಶ್ರೀ ಮುರಳಿಯವರ ಕೈಯಿಂದಲೇ ಅದು ಶ್ರೀಗಳಿಗೆ ಸಮರ್ಪಣೆಯಾಯಿತು. ಗೋಸಂಜೀವಿನಿ ಟ್ರಸ್ಟ್ ಇದಕ್ಕೆ ಉಳಿದ ಮೊಬಲಗನ್ನು ವರ್ಗಾಯಿಸಿದ ಧನ್ಯತೆ ವಲಯಾಧ್ಯಕ್ಷರ ತಂಡಕ್ಕಾದರೆ ಮಹನಂದಿಯನ್ನು ಕೈಯಾರೆ ಶ್ರೀಗಳಿಗೆ ಹಸ್ತಾಂತರಿಸಿದ ಧನ್ಯತೆ ಮುರಳಿಯವರಿಗಾಗಿತ್ತು. ಮಲೆಮಹದೇಶ್ವರ ಬೆಟ್ಟದ ಚಳವಳಿ ನಡೆಯುತ್ತಿದ್ದ ಸಮಯವಾಗಿತ್ತದು. ಆದುದರಿಂದ ನಂದಿಗೆ ಮಹದೀಶ್ವರ ಎಂದು ಶ್ರೀಗಳು ನಾಮಕರಣ ಮಾಡಿ ಹರಸಿದರು. ಆಂಧ್ರದಲ್ಲಿ ಜನಿಸಿ ಕರ್ನಾಟಕದಲ್ಲಿ ಮಹದೀಶ್ವರನಾಗಿ ಸದ್ಯ ಕೇರಳದ ಪೂಚಕ್ಕಾಡು ಶ್ರೀ ವಿಷ್ಣುಹೆಬ್ಬಾರರ ಗೋಶಾಲೆಯಲ್ಲಿ ಶಿವನಾಗಿ ಮಡದಿ ಮಕ್ಕಳೊಂದಿಗೆ ಸುಖವಾಗಿದ್ದಾನೆ
Tumba olleya kelasa maadiddakke .vandanegalu
ಹೌದು. ಶ್ರೀಗಳಿಗೆ ಸಲ್ಲಬೇಕು
Hare rama