ಶ್ರೀಗಳವರ ಪೀಠಾರೋಹಣದ ಅನಂತರದ ಮಹಿಳಾ ಸಂಘಟನೆ.

ಲೇಖನ

ಎರಡು ಸಾವಿರ ದಶಕದ ಆಸು-ಪಾಸು. ಶ್ರೀಗೋಕರ್ಣಮಂಡಲಾಧೀಶ್ವರ ಶ್ರೀರಾಘವೇಶ್ವರಭಾರತೀ ಯತಿಗಳ ಪೀಠಾರೋಹಣವಾದ ಆರಂಭದ ದಿನಗಳವು. ಕಾಲಮಾನ ಅಷ್ಟಾಗಿ ನೆನಪಾಗುತ್ತಿಲ್ಲ. ಹವ್ಯಕರನ್ನು ಸಂಘಟಿಸುವ ಮಹದಾಸೆಯಿಂದ ಶ್ರೀಗಳವರು ಸಂಚಾರ ಮಾಡುತ್ತಿದ್ದ ಕಾಲವದು. ಈಗಿನ ಮರಗುಡಿ ವಲಯದಲ್ಲಿರುವ ಕಂಚಿಕೈ ಮಾಗಾರು ಗಣಪತಿ ದೇವಸ್ಥಾನದಲ್ಲಿ ಶ್ರೀಗಳವರು ಇಡೀ ಸೀಮೆಯ ಸಮಸ್ತರನ್ನೂ ಸೇರಿಸಿದ್ದರು. ಸಂಘಟನೆಯ ರೂಪುರೇಷೆಗಳನ್ನು ಚರ್ಚಿಸುತ್ತಿದ್ದ ಹೊತ್ತಿನಲ್ಲೇ ಮಹಿಳೆಯರ ದನಿಯಾಗಿ ನನ್ನನ್ನು ಮಾತನಾಡಲು ಹೇಳಿದರು. ಆಗ ನನಗೂ ಹುರುಪು, ಯಾರೆದುರು ಮಾತನಾಡುತ್ತಿದ್ದೇನೆಂಬ ವೀವೇಚನೆಯನ್ನೂ ಮಾಡದೆ ನಿರ್ಭಿಡೆಯಿಂದ ಪುರುಷಪ್ರಧಾನ ಸಮಾಜ ಇದು. ನಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಅರ್ಥದಲ್ಲಿ ಏನೋನೋ ಭಾಷಣ ಬಿಗಿದಿದ್ದೆ. ಅನಂತರ ಅವರು, “ಏನ್ರಾ? ಹೌದನ್ರಾ? ಅವುಕ್ಕೆ (ಮಹಿಳೆಯರಿಗೆ) ಅಷ್ಟು ಗೋಳು ಕೊಡ್ತ್ರನ್ರಾ?” ಎಂದು ನಕ್ಕಾಗ ಇಡೀ ಸಭೆಯೇ ನಗೆಗಡಲಲ್ಲಿ ಮುಳುಗಿತ್ತು. ನನಗೆ ಆಗ ಸ್ವಲ್ಪ ಸಂಕೋಚವೂ ಆಗಿತ್ತು. ಅದಿಷ್ಟು ಈಗಲೂ ಆಗಾಗ ನೆನಪಾಗಿ ನಾಚಿಕೆಯೆನಿಸುತ್ತದೆ.

 

ಹವ್ಯಕ ಪರಿಷತ್ತು ಆದಾಗ ಮಹಿಳಾ ವಿಭಾಗವೂ ಅದರಲ್ಲಿ ಒಳಗೊಳ್ಳಬೇಕೆಂಬ ಆಲೋಚನೆ ಶ್ರೀಗಳವರ ಮನದಲ್ಲಿ ಈಗ ಬಂದಿತ್ತೆಂಬ ಹುಚ್ಚು ಭ್ರಮೆ ನನ್ನಲ್ಲುಳಿಯುತ್ತಿತ್ತೇನೋ. ಆದರೆ ಅದಾಗಲೇ ಶ್ರೀಗಳವರ ಮನದಲ್ಲಿ ಇಡೀ ಹವ್ಯಕ ಸಂಘಟನೆಯ ಪೂರ್ಣ ಚಿತ್ರಣದ ಕಲ್ಪನೆ ಇತ್ತು ಎಂಬುದಕ್ಕೆ ಮಹಿಳಾವಿಭಾಗವು ಅದರಲ್ಲಿ ಸೇರ್ಪಡೆಗೊಂಡದ್ದು ಸಾಕ್ಷಿ.

 

‘ಯತ್ರ ನಾರ್ಯಸ್ತು ಪೂಜ್ಯಂತೇ, ರಮಂತೇ ತತ್ರ ದೇವತಾಃ.’ ಯಾವ ಮನೆಯಲ್ಲಿ ಸ್ತ್ರೀಯರು ಗೌರವಿಸಲ್ಪಡುವುದಿಲ್ಲವೋ ಅಲ್ಲಿ ಮಾಡುವ ಎಲ್ಲ ಯಜ್ಞ-ಪೂಜಾದಿ ದೇವತಾ ಕ್ರಿಯೆಗಳೆಲ್ಲವೂ ನಿಷ್ಪ್ರಯೋಜಕವಾಗುತ್ತವೆ. ಮಹಿಳೆ ಭಾರತೀಯ ಸಂಸ್ಕೃತಿಯಲ್ಲಿ ಬಾಲ್ಯದಲ್ಲಿ ಮಾತಾ-ಪಿತೃಗಳಿಂದ, ಯೌವನದಲ್ಲಿ ಪತಿಯಿಂದ, ವೃದ್ಧಾಪ್ಯದಲ್ಲಿ ಮಕ್ಕಳಿಂದ ರಕ್ಷಣೆ ಪಡೆಯಬೇಕು, ‘ನಃ ಸ್ತ್ರೀ ಸ್ವಾತಂತ್ರ್ಯಮರ್ಹತ’ ಈ ಎಲ್ಲ ವಿಚಾರಧಾರೆಗಳು ವಿವಿಧ ಕಾಲಘಟ್ಟದಲ್ಲಿ ಸ್ಥಿತ್ಯಂತರಗೊಳ್ಳುತ್ತಾ ಒಂದಕ್ಕೊಂದು ಪೂರಕವಾಗದೇ ಗೊಂದಲಗೊಂಡ ಕಾಲಘಟ್ಟದಲ್ಲಿ ನಾವಿದ್ದೆವು.
ಇತ್ತ ಹಳೆಯ ಸಂಸ್ಕೃತಿಯನ್ನು ಪೂರ್ಣವಾಗಿ ಬಿಡದೇ ಅತ್ತ ಪಾಶ್ಚಾತ್ಯ ಸಂಸ್ಕೃತಿಯ ಆಕರ್ಷಣೆಗೂ ಸ್ವಲ್ಪ-ಸ್ವಲ್ಪವಾಗಿ ವಾಲುತ್ತಿದ್ದ ಸ್ಥಿತಿಯಲ್ಲಿ, ಈ ಉಕ್ತಿಗಳೆಲ್ಲ ತನ್ನ ನಿಜ ಅರ್ಥವನ್ನು ಕಳೆದುಕೊಂಡು ಬರೀ ಉಕ್ತಿಯಾಗಷ್ಟೇ ಉಳಿದುಬಿಡಬಹುದಾಗಿದ್ದ ಕಾಲದಲ್ಲಿ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿ ಮತ್ತು ಧಾರ್ಮಿಕವಾಗಿ ಮಾತೆಯರ ಸ್ಥಾನಮಾನಗಳ ಕುರಿತು ನಮ್ಮ ಗುರುಪೀಠ ಅಂದರೆ ಶ್ರೀಗಳವರು ಅದಾಗಲೇ ಕಾರ್ಯಪ್ರವತ್ತರಾಗಿದ್ದರೆಂದರೆ ಅದಲ್ಲವೇ ನಮ್ಮ ಭಾಗ್ಯ. ಈ ಎಲ್ಲ ಗೊಂದಲ ಮನಸ್ಥಿತಿಗಳನ್ನು ಒಗ್ಗೂಡಿಸಿ, ಹಲವಾರು ಕಾರ್ಯಗಳನ್ನು ಮಹಿಳೆಯರೇ ಮುಂದಾಳತ್ವ ವಹಿಸಿಕೊಂಡು ನಡೆಸಬೇಕೆಂಬ ಯೋಜನೆಗಳು ಸಿದ್ಧಗೊಂಡಿದ್ದವು.

 

ನಮ್ಮ ಅನ್ನದ ಒಂದು ತುತ್ತು ಸಮಾಜದ ಮತ್ತಾವುದೋ ಹೊಟ್ಟೆಯ ಹಸಿವನ್ನು ನೀಗಬಹುದು, ಈ ಕಲ್ಪನೆಯಿಂದ ನಿತ್ಯ ಅನ್ನ ಮಾಡಲು ಅಕ್ಕಿ ತೆಗೆದು ತೊಳೆಯುವ ಮುನ್ನ ಒಂದು ಮುಷ್ಟಿ ಅಕ್ಕಿಯನ್ನು ಸೇವಾಭಾವದಲ್ಲಿ ಗುರುಸ್ಮರಣೆಯಿಂದ ತೆಗೆದಿರಿಸುವುದು. ಇದನ್ನು ಮಾತೆಯರೇ ಮಾಡಬೇಕಲ್ಲವೇ? ಮುಷ್ಟಿ ಅಕ್ಕಿ ಇಡುವ, ಹಸಿದವರಿಗೆ ಕೊಡುವ ಕೈ ತಾಯಿಗಲ್ಲದೇ ಇನ್ನಾರಿಗೆ ಇರಲು ಸಾಧ್ಯ? ಹಾಗಾಗಿ ಮಹಿಳಾ ಪ್ರತಿನಿಧಿಗಳೇ ಮುಷ್ಟಿಭಿಕ್ಷೆ ತೆಗೆದಿಡುವಂತೆ ಮನವೊಲಿಸಿ, ಪ್ರತಿ ತಿಂಗಳೂ ಸಂಗ್ರಹಿಸಿ ಮಠದ ಮೂಲಕ ಆರ್ತರಿಗೆ ತಲುಪುವಂತೆ ಮಾಡಲಾಗಿದೆ. ಈ ವಿಶೇಷ ಯೋಜನೆಯ ಹೆಸರೇ ‘ಮುಷ್ಟಿಭಿಕ್ಷಾ’.

 

ಶ್ರೀಮಠದ ಸೇವೆಯಲ್ಲಿ ಮಹಿಳೆಯರಿಗೆ ಸಿಕ್ಕ ಮತ್ತೊಂದು ಅವಕಾಶವೇ ‘ಬಿಂದು ಸಿಂಧು’ ಎಂಬ ವಿಶೇಷ ಯೋಜನೆ. ಸಮಾಜದಲ್ಲಿರುವ ಬಡವರಿಗೆ ಸಹಾಯ ಮಾಡಲೋಸುಗ ದೇವಪೂಜಾ ಸಮಯದಲ್ಲಿ ರಾಮನನ್ನು ನೆನೆದು, ದಿನವೂ ಒಂದು ರೂಪಾಯಿಯನ್ನು ಕರಂಡಕದಲ್ಲಿ ಹಾಕುವಂತೆ ಮನೆಯ ಪುರುಷರ ಮನವೊಲಿಸಿ, ಅದನ್ನು ತಿಂಗಳಿಗೊಮ್ಮೆ ಮಹಿಳಾ ಪ್ರತಿನಿಧಿ ಸಂಗ್ರಹಿಸಿ ವಲಯ ಕೋಶಾಧ್ಯಕ್ಷರ ಮೂಲಕ ಶ್ರೀಮಠಕ್ಕೆ ತಲುಪಿಸಬೇಕು. ಇದನ್ನು ಮನೆಮಂದಿಗೆ ರೂಢಿಸುವ ಕಾರ್ಯ ಮಹಿಳೆಯರದ್ದು.

 

ಗಂಡು ಮಗುವಿಗೆ ಉಪನಯನ ಸಂಸ್ಕಾರವಿದೆ. ಆದರೆ, ಹೆಣ್ಣುಮಕ್ಕಳಿಗೆ ಇಂತಹ ಅವಕಾಶ ಈ ಮಧ್ಯೆ ಇರಲಿಲ್ಲ. ಶ್ರೀಸಂಸ್ಥಾನದವರ ಆಶಯದ ಮೇರೆಗ ಇದೀಗ ಕನ್ಯಾಸಂಸ್ಕಾರ ಕಾರ್ಯಕ್ರಮ ಆರಂಭಗೊಂಡಿದೆ. ಇದರ ಜವಾಬ್ದಾರಿಯನ್ನು ಮಾತೃವಿಭಾಗ ಹೊತ್ತುಕೊಂಡಿದೆ. ಇದಕ್ಕೆ ಪೂರಕವಾಗಿ ಶ್ರೀಗಳವರ ಇಪ್ಪತ್ತನೇ ಚಾತುರ್ಮಾಸ್ಯದ ಸಂದರ್ಭದಲ್ಲಿ ಮಾಣಿ, ಪೆರಾಜೆ ಶ್ರೀರಾಮಚಂದ್ರಪುರಮಠದಲ್ಲಿ ‘ಕನ್ಯಾ ಸಮಾವೇಶ’ ನಡೆಯಿತು. ಹಾಗೆಯೇ ಇದೇ ಸಂದರ್ಭದಲ್ಲಿ ಮಹಿಳಾ ಸಂಘಟನೆಯ ದ್ಯೋತಕವಾಗಿ ಮಹಿಳಾ ಸಮಾವೇಶ ‘ಮಾತೃಸಂಗಮ’ ಕೂಡ ಬಹಳ ವಿಜೃಂಭಣೆಯಿಂದ ನೆರವೇರಿತು.

 

ತಾನು, ತನ್ನ ಗಂಡ, ಮಕ್ಕಳು, ಬಂಧು-ಬಳಗದ ಆತಿಥ್ಯ ಇಷ್ಟನ್ನೇ ತನ್ನ ಬದುಕಾಗಿಸಿಕೊಂಡ ಮಹಿಳೆಗೆ, ‘ಇದಿಷ್ಟೇ ಅಲ್ಲ. ನಿನಗಾಗಿ ಇನ್ನೂ ದೊಡ್ಡ ಪ್ರಪಂಚವೊಂದಿದೆ’ ಎಂದು ತಿಳಿಸಿ, ತಾಯ್ತನವನ್ನು ವಿಸ್ತರಿಸಿದಾಗ ಹುಟ್ಟಿಕೊಂಡ ಮತ್ತೊಂದು ಯೋಜನೆಯೇ ‘ಮಹಿಳೋದಯ’. ಏಪ್ರಿಲ್ 2002ರಲ್ಲಿ ಕರ್ನಾಟಕ ಮತ್ತು ಕೇರಳದ ಗಡಿ ಪ್ರದೇಶವಾದ ಕಾಸರಗೋಡಿನ ಬದಿಯಡ್ಕದಲ್ಲಿ ಶ್ರೀಸಂಸ್ಥಾನದ ಆದೇಶ ಮತ್ತು ಮಾರ್ಗದರ್ಶನದಲ್ಲಿ ‘ಮಹಿಳೋದಯವು ‘ಮಹಿಳೆಯರಿಗಾಗಿ ಮಹಿಳೆಯರಿಂದ’ ಎಂಬ ಧ್ಯೇಯದೊಂದಿಗೆ ಆರಂಭಗೊಂಡಿತು. ಅಲ್ಲಿನ ಸುತ್ತಮುತ್ತಲ ಮಹಿಳೆಯರು ಮನೆಗೆಲಸಗಳನ್ನು ಮುಗಿಸಿ, ಬಿಡುವಿನ ಸಮಯದಲ್ಲಿ ರುಚಿಯಾದ ಹವ್ಯಕ ಪಾಕಗಳನ್ನು ತಯಾರಿಸಿ, ನಗರಗಳಿಗೆ ತಲುಪಿಸುವಲ್ಲಿ ಸಂಘಟಿತವಾಯಿತು ಮತ್ತು ಅದರಲ್ಲಿನ ಸದಸ್ಯರುಗಳಿಗೆ ಜೀವನಾಧಾರವೂ ಆಯಿತು.

 

“ತಾಯಿಯಂತಾಗದವರು ಗುರುವಾಗಲಾರರು, ಗುರುವಾಗದವಳು ತಾಯಿಯಾಗಲಾರಳು. ಮಗುವಿನ ಕಣ್ಣು ತೆರೆಸುವ ಕೆಲಸ ತಾಯಿಯದ್ದು. ಶಿಷ್ಯರ ಕಣ್ಣು ತೆರೆಸುವ ಕೆಲಸ ಗುರುವಿನದ್ದು”, ಶ್ರೀಸಂಸ್ಥಾನವೇ ನಮ್ಮೆಲ್ಲರಿಗೂ ಆಶೀರ್ವದಿಸಿದ ಉಕ್ತಿಗಳಿವು. ಇದಕ್ಕೆ ಪೂರಕವಾಗಿ ಮನೆ-ಮನೆಯಲ್ಲೂ ಭಜನ ರಾಮಾಯಣ, ಆದಿತ್ಯಹೃದಯ ಪಠಣ, ಹನುಮಾನ್ ಚಾಲೀಸ, ಶಿವಪಂಚಾಕ್ಷರೀ ಸ್ತೋತ್ರ, ಕುಂಕುಮಾರ್ಚನೆ ನಡೆಯುವಂತೆ ಮಹಿಳೆಯರನ್ನು ಪ್ರೇರೇಪಿಸಿದ್ದು. ಅಷ್ಟೇ ಅಲ್ಲದೆ ಅದೆಲ್ಲವೂ ಲಕ್ಷ-ಲಕ್ಷ, ಕೋಟಿ-ಕೋಟಿ ಸಂಖ್ಯೆಯಲ್ಲಿ ನಡೆಯಲೇಬೇಕೆಂಬ ವಾತ್ಸಲ್ಯಪೂರಿತ ಒತ್ತಾಯವನ್ನು ಶಿಷ್ಯರಲ್ಲಿ ತುಂಬಿದ್ದರು ಶ್ರೀಗಳು.

 

ಶ್ರೀಗಳ ಮೇರೆ ಮೀರಿದ ಇಚ್ಛಾಶಕ್ತಿಗೆ ನಮಿಸದೇ ಇರಲು ಸಾಧ್ಯವಿಲ್ಲ. ಈ ಮೊದಲೇ ಹೇಳಿದಂತೆ ಯಾವ್ಯಾವುದೋ ಆಕರ್ಷಣೆಗೆ ಒಳಗಾಗಿ ತಮ್ಮತನವನ್ನೇ ಮರೆಯಲೆತ್ನಿಸುತ್ತಿರುವ ಮಾತೆಯರ ಈ ಸಂದಿಗ್ಧಕಾಲದಲ್ಲಿ ಇದೊಂದು ಕ್ರಾಂತಿಯನ್ನೇ ಉಂಟುಮಾಡಿತೆಂದರೆ ಅದು ಉತ್ಪ್ರೇಕ್ಷೆಯಲ್ಲವೇ ಅಲ್ಲ. ಹಾಗಾಗಿಯೇ ಈಗ ಸಾಮಾಜಿಕವಾಗಿಯೂ, ದೇವಸ್ಥಾನಗಳಲ್ಲೂ ಅಥವಾ ಮನೆಮನೆಗಳಲ್ಲೂ ಭಜನೆಗಳು, ಕುಂಕುಮಾರ್ಚನೆಗಳು ನಡೆಯುವುದು ಸಾಮಾನ್ಯವೆನ್ನುವಂತಾಗಿದ್ದು ಮಹಿಳಾ ಸಂಘಟನೆಯ ದ್ಯೋತಕವಾಗಿದೆ.

 

ಈ ಸಂಘಟನೆ ದಿಟ್ಟ ಹೆಜ್ಜೆಯಾಗುತ್ತ ಶ್ರೀಗಳವರ ಕನಸಿನ ಕೂಸಾದ ‘ಗೋಸ್ವರ್ಗ’ದವರೆಗೂ ಬಂದದ್ದು ನಿಜಕ್ಕೂ ಹೆಮ್ಮೆಯ ಸಂಗತಿ. ಅದು ಹೇಗೆಂದರೆ ಗೋಸ್ವರ್ಗವನ್ನು ಸ್ವರ್ಗಸದೃಶವನ್ನಾಗಿ ಮಾಡುವಲ್ಲಿ ಶಿಷ್ಯಕೋಟಿಗಳ ಮನವೊಲಿಸಿ, ಅಲ್ಲಿ ‘ಸಾವಿರದ ಸುರಭಿ’ಯಂತಹ ಕೆಲವು ಸೇವೆಗಳನ್ನು ಮಹಿಳೆಯರೇ ಮುಂದಾಳತ್ವ ವಹಿಸಬೇಕೆಂದು ಶ್ರೀಗಳವರ ಆಶಯವಾಗಿತ್ತು. ಈ ಪುಣ್ಯತಮ ಕಾರ್ಯದಲ್ಲಿ ಮಹಿಳೆಯರ ಕೈ ಮೇಲಾಗಿ ನಿರೀಕ್ಷೆಗೂ ಮೀರಿದ ಯಶಸ್ಸಿನತ್ತ ದಾಪುಗಾಲಿಟ್ಟಿದ್ದು ಈಗ ಇತಿಹಾಸ. ಇದನ್ನು ಶ್ರೀಗಳವರು ಮುಕ್ತಕಂಠದಿಂದ ಶ್ಲಾಘಿಸಿ ನಮ್ಮೆಲ್ಲರನ್ನು ಆಶೀರ್ವದಿಸಿದ್ದು, ಸಂಘಟನೆಗೆ ಆನೆಯ ಬಲ ಬಂದಂತಾಗಿದೆ.

 

‘ಸಪ್ತಮಂಗಲ’ ಎಂಬ ಯೋಜನೆಯ ಹೆಸರಲ್ಲೇ ಇದ್ದಾಳೆ ಮಹಿಳೆ. ಸಂಸ್ಕಾರ, ಸಂಸ್ಕೃತಿ ಮಂಗಲ, ಗೋಸೇವೆ, ಆಹಾರ, ಆರೋಗ್ಯ, ಗೃಹೋದ್ಯಮ, ಸಮಾಜೋನ್ನತಿ, ಸಾಂತ್ವನ ಹಾಗೂ ಸ್ಪರ್ಧಾಮಂಗಲ ಇವಿಷ್ಟು ಸೇರಿ ಸಪ್ತಮಂಗಲ. ಇಲ್ಲಿ ಪ್ರತಿಯೊಂದು ವಿಭಾಗದಲ್ಲೂ ಮಹಿಳೆಯರೇ ಸಂಪೂರ್ಣ ಜವಾಬ್ದಾರಿಯಾಗಿರುವುದು ಇದರ ವಿಶೇಷ. ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸುವ ಕುರಿತು ಮಾತೆಯರಿಗೆ ಅರಿವು ಮೂಡಿಸುವಲ್ಲಿಂದ ಹಿಡಿದು ಗೋಸೇವೆ, ವಿಷಮುಕ್ತ ಆಹಾರದ ಅರಿವು, ಹಬ್ಬ ಹರಿದಿನಗಳ ಪರಿಚಯ, ಸ್ವ-ಉದ್ಯೋಗ ಹಾಗೂ ಪ್ರಾದೇಶಿಕವಾದ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ (ನಾರೀಸುರಕ್ಷಾ) ಮಾತೆಯರನ್ನು ಒಗ್ಗೂಡಿಸುವುದೇ ಈ ಸಂಘಟನೆಯ ಉದ್ದೇಶ.

 

ಹವ್ಯಕ ಸಂಘಟನೆಗಾಗಿ ರೂಪಿತವಾದ ಈ ವಲಯ, ಮಂಡಲ, ಮಹಾಮಂಡಲಗಳಲ್ಲಿ, ಶ್ರೀಕಾರ್ಯಕರ್ತರಿಂದ ಮೊದಲುಗೊಂಡು ಮಹಾಮಂಡಲದ ಪ್ರತಿ ಸ್ತರದಲ್ಲಿಯೂ ಸ್ತ್ರೀಯರಿಗೆ ಅವಕಾಶ ಕಲ್ಪಿಸಿದ್ದಲ್ಲದೇ, ಈ ಬಾರಿ ಮಹಾಮಂಡಲದ ಅಧ್ಯಕ್ಷರಾಗಿ ಒಬ್ಬ ಮಹಿಳೆಯನ್ನು ಆಯ್ಕೆ ಮಾಡಿದ್ದು ಮತ್ತೊಮ್ಮೆ ಮಹಿಳಾ ಸಬಲೀಕರಣಕ್ಕೆ ಬಲ ಬಂದಂತಾಗಿದೆ.

 

ನಮ್ಮ ಸರ್ಕಾರಿ ವ್ಯವಸ್ಥೆಯಲ್ಲಿ ಸ್ತ್ರೀಯರಿಗೆ ಕೇವಲ ಶೇಕಡ 33 ಸ್ಥಾನ ಕೊಟ್ಟಿದೆ. ಆದರೆ, ನಮ್ಮ ಗುರುಪೀಠದಲ್ಲಿ ಶೇಕಡವಾರು ಲೆಕ್ಕ ಹಾಕಿದರೆ ನೂರಕ್ಕೆ ನೂರು ಸ್ಥಾನಗಳಿಗೆ ಅವಕಾಶವಿದೆ. ಇಲ್ಲೊಂದು ಸಮಾಜಿಕ ಚಿಂತಕರು ಗಮನಿಸಲೇಬೇಕಾದ ಅಂಶವೊಂದಿದೆ. ಅದೆಂದರೆ, ಇಲ್ಲಿಯ ಮಹಿಳಾ ಭಕ್ತಾದಿಗಳ್ಯಾರೂ ಅಮಾಯಕರಲ್ಲ, ಮುಗ್ಧರಲ್ಲ. ಆಯಾಯಾ ಕ್ಷೇತ್ರಗಳಲ್ಲಿ ಯಶಸ್ಸು ಗಳಿಸಿದ ಅನೇಕರು ಇಲ್ಲಿದ್ದಾರೆ. ಲೇಖಕರಿದ್ದಾರೆ, ಐ.ಟಿ.ಬಿ.ಟಿ. ಕಂಪೆನಿಗಳ ಕೆಲಸ ತ್ಯಜಿಸಿ ಮಠದಲ್ಲಿ ಸೇವೆ ಸಲ್ಲಿಸುವವರಿದ್ದಾರೆ. ಸಂಗೀತಗಾರರಿದ್ದಾರೆ. ವೈದ್ಯರಿದ್ದಾರೆ. ಸಾಕ್ಷರತಾ ಕ್ಷೇತ್ರದಲ್ಲಿ ರಾಷ್ಟ್ರಪತಿ ಪ್ರಶಸ್ತಿ ಗಳಿಸಿದವರಿದ್ದಾರೆ. ಇವರೆಲ್ಲರ ಸಾಮಾಜಿಕ ಕಳಕಳಿಯ ಒಗ್ಗೂಡುವಿಕೆಗೆ ಮೂಲ ಪ್ರೇರಣೆ ಶ್ರೀಗಳೇ ಆಗಿದ್ದಾರೆ. ಈ ಸಂಘಟನೆಯಲ್ಲಿ ಒಬ್ಬ ಸಾಮಾನ್ಯ ಮಹಿಳೆಗೂ ಕೂಡ ಗುರುತರ ಜವಾಬ್ದಾರಿಯನ್ನು ಕೊಟ್ಟು ಆ ಮೂಲಕ ಪ್ರತಿ ಮನೆಯ ಮಾತೆಯೂ ಕೂಡ ನಮ್ಮ ಗುರುಪರಂಪರೆ, ಸಂಸ್ಕೃತಿಯತ್ತ ತಿರುಗಿ ನೋಡುವಂತಾದದ್ದು ನಿಜಕ್ಕೂ ಅಚ್ಚರಿಯೇ ಸರಿ. ಅದಕ್ಕಲ್ಲವೇ ಹಿರಿಯರು ಹೇಳಿರುವುದು? ನೂಲಿನಂತೆ ಸೀರೆ, ತಾಯಿಯಂತೆ ಮಗಳು ಎಂದು. ಅಡಿಪಾಯ ಗಟ್ಟಿಯಾಗಿದ್ದಾಗಲಷ್ಟೇ ಮನೆ ಭದ್ರವಾಗಿರುವುದು ಸರಿ ತಾನೆ. ಇದನ್ನರಿತೇ ನಮ್ಮ ಶ್ರೀಗಳವರು ಭದ್ರಬುನಾದಿಗಾಗಿ ಇಂತಹ ಮಹಿಳಾ ಸಂಘಟನೆಯ ಯೋಜನೆಯನ್ನು ರೂಪಿಸಿದ್ದು ಎಂದರೆ ತಪ್ಪಾಗಲಾರದು.

 

ಹೀಗೆ ಶ್ರೀಗಳವರ ಪೀಠಾರೋಹಣದಂದಿನಿಂದಲೂ ಕಿರು ಹಣತೆಯ ದೀಪವೊಂದು ಸಾವಿರ-ಸಾವಿರ, ಲಕ್ಷ-ಲಕ್ಷ ದೀಪಗಳಾಗಿ ಸುಸ್ಥಿರ ಸಮಾಜವೊಂದು ಮುನ್ನಡೆಯಲು, ಆ ಮೂಲಕ ರಾಮರಾಜ್ಯವನ್ನು ತಲುಪಲು ದೇದೀಪ್ಯಮಾನವಾದ ದಾರಿದೀಪಗಳಾಗಲು ಶ್ರೀಗಳಿಂದ ಪ್ರೇರಿತವಾದ ಈ ಮಹಿಳಾ ಸಂಘಟನೆಯ ಪಕ್ಷಿನೋಟವಿದು. ಹೀಗೆ ಇನ್ನೂ ಅನೇಕ ಕಿರು ದೀವಟಿಗಳೆಲ್ಲ ಒಟ್ಟಾಗಿ ಅಲ್ಲಲ್ಲಿಯೇ ಸಂಘಟಿತರಾಗಿ ಅನೇಕ ಯೋಜನೆಗಳ ಯಶಸ್ಸಿಗೆ ಕಾರಣವಾಗಿವೆ. ಇಂತಹ ಯೋಜನಾಬದ್ಧವಾದ ಸಂಘಟನೆಯೊಂದಕ್ಕೆ ಪ್ರೇರಣೆ ಹಾಗೂ ಸ್ಪೂರ್ತಿಸೆಲೆಯಾದ ಶ್ರೀಶಕ್ತಿಗೆ ನಮಿಸುತ್ತಾ,

 

ತಿಳಿವಿಗೊಳಿಸೆನಿಸಿದುದು ನಡೆಯೊಳೇತಕ್ಕರಿದು ?
ಕುಳಿಮೇಡುದೂರ ಮತಿ ಮನಸುಗಳ ನಡುವೆ ||
ಒಳಗಿನಾ ಎಣ್ಣೆ-ಬತ್ತಿಗಳೆರಡು ಮೊಡವೆರೆಯೆ
ಬೆಳಕು ಜೀವೋನ್ನತಿಗೆ – ಮಂಕುತಿಮ್ಮ ||

Author Details


Srimukha

Leave a Reply

Your email address will not be published. Required fields are marked *