ವಿಶ್ವಕೊಬ್ಬನೇ ಒಡೆಯ ಶ್ರೀರಾಮ. ವಿಶ್ವಕ್ಕೊಂದೇ ಅವಿಚ್ಛಿನ್ನ ಗುರುಪರಂಪರೆ. ಅದು ಶ್ರೀರಾಮಚಂದ್ರಾಪುರಮಠ ಗುರು ಪರಂಪರೆ. ಒಂದು ಪೀಠದಲ್ಲಿರುವ ಶ್ರೀಗಳು ತಮ್ಮ ನಂತರ ಪೀಠಾರೋಹಣ ಮಾಡಲು ಶಿಷ್ಯನನ್ನು ಆಯ್ಕೆಮಾಡಿ, ಅವರಿಗೆ ಸಂನ್ಯಾಸದೀಕ್ಷೆ-ಮಂತ್ರೋಪದೇಶ ನೀಡಿ ತಮ್ಮ ಉತ್ತರಾಧಿಕಾರಿಯಾಗಿ ಘೋಷಿಸುವುದೊಂದು ಪದ್ಧತಿ. ಈ ರೀತಿಯ ಪದ್ಧತಿಯು ಮಧ್ಯದಲ್ಲಿ ವಿಚ್ಛಿನ್ನವಾಗದೇ ಮುಂದುವರಿದಲ್ಲಿ ಹಿಂದಿನ ಗುರುಪರಂಪರೆಯಿಂದ ಶಕ್ತಿಯು ಪ್ರವಾಹವಾಗಿ ಹರಿದು ಪೀಠಾಧಿಪತಿಗಳು ಪ್ರಭಾವಿಗಳಾಗುತ್ತಾರೆ. ಈ ರೀತಿ ಯಾವುದೇ ಅಡೆತಡೆಗಳಿಲ್ಲದೆ ಮುಂದುವರಿದ ಪರಂಪರೆಯನ್ನು ಅವಿಚ್ಛಿನ್ನಪರಂಪರೆ ಎನ್ನಲಾಗುತ್ತದೆ. ಹೀಗೆ ಶ್ರೀರಾಮಚಂದ್ರಾಪುರಮಠದ ಗುರುಪರಂಪರೆಯು ಸಹಸ್ರಮಾನಗಳ ಹಿಂದೆ ಶ್ರೀಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟು ಅಂದಿನಿಂದ ಇಂದಿನವರೆಗೂ ಕುಂಠಿತವಾಗದೇ, ಜಗತ್ತಿನ ಸಕಲಚರಾಚರಗಳಿಗೆ ಪ್ರೀತಿವಾತ್ಸಲ್ಯ ಉಣಬಡಿಸುತ್ತಾ, ಜಗತ್ತನ್ನು ಸಲಹುತ್ತಿರುವ ಏಕಮೇವ ಅವಿಚ್ಛಿನ್ನ ಪರಂಪರೆಯಾಗಿ ಐತಿಹಾಸಿಕವಾಗಿ ಮುಂದುವರಿದಿದೆ. ಇಂತಹ ಶ್ರೇಷ್ಠಪರಂಪರೆಯ ೩೬ನೇ ಪೀಠಾಧಿಪತಿಗಳಾಗಿ, ತಮ್ಮ ಅದುವರೆಗಿನ ಸಂಪತ್ತು ಸಂಬಂಧಗಳನ್ನೆಲ್ಲ ತೊರೆದು ಜಗದ್ಗುರುಗಳಾಗಿ, ಶಿಷ್ಯಕೋಟಿಗಳ ಸಂಪತ್ತಾಗಿ, ಪರಮಾಪ್ತ ಬಂಧುವಾಗಿ, ಮಾತೃಹೃದಯಿಯಾಗಿ, ಕಲಿಯುಗದ ಕಾಮಧೇನುವಾಗಿ, ಭಾರತದ ಹೃದಯವಾಗಿ, ರಾಷ್ಟ್ರಸಂಜೀವಿನಿಯಾಗಿ, ಪೀಠ ಅಲಂಕರಿಸಿದವರೇ ಅಭಿನವಶಂಕರರೆಂದೇ ಗುರುತಿಸಲ್ಪಡುವ ನಮ್ಮೆಲ್ಲರ ಪ್ರೀತಿಯ ಶ್ರೀಸಂಸ್ಥಾನ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು. “ಈ ಜೀವನ ಭಗವಂತನಿಗಾಗಿ, ಸನಾತನ ಧರ್ಮ-ಸಂಸ್ಕೃತಿಯ ರಕ್ಷಣೆಗಾಗಿ ಮುಡಿಪು, ಶಿಷ್ಯಸಮೂಹದ ಅನಾಥ ದೀನ ದುಃಖಿಗಳ ರಕ್ಷಣೆಗೆ ಅರ್ಪಿತ” ಎಂಬುದಾಗಿ ಘೋಷಿಸಿದವರು.
ಇನ್ನು ಶ್ರೀಸಂಸ್ಥಾನದ ಪ್ರಧಾನ ಆರಾಧ್ಯದೇವರು ಅಂದರೆ ಮೂವರು ಮಹಾದೇವತೆಗಳು. ಶ್ರೀಸೀತಾರಾಮಚಂದ್ರ-ಚಂದ್ರಮೌಳೀಶ್ವರ-ರಾಜರಾಜೇಶ್ವರಿಯರು. ಶ್ರೀರಾಮನ ವಿಗ್ರಹ ಮಹರ್ಷಿ ಅಗಸ್ತ್ಯರಿಂದ ಪೂಜಿಸಲ್ಪಟ್ಟದ್ದು. ಇನ್ನು ಶ್ರೀಚಂದ್ರಮೌಳೀಶ್ವರ ಲಿಂಗದಲ್ಲಿ ಅಖಂಡ ಭಾರತದ ನಕ್ಷೆ ನೈಸರ್ಗಿಕವಾಗಿ ಮೂಡಿ ಬಂದಿದೆ. ರಾಜರಾಜೇಶ್ವರಿ ಅಂದರೆ ಇದೊಂದು ಶುದ್ಧ ಸ್ಫಟಿಕದ ಅಪೂರ್ವ ಶ್ರೀಚಕ್ರ. ಇವುಗಳಲ್ಲದೆ ಗಣಪತಿ, ಶ್ರೀರಾಮ ಸ್ವರ್ಣಠಂಕೆ, ಸಾಲಿಗ್ರಾಮಗಳು, ಪಾದುಕೆ, ಇತ್ಯಾದಿ. ಈ ಮೂರ್ತಿಗಳಿಗೆ ಸಾವಿರಾರು ವರ್ಷದಿಂದ ಯತಿಗಳಿಂದ ನಿತ್ಯಪೂಜೆ ಆಗುತ್ತಿದ್ದು, ಇದು ಅವಿಚ್ಛಿನ್ನವಾಗಿ ಉಳಿದಿದ್ದ ಕಾರಣ ಇಲ್ಲಿ ದೇವರ ಸನ್ನಿಧಿಯನ್ನು ಕಂಡುಕೊಳ್ಳಬಹುದು. ಇವುಗಳಲ್ಲದೆ ಸ್ವರ್ಣಮಂಟಪದಲ್ಲಿ ಪೂಜೆಗೊಳ್ಳುವ ಇತರ ದೇವರ ವಿಗ್ರಹಗಳೂ ಇಲ್ಲಿವೆ. ಅಗಸ್ತ್ಯರು ಶ್ರೀರಾಮನ ಸಾಕ್ಷಾತ್ಕಾರ ಮಾಡಿಕೊಂಡವರು. ಇವರಿಂದ ಪೂಜಿಸಲ್ಪಟ್ಟ, ಮತ್ತಿದೀಗ ನಮ್ಮ ಶ್ರೀಗಳು ಪೂಜಿಸುತ್ತಿರುವ ಈ ದೇವರಸನ್ನಿಧಿಯಲ್ಲಿ ಭಕ್ತಿಯಿಂದ ಪ್ರಾರ್ಥನೆಗೈದಲ್ಲಿ ಸಕಲ ಇಷ್ಟಾರ್ಥಗಳು ಸಿದ್ಧಿಸುವುದು ನಿಶ್ಚಿತ.
ಇನ್ನೊಂದು ಶ್ರೀಮಠದ ಅತ್ಯಮೂಲ್ಯ ಸ್ವತ್ತೆಂದರೆ ವಿಶ್ವದ ಇನ್ನೆಲ್ಲೂ ಕಾಣಸಿಗದ ಹಸ್ತಿದಂತ ಸಿಂಹಾಸನ. ಈ ದಂತಸಿಂಹಾಸನವು ಶ್ರೀಮಠದ ೩೪ ನೇ ಯತಿಗಳಾದ ಶ್ರೀರಾಮಚಂದ್ರಭಾರತೀ ಮಹಾಸ್ವಾಮಿಗಳವರ ಕಾಲದಲ್ಲಿ ರಚಿಸಲ್ಪಟ್ಟಿತ್ತು. ಈ ಸುವರ್ಣಖಚಿತವಾದ ಸಿಂಹಾಸನವು ಅಪೂರ್ವವಾಗಿದ್ದು, ಇದರಲ್ಲಿ ವಿಶಿಷ್ಟ ವಿನ್ಯಾಸಗಳಿದ್ದು ಇವೆಲ್ಲ ರಾಮಾಯಣ ಮತ್ತು ಮಹಾಭಾರತದ ಚಿತ್ರಗಳಾಗಿವೆ.
ಅನಾದಿಕಾಲದಿಂದಲೂ ಶ್ರೀರಾಮಚಂದ್ರಾಪುರಮಠ ವಿವಿಧ ರಾಜಮನೆತನಗಳಿಂದ ಗುರುತಿಸಲ್ಪಟ್ಟಿದ್ದು, ಐತಿಹಾಸಿಕ ದಾಖಲೆಗಳನ್ನು ಅವಲೋಕಿಸಿದರೆ ರಾಜರುಗಳು ಅರಸರು ಮತ್ತಿತರರು ಶ್ರೀಮಠಕ್ಕೆ ನಾನಾವಿಧವಾದ ಸೇವಾದ್ಯೋತಕವಾದ ಕಾಣಿಕೆಯನ್ನು ಸಲ್ಲಿಸಿರುವುದು ಕಂಡುಬರುತ್ತದೆ.
ಇನ್ನು ಶ್ರೀಗಳ ವೈಶಿಷ್ಟ್ಯವೆಂದರೆ ಅವರು ಪೂಜೆಮಾಡುವ ರೀತಿ ಎಂತಹವರನ್ನೂ ಆಕರ್ಷಿಸಿ ದೇವರಲ್ಲಿ ಗುರುವಿನಲ್ಲಿ ಭಕ್ತಿಯಿಲ್ಲದವನಲ್ಲೂ ಭಕ್ತಿ ಮೂಡಿಸಬಹುದು. ಶ್ರೀಗಳ ಧಾರ್ಮಿಕ ಚಿಂತನೆ, ಅಧ್ಯಯನಾಸಕ್ತಿ, ವಿದ್ವತ್ತು, ಪ್ರತಿಯೊಬ್ಬನಲ್ಲೂ ಸುಖದುಖಃಗಳನ್ನೂ ವಿಚಾರಿಸುವ ಆ ಮಾತೃಹೃದಯ, ತಮ್ಮ-ತಂಗಿ ಎಂಬ ಅವರ ನುಡಿಗಳನ್ನು ಕೇಳುವುದೇ ಆನಂದ. ಶ್ರೀಗಳನ್ನು ಒಮ್ಮೆ ಕಂಡು ಮಾತನಾಡಿದವರು ಮುಂದೆ ನಿರಂತರವಾಗಿ ಅವರ ಸಂಪರ್ಕ ಬಯಸುವುದು ಅವರಲ್ಲಿರುವ ಅನಾದೃಶ ಶಕ್ತಿಯನ್ನು ಎತ್ತಿ ತೋರಿಸುತ್ತದೆ. ಜೀವನದ ಜಂಜಾಟಗಳಿಂದ ಸೋಲುತ್ತಿರುವ ನಮಗೆ ತುಂಬುವ ಧೈರ್ಯ, ನಮ್ಮಂತಹ ಸಾವಿರ ಸಾವಿರ ಭಕ್ತರ ನೋವುಗಳಿಗೆ ಕಿವಿಯಾಗಿ, ಅತ್ಯಂತ ಸಮಾಧಾನದಿಂದ ಅವುಗಳನ್ನು ಆಲಿಸಿ, ಅವಕ್ಕೆ ಸೂಕ್ತ ಪರಿಹಾರದ ಜೊತೆಗೆ ಭರವಸೆಯಿಲ್ಲದ ಜೀವಕ್ಕೆ ಭರವಸೆಯನ್ನೂ, ಆತ್ಮವಿಶ್ವಾಸವನ್ನೂ ಇತ್ತು, “ಹೋಗು ಒಳ್ಳೆಯದಾಗುತ್ತದೆ, ನಾವಿದ್ದೇವೆ” ಎಂದು ಅವರು ನೀಡುವ ಆ ಸಾಂತ್ವನ ಊಹೆಗೂ, ಬರವಣಿಗೆಗೂ ನಿಲುಕದ್ದು.
ನಾವ್ಯಾರೇ ಆಗಲಿ ಒಮ್ಮೆ ಶ್ರೀಗುರುಗಳ ದೃಷ್ಟಿಗೆ ಬಿದ್ದರೆ ಎಷ್ಟೇ ವರ್ಷವಾದರೂ ಅವರ ಸಂಪೂರ್ಣ ಜಾತಕವನ್ನು ಪುನರುಚ್ಚರಿಸುತ್ತಾರೆ. ಮಠಕ್ಕೆ ಹೋಗದೇ ಬಹಳ ದಿನವಾದಾಗ, ಬಹಳ ದಿನಗಳಿಂದ ಬರಲೇ ಇಲ್ಲ ಎಂದು ತೋರಿಸಿದ ಪ್ರೀತಿಯ ಆ ಪರಿ, ಯಾರು ತಾನೇ ಅನುಭವಿಸಿಲ್ಲ ಹೇಳಿ?
ಇನ್ನು ಶ್ರೀಗಳ ಆಶೀರ್ವಚನ ವೈಶಿಷ್ಟ್ಯ ಎಂತವರನ್ನೂ ಮಂತ್ರಮುಗ್ಧರನ್ನಾಗಿಸಬಹುದು. ಅವರ ನಾಯಕತ್ವ, ಅವರ ವಿಶಾಲದೃಷ್ಟಿ ಕೂಡ ವಿಶೇಷವೇ ಸರಿ. ಇಂದು ಹಿಂದೂಗಳಲ್ಲದೆ ಬೇರೆಬೇರೆ ಪಂಗಡದವರೂ ಶ್ರೀಗಳನ್ನರಸಿ ಬರುತ್ತಿದ್ದು, ಯಾವುದೇ ತಾರತಮ್ಯವಿಲ್ಲದೆ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದು ಶ್ರೀಗಳ ವಿಶೇಷತೆಗಳಲ್ಲೊಂದು. ಶ್ರೀಗಳ ಈ ಎಲ್ಲ ಗುಣವಿಶೇಷತೆಗಳನ್ನು ಕಂಡ ಯಾವನೇ ನಾಸ್ತಿಕನು ಆಸ್ತಿಕನಾಗುವನೆಂದು ನನ್ನ ಭಾವನೆ.
ಇನ್ನು ಗುರುವಿನ ಮಹದತ್ತ್ವದ ಬಗ್ಗೆ ಹೇಳುವುದಾದರೆ “ನ ಗುರೋರಧಿಕಂ” ಎಂಬಂತೆ ಗುರುವಿಗಿಂತ ಮಿಗಿಲಾದುದು ಯಾವುದೂ ಇಲ್ಲ. ಅರಿವೇ ಗುರು.
ಅರಿವೆಂಬುದು ವರಗುರುವಿನ ಕರುಣ | ಗುರುಚರಣಕೆ ಶರಣಾಗಲಿ ಹರಣ ||
ಕರುಣೆಗೊಂದು ಕಾರಣಬೇಕು. ಕಾರಣವಿಲ್ಲದೇ ಕರುಣೆಯಿದ್ದರೆ ಅದು ಗುರುವಿಗೆ ಮಾತ್ರ. ಗುರುವು ನಮ್ಮನ್ನು ಭವಬಂಧನದಿಂದ ಪಾರುಮಾಡಿ ತನ ಅಗಾಧ ಶಕ್ತಿಯಿಂದ ದಡಸೇರಿಸಬಲ್ಲ. ಗುರುಕಾರುಣ್ಯ ದೊರೆಯಿತೆಂದರೆ ಅದು ಪೂರ್ವಜನ್ಮದ ಪುಣ್ಯವೇ ಸರಿ. ‘ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ’ ಎಂಬ ದಾಸರ ವಾಣಿಯಂತೆ ಜಗತ್ತಿನಲ್ಲಿ ಏನೆಲ್ಲ ಸಾಧಿಸಿದರೂ ಗುರುಕೃಪೆಯಿರದಿದ್ದರೆ ಪರಿಪೂರ್ಣತೆಯಿಲ್ಲ. ಗುರುವಚನವೊಂದು ನೆನಪಾಗುತ್ತಿದೆ- “ತಂದೆ ತಾಯಿ ದೇಹವನ್ನು ಕೊಡುತ್ತಾರೆ. ಆತ್ಮವನ್ನು ಕೊಡುವವನು ಗುರು. ಇದ್ದೂ ಅರಿಯದ ಆತ್ಮವನು ತೋರಿಸಿಕೊಟ್ಟು ಬದುಕಿಗೆ ಚೈತನ್ಯ ತುಂಬುವವನು ಗುರು”. ಅಂದರೆ ತಂದೆ ತಾಯಿಗಿಂತಲೂ ಗುರುವಿನ ಸ್ಥಾನ ಹಿರಿದು. ಹೆಚ್ಚಾಗಿ ಸಂಬಂಧಗಳು ದೇಹದ ಮೂಲಕ ಬರುತ್ತವೆ. ಕೆಲವು ಮನಸ್ಸಿನ ಮೂಲಕ ಬರುತ್ತವೆ. ಆದರೆ ಗುರುಶಿಷ್ಯ ಸಂಬಂಧ ಎಂಬುದು ಆತ್ಮಗಳ ಸಂಬಂಧ. ರಕ್ತಸಂಬಂಧಕ್ಕಿಂತಲೂ ಆತ್ಮಸಂಬಂಧ ದೊಡ್ಡದು. ಇಂತಹ ಆತ್ಮಗಳ ಸಂಬಂಧವಾದ ಗುರುಶಿಷ್ಯ ಸಂಬಂಧಕ್ಕೆ ಸಮನಾದುದು ಜಗದಲ್ಲಿ ಮತ್ತೊಂದಿಲ್ಲ.
ಗುರುಪಾದ ದರ್ಶಿಸಲು ವರತೀರ್ಥ ಮಿಂದ ಫಲ
ಗುರುವಿನಡಿಗಳಿಗೆರಗೆ ದುರಿತನಾಶ |
ಗುರುಸೇವೆಯಂಗೈದು ಗುರುವಚನವಂ ಕೇಳೆ
ದೊರಕುವುದು ಚಿರಮುಕ್ತಿ ಬೋಳುಬಸವ ||
ಗುರುಪಾದ ದರ್ಶಿಸಿದರೆ ತೀರ್ಥಸ್ನಾನ ಮಾಡಿದ ಫಲ. ಗುರುಚರಣಕ್ಕೆ ಶರಣಾದಲ್ಲಿ ದುರಿತಗಳೆಲ್ಲ ನಾಶ. ಗುರುವಚನ ಕೇಳುತ್ತಾ ಗುರುಸೇವೆ ಗೈದರೆ ಅದುವೇ ಮುಕ್ತಿಪಥಕ್ಕೆ ದಾರಿ.
ಗುರುವಿಂದ ದೈವಗಳು ಗುರುವಿಂದ ಬಂಧುಗಳು ಗುರುವಿಂದಲೇ ಸಕಲ ಪುಣ್ಯಂಗಳು
ಲೋಕಕ್ಕೆ ಗುರುವೀಗ ದೈವ ಸರ್ವಜ್ಞ ||
ಗುರುವನ್ನು ದೈವಸ್ವರೂಪದಲ್ಲಿಟ್ಟು ನಮ್ಮ ಸಂಸ್ಕೃತಿಯಲ್ಲಿ ಕರೆಯಲಾಗುತ್ತದೆ. ಭಗವಂತ ಎಂದು ನಾವು ಹೆಸರಿಸಿ ಪೂಜಿಸುವ ವಿಶ್ವಚೈತನ್ಯ ಸಾಮಾನ್ಯ ಮನಸ್ಸಿಗೆ ಅಗೋಚರ. ಆದರೆ ಗುರುದೇವ ಕಣ್ಣಿಗೆ ಕಾಣುವ ಸಾಕ್ಷಾತ್ ದೇವರು. ಗುರುಕೃಪೆ ಮತ್ತು ಮಾರ್ಗದರ್ಶನ ಎಂಬ ಶಕ್ತಿ ಮಾತ್ರವೇ ನಮಗೆ ಸಾಕ್ಷಾತ್ಕಾರವನ್ನು ನೀಡಬಲ್ಲದು. ಬದುಕಿನ ಬೆಳಕಿನ ದಾರಿಯೇ ಗುರು. ಸಾವಿರಾರು ಸೂರ್ಯಚಂದ್ರರು ಹುಟ್ಟಿ ಬಂದರೂ ಹೃದಯದ ಒಳಗಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವುದು ಸಾಧ್ಯವಿಲ್ಲ. ಅದು ಕೇವಲ ಗುರು ಅನುಗ್ರಹದಿಂದ ಮಾತ್ರ ತೊಡೆದು ಹಾಕಲ್ಪಡುತ್ತದೆ. ಆದ್ದರಿಂದ ಗುರುವೆಂದರೆ ಆಕಾಶದಷ್ಟು ಎತ್ತರ, ಸಾಗರದಷ್ಟು ಅಗಲ, ಭೂಮಿಯಷ್ಟು ವಿಶಾಲ.
ಕಣ್ಣಿಗೆ ಕಂಡರೂ ಕಣ್ಣಳತೆಗೆ ಸಿಗರು. ಅವರೇ ನಮ್ಮ ನಡೆದಾಡುವ ದೇವರು “ಗುರುರಾಘವರು”. ಆದ್ದರಿಂದ ಗುರುವೆಂದರೆ ವರ್ಣಿಸುವ ವ್ಯಕ್ತಿಯಲ್ಲ. ಮಹಾನ್ ಶಕ್ತಿ.
ಗುರು ಬೇರೆಯಲ್ಲ ಪೀಠ ಬೇರೆಯಲ್ಲ. ಗುರು~ಪೀಠ ಅದು ಅದ್ವೈತ. ಇಂದು ಕೆಲವು ದುಷ್ಟಶಕ್ತಿಗಳು ನಮ್ಮ ಕುಲಗುರುಗಳ ಮೇಲೆ ಇಲ್ಲಸಲ್ಲದ ಅಪವಾದಗಳನ್ನು ಹೊರಿಸುತ್ತಾ ಅವರನ್ನು ಪೀಠದಿಂದ ಇಳಿಸಲು ಪ್ರಯತ್ನಿಸುತ್ತಿವೆ. ಪೀಠವೆಂದರೆ ಅದು ಬೆಂಕಿ. ೩೫ ಯತಿಗಳಿಂದ ಅವಿಚ್ಚಿನ್ನವಾಗಿ ನಡೆದುಬಂದಿರುವ ತಪಸ್ಸಿನ ಶಕ್ತಿ ಪೀಠದಲ್ಲಿದೆ. ಅಂತಹ ಶಕ್ತಿಪೀಠವಿದು. ಒಂದುವೇಳೆ ಇಂದಿನ ಗುರುಗಳಿಂದ ಪೀಠಕ್ಕೆ ಅಪಚಾರವಾಗಿದ್ದರೆ ಅಂತಹ ಗುರುಗಳನ್ನು ಪೀಠವೇ ತಿರಸ್ಕರಿಸುತ್ತಿತ್ತು. ಆದರೆ ಹಾಗಾಗಲಿಲ್ಲ. ಎಂತೆಂತಹ ಅಪವಾದಗಳನ್ನು ಅವರ ಮೇಲೆ ಹಾಕಿದರೂ ಈ ಪೀಠ ಹಾಗೂ ಅವರು ಆರಾಧಿಸುತ್ತಿರುವ ಶ್ರೀರಾಮ ಹಾಗೂ ಚಂದ್ರಮೌಳೀಶ್ವರ ಅವರನ್ನು ರಕ್ಷಿಸಿದ್ದಾನೆ. ಇವಲ್ಲದೆ ಭಕ್ತಶಿಷ್ಯಸಮೂಹವೂ ಅವರ ಕೈ ಬಿಡಲಿಲ್ಲ. ನ್ಯಾಯದೇವತೆ ಹಾಗೂ ಶಿಷ್ಯಕೋಟಿಯ ಭದ್ರಕೋಟೆ ಗುರುವಿನೊಂದಿಗಿದೆ.
ಇದಲ್ಲದೆ ಯಾವುದೇ ಒಂದು ಶುಭಕಾರ್ಯ ಮಾಡುವಾಗ ಮೊದಲು “ಗುರುವಂದನೆ” ಕೊನೆಯಲ್ಲಿ ಗುರುಚರಣಗಳಿಗೆ ಭಕ್ತಿಯಿಂದ “ಚರಣಕಾಣಿಕೆ” ಇಡುವುದು ವಾಡಿಕೆ. ಕುಲಗುರುಗಳಿಗೆ ವಂದನೆ, ಚರಣಕಾಣಿಕೆ ಇಡದಿದ್ದಲ್ಲಿ ಯಾವುದೇ ಶುಭಕಾರ್ಯ ಮಾಡಿದರೂ ಫಲವಿಲ್ಲ. ಅದು ಅಪೂರ್ಣ. ಹಾಗೂ ಶ್ರೀಮಠದ ಶಿಷ್ಯವರ್ಗಕ್ಕೆ ಸೇರಿದವರು ಶ್ರೀಮಠದ ಆರಾಧ್ಯದೇವರಾದ ಶ್ರೀರಾಮನ ಸನ್ನಿಧಿಯಲ್ಲಿ ಉರಿಯುತ್ತಿರುವ “ನಂದಾದೀಪ”ಕ್ಕೆ ಸಲ್ಲಿಸುವ “ದೀಪಕಾಣಿಕೆ”ಗೆ ಶತಮಾನಗಳ ಸುದೀರ್ಘ ಇತಿಹಾಸವಿದೆ. ಇದಕ್ಕೆ ಕ್ರಮೇಣ ‘ಮನೆಹಣ’ ಎಂಬ ಹೆಸರು ಬಂತು. ಈ ದೀಪಕಾಣಿಕೆ ಸಲ್ಲಿಸುವುದರಿಂದ ತಮ್ಮ ಕಷ್ಟಕಾರ್ಪಣ್ಯಗಳು ದೂರವಾಗಿ ತಮ್ಮ ಮನೆಗಳಲ್ಲಿ ಸದಾ ಬೆಳಕು ಹರಿಯುತ್ತಿರಲೆಂಬ ನಂಬಿಕೆ. ಇದು ಗುರುಮಠ ಮತ್ತು ಭಕ್ತರ ಅವಿನಾಭಾವ ಬಾಂಧವ್ಯದ ದ್ಯೋತಕ. ಇನ್ನು ಗುರುವನ್ನು ನಿಂದಿಸಿದರೆ, ತಿರಸ್ಕರಿಸಿದರೆ, ಅಗೌರವದಿಂದ ಕಂಡರೆ ನೋವು, ಪತನ ನಿಶ್ಚಿತ. ಗುರುಶಾಪವೆಂಬ ಪಾಪ ಏಳೇಳು ಜನ್ಮಕ್ಕೂ ಕಾಡಬಹುದು. ನಮ್ಮ ದೇಹ ಅಸಾಧ್ಯ ರೋಗಗಳ ಗೂಡಾಗಬಹುದು. ನಮ್ಮ ಮುಂದಿನ ಪೀಳಿಗೆಯ ಏಳಿಗೆ ಬಯಸುವುದಾದಲ್ಲಿ, ತಮ್ಮನ್ನು ತಿರಸ್ಕರಿಸಿದವರನ್ನೂ ಪುರಸ್ಕರಿಸಿದವರನ್ನೂ ಸಮನಾದ ಭಾವದಲ್ಲಿ ಕಾಣುವ ಶ್ರೀಗುರುಗಳ ಚರಣಕ್ಕೆ ಶರಣಾಗೋಣ.
ಗುರುವೊಲಿದು ಹರಸಿದರೆ ದೊರಕುವುದು ಚಿರಮುಕ್ತಿ
ದುರಿತ ಕರ್ಮಗಳೆಲ್ಲ ಬಳಿಸುಳಿಯವು |
ಗುರು ಮುನಿಯೆ ಹರನಿಂದಲೂ ಕಾಯಲಸದಳವು
ಹರ ಮುನಿದರೆ ಗುರು ಕಾಯುವ ಬೋಳುಬಸವ ||
ಜಗನ್ನಿಯಾಮಕನಾದ ಹರ ಮುನಿದರೂ ಗುರು ಕಾಯುವನಂತೆ.
ಇನ್ನು ಶ್ರೀಮಠದ ಶಿಷ್ಯವರ್ಗದವರಾಗಿದ್ದುಕೊಂಡು ಮಠಕ್ಕೆ ಹೋಗದವರಲ್ಲಿ ನನ್ನದೊಂದು ಕೋರಿಕೆ. ಗುರುಗಳ ಪ್ರವಚನಗಳಾದ ರಾಮಕಥೆ, ರಾಮಪದ, ಕೃಷ್ಣಕಥೆ, ಭಾವಪೂಜೆ, ಸಾಧನಾಪಂಚಕ ಇವುಗಳಲ್ಲಿ ಒಂದನ್ನಾದರೂ ಒಮ್ಮೆ ಕೇಳಿ. ಆ ರಾಮಕೃಷ್ಣರೇ ಧರೆಗಿಳಿದು ಬಂದ ಭಾವವೇ ನಮ್ಮಲ್ಲಿ ಮೂಡುತ್ತದೆ. ಜೀವನದಲ್ಲಿ ಒಮ್ಮೆಯಾದರೂ ಶ್ರೀಕರಾರ್ಚಿತ ರಾಮದೇವರ ಪೂಜೆಯನ್ನು ನೋಡಿ, ಶ್ರೀಗುರುಗಳಿಂದ ಆಶೀರ್ವಾದ ಪಡೆಯಿರಿ. ಅವರ ಅಮೃತದೃಷ್ಟಿ ಆಶೀರ್ವಾದವೇ ನಮಗೆ ರಕ್ಷಾಕವಚ. ಇಂತಹ ಶ್ರೇಷ್ಠ ಗುರುವಿಗೆ ಎಂದೆಂದೂ ಬದ್ಧರಾಗಿ ಗುರು ತೋರಿದ ದಾರಿಯಲ್ಲಿ ಗುರಿಯೆಡೆಗೆ ಪಯಣಿಸೋಣ. ಶ್ರೀಮಠಶ್ರೀಗುರುವೆಂಬ ಆ ಮಹಾಸಿಂಧುವಿನಲ್ಲಿ ನಾವೊಂದು ಬಿಂದುವಾಗೋಣ. ಬದುಕ ನಂದನವನವಾಗಿಸೋಣ.
ಏನೆಂದು ಬಣ್ಣಿಸಲಿ ಗುರುಪೀಠದ ವೈಭವವ
ಏನೆಂದು ವರ್ಣಿಸಲಿ ಗುರುವರ್ಯರ ಜ್ಞಾನವ |
ಹೇಗೆ ತೀರಿಸಲಿ ಗುರುವೇ ನಿನ್ನ ಋಣವ
ನಿತ್ಯ ಧ್ಯಾನಿಸುವೆ, ನನ್ನೆದೆಯಲ್ಲಿ ಸದಾ ಬೆಳಕಾಗು ನೀನು ||
ಗುರುಸ್ಮರಣವದು ಭವತರಣ |
ಗುರುಚರಣಕೆ ಶರಣಾಗಲಿ ಹರಣ ||