ವಿದ್ವಾನ್ ಉಮಾಕಾಂತ್ ಭಟ್ಟರಿಗೆ ಶ್ರೀರಾಘವೇಂದ್ರ ಭಾರತೀ ಪಾಂಡಿತ್ಯ ಪುರಸ್ಕಾರ

ಕಲೆ ~ ಸಾಹಿತ್ಯ ಸಮಾರಂಭ

ಶ್ರೀರಾಮಚಂದ್ರಾಪುರಮಠದ ಅವಿಚ್ಚಿನ್ನ ಗುರುಪರಂಪರೆಯ 35ನೇ ಯತಿಗಳಾದ ಬ್ರಹ್ಮೈಕ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವ ಶ್ರೀಮಠದ ಬೆಂಗಳೂರಿನ ಗಿರಿನಗರದ ಶಾಖಾಮಠದಲ್ಲಿ ದಿನಾಂಕ 15.12.2018 ಶನಿವಾರದಂದು ನಡೆಯಲಿದ್ದು, ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯದಲ್ಲಿ ತೀರ್ಥರಾಜ ಪೂಜೆ ಇತ್ಯಾದಿ ಮಠೀಯ ಪದ್ಧತಿಯಂತೆ ಪೂರ್ವಾಚಾರ್ಯರ ಆರಾಧನೆ ಸಂಪನ್ನವಾಗಲಿದೆ.

 

ಆನಂತರ ಧರ್ಮಸಭೆ ನಡೆಯಲಿದ್ದು, ಶ್ರೀರಾಘವೇಂದ್ರ ಭಾರತೀ ಪಾಂಡಿತ್ಯ ಪುರಸ್ಕಾರ ಹಾಗೂ ಶ್ರೀಗುರುಪರಂಪರಾನುಗ್ರಹ ಕಾರ್ಯಕ್ರಮಗಳು ಸಂಪನ್ನವಾಗಲಿವೆ.

 

‘ಶ್ರೀರಾಘವೇಂದ್ರ ಭಾರತೀ ಪಾಂಡಿತ್ಯ ಪುರಸ್ಕಾರ’ :
ಪೂರ್ವಾಚಾರ್ಯರಾದ ಬ್ರಹ್ಮೈಕ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳ ಸ್ಮರಣಾರ್ಥವಾಗಿ ಪ್ರತಿವರ್ಷ ಅವರ ಆರಾಧನೆಯ ಸಂಧರ್ಭದಲ್ಲಿ ನಾಡಿನ ಶ್ರೇಷ್ಠ ವಿದ್ವಾಂಸರುಗಳನ್ನು ಗುರುತಿಸಿ, ಅವರಿಗೆ “ಶ್ರೀರಾಘವೇಂದ್ರ ಭಾರತೀ ಪಾಂಡಿತ್ಯ ಪುರಸ್ಕಾರ”ವನ್ನು ಕೊಡಮಾಡಲಾಗುತ್ತಿದ್ದು, ವೇದ – ಸಂಸ್ಕೃತಿಗಳ ಸಂರಕ್ಷಣೆಗೆ ಇನ್ನಷ್ಟು ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಲಾಗುತ್ತಿದೆ. ಈ ವರ್ಷ ಖ್ಯಾತ ವಿದ್ವಾಂಸರಾದ ವಿದ್ವಾನ್ ಉಮಾಕಾಂತ್ ಭಟ್ಟರಿಗೆ ಶ್ರೀರಾಘವೇಂದ್ರ ಭಾರತೀ ಪಾಂಡಿತ್ಯ ಪುರಸ್ಕಾರವನ್ನು ನೀಡಿ ಗೌರವಿಸಲಾಗುತ್ತಿದ್ದು, ಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಪುರಸ್ಕಾರವನ್ನು ಅನುಗ್ರಹಿಸಿ, ಆಶೀರ್ವದಿಸಲಿದ್ದಾರೆ.

 

ವಿದ್ವಾನ್ ಉಮಾಕಾಂತ್ ಭಟ್ಟ:
ಉತ್ತರಕನ್ನಡದ ಕೆರೆಕೈ ಗ್ರಾಮ ಮೂಲದ ಹಿರಿಯ ವಿದ್ವಾಂಸರಾದ ಉಮಾಕಾಂತ್ ಭಟ್ಟರು, ಸಂಸ್ಕೃತ ಪ್ರಾಚೀನ ಹಾಗೂ ನವೀನ ನ್ಯಾಯ ಶಾಸ್ತ್ರಗಳಲ್ಲಿ ಪರಿಣಿತರಾಗಿದ್ದು, ಇಂಗ್ಲೀಷ್ ಭಾಷೆಯಲ್ಲೂ ಎಂ.ಎ ಪದವೀಧರರಾಗಿದ್ದಾರೆ. ಹಿಂದಿ – ಕನ್ನಡ ಭಾಷೆಗಳಲ್ಲೂ ಪರಿಣಿತರಾದ ಅವರು ಖ್ಯಾತ ಚರ್ಚಾಪಟುವಾಗಿದ್ದಾರೆ.

 

ತಾಳೆಮದ್ದಲೆಯ ಖ್ಯಾತ ಅರ್ಥಧಾರಿಗಳಾದ ಉಮಾಕಾಂತ ಭಟ್ಟರು, ವಾಕ್ಯಾರ್ಥ ವಿಶಾರದ ಎಂದು ಗುರುತಿಸಿ ಕೊಂಡವರಾಗಿದ್ದು, ಸಂಸ್ಕೃತ – ಕನ್ನಡ ಭಾಷೆಗಳಲ್ಲಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ವೇದ – ಸಂಸ್ಕೃತ – ಸಂಸ್ಕೃತಿ ಕ್ಷೇತ್ರಗಳಿಗೆ ಇವರು ನೀಡಿರುವ ಕೊಡುಗೆಗಳನ್ನು ಗುರುತಿಸಿ ಇವರಿಗೆ ಈ ಬಾರಿಯ ಶ್ರೀರಾಘವೇಂದ್ರ ಭಾರತೀ ಪಾಂಡಿತ್ಯ ಪುರಸ್ಕಾರ ನೀಡಲಾಗುತ್ತಿದೆ.

 

Leave a Reply

Your email address will not be published. Required fields are marked *