ಮಠದ ಮೂಲ ಕಥೆ – ಮೂಲ ಮಠದ ಕಥೆ – ೬ : ಮಹೇಶ ಎಳ್ಯಡ್ಕ

ಲೇಖನ

ಅಶೋಕೆ ಮೂಲಮಠ ಕ್ಷೇತ್ರಕ್ಕೆ ಶ್ರೀಗುರುಗಳು ಭೇಟಿಯಿತ್ತು, ಮುಂದೆ ಆ ಸ್ಥಳದಲ್ಲಿ ತಲೆಯೆತ್ತಲಿರುವ ಭವ್ಯ ಮಂದಿರಗಳ ಚಿಂತನೆ ಕೈಗೊಂಡರು. ಮೊದಲ ಹಂತವಾಗಿ ಮಲ್ಲಿಕಾರ್ಜುನ ಗುಡಿ, ಶ್ರೀರಾಮದೇವಾಲಯ, ಗುರುಭವನ ಹಾಗೂ ಶಿಷ್ಯ-ಭಕ್ತರಿಗೆ ವಸತಿಗೃಹಗಳು ಇದಿಷ್ಟನ್ನು ಅನುಸ್ಥಾಪಿಸುವುದಾಗಿ ಸಂಕಲ್ಪಿಸಿದರು.

 

ಮೊದಲ ಹಂತದ ನೀಲನಕಾಶೆಯು ಗುರುಗಳ ಮನದಲ್ಲಿದ್ದುದನ್ನು ನುರಿತ ವಾಸ್ತುತಜ್ಞರು, ಪ್ರಸಿದ್ಧ ಜ್ಯೋತಿಷಿಗಳು, ಹೆಸರಾಂತ ಇಂಜಿನಿಯರುಗಳು ಸೇರಿ ಗೆರೆಗಳಿಗಿಳಿಸಿದರು. ಮೊದಲ ಹಂತಕ್ಕೆ ಸುಮಾರು ಹದಿನೈದುಕೋಟಿ ರೂಪಾಯಿಗಳಷ್ಟು ಬೇಕಾದೀತು  ಎಂದು ಅಂದಾಜಿಸಲಾಯಿತು. ಸಮಿತಿಗಳು ರಚನೆಗೊಂಡವು. ಕಾರ್ಯಯೋಜನೆ ಸಿದ್ಧಗೊಂಡಿತು. ಆಗಬೇಕಾದ ಕಾರ್ಯಗಳು ಒಂದೊಂದೇ ಪಟ್ಟಿಮಾಡುತ್ತಾ ಶರವೇಗದಿಂದ ಕೆಲಸವು ಆರಂಭವಾಯಿತು.

 

ಅದೇ ಸಂದರ್ಭದಲ್ಲಿ  ಶ್ರೀಮಠದಿಂದ ಶಾಸನವೊಂದು ನಿರೂಪವಾಯಿತು. ಶ್ರೀಮಠದಿಂದ ಎಷ್ಟೋ ಅಭಿವೃದ್ಧಿಕಾರ್ಯಗಳು ಅಲ್ಲಲ್ಲಿ ನಡೆದಿದೆ, ನಡೆಯುತ್ತಿದೆ. ರಾಮಾಯಣ ಸತ್ರ, ಗೋಸಮ್ಮೇಳನಗಳು, ಗೋಯಾತ್ರೆಗಳು, ಜೀವನದಾನ, ಚಂದ್ರಮೌಳೀಶ್ವರ ದೇವಾಲಯ, ಜನಭವನ, ಕಾಮದುಘಾ ಇತ್ಯಾದಿ ಯಾವುದೇ ಅಭಿವೃದ್ಧಿಕಾರ್ಯಗಳಿಗೂ ಶ್ರೀಮಠದಿಂದ ಶಾಸನರೂಪದಲ್ಲಿ ನಿರೂಪ ಬಂದದ್ದಿಲ್ಲ. ಭಕ್ತಶಿಷ್ಯಸಮೂಹವು ‘ಯಥಾಶಕ್ತಿಯಾಗಿ’ ಕಾಣಿಕೆರೂಪದಿಂದ ಕೊಟ್ಟದ್ದನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಿ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿಸಿದ್ದು ಕಂಡುಬರುತ್ತದೆ.

 

ಆದರೆ, ಈ ಮೂಲಮಠದ ವಿಚಾರ ಹಾಗಲ್ಲ.

ಶಿಷ್ಯಸ್ತೋಮವು ಈ ಸಹಸ್ರಮಾನದ ಕಾರ್ಯದಲ್ಲಿ ತನು-ಮನ-ಧನ ಕಾಣಿಕೆಯೊಂದಿಗೆ ಕೈಜೋಡಿಸಬೇಕೆಂಬ ಶಾಸನವದು. ಶ್ರೀಮಠದ ಎಲ್ಲ ಶಿಷ್ಯರಿಗೂ ಈ ಶಾಸನ ಅನ್ವಯ. ಇತಿಹಾಸವನ್ನು ಹುಡುಕಿದರೆ ಶ್ರೀಮಠದಿಂದ ನಿರೂಪವಾದ ಬೆರಳೆಣಿಕೆಯಷ್ಟು ಶಾಸನಗಳು ಮಾತ್ರ ಇರಬಹುದೇನೋ, ಅದರಲ್ಲಿ ಈ ಶಾಸನವೂ ಒಂದು. ಮೂವತ್ತಾರನೆಯ ಶಂಕರರ ಕಾಲದಲ್ಲಿ ಬಂದ ಪ್ರಥಮ ಶಾಸನವೂ ಹೌದು. ಅಂದರೆ ಈ ಕಾರ್ಯದ ತೀವ್ರತೆ, ಆಳ-ಅಗತ್ಯ ಎಷ್ಟಿದೆ ಎಂಬುದನ್ನು ಶಿಷ್ಯಸ್ತೋಮವು ಊಹಿಸಿಕೊಳ್ಳಬಹುದು.

 

ಶಾಸನದ ವಿವರ:

‘ಮೂಲಮಠ ನಿರ್ಮಾಣ ಕಾರ್ಯದಲ್ಲಿ ಎಲ್ಲ ಶಿಷ್ಯರೂ ಕೈಜೋಡಿಸಬೇಕು’ ಎಂಬುದು ಶ್ರೀಪೀಠದಿಂದ ನಿರ್ದೇಶಿತವಾದ ಶಾಸನ. ನಮ್ಮ ಹಿರಿಯರು ಪೂರ್ವದಲ್ಲಿ ನೆಲೆಸಿದ್ದ ಅಶೋಕೆಯನ್ನು ಮತ್ತೆ ಕಟ್ಟುವುದಕ್ಕಾಗಿ, ಆ ಜನಾಂಗದ ಪ್ರತಿಯೊಬ್ಬನೂ  ತಮ್ಮ ದುಡಿಮೆಯ ಅಂಶವನ್ನು ಮೂಲಮಠದ ನಿರ್ಮಾಣಕ್ಕಾಗಿ ಸಮರ್ಪಿಸಬೇಕು. ಯಾರು ಈಗ ಸಂಪಾದನೆ ಮಾಡುತ್ತಿದ್ದಾನೋ ಅವನು ಈ ಕಾರ್ಯಕ್ಕೆ ಕೈಜೋಡಿಸಲು ನಿರೀಕ್ಷಿಸಲಾಗಿದೆ ಎಂಬುದು ಈ ಶಾಸನದ ಸಾರಾಂಶ.

 

ಯಾವ ರೀತಿ, ಯಾವ ಪ್ರಮಾಣದಲ್ಲಿ ಎಂಬುದನ್ನು ಮುಂದೆ ಹೆಚ್ಚಿನ ವಿವರದಲ್ಲಿ ಚಿಂತಿಸಲಾಯಿತು. ವ್ಯಕ್ತಿಯೊಬ್ಬ ಜೀವಮಾನದ ದುಡಿಮೆಯಲ್ಲಿ ಒಂದು ತಿಂಗಳ ಆದಾಯವನ್ನು  ಅಂದರೆ, ಮೂವತ್ತು ದಿನದ ಆದಾಯವನ್ನು ಸಮರ್ಪಿಸಲು ನಿರೀಕ್ಷಿಸಲಾಗಿದೆ. ಶಿಷ್ಯನಿಗೂ ಹೊರೆಯಾಗಬಾರದು ಎಂಬ ಕಾರಣದಿಂದ ವರ್ಷವೊಂದಕ್ಕೆ ಹತ್ತು ದಿನದ ಸಂಪಾದನೆಯಂತೆ ಮೂರು ವರ್ಷ ಸಮರ್ಪಿಸಬಹುದಾಗಿದೆ. ಅಡಿಕೆ ಬೆಳೆಯುವ ಕೃಷಿಕನಾಗಿದ್ದಲ್ಲಿ, ತನ್ನ ಫಸಲಿನ ಕಿಲೋ ಒಂದಕ್ಕೆ ಒಂದು ರೂಪಾಯಿಯಂತೆ  ಮೂರು ವರ್ಷ ಸಮರ್ಪಿಸಲು ನಿರೀಕ್ಷಿಸಲಾಗಿದೆ.

 

ಇದರಿಂದ ಹೆಚ್ಚು ಕಾಣಿಕೆ ಕೊಡುವವರೂ ಇದ್ದಾರೆ, ಇದರಿಂದ ಕಡಿಮೆ ಕೊಟ್ಟು, ಮುಂದಿನದು ಭವಿಷ್ಯದಲ್ಲಿ ಕೊಡುವ ಬಗ್ಗೆ ವಾಗ್ದಾನ ಕೊಡುವವರೂ ಇರುತ್ತಾರೆ. ಅದು ಅವರವರ ವೈಯಕ್ತಿಕ ಸಮಸ್ಯೆಗಳನ್ನು, ಮನಃಸ್ಥಿತಿಗಳನ್ನು ಹೊಂದಿದ ವಿಚಾರ. ಆದರೆ, ಇದು ಖಂಡಿತ ವ್ಯಕ್ತಿಗೆ ಹೊರೆಯಾಗಿ ಪರಿಣಮಿಸುವ ಸಂಗತಿಯಲ್ಲ. ಏಕೆಂದರೆ ಮೇಲೆ ಹೇಳಿದ ಕಾಣಿಕೆಗಿಂತ ಎಷ್ಟೋ ಪಟ್ಟು ಹೆಚ್ಚಿನ ಮೊತ್ತವನ್ನು ಇದರಿಂದ ಕಡಿಮೆ ತೂಕದ ಕೆಲಸಗಳಿಗೆ ವಿನಿಯೋಗಿಸುವ ಸಂದರ್ಭವಿರುತ್ತದೆ. ಸಹಸ್ರಮಾನದ ಕೆಲಸಕ್ಕೆ ಧನಸಹಾಯವನ್ನು ಮಾಡಿದ್ದಲ್ಲಿ  ಮುಂದೆ ಎದ್ದೇಳಲಿರುವ ಭವ್ಯ ಮಂದಿರದ ಯಶಸ್ಸಿನಲ್ಲಿ ತನ್ನ ಕಾಣಿಕೆಯದೂ ಪಾಲಿದೆ ಎಂದು ನಮ್ಮ ಪರಂಪರೆಯವರು ಹೆಮ್ಮೆಪಡುವಂತಾಗಿರುತ್ತದೆ. ನಮ್ಮ ಮೊದಲಿನ ಎಷ್ಟೋ ತಲೆಮಾರಿಗೆ ಇದನ್ನು ಕಾಣುವ ಸುಯೋಗ ಬಂದಿದ್ದಿಲ್ಲ, ನಮ್ಮ ಅನಂತರದ ಎಷ್ಟೋ ತಲೆಮಾರಿಗೆ ಇದರ ಕಟ್ಟುವಿಕೆಯಲ್ಲಿ ಕೈಜೋಡಿಸುವ ಭಾಗ್ಯ ಬರುವುದಿಲ್ಲ. ನಮಗೆ ಮಾತ್ರ ಬಂದಿರುವ ಸುಯೋಗ ಸದುಪಯೋಗಪಡಿಸಿಕೊಳ್ಳೋಣ.

 

1 thought on “ಮಠದ ಮೂಲ ಕಥೆ – ಮೂಲ ಮಠದ ಕಥೆ – ೬ : ಮಹೇಶ ಎಳ್ಯಡ್ಕ

  1. ಹರೇ ರಾಮ ಮಠ ಶಿಷ್ಯರು ಗುರುಪೀಠದ ಆದೇಶ ಪಾಲಿಸಲೇ ಬೇಕು ಇದು ನಮ್ಮ ಮುಂದಿನ ತಲೆಮಾರಿಗೆ ಶುಭತರಲಿದೆ

Leave a Reply

Your email address will not be published. Required fields are marked *