ವೇದವತಿಯದ್ದು ಕರುಣಾ ಕಥೆ. ಎಂದೆಂದಿಗೂ ಸಲ್ಲುವ ಪರಿಶುದ್ಧ ಪ್ರೇಮದ ಕಥೆ. ಪರಿಪರಿ ಪೀಡನೆಯ ಕಥೆ. ಮನೆಗಳ, ಮನಗಳ, ಕಾಮನೆಗಳ ಕಥೆ. ನಮಗೆ ಕಾಮನ ಕಥೆ ಬೇಡ; ರಾಮನ ಕಥೆ ಬೇಕು. ಇದು ಸೀತೆ ಯಾರು, ಸೀತತ್ವ ಎಂದರೆ ಏನು ಎಂಬುದನ್ನು ವಿವರಿಸುವ ಕಥೆ.
ವೇದಸಾಧಕ ರಾಜರ್ಷಿ ಕುಶಧ್ವಜನಿಗೆ ಆತನ ವೇದಸಾಧನೆಯಿಂದ ಜನಿಸಿದವಳು ವೇದಮಾತೆ ವೇದವತಿ. ಈಕೆಯನ್ನು ಬಯಸಿ ಬಂದ ಶಂಭು ದೈತ್ಯನಿಗೆ ಕುಶಧ್ವಜನು ತನ್ನ ಮಗಳನ್ನು ಕೊಡಲು ನಿರಾಕರಿಸುತ್ತಾನೆ. ಹಾಗಾಗಿ ಶಂಭು ಕುಶಧ್ವಜನನ್ನು ಕೊಲೆ ಮಾಡುತ್ತಾನೆ. ದುಷ್ಟರ ಹಿಂಸೆಗೆ ಗೊತ್ತು ಗುರಿ ಇಲ್ಲ ಎಂಬುದನ್ನು ಸಾರುವ ಸನ್ನಿವೇಶ ಇದು. ಶ್ರೀಪತಿಯೇ ನನ್ನ ಪತಿಯಾಗಬೇಕು ಎಂದು ತಪತಿಯಾದಳು ವೇದವತಿ. ಹೀಗಿರುವಾಗ ಪುಷ್ಪಕವಿಮಾನದಲ್ಲಿದ್ದ ಹತ್ತು ಮುಖಗಳ, ಇಪ್ಪತ್ತು ಕೈಗಳ ಕೀಟವೊಂದು(ರಾವಣ) ವೇದವತಿಯೆಂಬ ಮೊಗ್ಗನ್ನು ಕೊರೆಯಲು ಬಂತು. ಕ್ರೋಧಿತ ವೇದವತಿ ತಾನು ಮುಂದೆ ನಿನ್ನ ನಾಶಕ್ಕೆ ಕಾರಣನಾಗಲು ಹುಟ್ಟುತ್ತೇನೆಂದು ಶಪಥಗೈದು ಪ್ರಾಣಾರ್ಪಣೆ ಮಾಡುತ್ತಾಳೆ. ಈಕೆಯ ಅನವರತ ತಪಸ್ಸು ಮುಂದೆ ಈಕೆ ಸೀತಾಮಾತೆಯಾಗಿ ಹುಟ್ಟಲು ಕಾರಣವಾಗುತ್ತದೆ.