ಕನ್ನಡದ ರಾಜರಾಜೇಶ್ವರಿ ಭುವನಗಿರಿಯ ಭುವನೇಶ್ವರೀ

ಲೇಖನ

ರಾಷ್ಟ್ರಕವಿಗಳು ‘ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ಎಂದು ಹಾಡಿಹೊಗಳಿದರು.

 

ಇನ್ನೊಬ್ಬ ಕವಿ, ‘ನಿತ್ಯೋತ್ಸವ ತಾಯೇ ನಿತ್ಯೋತ್ಸವ’ ಎಂದು ಹಾಡಿದರು.

 

ಹಾಗಾದರೆ ಕನ್ನಡದ ಭುವನೇಶ್ವರಿಗೆ ನಿತ್ಯೋತ್ಸವ ನಡೆಯುವ ಕ್ಷೇತ್ರ ಯಾವುದು? ಕನ್ನಡದ ತಾಯಿ ಭುವನೇಶ್ವರಿಯು ನೆಲೆ ನಿಂತಿರುವುದೆಲ್ಲಿ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಎತ್ತರದ ಭುವನಗಿರಿ.
ಹೌದು, ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗರಿ ಭುವನೇಶ್ವರೀದೇವಿಯ ಸಿದ್ಧಿಕ್ಷೇತ್ರ. ಇಲ್ಲಿ ದಿನವೂ ತ್ರಿಕಾಲ ಪೂಜೆ, ಅಭಿಷೇಕ, ನೈವೇದ್ಯಗಳು ನಡೆಯುತ್ತವೆ. ಹಚ್ಚ ಹಸುರಿನ ಪ್ರಕೃತಿಸೌಂದರ್ಯದ ಮಡಿಲಲ್ಲಿ ಕನ್ನಡಾಂಬೆಯ ಆಲಯವಿದೆ. ಇಲ್ಲಿ ಭುವನೇಶ್ವರಿಯ ಉದ್ಭವಲಿಂಗವಿದ್ದು ಭುವನಾಸುರನೆಂಬ ರಕ್ಕಸನನ್ನು ಸಂಹರಿಸಿ, ಲೋಕಕಲ್ಯಾಣಕ್ಕಾಗಿ ಶ್ರೀಮಾತೆ ಇಲ್ಲಿಯೇ ನೆಲೆ ನಿಂತಳೆಂದು ಪ್ರತೀತಿ ಇದೆ.

 

ಇತಿಹಾಸವನ್ನು ಕೆದಕುತ್ತಾ ಹೋದರೆ ಈ ದೇವಾಲಯದ ಕಟ್ಟಡ ಆರಂಭಿಸಿದವರು ಕದಂಬರು. ಅನಂತರ ವಿಜಯನಗರದ ಅರಸರು ಅದನ್ನು ಮುಂದುವರಿಸಿದರು. ತದನಂತರ ವಿಜಯನಗರದ ಸಾಮಂತರಾದ ಬಳಗ (ಶ್ವೇತಪುರ) ಅರಸರ ಕೊನೆಯ ದೊರೆ ಬಸವೇಂದ್ರ 1692ರಲ್ಲಿ ಕನ್ನಡಾಂಬೆಯ ಕಟ್ಟಡವನ್ನು ಪೂರ್ಣಗೊಳಿಸಿದ ಎಂದು ಇತಿಹಾಸ ಹೇಳುತ್ತದೆ.

 

ಇದುವರೆಗೆ ಸಿಕ್ಕ ಮಾಹಿತಿಯ ಪ್ರಕಾರ ಕರ್ನಾಟಕದ ದೇವಾಲಯದ ಆವಾರದಲ್ಲಿ, ವಿಜಯನಗರದ ಅರಸರು ಸ್ಥಾಪಿಸಿದ ಭುವನೇಶ್ವರೀ ಮೂರ್ತಿ ಇದೆಯೇ ಹೊರತು ಭುವನೇಶ್ವರಿಗಾಗಿಯೇ ಪ್ರತ್ಯೇಕ ಐತಿಹಾಸಿಕ ದೇಗುಲವಿರುವುದು ಭುವನಗಿರಿಯಲ್ಲಿ ಮಾತ್ರ.

ಭುವನಗಿರಿ ಸಿದ್ದಾಪುರ ಪಟ್ಟಣದಿಂದ ಕೇವಲ 8 ಕಿ.ಮೀ. ದೂರದಲ್ಲಿದೆ. ಇದು ಸಿದ್ದಾಪುರ-ಕುಮಟಾ ರಾಜ್ಯಹೆದ್ದಾರಿಯ ಪಕ್ಕದಲ್ಲಿದೆ. ಗಿರಿಯ ಬುಡದಲ್ಲಿ ಬೃಹತ್ ಪುಷ್ಕರಣಿ ಇದೆ. ಇಲ್ಲಿ ಶ್ರೀದೇವಿಗೆ ಕಾರ್ತಿಕ ಹುಣ್ಣಿಮೆಯ ದಿನ ತೆಪ್ಪೋತ್ಸವ ಮತ್ತು ದೀಪೋತ್ಸವ ನಡೆಯುತ್ತದೆ. ಈ ಕೆರೆಯಿಂದ ಸುಮಾರು 2270 ಮೆಟ್ಟಿಲುಗಳನ್ನು ಹತ್ತಿ ದೇವಿಯ ದರ್ಶನ ಪಡೆಯಬಹುದು. ಸ್ವಂತ ವಾಹನ ಇದ್ದವರು ನೇರವಾಗಿ ರಸ್ತೆಯ ಮೂಲಕವೂ ಹೋಗಬಹುದು. ಪ್ರತಿದಿನ ಭುವನೇಶ್ವರಿಯ ಅಭಿಷೇಕಕ್ಕೆ ಈ ಪುಷ್ಕರಣಿಯಿಂದಲೇ ನೀರನ್ನು ತೆಗೆದುಕೊಂಡು ಹೋಗುತ್ತಾರೆ.

 

ಭುವನೇಶ್ವರೀ ದೇವಿಯ ಸನ್ನಿಧಾನದಲ್ಲಿ ವರ್ಷವಿಡೀ ಹಲವಾರು ಉತ್ಸವಾದಿಗಳು ನಡೆಯುತ್ತಿರುತ್ತವೆ. ವಿಶೇಷವಾಗಿ ಮಾಘ ಶುದ್ಧ ಹುಣ್ಣಿಮೆ(ಭಾರತ ಹುಣ್ಣಿಮೆ)ಯಂದು ಶ್ರೀದೇವಿಯ ಮಹಾರಥೋತ್ಸವ ಜರುಗುತ್ತದೆ. ಅಂದು ನಾಡಿನ ವಿವಿದೆಡೆಗಳಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಭುವನೇಶ್ವರಿಗೆ ಸೇವೆ ಸಲ್ಲಿಸಿ, ಪ್ರಸಾದ ಭಾಜನರಾಗಿ, ಕೃತಾರ್ಥಭಾವವನ್ನು ಹೊಂದುತ್ತಾರೆ.

 

ಈ ವರ್ಷದ ಶ್ರೀಮನ್ಮಹಾರಥೋತ್ಸವವು ಫೆಬ್ರವರಿ 19ರ ಮಂಗಳವಾರದಂದು ಅತ್ಯಂತ ವಿಜೃಂಬಣೆಯಿಂದ ನೆರವೇರಿತು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವಿಯ ಸೇವೆಗೈದು ದರ್ಶನ ಪಡೆದು ಸಾರ್ಥಕತೆಯನ್ನು ಅನುಭವಿಸಿದರು.
ಇದು ಒಂದು ಸಿದ್ಧಿಕ್ಷೇತ್ರವಾಗಿದ್ದು ಹಲವಾರು ಭಕ್ತರು, ಹಲವು ಹರಕೆ ಸೇವೆಗಳ ಮೂಲಕ ಮಾತೆಯ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.

 

ಕನ್ನಡದ ತಾಯಿ ಭುವನೇಶ್ವರೀ ಇವಳೇ ಎಂದು ಸ್ಪಷ್ಟೀಕರಿಸಲು ಹಲವು ನಿದರ್ಶನಗಳು ದೊರೆಯುತ್ತವೆ. ಅವುಗಳಲ್ಲಿ ಮುಖ್ಯವಾಗಿ, ಭುವನಗಿರಿಯ ಹತ್ತಿರದಲ್ಲೇ ಬದುಕಿ ಬಾಳಿದ, ಕನ್ನಡಕ್ಕಾಗಿಯೇ ತನ್ನ ಪೂರ್ಣ ಜೀವನವನ್ನು ಸವೆಸಿದ ಕಟ್ಟಾ ಕನ್ನಡಾಭಿಮಾನಿ, ರಾಜಗುರು ಭಟ್ಟಾಕಳಂಕ. ಈತ ನಡೆದಾಡಿದ ಪುಣ್ಯಭೂಮಿ ಈ ಭುವನಗಿರಿ. ಸಂಸ್ಕೃತವೇ ಪ್ರಭುತ್ವವನ್ನು ಸ್ಥಾಪಿಸಿದ್ದ ಆ ಕಾಲದಲ್ಲಿ, ಬಾಳಿ ಅರಸರ ಆಸ್ಥಾನಗುರು ಭಟ್ಟಾಕಳಂಕ ಕರ್ನಾಟಕ ‘ಶಬ್ದಾನುಶಾಸನಂ’ ಎಂಬ ಗ್ರಂಥ ರಚಿಸಿ, ಅದರ ಚಿಂತಾಮಣಿ ಎಂಬ ಪರಿಚ್ಛೇದದಲ್ಲಿ 569 ಕನ್ನಡದ ವ್ಯಾಕರಣ ಸೂತ್ರಗಳನ್ನು ರಚಿಸಿ ಕ್ರಿ.ಶ. 1604ರಲ್ಲಿ ಶ್ರೀಭುವನೇಶ್ವರಿಯ ಸನ್ನಿಧಾನಕ್ಕೆ ಸಮರ್ಪಿಸಿ, ಕನ್ನಡಕ್ಕೆ ವಿಶೇಷ ಸ್ಥಾನಮಾನಗಳನ್ನು ತಂದುಕೊಟ್ಟನೆಂದು ಇತಿಹಾಸ ಹೇಳುತ್ತದೆ.
ಕನ್ನಡದ ಮೊಟ್ಟಮೊದಲ ವಿಶ್ವವಿದ್ಯಾಲಯ ಹಾಡುವಳ್ಳಿ ಅಥವಾ ಸಂಗೀತಪುರ ಕೂಡ ಭುವನಗಿರಿಯ ಸಮೀಪವಿದೆ. ವಿಜಯನಗರದ ಸಾಳ್ವ ವಂಶಜರ ಆಳ್ವಿಕೆಯಲ್ಲಿದ್ದ ಸಂಗೀತಪುರಕ್ಕೆ ಬಿಳಗಿ ಅರಸರ ರಕ್ಷಣೆ ಇತ್ತು.

 

ಇವೆಲ್ಲವೂ ಸಹ ಭುವನಗಿರಿಯ ಮಹತ್ತ್ವವನ್ನು ಸಾರುತ್ತವೆ. ಆದರೆ ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ’ ಎಂಬ ಕವಿವಾಣಿಯಂತೆ, ಕನ್ನಡಿಗರು ನೆಲೆ ನಿಂತು ಭಕ್ತರನ್ನು ಸದಾ ಉದ್ಧರಿಸುತ್ತಿರುವಂತಹ ಭುವನಗಿರಿಯ ಭುವನೇಶ್ವರಿಯನ್ನು ಬಿಟ್ಟು, ಊರು ಕೇರಿಗಳಲ್ಲೆಲ್ಲ ಕನ್ನಡದ ರಾಜರಾಜೇಶ್ವರಿಯನ್ನು ಅರಸುತ್ತಿದ್ದಾರೆ.
ಇನ್ನು ಮುಂದಾದರೂ ಆಳುವವರ ಲಕ್ಷ್ಯ ಇತ್ತ ಹರಿದು, ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಭುವನೇಶ್ವರಿಯ ಸನ್ನಿಧಾನದಲ್ಲಿ ಕೊಡುವಂತಾಗಲಿ. ಈ ಸಿದ್ಧಿಕ್ಷೇತ್ರ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣುವಂತಾಗಲೆಂಬುದು ನಮ್ಮೆಲ್ಲರ ಆಶಯ.

Author Details


Srimukha

Leave a Reply

Your email address will not be published. Required fields are marked *