ವಿಶ್ವ~ರಾಮ~ಸಂವಾದ (ಭಾಗ-೨) : ಉಂಡೆಮನೆ ವಿಶ್ವೇಶ್ವರ ಭಟ್

ಲೇಖನ

                    6

 

ರಾಮ
 ಗೋಸಂರಕ್ಷಣೆ ನಮ್ಮ ದೇಶಕ್ಕೆ ನೀನು ಕೊಟ್ಟ ವರ. ಗೋಹತ್ಯೆ ನಮಗೆ ನಾವೇ ಕೊಟ್ಟುಕೊಂಡ ಮಹಾಶಾಪ. ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಸಕ್ರಮ ಗೋಹತ್ಯಾಚಾರಗಳಿಂದಾಗಿ ದೇಶವೇ ಕಸಾಯಿಖಾನೆಯೋ ಎಂಬಂತಾಗಿದೆ.
ಕೈಕಟ್ಟಿ ಕುಳಿತುಕೊಳ್ಳಲರಿಯದ ಒಂದಷ್ಟು ಯುವಪಡೆ ತಡೆಯಲು ಹೋದರೆ ಅವರಿಗೇ ಶಿಕ್ಷೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಶಾಂತಿ ಸಾಮರಸ್ಯ ಕಾಪಾಡಲು ಹುಟ್ಟಿದ ಯೋಜನೆ ‘ಗೋಸಂಜೀವಿನಿ’.
ಸರ್ವರ ನೆರವಿನಿಂದ ಕಸಾಯಿಖಾನೆಗೆ ಹೋಗುವ ದೇಸೀ ಹಸುಗಳನ್ನು ಕೊಂಡುಕೊಂಡು ರಕ್ಷಣೆ-ಪಾಲನೆ ಮಾಡುವುದೇ ಈ ಯೋಜನೆಯ ಉದ್ದೇಶ. ಅದು ಶತಪ್ರತಿಶತ ಅಹಿಂಸಾತ್ಮಕ.

ಈ ಯೋಜನೆ ಜಾರಿಗೆ ತಂದ ಗೋಸ್ವಾಮಿ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಶಾಂತಿ ನಡೆ.

ರಾಮ, ಸರಿ ತಾನೇ?

 


                    7

 


ರಾಮ,

ಮಲೆಮಹದೇಶ್ವರ ಬೆಟ್ಟದ ಆಸರೆ-ತಪ್ಪಲಿನಲ್ಲಿರುವ ನೂರಾರು ಹಳ್ಳಿಗಳ ಜನರು ಗೋಆಧಾರಿತ ಬದುಕನ್ನು ನಡೆಸುವವರು. ನೂರಾರು ವರ್ಷಗಳಿಂದ ಬೆಟ್ಟದಲ್ಲಿ ಬೀಡು ಬಿಟ್ಟು, ದನಗಳನ್ನು ಮೇಯಿಸಿ ಮತ್ತೆ ಊರಿಗೆ ಮರಳುತ್ತಿರುವಂತಹ ಅಪೂರ್ವ ಗೋಪಾಲನಾ ಬದುಕು ಇವರದು. ಏಕಾಏಕಿ ಸರ್ಕಾರ ಅರಣ್ಯ ಸಂರಕ್ಷಣೆಯ ನೆಪದಲ್ಲಿ ಬೆಟ್ಟಕ್ಕೆ ದನ-ಜನಗಳ ಪ್ರವೇಶಕ್ಕೆ ಬೇಲಿ ಹಾಕಿ ನಿರ್ಬಂಧ ಹೇರಿದಾಗ ಜನ ಕಂಗಾಲು, ದನಗಳು ಬೀದಿಪಾಲು. ತೀರಾ ಹಿಂದುಳಿದ ಪ್ರದೇಶವಾದ ಕಾರಣ ಅವರಿಗಾದ ಅನ್ಯಾಯಕ್ಕೆ ಬಹಿರಂಗವಾಗಿ ದನಿಯೆತ್ತುವವರೂ ಇಲ್ಲದಾದಾಗ ಸ್ವಯಂಪ್ರೇರಿತರಾಗಿ
ಶ್ರೀರಾಮಚಂದ್ರಾಪುರಮಠದ ಶಿಷ್ಯರು, ಗೋಪ್ರೇಮಿಗಳು ಅಲ್ಲಿನ ಅಸಹಾಯಕ ಜನರಿಗೆ ಧ್ವನಿಯಾದರು. ಸ್ಥಳೀಯರ, ನೊಂದವರ ಸಹಕಾರದಿಂದ “ನಮ್ಮ ಬೆಟ್ಟ ನಮಗೆ ಬಿಡಿ” ಆಂದೋಲನ ನಡೆದು, ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.
ಈ ಅಪೂರ್ವ ಚಳವಳಿಯ ಮಾರ್ಗದರ್ಶಕರು ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

ಸ್ವಾರ್ಥದ ಲವಲೇಶವೂ ಇಲ್ಲದೆ ಕೇವಲ ಗೋವುಗಳ ಅದರಲ್ಲೂ ದೇಶದಲ್ಲಿ ಅಲ್ಲಿ ಮಾತ್ರ ಕಾಣಬಹುದಾದ ‘ಬರಗೂರು’ ತಳಿಯ ದನಗಳ ರಕ್ಷಣೆಗೆ ಮಾಡಿದ ಈ ಸಂಘಟನಾತ್ಮಕ ಹೋರಾಟ.

ರಾಮಾ, ಸರಿ ತಾನೇ?
                     

8

ರಾಮಾ,

ಒಂದು ದಿನ ಎಂದಿನಂತೆ ದೇವಸ್ಥಾನಕ್ಕೆ ಹೋಗುತ್ತಿದ್ದೆ. ಜತೆಯಲ್ಲಿ ಮಗನೂ ಇದ್ದ. ದಾರಿಯಲ್ಲಿ ವಿದ್ಯಾರ್ಥಿಮಿತ್ರನೊಬ್ಬ ಎದುರಾದ. ಯಾವತ್ತೂ ಎದುರಾಗುವವನೇ. ನಮಸ್ಕಾರಗಳ ವಿನಿಮಯದಲ್ಲಿ ಬೀಳ್ಕೊಡುತ್ತಿದ್ದೆವು.

 

ಆದರೆ ಅಂದು ಆತ ನಮ್ಮನ್ನು ನಿಲ್ಲಿಸಿ, “ಸರ್ ನಿಮಗೆ ಬೇಸರವಾಗದಿದ್ದರೆ ಒಂದು ಪ್ರಶ್ನೆ ಕೇಳಲೇ?” ಎಂದನು. ಕೇಳು ಅಂದೆ.

 

ಅವನು, “ನೀವು ನಿಮ್ಮ ಮಗನಿಗೆ ಜಪ ಪೂಜೆ ಮಾಡುವುದನ್ನು ಎಲ್ಲ ಹೇಳಿಕೊಟ್ಟಿದ್ದೀರಾ?” ಎಂದು ಕೇಳಿದ.
ಆಗ ನಾನು, “ನಮ್ಮ ಮನೆತನಕ್ಕೆ ಸಂಬಂಧಪಟ್ಟ ಪೂಜೆ, ಪೂಜಾಕ್ರಮಗಳನ್ನು ಹೇಳಿಕೊಟ್ಟಿದ್ದೇನೆ” ಎಂದೆ.

 

ಅವನು, “ನನಗೆ ಈ ವಿಶ್ವಾಸ ಇತ್ತು, ಆದರೂ ಗ್ಯಾರಂಟಿ ಮಾಡ್ಕೊಂಡೆ. ಮೊನ್ನೆ ನನ್ನ ಫ್ರೆಂಡ್ ಒಬ್ಬನಲ್ಲಿ ಕೇಳಿದಾಗ ಇಲ್ಲ ಎನ್ನುವ ಉತ್ತರ ಬಂತು. ನಮಗೆ ಇದನ್ನು ಕಲಿಯುವ ಹಾಗೆ ಇಲ್ವಲ್ಲ ಸರ್. ನೀವು ಕಲಿಯುವ ಅರ್ಹತೆ ಇರುವವರು ಕಲಿಯದಿದ್ದರೆ ನಮ್ಮ ಮಕ್ಕಳ ಕಾಲಕ್ಕೆ ಏನಾಗಬಹುದು? ಸಂತೋಷ ಆಯ್ತು, ಬರುತ್ತೇನೆ” ಎಂದು ಬೀಳ್ಕೊಂಡ.

ಮಾತಿನ ಹೂಬಾಣ ಇಂದಿಗೂ ನಾಟಿಯೇ ಇದೆ.ನಮ್ಮಿಂದ ಸಮಾಜ ಏನನ್ನು ಬಯಸುತ್ತಿದೆ ಎಂಬುದನ್ನು ಸಮಾಜದ ಪ್ರತಿನಿಧಿಯಾಗಿ ನನ್ನಲ್ಲಿ ಕೇಳಿದ ಎನಿಸುತ್ತದೆ.

 

ಒಂದೊಮ್ಮೆ ನೀವು ಕಲಿತಿದ್ದೀರಾ ಎಂದು ಕೇಳುತ್ತಿದ್ದರೆ ನನ್ನ ಬಣ್ಣ ಬಯಲಾಗುತ್ತಿತ್ತು. ಯಾಕೆಂದರೆ ನನ್ನ ಬಾಲ್ಯದ ಕಾಲದಲ್ಲಿ ನಾವಿರುವ ಊರಲ್ಲಿ ಅಂತಹ ವ್ಯವಸ್ಥೆ ಇದ್ದಿರಲಿಲ್ಲ. ಈಗ ಎಲ್ಲೆಡೆ ಎನ್ನುವಂತೆ “ವಸಂತ ವೇದಪಾಠ” ಶಿಬಿರಗಳ ಮೂಲಕ ಮೂಲ ವೇದಾಧ್ಯಯನ ನಡೆಸಲಾಗುತ್ತಿದೆ. ಮಕ್ಕಳು ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಲಿಯುತ್ತಿದ್ದಾರೆ.

ರಾಮಾ, ಈ ಘಟನೆಯನ್ನು ಯಾಕೆ ಉಲ್ಲೇಖಿಸಿದೆ ಎಂದರೆ ಇಂತಹ ಒಂದು ಆಸ್ತಿಕ ಧಾರ್ಮಿಕ ಪರಿಸರದ ನಿರ್ಮಾಣ ಹೇಗಾಯಿತು ಎಂಬುದನ್ನು ತಿಳಿಸಲು. ನನಗೆ/ನಮಗೆ ಸಿಗದ್ದು ನಮ್ಮ ಮಕ್ಕಳಿಗೆ ಹೇಗೆ ಸಿಕ್ಕಿತು? ಎಂಬುದನ್ನು ತಿಳಿಸಲು.
ಉತ್ತರ ಬಹಳ ಸರಳ.
ನಮ್ಮ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಆರಂಭಿಸಿದ ಧಾರ್ಮಿಕ ಸಾಂಸ್ಕೃತಿಕ ಚಟುವಟಿಕೆಗಳೇ ಇದಕ್ಕೆ ಕಾರಣ.ಅಭಿವೃದ್ಧಿಯ ವೇಗವೆಂಬ ಮಹಾಪತನಕ್ಕೆ ಧಾರ್ಮಿಕ ನಂಬಿಕೆಯ ಆಚರಣೆಗಳ ಮಾರ್ಮಿಕ ತಡೆಯೊಡ್ಡಿ ಸಮಾಜಕ್ಕೆ ಬೇಕಾದ ಆಸ್ತಿಕ ಪವಿತ್ರಜಲವನ್ನು ಪೂರೈಸಲು ಮಾಡಿದ ಅವರ ಈ ಸ್ತುತ್ಯರ್ಹ ಕಾರ್ಯ …

ರಾಮ, ಸರಿ ತಾನೇ?

                                 9

ರಾಮ,

“ಬೆಳ್ಳಗಿದ್ದದ್ದೆಲ್ಲಾ ಹಾಲಲ್ಲ” ಎನ್ನುವುದು ಹಳೇ ಗಾದೆ.
“ಎಲ್ಲಾ ಹಾಲು ಹಾಲಲ್ಲ” ಎನ್ನುವ ಹೊಸ ಗಾದೆ ಹುಟ್ಟಿಕೊಂಡಿದೆ. ಹಾಗೆಯೇ “ಎಲ್ಲಾ ದನಗಳು ದನಗಳಲ್ಲ” ಎಂಬ ಮಾತೂ ಮೂಡಿಬಂದಿದೆ. ಕೊನೆಯ ಎರಡು ಮಾತುಗಳು ನನ್ನಂತಹವರಿಗೇ ಇತ್ತೀಚೆಗೆ ಗೊತ್ತಾದದ್ದು ಎಂದ ಮೇಲೆ ಮಕ್ಕಳ ಪಾಡೇನು?

ಸುಮಾರು ಹತ್ತು ವರ್ಷಗಳ ಹಿಂದೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ “ಭಾರತೀಯ ಗೋವುಗಳ ಮಹತ್ವ” ಎನ್ನುವ ಶೀರ್ಷಿಕೆಯಲ್ಲಿ ದ.ಕ. ಜಿಲ್ಲೆಯ ವಿವಿಧೆಡೆಗಳಲ್ಲಿ  ವಿಶಿಷ್ಟ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು.
ಖಾಸಗಿ ಪಶುವೈದ್ಯರ ಸಂಘ, ಮಾಧ್ಯಮಿಕ ಶಿಕ್ಷಕ ಸಂಘ ಮತ್ತು ವಿಠಲ ವಿದ್ಯಾ ಸಂಘವೂ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳ ಸಹಕಾರದಿಂದ ತುಂಬಾ ಚೆನ್ನಾಗಿ ಈ ಕಾರ್ಯಕ್ರಮ ನಡೆಯಿತು.

ಆ ಸಂದರ್ಭದಲ್ಲಿ ನಗರ ಪ್ರದೇಶಗಳ ಸಂಸ್ಥೆಗಳ ಎಷ್ಟೋ ಮಂದಿ ವಿದ್ಯಾರ್ಥಿಗಳಿಗೆ ಹಾಲು ಎಲ್ಲಿಂದ ಬರುತ್ತದೆ ಎಂದೇ ಗೊತ್ತಿರಲಿಲ್ಲ. ಅಂತಹದ್ದರಲ್ಲಿ ದೇಶೀ ವಿದೇಶೀ ದನಗಳ ಮಾತೆಲ್ಲಿ? ಅಂತೂ ಇಂತೂ ಸುಮಾರು ಎರಡು ಗಂಟೆಗಳ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ವಿದ್ಯಾರ್ಥಿಗಳಿಗೆ ಭಾರತೀಯ ಗೋವುಗಳ ಮಹತ್ವ ಅರಿವಾದದ್ದು ವಿಶೇಷವಾಗಿತ್ತು. ಇನ್ನೂರಕ್ಕೂ ಮಿಕ್ಕ ಶಿಕ್ಷಕರು, ಮೂರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದು, ಇದು ಒಂದು ಜಂಟಿ ಸಾಧನೆಯಾದದ್ದು ದಾಖಲಾಯಿತು.

ರಾಮಾ, ಇದು ಹೇಗೆ ಸಾಧ್ಯವಾಯಿತು?
ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಪ್ರೇರಣೆ ಮಾರ್ಗದರ್ಶನಗಳೇ ಇದಕ್ಕೆ ಕಾರಣ. ಎಲ್ಲಿಯ ತನಕ ನಮ್ಮ ಯೋಜನೆಗಳು ಎಳೆಯ ಪೀಳಿಗೆಗೆ ತಲುಪುವುದಿಲ್ಲವೋ ಅಲ್ಲಿಯ ತನಕ ಅವುಗಳ ಭವಿಷ್ಯ ನಿರ್ಧಾರವಾಗದು ಎಂಬ ತತ್ತ್ವದ ಮೇಲೆ ಈ ಯೋಜನೆ ಸಾಗಿತು. ಇಂತಹ ಅವೆಷ್ಟೋ ಕಾರ್ಯಕ್ರಮಗಳಿಂದಾಗಿ ಇಂದು ನಾಡಿನೆಲ್ಲೆಡೆ ಮೇಲೆ ಹೇಳಿದ ಹೊಸ ಗಾದೆ ಮಾತುಗಳು ಜನರಿಗೆ ಅರ್ಥವಾಗಿವೆ, ಮಾತ್ರವಲ್ಲ ಈ ದಿಸೆಯಲ್ಲಿ ಚಿಂತನೆಗೂ ತೊಡಗಿದ್ದಾರೆ.

ಹೇಳು ರಾಮ,
ಪರಮಪೂಜ್ಯರ ಇಂತಹ ನಡೆಗಳು
ಶ್ರೀ ಶಂಕರಾಚಾರ್ಯರ ನಡೆಗಳೇ ತಾನೇ?

ಇವು ಸರಿ ತಾನೇ! ರಾಮ…

                                   10

ರಾಮ, ಪ್ರಣಾಮ.

“ಕಾವರೇ ಕಣೆಗೊಂಡರೆ?” – ಕಾಪಾಡಬೇಕಾದವರೇ ಕೊಲ್ಲಲು ಶಸ್ತ್ರವನ್ನು ಕೈಗೆತ್ತಿಕೊಂಡರೆ ಕಾಯುವರಾರು?
ಎಂಬ ಮಾತು ನಮ್ಮ ಶ್ರೀಪೀಠ ಮತ್ತು ಶ್ರೀಸಂಸ್ಥಾನದವರ ಪಾಲಿಗೆ ಅಕ್ಷರಶಃ ಸತ್ಯವಾಯಿತು. ಮಠಕ್ಕೆ ಅನ್ಯಾಯವಾದಾಗ, ನ್ಯಾಯಕ್ಕೆ ಮೊರೆಯಿಟ್ಟಾಗ ಕಾಯಬೇಕಾದ ಸರ್ಕಾರವೇ ಅನ್ಯಾಯದ ಪರ ನಿಂತರೆ?ಕೆಲವೇ ಕೆಲವು ಮಂದಿ ಕುಜನರ ಕೇಳಿಕೆಯ ಮೇರೆಗೆ ಆಡಳಿತಾಧಿಕಾರಿ ನೇಮಕಕ್ಕೆ ಕೈಹಾಕಿದರೆ?
ಯಾರೇನು ಮಾಡಲು ಸಾಧ್ಯ? ಹಾಗೆಂದು ಶಿಷ್ಯರಿಗೆ ಸುಮ್ಮನೆ ಕೂರಲಾಗುತ್ತದೆಯೇ?
ಕಣೆ ಕೈಗೆತ್ತಿಕೊಂಡ ರಾಜನ ಎದುರು ನಮ್ಮದು “ನಿ:ಶಸ್ತ್ರ    ಅಸ್ತ್ರಗಳ” ವಿನೂತನ ಸತ್ಯಾಗ್ರಹ. ಮೌನ-ನಿರಾಹಾರಗಳೇ ನಮ್ಮ ಆಯುಧವಾದವು. ಅದೇ “ಶಪಥ ಪಥ”.
ನೀನು ಕಣೆಯನ್ನು ಕೊಂಡಾಗ ಶರಾವತಿ ಹುಟ್ಟಿ ಹರಿದಳು, ಬಾಳು ಕೊಟ್ಟು ಬೆಳಗಿದಳು. ಅವಳ ಒಡಲಲ್ಲೇ ಇರುವ ರಾಮಚಂದ್ರಾಪುರದ ದಿವ್ಯ ಸಾತ್ವಿಕ ಗೋಧಾಮ, ವಿದ್ಯಾಧಾಮ, ಹಸಿರು ತಾಣ ನಮ್ಮ ಐತಿಹಾಸಿಕ ಅಹಿಂಸಾತ್ಮಕ ಸತ್ಯಾಗ್ರಹದ ಯುದ್ಧಭೂಮಿಯಾಯಿತು.
ಹೆಸರಿಗೆ ಯುದ್ಧ, ಆದರೆ ಇಲ್ಲಿ ಆಯುಧವೇ ಇಲ್ಲ. ಇಲ್ಲವೆಂತಿಲ್ಲ, ಕಣ್ಣಿಗೆ ಕಾಣದ ಕಣೆ,
ಮೌನಾಯುಧ, ಉಪವಾಸದ ಆಯುಧ. ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರಿದ ಭಕ್ತರು ನಿನ್ನ ಸಾನ್ನಿಧ್ಯದಲ್ಲಿ (ನಿನ್ನ ಉಪವಾಸ) ಪರಮಪೂಜ್ಯರ ದರ್ಶನ- ಮಾರ್ಗದರ್ಶನದಲ್ಲಿ, ಸುಡುಬಿಸಿಲಲ್ಲಿ ಕ್ರಾಂತಿ ಮಾಡಿದರು. ಎಲ್ಲಾ ವಯೋಮಾನದವರು ನ್ಯಾಯಕ್ಕಾಗಿ ಲೋಕನಾಯಕನಾದ ನಿನ್ನ ನ್ಯಾಯಾಸ್ಥಾನದಲ್ಲಿ ಮೊರೆಯಿಟ್ಟರು. ನಿನ್ನ ಕಣೆ ಕರುಣಾ ರಸ ಹರಿಸಿತು. ನ್ಯಾಯ ಸಿಕ್ಕಿತು. ರಾಮನ ಕರುಣೆಗೆ ರಾಜನ ಕಣೆ ಕರಗಿಯೇ ಹೋಯಿತು.

ಹೇಳು ರಾಮಾ, ತನ್ನ ಶಿಷ್ಯ-ಅಭಿಮಾನಿ-ಸಾತ್ವಿಕ ಆಸ್ತಿಕರನ್ನು ಈ ರೀತಿ ನ್ಯಾಯಕ್ಕಾಗಿ ಮಾದರಿಯಾಗಿ ಮುನ್ನಡೆಸಿದ ನಮ್ಮ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ನಡೆ ನಿಜವಾದ ಸಂತರ ನಡೆ ತಾನೇ?

ಇದೂ ಸರಿ ತಾನೇ?

Author Details


Srimukha

Leave a Reply

Your email address will not be published. Required fields are marked *