ಅಶೋಕೆಯಲ್ಲಿ ಹದಿನೈದು ಕೋಟಿ ಅಂದಾಜಿನ ಮೂಲಮಠದ ಪ್ರಥಮ ಹಂತದ ಕಾಮಗಾರಿಯು ಭರದಿಂದ ಆರಂಭಗೊಂಡಿತು. ಶಾಸನತಂತ್ರದ ಹೊಸತನದಲ್ಲಿ ಈ ಬಾರಿ ಮೂಲಮಠ ನಿರ್ಮಾಣ ತಂಡವೂ ಹೊಸದಾಗಿದೆ. ಹಳಬರ ಅನುಭವದೊಂದಿಗೆ, ಹೊಸಬರ ಹುರುಪಿನೊಂದಿಗೆ ವೇಗದಿಂದ ನಡೆಯುತ್ತಿದೆ ಮೂಲಮಠ ನಿರ್ಮಾಣ ಕಾರ್ಯ. “ಎಲ್ಲರೂ ಪ್ರಾಮಾಣಿಕ ಸೇವೆ ಸಲ್ಲಿಸಿ, ಧುಮುಕಿ ಕೆಲಸ ಮಾಡಿ, ರಾಮಾನುಗ್ರಹವಿದೆ” ಎಂದು ಶ್ರೀಸಂಸ್ಥಾನದವರು ಆಶೀರ್ವದಿಸಿದ್ದಾರೆ.
ಅಂಡಾಕಾರದ ವೃಷಭಾಯ:
ಮೂಲಮಠದಲ್ಲಿ ತಲೆಯೆತ್ತಿರುವ ಮಲ್ಲಿಕಾರ್ಜುನ ದೇವಾಲಯವು ಇಡಿಯ ಪ್ರಪಂಚದಲ್ಲೇ ಅದ್ವೈತ, ಅತಿವಿಶಿಷ್ಟ. ಸಾಮಾನ್ಯವಾಗಿ ದೇವಾಲಯದ ಅಡಿಪಾಯವು ಚೌಕ ಅಥವಾ ಆಯತಾಕಾರದಲ್ಲಿರುತ್ತದೆ. ಕೆಲವು ವೃತ್ತಾಕಾರದಲ್ಲೂ ಇರಬಹುದು. ಇನ್ನೂ ಕೆಲವು ವಿರಳವಾಗಿ ಗಜಪೃಷ್ಠಾಕಾರ ಎಂಬ ವಿಶೇಷ ಆಕಾರದಲ್ಲಿ ಇರುತ್ತದೆ.
ಆದರೆ, ಮಲ್ಲಿಕಾರ್ಜುನ ಗುಡಿಯು ಜಗತ್ತಿನ ಏಕೈಕ ರೂಪ – ಅಂಡಾಕಾರದ ಅಡಿಪಾಯದಲ್ಲಿ ಮೂಡಿ ಬರಲಿದೆ. ಅಂಡ ಎಂದರೆ ಮೊಟ್ಟೆ. ಮೊಟ್ಟೆಯ ಹೊರಮೈ. ಇದು ವೃತ್ತಾಕಾರವೂ ಅಲ್ಲ, ಗಜಪೃಷ್ಠಾಕಾರವೂ ಅಲ್ಲ. ದೀರ್ಘವೃತ್ತದ ರೀತಿಯ ಒಂದು ನಿಖರ ಸ್ವರೂಪ. ಇದರ ಪರಿಧಿಯ ಪ್ರತಿ ಅಂಗುಲವೂ ಅದರದ್ದೇ ಆದ ಬಾಗುವಿಕೆಯನ್ನು ಹೊಂದಿರುತ್ತದೆ. ಅಂಗುಲ ಅಂಗುಲಕ್ಕೂ ಅದರದ್ದೇ ಆದ ಅಳತೆ, ಅದರದ್ದೇ ಆದ ಲೆಕ್ಕಾಚಾರಗಳು. ಅಡಿಪಾಯದಿಂದ ಛಾವಣಿಯ ತನಕವೂ ಈ ಅಂಡಾಕಾರವು ಪ್ರತಿಫಲನಗೊಳ್ಳುತ್ತದೆ. ಕೇರಳದ ಪ್ರಸಿದ್ಧ ವಾಸ್ತುಶಿಲ್ಪಿಗಳೊಬ್ಬರು ಇದರ ಪರಿಪೂರ್ಣತೆಯ ಮೇಲುಸ್ತುವಾರಿ ವಹಿಸಿಕೊಂಡು ಸಹಕರಿಸಿದರು.
ಸಂಗ್ರಹ:
ಸಹಸ್ರಮಾನದ ಕಾರ್ಯಕ್ಕೆ ನಿಧಿಯು ಅತ್ಯಗತ್ಯ. ಕೆಲಸವು ಆರಂಭವಾದಾಗಿನಿಂದಲೇ ಹಲವಾರು ರೂಪದಲ್ಲಿ ಸಂಪತ್ತಿನ ಸಂಗ್ರಹವಾಗಿವೆ. ಇಡಿಯ ಮಹಾಮಂಡಲದ ವ್ಯಾಪ್ತಿಯಿಂದ ಮೂಲಸ್ವರೂಪದ ನಿಧಿಸಂಗ್ರಹ ಕಾರ್ಯವು ಒಂದೆಡೆಯಾದರೆ, ಸಾವಿರಾರು ವರ್ಷ ಬಾಳಬಲ್ಲ ಸೂಕ್ತ ಕಲ್ಲುಗಳ ಹುಡುಕಾಟ ಇನ್ನೊಂದೆಡೆ. ಗಟ್ಟಿಯಾದ ತಿರುಳಿನ ಮರಗಳನ್ನು ಹುಡುಕಿ ತರುವುದು ಮತ್ತೊಂದೆಡೆ. ಸೂಕ್ಷ್ಮ ಕೆಲಸವನ್ನು ನಾಜೂಕಾಗಿ ಮಾಡಬಲ್ಲ ಕರಕುಶಲ ವ್ಯಕ್ತಿಗಳನ್ನು, ಇಂಜಿನಿಯರ್ ಗಳನ್ನು, ಶಿಲ್ಪಿಗಳನ್ನು, ಕಾಷ್ಠಶಿಲ್ಪಿಗಳನ್ನು ಹುಡುಕಿ ಜೋಡಿಸುವುದು ಮಗದೊಂದು ಕೆಲಸ. ಒಟ್ಟಿನಲ್ಲಿ ಹಲವಾರು ಆಯಾಮಗಳಲ್ಲಿ ಈ ಮೂಲಮಠದ ಕೆಲಸವು ಜೋಡಣೆಗೊಂಡು ಸಾಗಿತು. “ಯೋಜಕಃ ತತ್ರ ದುರ್ಲಭಃ“ ಎಂಬಂತೆ, ಇವೆಲ್ಲ ಆಯಾಮಗಳಲ್ಲಿ ಸೂಕ್ತ ವ್ಯಕ್ತಿಗಳನ್ನು ಆಯ್ದು ಹುಡುಕಿ ಅನುಗ್ರಹಿಸಿದವರು ಶ್ರೀಸಂಸ್ಥಾನದವರು.
ಪ್ರತಿಯೊಂದಕ್ಕೂ ಆಯಾ ವಿಭಾಗದ ಪರಿಪೂರ್ಣವಾದ, ಅತ್ಯಂತ ಸೂಕ್ತವಾದ ಸುವಸ್ತುಗಳನ್ನೇ ತಂದು ಜೋಡಿಸಬೇಕಿದೆ. ಅತಿ ಸೂಕ್ತ ಕಲ್ಲುಗಳನ್ನು ಕುಮಟಾ ಪ್ರದೇಶದಿಂದ ಆಯ್ದು ಅಡಿಪಾಯ ಹಾಗೂ ಗೋಡೆಯ ಕೆಲಸ ನಡೆಸಲಾಗುತ್ತಿದೆ. ಕಲ್ಲಿನ ಕೆಲಸ ಅಶೋಕೆಯಲ್ಲಿ ಸಾಗುತ್ತಿದ್ದಂತೆಯೇ ಅದಕ್ಕಿರುವ ಮರಮಟ್ಟುಗಳ, ಛಾವಣಿಯ ಮರದ ಕೆಲಸವು ಕೇರಳದ ನುರಿತ ವಿಶ್ವಕರ್ಮರ ನೇತೃತ್ವದಲ್ಲಿ ಮಾಣಿಮಠದಲ್ಲಿ ನಡೆದಿದೆ. ಜೊತೆಜೊತೆಯಲ್ಲಿ ಶಿಷ್ಯಸಂಪರ್ಕ, ಧನಸಂಗ್ರಹ ಇತ್ಯಾದಿಗಳೂ ನಡೆದಿದೆ. ಎಲ್ಲವೂ ಸೇರಿ ಸುಂದರವಾಗಿ ಸದ್ಯದಲ್ಲೇ ನಮ್ಮ ಮೂಲಮಠವು ಮತ್ತೊಮ್ಮೆ ಎದ್ದು ನಿಲ್ಲಲಿದೆ. ಇನ್ನು ಮುಂದುವರಿದು, ಮಹರ್ಷಿ ದೇವರಾತರ ಪ್ರತಿಮೆ, ಆದಿಶಂಕರಾಚಾರ್ಯ, ವಿದ್ಯಾನಂದಾಚಾರ್ಯ ಸಹಿತ ಪೂರ್ವಗುರುಗಳ ಪ್ರತಿಮೆಗಳ ಸ್ಥಾಪನೆ, ಅಗ್ರಹಾರದ ನಿರ್ಮಾಣ ಇತ್ಯಾದಿ ಚಿಂತನೆಗಳು ಮುಂದಿನ ಹಂತಗಳಲ್ಲಿ ಬರಲಿದೆ.
ಶಿಷ್ಯಸ್ತೋಮದ ಪೂರ್ಣ ಸಹಕಾರದಿಂದಾಗಿ ಈವರೆಗೆ ಹದಿನೈದು ಕೋಟಿಯಲ್ಲಿ ಅರ್ಧದಷ್ಟು ಸಂಗ್ರಹಗೊಂಡಿದೆ. ಅದಲ್ಲದೇ ಗರ್ಭಗುಡಿಯ ಕೆಲಸಕ್ಕೆ ಅಗತ್ಯವಿರುವ ಕಲ್ಲು, ಮರಳು, ಮರಮಟ್ಟುಗಳ ಸಂಗ್ರಹವೂ ಶೇಕಡಾ ಎಂಭತ್ತರಷ್ಟು ಪೂರ್ಣಗೊಂಡಿದೆ. ಇನ್ನೂ ಸಾಗುವ ದಾರಿ ಬಹುದೂರವಿದೆ. ಶಿಷ್ಯಸಮೂಹದ ಪೂರ್ಣಸಹಕಾರವಿದ್ದಲ್ಲಿ ಇದು ಕಷ್ಟಸಾಧ್ಯವಾದ ಮಾತಲ್ಲ ಎಂದು ಮೂಲಮಠದ ನಿರ್ಮಾಣದಲ್ಲಿ ಹಗಲಿರುಳು ಶ್ರಮಿಸುತ್ತಿರುವವರಲ್ಲಿ ಒಬ್ಬರಾದ, ಹಿರಿಯ ಮುಂದಾಳು ಪಡೀಲು ಮಹಾಬಲ ಭಟ್ಟರ ಅಭಿಮತ.
ವಿದ್ಯಾನಂದಾಚಾರ್ಯರಿಂದ ಇಂದಿನ ಮೂವತ್ತಾರನೆಯ ಪೀಠಾಚಾರ್ಯರ ತನಕ ಎಲ್ಲರಿಗೂ ಪರಮಾನಂದದ ಕಾರ್ಯವಿದು. ಸಹಸ್ರಮಾನದ ಕೆಲಸದಲ್ಲಿ ಎಲ್ಲ ಶಿಷ್ಯರೂ ಕೈಜೋಡಿಸೋಣ.