ನಮ್ಮ ಸಂಸ್ಕೃತಿಲಿ ಪ್ರತಿಯೊಂದು ತಿಂಗಳಿಂಗು ಒಂದೊಂದು ವಿಶೇಷತೆಗೊ ಇದ್ದು. ಅಂದರೂ ಧನು ತಿಂಗಳಿಂಗೆ ಮತ್ತೂ ವಿಶೇಷತೆ ಇದ್ದು. ಚಾಂದ್ರಮಾನ ತಿಂಗಳಿನ ಮಾರ್ಗಶಿರದ ಹಾಂಗೇ ಸೌರಮಾನದ ಧನು ತಿಂಗಳು. ಶ್ರೀಕೃಷ್ಣ ದೇವರು ಅರ್ಜುನಂಗೆ ಗೀತೋಪದೇಶ ಮಾಡಿ ಮಾರ್ಗಶಿರ ಮಾಸ ಅತ್ಯಂತ ಪವಿತ್ರ ಹೇಳಿ ಗೀತೆಲಿ ಹೇಳಿದ್ದ°. ಚಾಂದ್ರಮಾನದ ಮಾರ್ಗಶಿರ ಮಾಸವುದೆ ಸೌರಮಾನದ ಧನು ತಿಂಗಳುದೆ ಸಾಧಾರಣ ಒಟ್ಟೊಟ್ಟಿಂಗೆ ಬತ್ತು. ಹಾಂಗೇ ಧನು ತಿಂಗಳುದೇ ದೇವರ ಆರಾಧನೆಗೆ ವಿಶೇಷ. ಆಧ್ಯಾತ್ಮಿಕ ಸಾಧನೆಗೊಕ್ಕೆ, ಆತ್ಮಶುದ್ದಿಗೆ ಆದ್ಯತೆ ಕೊಡುವ ತಿಂಗಳಿದು.
ಧನು ತಿಂಗಳು ಶಿವಂಗೂ ವಿಷ್ಣುವಿಂಗೂ ತುಂಬಾ ವಿಶೇಷ ಹೇಳಿ ಹಳಬ್ಬರು ಹೇಳುಗು. ಧನು ತಿಂಗಳಿನ ಸುರುವಾಣ ಬುಧವಾರವ ಕುಚೇಲ ದಿನ ಹೇಳಿ ಕೇರಳಲ್ಲಿ ಆಚರಿಸುತ್ತವು. ಕೃಷ್ಣನ ಸಣ್ಣಾದಿಪ್ಪಗಾಣ ಜತೆಕ್ಕಾರ ಸುಧಾಮ ಅವನ ಕಾಂಬಲೆ ದ್ವಾರಕೆಗೆ ಬಂದ ಪುಣ್ಯ ದಿನ ಆಡ ಅದು. ಬಡಪತ್ತಿನ ಜೀವನ ನಡೆಶಿಂಡಿತ್ತಿದ್ದ ಸುಧಾಮ ಗೆಳೆಯನ ಕಾಂಬಲೆ ಹೋಪಗ ಬರೀ ಕೈಲಿ ಹೋಪದು ಹೇಂಗೇಳಿ ಮನೆಲಿದ್ದ ಒಂದು ಮುಷ್ಟಿ ಅವಲಕ್ಕಿಯನ್ನೇ ಕೃಷ್ಣಂಗೆ ಕೊಂಡೋದ ಕತೆ ನಮಗೆಲ್ಲ ಗೊಂತಿದ್ದು. ಕುಚೇಲನ ಒಂದು ಮುಷ್ಟಿ ಅವಲಕ್ಕಿಯ ಪ್ರೀತಿಲಿ ಸ್ವೀಕರಿಸಿ ಅವಂಗೆ ಸರ್ವ ಸಂಪತ್ತನ್ನೂ ಕೃಷ್ಣ ದೇವರು ಅನುಗ್ರಹಿಸಿದ್ದ°. ಸಮರ್ಪಣಾ ಭಾವದ ಭಕ್ತಿಗೆ ಭಗವಂತನ ಒಲುಶುಲೆಡಿಗು ಹೇಳುವ ಸಂದೇಶ ಕೊಡುವ ಕತೆಯಿದು. ಈ ದಿನ ಕೇರಳದ ಗುರುವಾಯೂರ್ ದೇವಸ್ಥಾನಲ್ಲಿ ತುಂಬಾ ಗೌಜಿ. ಈ ದಿನ ಕೃಷ್ಣ ದೇವರಿಂಗೆ ಅವಲಕ್ಕಿ ಸಮರ್ಪಣೆ ಮಾಡಿದರೆ ಭಕ್ತರ ಸಂಕಲ್ಪಂಗೊ ಈಡೇರುತ್ತು ಹೇಳುವ ನಂಬಿಕೆ.
ಧನು ತಿಂಗಳಿನ ಉದೆಕಾಲಕ್ಕೆ ಎದ್ದು ವಿಷ್ಣು ಸಹಸ್ರನಾಮ, ಪುರುಷ ಸೂಕ್ತ ಓದೆಕಾಡ. ಧನು ತಿಂಗಳಿಲ್ಲಿ ಬ್ರಾಹ್ಮೀ ಮುಹೂರ್ತಲ್ಲಿ ದೇವರ ಸೇವೆಗಳ ಮಾಡಿದರೆ ದೇವತೆಗೂ ಬೇಗನೆ ಹರಸುತ್ತವು ಹೇಳಿ ನಮ್ಮ ಹಿರಿಯರ ನಂಬಿಕೆ. ಈ ದಿನಂಗಳಲ್ಲಿ ಒಂದು ದಿನ ವಿಷ್ಣು ಪೂಜೆ ಮಾಡಿದರೂ ಸಾವಿರ ವರ್ಷ ಸೇವೆ ಮಾಡಿದ ಫಲ ಇದ್ದಾಡ. ಪೂಜೆ, ದಾನ, ದೇವರ ಸೇವೆಗಳ ಮಾಡಿದರೆ ಪಾಪಕ್ಷಯ ಆಗಿ ಮೋಕ್ಷಕ್ಕೆ ಪೂರಕವಾದ ಪುಣ್ಯ ಸಿಕ್ಕುತ್ತಾಡ.
ಧನು ತಿಂಗಳು ಶಿವದೇವರಿಂಗೂ ತುಂಬಾ ಪ್ರೀತಿಯ ತಿಂಗಳಾಡ. ದಕ್ಷ ಯಜ್ಞಲ್ಲಿ ಭಾಗವಹಿಸಲೆ ಗಂಡನ ಒಪ್ಪಿಗೆ ಪಡೆಯದ್ದೆ ಹೋಗಿ ಅಲ್ಲಿ ಅಪಮಾನ ಆದಪ್ಪಗ ಸಹಿಸಲೆಡಿಯದ್ದೆ ದೇಹತ್ಯಾಗ ಮಾಡಿದ ದಾಕ್ಷಾಯಿಣಿ ಪರ್ವತ ರಾಜನ ಮಗಳಾಗಿ ಹುಟ್ಟಿ ಬಂದು ಶಿವನ ಮದುವೆ ಅಪ್ಪಲೆ ಬೇಕಾಗಿ ತಪಸ್ಸು ಮಾಡಿತ್ತು. ಅದರ ತಪಸ್ಸು, ನಿಷ್ಠೆ, ಪ್ರೀತಿಗೆ ಶಿವದೇವರು ಮೆಚ್ಚಿ ಧನು ತಿಂಗಳಿನ ಆರ್ದ್ರಾ ನಕ್ಷತ್ರದಂದು ಪಾರ್ವತಿಯ ಮದುವೆಯಾದ ಪುಣ್ಯದ ದಿನ. ಈ ದಿನ ಪಾರ್ವತಿ ದೇವಿ ಶಿವನ ಶ್ರೇಯಸ್ಸಿಂಗೆ ಬೇಕಾಗಿ ಸಖಿಯರೊಟ್ಟಿಂಗೆ ವಿಶೇಷ ವ್ರತ ಮಾಡಿದ ಕಥೆಯನ್ನೂ ಕೇರಳದ ಮಾತೆಯರು ಹೇಳ್ತವು.
ಮೃಗಶಿರ ನಕ್ಷತ್ರವು, ಆರ್ದ್ರಾ ನಕ್ಷತ್ರವು ಸೇರಿ ಬಪ್ಪ ದಿನ ಕೇರಳದ ಮಾತೆಯರು ‘ತಿರುವಾದಿರ ‘ ವ್ರತ ಮಾಡ್ತವು. ಹಗಲಿಡೀ ಕೊಳೆ ಆಹಾರ (ಅಕ್ಕಿಯ ತಿಂಡಿ ) ತಿನ್ನದ್ದೆ ಇರುಳಿಡೀ ತಿರುವಾದಿರಕ್ಕಳಿ ಹೇಳಿ ಶಿವ ಪಾರ್ವತಿಯರ ಸ್ತುತಿಸಿಂಡು ಪದ್ಯ ಹೇಳಿ ನೃತ್ಯ ಮಾಡುವ ಕ್ರಮ ಈಗಲೂ ಇದ್ದು. ಮದುವೆ ಆಗದ್ದ ಕೂಸುಗೊ ಮಾಂಗಲ್ಯ ಭಾಗ್ಯಕ್ಕೆ ಬೇಕಾಗಿಯೂ, ಮದುವೆ ಆದ ಹೆಮ್ಮಕ್ಕೊ ಗಂಡನ ಶ್ರೇಯಸ್ಸಿಂಗೆ ಬೇಕಾಗಿಯೂ ಈ ವ್ರತ ಮಾಡ್ತವು. ಇನ್ನೂ ಒಂದಿಷ್ಟು ಆಚರಣೆಗೊ ಅವರಲ್ಲಿ ಇದ್ದು. ಎಲ್ಲವೂ ಶಿವನ ಪ್ರೀತಿಗೆ. ದೈವಾನುಗ್ರಹ ಸಂಪಾದನೆ ಮಾಡಿದರೆ ಜೀವನಲ್ಲಿ ಸಕಲ ಶುಭಂಗಳೂ ಸಿಕ್ಕುತ್ತು ಹೇಳುವ ವಿಶ್ವಾಸ ನಮ್ಮ ಸನಾತನ ಪರಂಪರೆದು.
ಈಗ ಶಿವ, ವಿಷ್ಣು ಮಾಂತ್ರ ಅಲ್ಲ ಹೆಚ್ಚಿನ ಎಲ್ಲಾ ದೇವಸ್ಥಾನಂಗಳಲ್ಲಿಯೂ ಧನುಪೂಜೆ ಇದ್ದು. ಬ್ರಾಹ್ಮೀ ಮುಹೂರ್ತಲ್ಲೇ ದೇವರ ಪೂಜೆ ಮಾಡಿ ಸೂರ್ಯೋದಯಕ್ಕಪ್ಪಗ ಮಂಗಳಾರತಿ ಮಾಡುವ ಈ ಪೂಜೆಂದ ನಮ್ಮ ಮನಸ್ಸಿಂಗೆ ಹೆಚ್ಚು ಭಕ್ತಿ, ಶ್ರದ್ಧೆ ಬತ್ತು.
ಧನು ತಿಂಗಳಿನ ಈ ಚಳಿಲಿ ಪವಿತ್ರ ಸ್ನಾನ ಮಾಡಿ ದೇವರ ಸೇವೆ ಮಾಡಿದರೆ ನಮ್ಮ ಮನಸ್ಸಿನ ಅಹಂಕಾರದ ಬೆಶಿಯೂ ತಣ್ಣಂಗೆ ಆವ್ತಾಡ. ಆತ್ಮ ಸಾಕ್ಷಾತ್ಕಾರದ ದಾರಿ ಹೇಳಿದರೆ ದೇವರ ಧ್ಯಾನ. ಆತ್ಮ ಹೇಳಿದರೆ ಶರೀರವೂ ಅಪ್ಪು ಮನಸ್ಸುದೆ ಅಪ್ಪು. ಆತ್ಮಜ್ಞಾನ ಪಡಕೊಳಕಾದರೆ ಪರಮಾತ್ಮನ ಸಾಕ್ಷಾತ್ಕಾರ ಆಯೆಕು. ಕುಚೇಲ ಕೃಷ್ಣನ ಒಲಿಸಿದ ಹಾಂಗೆ ಭಕ್ತಿಲಿ, ಶ್ರದ್ಧೆಲಿ ಧ್ಯಾನ, ಪೂಜೆ ಮಾಡಿ ಈ ಧನು ತಿಂಗಳಿಲ್ಲಿ ಪುಣ್ಯ ಸಂಪಾದನೆ ಮಾಡುವ°. ಮನಸ್ಸಿನ ಶುದ್ಧ ಮಾಡಿ, ಸಾತ್ವಿಕ ಆಹಾರ ತೆಕೊಂಡು ಭಕ್ತಿಂದ ಮುಕ್ತಿ ಪಥಲ್ಲಿ ಮುಂದುವರಿವ°
ಪ್ರಸನ್ನಾ ವಿ. ಚೆಕ್ಕೆಮನೆ