ಗುರು ಕೃಪಾಸಾಗರವೇ ನಮ್ಮ ಬಳಿಗೆ ಹರಿದು ಬಂದಂತಹ ಅನುಭೂತಿ ಮೂಡಿಸಿದ ಈ ಪಾವನ ಕ್ಷಣಗಳನ್ನು ಕೇವಲ ಅಕ್ಷರಗಳಲ್ಲಿ ಹಿಡಿದಿರಿಸುವುದು ಸುಲಭ ಸಾಧ್ಯವಲ್ಲ. ಗುರುಕೃಪಾವರ್ಷದಲ್ಲಿ ಪುನೀತಗೊಂಡವರಿಗೆ ಮಾತ್ರ ಅರಿವಾಗುವ ದಿವ್ಯಾನುಭವವಿದು.
ಮಾಣಿ ಮಠದ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಧರ್ಮ, ಶ್ರದ್ಧೆ, ಭಕ್ತಿ ಮತ್ತು ಕೃಪೆಯ ಅಪೂರ್ವ ಸಂಗಮದ ವಾತಾವರಣ ನೆಲೆಸಿತ್ತು. ಈ ಪವಿತ್ರ ವಾತಾವರಣದಲ್ಲಿ ಮನಸ್ಸು ಶ್ರೀಗುರುಸ್ಮರಣೆಯಲ್ಲಿ ತಲ್ಲೀನವಾಗಿತ್ತು.
ಬೆಳಗ್ಗೆ ೧೧.೩೦ ರ ಸುಮಾರಿಗೆ ಪರಮಪೂಜ್ಯ ಶ್ರೀಸಂಸ್ಥಾನದವರು ಆಗಮಿಸಿದ ಕ್ಷಣವೇ ಶಿಷ್ಯರ ಹೃದಯಗಳಲ್ಲಿ ಭಕ್ತಿ, ಶ್ರದ್ಧೆಗಳ ಭಾವ ಮೂಡಿತು. ಶ್ರೀಗುರುಕೃಪಾದೃಷ್ಟಿ ಬೀಳುತ್ತಿದ್ದಂತೆಯೇ ಭಾವತುಂಬಿ ಶಿರಬಾಗಿ ಕಂಗಳು ತುಂಬಿ ಬಂದವು. ದಿವ್ಯಾಶೀರ್ವಾದದ ನಂತರ ಸಂಜೆ 0೪. ೪೫ ರ ತನಕವೂ ನಿರಂತರವಾಗಿ ಶಿಷ್ಯ ವೃಂದಕ್ಕೆ ಅನುಗ್ರಹ ಮಂತ್ರಾಕ್ಷತೆ ನೀಡಿದ ಶ್ರೀಗಳ ದಿವ್ಯ ಸಾನ್ನಿಧ್ಯ ಅಮೃತಮಯ ಕ್ಷಣಗಳೆನಿಸಿತು. ಪ್ರತಿಯೊಬ್ಬ ಶಿಷ್ಯನಿಗೂ ಮಂತ್ರಾಕ್ಷತೆ ಅನುಗ್ರಹಿಸುವ ಕ್ಷಣದಲ್ಲಿ ನಮ್ಮೆಡೆಗೆ ಹರಿದು ಬರುವ ಶ್ರೀಗಳ ಕರುಣಾ ದೃಷ್ಟಿಯೇ ಮನದ ತುಮುಲಗಳನ್ನು ಸರಿಸಿ ಬದುಕಿಗೆ ಭರವಸೆಯ ತಂಪಾಗಿ ತೋರುತ್ತಿತ್ತು.
ಸಂಜೆಯ ಅನುಷ್ಠಾನಗಳು ಹಾಗೂ ಶ್ರೀಕರಾರ್ಚಿತ ಪೂಜೆಯು ಪೂರ್ಣಗೊಂಡ ನಂತರವೂ, ಶ್ರೀಗುರುಗಳು ತಮ್ಮ ಒತ್ತಡಗಳನ್ನು ಬದಿಗಿಟ್ಟು ಶಿಷ್ಯರನ್ನು ಅನುಗ್ರಹಿಸಲು ಬಂದಾಗ ಮಾಣಿಮಠದ ಅವರಣದಲ್ಲಿ ಮಧ್ಯಾಹ್ನದಷ್ಟೇ ಜನಸಾಗರ ತುಂಬಿ ತುಳುಕುತ್ತಿತ್ತು. ಶಿಷ್ಯವೃಂದಕ್ಕೆ ಮಂತ್ರಾಕ್ಷತೆ ಅನುಗ್ರಹಿಸಿ, ಆಗಮಿಸಿದ ಅಷ್ಟೂ ಜನರನ್ನು ಹರಸಿದ ಶ್ರೀಗಳ ದಿವ್ಯಾನುಗ್ರಹ ಪ್ರಾಪ್ತವಾದ ಕ್ಷಣದಲ್ಲಿ ಕಾಲದ ಮಿತಿ ಮರೆತು ಶ್ರೀಗುರುಗಳ ದಿವ್ಯ ಕಾರುಣ್ಯಧಾರೆಯಲ್ಲಿ ಮಿಂದೆದ್ದ ಪುನೀತ ಭಾವದಿಂದ ಮನಸ್ಸು ಪುಲಕಿತವಾಯಿತು. ಬದುಕಿನ ಪ್ರತಿ ಹೆಜ್ಜೆಯಲ್ಲಿಯೂ ತಾಯಿಯಂತೆ ಕಾಯುವ ಕೃಪಾ ಸಿಂಧುವಿನ ಮಂತ್ರಾಕ್ಷತೆಯ ದಿವ್ಯಶಕ್ತಿಯ ಅನುಭವ ಬಲ್ಲವರಿಗೆ ಮಾತ್ರ ತಿಳಿಯಲು ಸಾಧ್ಯ.
ಶಿಷ್ಯರ ಪರಮ ಹಿತವನ್ನೇ ಬಯಸುವ ಕರುಣಾಮೂರ್ತಿಯ ಉಪಸ್ಥಿತಿಯೇ ಮನದ ಚಿಂತೆಯ ಭಾರವನ್ನು ನೀಗುತ್ತದೆ. ದಿವ್ಯದೃಷ್ಟಿಯಿಂದಲೇ ಶಿಷ್ಯರ ಬದುಕಿನ ನೋವು ಮರೆಯಾಗುತ್ತದೆ. ಬದುಕಿನ ಸಂಕಷ್ಟಗಳಿಗೆ ಅಮೃತ ಸಂಜೀವಿನಿಯಾಗುವ ಮಂತ್ರಾಕ್ಷತೆಯನ್ನು ಸೆರಗಿನಲ್ಲಿ ತುಂಬಿಕೊಂಡಾಗ ರಾತ್ರಿ ಹತ್ತು ಗಂಟೆಯಾಗಿದ್ದರೂ ಈ ಸೌಭಾಗ್ಯ ಬದುಕಿನ ಸಾರ್ಥಕತೆ ಎಂಬ ಭಾವ ಮಾಡಿಸಿತು. ಶ್ರೀಗುರು ಅನುಗ್ರಹದ ಪಾವನ ಸಲಿಲದಲ್ಲಿ ಮಿಂದೆದ್ದಾಗ ಮನದ ದುಗುಡಗಳೆಲ್ಲ ಕರಗಿ ಹೋಗಿ, ಹೃದಯದಲ್ಲಿ ಭರವಸೆ, ನೆಮ್ಮದಿ ಮತ್ತು ಭಕ್ತಿಯ ದೀಪ ಬೆಳಗಿತು.
೧೧. ೧೫ ಕ್ಕೆ ನಾವು ಮನೆಗೆ ಹೊರಡುವಾಗಲೂ ಮಂತ್ರಾಕ್ಷತೆಯ ಅನುಗ್ರಹಕ್ಕಾಗಿ ಸರದಿ ಸಾಲಿನಲ್ಲಿ ಬಹಳಷ್ಟು ಮಂದಿ ಕಾಯುತ್ತಿದ್ದರು.
ಶಿಷ್ಯರನ್ನು ಅನುಗ್ರಹಿಸಲೆಂದೇ ಶ್ರೀಸಂಸ್ಥಾನದವರು ಇಷ್ಟು ಸುದೀರ್ಘ ಸಮಯ ಮೀಸಲಾಗಿರಿಸಿ, ಪ್ರತಿಯೊಬ್ಬ ಶಿಷ್ಯನನ್ನೂ ಮನಸಾರೆ ಆಶೀರ್ವದಿಸಿರುವುದು ಗುರುಶಿಷ್ಯ ಪರಂಪರೆಯ ಅವಿಚ್ಛಿನ್ನ ಬಾಂಧವ್ಯದ ಶಕ್ತಿ. ಈ ಪಾವನ ಕ್ಷಣದಲ್ಲಿ ಪಾಲ್ಗೊಂಡು ಶ್ರೀಗುರುಗಳ ಅಮೃತವಾಣಿಯ ಆಶೀರ್ವಚನವನ್ನು ಹೃದಯದಲ್ಲಿ ತುಂಬಿಕೊಳ್ಳುವ ಸದವಕಾಶ,
ಸಂಜೆಯ ಶ್ರೀಕರಾರ್ಚಿತ ಪೂಜೆಯ ಮಂಗಲಮಯ ಕ್ಷಣಗಳನ್ನು ಕಣ್ಣಾರೆ ಕಾಣುವ ಸೌಭಾಗ್ಯ, ಶ್ರೀಗುರುಗಳ ಅನುಗ್ರಹದ ದ್ಯೋತಕವಾದ ಮಂತ್ರಾಕ್ಷತೆಯನ್ನು ಸ್ವೀಕರಿಸಿದ ಪಾವನ ಕ್ಷಣ ಇವೆಲ್ಲವೂ ಅಲ್ಲಿ ನೆರೆದ ಪ್ರತಿಯೊಬ್ಬರ ಮನಸ್ಸನ್ನು ಭಾವಪರವಶವನ್ನಾಗಿಸಿದವು.
ಈ ದಿನದ ನಮ್ಮ ಅನುಭವಗಳು ಮಠದ ಆವರಣಕ್ಕೆ ಮಾತ್ರ ಸೀಮಿತವಾಗಿದ್ದಾಗಿರಲಿಲ್ಲ. ನಮ್ಮ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಗುರುಕೃಪೆಯ ಅನುಭೂತಿಯನ್ನು ಅನಾವರಣಗೊಳಿಸಿದ ದಿನವಿದು. ಬಸ್ ನಲ್ಲಿ ಹೋಗಿದ್ದ ನಮಗೆ ತಡರಾತ್ರಿ ಮನೆಗೆ ಮರಳಲು ನಮ್ಮ ವಲಯಾಧ್ಯಕ್ಷರ ಕಾರು ದೊರಕುವಂತಾಗಿದ್ದು ಗುರುಕೃಪೆಯಲ್ಲದೆ ಬೇರೇನು ? ಶ್ರೀಗುರುಗಳು ನಮ್ಮ ಹೆಜ್ಜೆ ಹೆಜ್ಜೆಯಲ್ಲೂ ಕಾವಲಾಗಿ ನಿಂತಿದ್ದಾರೆ ಎಂಬ ದೃಢ ವಿಶ್ವಾಸವನ್ನು ಇದು ಮತ್ತಷ್ಟು ದೃಢಗೊಳಿಸಿತು. ಶ್ರೀರಾಮಚಂದ್ರಾಪುರ ಮಠದ ಶಿಷ್ಯರಾಗಿ ಜನಿಸಿದ್ದು ಪೂರ್ವಜನ್ಮದ ಸುಕೃತವೆಂದೆನಿಸಿತು. ಇದು ಕೇವಲ ನನ್ನೊಬ್ಬಳ ಅನುಭವವಲ್ಲ. ಶ್ರೀಮಠವನ್ನು ನಂಬುವ ಪ್ರತಿಯೊಬ್ಬ ಶಿಷ್ಯಭಕ್ತರ ಹೃದಯದ ನುಡಿ ಎಂಬುದು ನನ್ನ ಅನುಭವಕ್ಕೆ ಬಂದ ಸತ್ಯ.
ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯಾನುಗ್ರಹ ಸದಾ ನಮ್ಮ ಮೇಲಿರಲಿ ಎಂಬ ಪ್ರಾರ್ಥನೆಯೊಂದಿಗೆ ಧರ್ಮಪಥದಲ್ಲಿ ಜೀವನ ನಡೆಸಲು ಮಾರ್ಗದರ್ಶನ ನೀಡುವ ಶ್ರೀಗುರು ಚರಣಾರವಿಂದಗಳಿಗೆ ಈ ಅಕ್ಷರ ಕುಸುಮ ಸಮರ್ಪಣೆ
✒️ ಪ್ರಸನ್ನಾ ವಿ. ಚೆಕ್ಕೆಮನೆ