ನಮ್ಮ ಆದಿಗುರು ಶಂಕರಾಚಾರ್ಯರು ಹುಟ್ಟಿದ ಪುಣ್ಯದ ಜಾಗೆ ಕೇರಳವ ದೇವರ ಸ್ವಂತ ಊರು ಹೇಳಿಯೇ ಹೇಳ್ತವು. ಪರಶುರಾಮ ಸೃಷ್ಟಿಯ ಭೂಮಿ ಈ ಕೇರಳ. ಇಂತಹ ಪಾವನ ಊರಿಲ್ಲಿ ಒಂದು ವಿಶೇಷವಾದ ಕಾರ್ಯಕ್ರಮ ನಡೆದ್ದದು ಹೆಚ್ಚಿನವಕ್ಕೂ ಗೊಂತಾಯಿದಿಲ್ಲೆ ಕಾಣ್ತು.
ಕೇರಳದ ಮಲಪುರಂ ಜಿಲ್ಲೆಯ ತಿರುನಾವಾಯ ಹೇಳುವ ಪವಿತ್ರ ಕ್ಷೇತ್ರದಲ್ಲಿ ಭಾರತಹೊಳೆಯ ಕರೇಲಿ ಜನವರಿ ೧೮ ರಿಂದ ಫೆಬ್ರವರಿ ೩ ರ ವರೆಗೆ ಈ ಮಾಘ ಮಹೋತ್ಸವ ಅಥವಾ ಕೇರಳ ಕುಂಭಮೇಳ ಗೌಜಿಲಿ ಕಳುದತ್ತು. ತುಂಬಾ ವರ್ಷ ಮೊದಲು ಕೇರಳದ ಇದೇ ಭಾರತ ಹೊಳೆಯ ಬುಡಲ್ಲಿ ಮಾಮಾ೦ಕಮ್ ಅಂತ ಹೇಳಿ ಒಂದು ಆಚರಣೆ ನಡಕ್ಕೊಂಡು ಇತ್ತಿದ್ದಾಡ. ಆ ಹಬ್ಬ ಕುಂಭಮೇಳದಷ್ಟೇ ಗೌಜಿ ಆಡ. ಆದರೆ ಬ್ರಿಟಿಷರ ಆಡಳಿತದ ಕಾಲಲ್ಲಿ ಹಿಂಗಿದ್ದ ಧಾರ್ಮಿಕ ಆಚರಣೆಗಳೆಲ್ಲ ಅವು ನಿಲ್ಸಿದವು. ಅದರೊಟ್ಟಿಗೆ ಕೇರಳಲ್ಲಿ ಮಾಘ ಮಹೋತ್ಸವ ಅಥವಾ ಮಾಮಾಂಕಮ್ ಹೇಳುವ ಹಬ್ಬವು ಮರೆಯಾಗಿ ಹೋತು.
ಈಗ ೨೫೦ ವರ್ಷದ ನಂತರ ಅದೇ ಹಬ್ಬವ ಮಾಘ ಮಹೋತ್ಸವ ಹೇಳಿ ತುಂಬಾ ಶ್ರದ್ಧಾ ಭಕ್ತಿಲಿ ಮತ್ತೆ ಆಚರಿಸಿದ್ದವು. ಈ ತಿರುನಾವಾಯ ಹೇಳುವ ಜಾಗೆಯ ವಿಶೇಷತೆಯ ನಾವು ತಿಳಿವ°. ಕೇರಳದ ಹಿರಿಯರು ಆ ವಿಷಯಲ್ಲಿ ಒಂದು ರಜಾ ಹೇಳಿದ್ದದರನ್ನೇ ಇಲ್ಲಿ ನಿಂಗಳ ಮುಂದೆ ಹಂಚುತ್ತಾ ಇದ್ದೆ.
ಭಾರತ ದೇಶದಲ್ಲಿಪ್ಪ ೧೦೮ ಪ್ರಸಿದ್ಧ ಮಹಾವಿಷ್ಣು ದೇವಸ್ಥಾನಂಗಳಲ್ಲಿ ಒಂದಾದ ನಾವಾಮುಕುಂದ ದೇವಸ್ಥಾನ ಇಪ್ಪದು ಭಾರತ ಹೊಳೆಯ ಬುಡಲ್ಲಿ. ಈ ಹೊಳಗೆ ನಿಳಾನದಿ ಹೇಳುವ ಇನ್ನೊಂದು ಹೆಸರು ಇದ್ದು.
ತುಂಬಾ ಹಿಂದೆ ನವಯೋಗಿಗೊ ಹೇಳಿ ಖ್ಯಾತಿ ಪಡೆದ ಒಂಭತ್ತು ಯೋಗಿಗೊ ಇತ್ತಿದ್ದವಾಡ. ಅವರಲ್ಲಿ ಒಬ್ಬ ಯೋಗಿಗೆ ಗಂಡಕೀ ನದಿಂದ ವಿಶೇಷವಾದ ಒಂದು ಸಾಲಿಗ್ರಾಮ ಸಿಕ್ಕಿತ್ತಾಡ. ಸಾಲಿಗ್ರಾಮ ಸಿಕ್ಕಿದ ಕೂಡಲೇ
‘ ಇದರ ಅತ್ಯಂತ ಯೋಗ್ಯವಾದ ಜಾಗೆಲಿ ಪ್ರತಿಷ್ಠೆ ಮಾಡೆಕು ‘ ಹೇಳಿ ಅಶರೀರವಾಣಿಯು ಆತಾಡ. ಹಾಂಗಾಗಿ ಆ ಸಾಲಿಗ್ರಾಮ ತೆಕ್ಕೊಂಡು ಆ ಯೋಗಿ ಭಾರತದ ಬೇರೆ ಬೇರೆ ಜಾಗಗೆ ಹೋಗಿ ನಿಳಾನದಿಯ ಹತ್ತರೆ ತಿರುನಾವಾಯ ಹೇಳುವ ಜಾಗಗೆ ಬಂದವಡ. ಅಲ್ಲಿ ಆ ಸಾಲಿಗ್ರಾಮವ ಪ್ರತಿಷ್ಠೆ ಮಾಡಿದ ಕೂಡ್ಲೇ ಅದು ಭೂಮಿಯೊಳ ಸೇರಿ ಕಾಣೆಯಾತಾಡ. ಮತ್ತೆ ಎರಡನೇ ಯೋಗಿಗುದೆ ಒಂದು ಸಾಲಿಗ್ರಾಮ ಸಿಕ್ಕಿತ್ತಾಡ. ಅವು ಕೂಡ ತಿರುನಾವಾಯ ಕ್ಷೇತ್ರವನ್ನೇ ಆಯ್ಕೆ ಮಾಡಿ ಆ ಸಾಲಿಗ್ರಾಮ ಪ್ರತಿಷ್ಠೆ ಮಾಡ್ಲೆ ಅಲ್ಲಿಗೆ ಬಂದವಾಡ , ಆ ಸಾಲಿಗ್ರಾಮವೂ ಕೂಡ ಪ್ರತಿಷ್ಠೆ ಮಾಡಿಯಪ್ಪಗ ಭೂಮಿಯೊಳ ಸೇರಿ ಹೋತಡ. ಹಿಂಗೇ ಎಂಟು ಯೋಗಿಗಳು ಸಾಲಿಗ್ರಾಮ ತಂದು ಪ್ರತಿಷ್ಠೆ ಮಾಡಿಯಪ್ಪಗ ಅದೆಲ್ಲವೂ ಭೂಮಿಲಿ ಸೇರಿ ಹೋದಪ್ಪಗ ಒಂಭತ್ತನೇ ಯೋಗಿ ಇದಕ್ಕೆ ಕಾರಣ ಎಂತಾದಿಕ್ಕು ಹೇಳಿ ಆಲೋಚನೆ ಮಾಡಿದವಡ°.
ಅವರ ಯೋಗ ಶಕ್ತಿಲಿ ನೋಡಿಯಪ್ಪಗ ಇಷ್ಟರವರೆಗೆ ಪ್ರತಿಷ್ಠೆ ಮಾಡಿದ ರೂಪಲ್ಲಿ ಇಲ್ಲಿ ವಿಷ್ಣುವಿನ ಪ್ರತಿಷ್ಠೆ ಮಾಡುದಲ್ಲ. ಮೋಕ್ಷ ಕೊಡುವ ವಿಷ್ಣುವಿನ ರೂಪಲ್ಲಿ ಪ್ರತಿಷ್ಠೆ ಮಾಡೆಕು ಹೇಳಿ ಗೊಂತಾಗಿ, ಅವಕ್ಕೆ ಸಿಕ್ಕಿದ ಸಾಲಿಗ್ರಾಮವ ‘ ಮೋಕ್ಷ ಕೊಡುವ ಮುಕುಂದ ‘ ಹೇಳುವ ಭಾವಲ್ಲಿ ಪ್ರತಿಷ್ಠೆ ಮಾಡಿದವಾಡ. ಅಂದಿಂದ ಆ ದೇವರ ಅಭಿಷೇಕಕ್ಕೆ ನಿಳಾನದಿಯ ನೀರೇ ಉಪಯೋಗ್ಸುದಾಡ. ದೇವರಿಂಗೆ ತಾವರೆ ಹೂಗಿನ ಸಮರ್ಪಣೆ, ಹಾಲುಪಾಯಸ ನೈವೇದ್ಯ ಇಲ್ಯಾಣ ವಿಶೇಷ ಸೇವೆಗೊ ಆಡ.
ಅಭಿಷೇಕಕ್ಕೆ ನಿಳಾನದಿಯ ನೀರು, ದೀಪಕ್ಕೆ ತುಪ್ಪ, ಅರ್ಪಣೆಯಾಗಿ ತಾವರೆ ಹೂಗು, ನೈವೇದ್ಯಕ್ಕೆ ಹಾಲುಪಾಯಸ ಹೇಳಿ ನಿಯಮ ಮಾಡಿದ ಮತ್ತೆ ದೇವರ ಬಿಂಬ ಗಟ್ಟಿಯಾದ್ದದು ಹೇಳುವ ಐತಿಹ್ಯವೂ ಇದ್ದಾಡ. ಇಲ್ಲಿ ಇಪ್ಪ ವಿಷ್ಣುವಿನ ಮೂರ್ತಿಯ ಮೊಳಪ್ಪಿಂದ ಕೆಳಾಣ ಭಾಗ ಭೂಮಿಯಡೀಲಿಪ್ಪದಾಡ.
ಕೇರಳ ಸೃಷ್ಟಿ ಮಾಡಿದ ಪರಶುರಾಮ ಒಂದು ಸರ್ತಿ ಈ ರಾಜ್ಯದ ಕ್ಷೇಮಾಭಿವೃದ್ಧಿಗೆ ಬೇಕಾಗಿ ಒಂದು ಯಾಗ ಮಾಡ್ಲೆ ಬ್ರಹ್ಮ ದೇವರತ್ರೆ ಹೇಳಿದಾಡ°. ಪರಶುರಾಮನ ಮಾತಿಂಗೆ ಒಪ್ಪಿ ಬ್ರಹ್ಮದೇವರು ಯಾಗ ಮಾಡ್ಲೆ ಜಾಗೆ ಹುಡ್ಕಿಂಡು ಸಹ್ಯಾದ್ರಿಯ ಹತ್ತರೆ ಇಪ್ಪ ತಿರುಮೂರ್ತಿ ಹೇಳುವ ಗುಡ್ಡೆಯ ಮೇಲೆ ಜಾಗೆ ನಿಗಂಟು ಮಾಡಿದವಾಡ. ಆದರೆ ಯಾಗ ಮಾಡುವ ಹೊತ್ತಿಗೆ ಸರಿಯಾಗಿ ಹೋಮ ಮಾಡ್ಲೆ ಕೂದ ಕರ್ತೃಗಳ ಹೆಂಡತಿಯಕ್ಕೋ ಬಂದು ಎತ್ತಿದ್ದವಿಲ್ಲೆಡ. ಬ್ರಹ್ಮನ ಹೆಂಡತಿ ಸರಸ್ವತಿ, ವಿಷ್ಣುವಿನ ಹೆಂಡತಿ ಲಕ್ಷ್ಮಿ, ಶಿವನ ಹೆಂಡತಿ ಪಾರ್ವತಿ, ದೇವೇಂದ್ರನ ಹೆಂಡತಿ ಶಚಿದೇವಿ ಎಲ್ಲರೂ ತಡವಾಗಿ ಬಂದ ಕಾರಣ ಬ್ರಹ್ಮಂಗೆ ಅಲ್ಲಿ ಹೋಮ ಮಾಡ್ಲಿ ಆಯಿದಿಲ್ಲೆ. ಅಷ್ಟಪ್ಪಗ ಅಲ್ಲಿಗೆ ಬಂದ ದೇವಿಯರೆಲ್ಲ ಆ ಪುಣ್ಯಜಾಗೆಂದ ಹೊಳೆಯಾಗಿ ಹರಿದು ಕೇರಳದ ಹೊಡೆಯಂಗೆ ಹರಿದು ಬಂದವಡ. ಅದುವೇ ನಿಳಾನದಿ.
ಮತ್ತೆ ಪುನಃ ಪರಶುರಾಮ ಬ್ರಹ್ಮನ ಹತ್ತಿರ ಹೋಗಿ ಹೋಮ ಮಾಡ್ಲೆ ಕೇಳಿಕೊಂಡ ಹಾಗೆ ಬ್ರಹ್ಮ ಮತ್ತೆ ಒಳ್ಳೆಯ ಜಾಗ ಹುಡುಕಿಕೊಂಡು ಬಂದು ಈ ತಿರುನಾವಾಯ ಹೇಳುವಲ್ಲಿಗೆ ಬಂದ ಆಡ. ಇಲ್ಲಿ ಸಪ್ತ ಋಷಿಗೊ ನವಯೋಗಿಗೊ, ತುಂಬಾ ತಪಸ್ವಿಗೊ ತಪಸ್ಸು ಮಾಡಿದ ಈ ಪುಣ್ಯಭೂಮಿಯನ್ನೇ ಬ್ರಹ್ಮ ಯಾಗ ಮಾಡ್ಲೆ ಆಯ್ಕೆ ಮಾಡಿದ.
ಮಾಘ ಮಾಸಲ್ಲಿ ಈ ಹೋಮ ಇಲ್ಲಿ ನಡೆದ್ದದಾಡ. ಆ ಸಮಯದಲ್ಲಿ ಎಲ್ಲಾ ದೇವತೆಗಳು ಆ ಹೋಮಲ್ಲಿ ಭಾಗವಹಿಸಲೇ ಇಲ್ಲಿಗೆ ಬಂದವಾಡ.
ಸಾಕ್ಷಾತ್ ಗಂಗಾ ನದಿಯೇ ಭಾರತದ ಎಲ್ಲಾ ಪವಿತ್ರ ನದಿಗಳನ್ನು ಕರಕೊಂಡು ಈ ನಿಳಾನದಿಗೆ ಬಂದು ಸೇರಿತ್ತಾಡ. ಅಂದಿಂದ ಮತ್ತೆ ಈ ನಿಳಾನದಿಯ ಭಾರತ ಹೊಳೆ ಹೇಳಿ ದೇನಿಗೇಳ್ಲೆ ಸುರು ಮಾಡಿದವಡ.
ಮಾಘ ಮಾಸ ಬಂದರೆ ಈ ಜಾಗಗೆ ಈಗಲೂ ಕೂಡ ದೇವತೆಗೂ ಬಂದು ಪುಣ್ಯಕಾರ್ಯಗಳ ಮಾಡುತ್ತವು ಹೇಳುವ ನಂಬಿಕೆ. ಹಾಂಗಾಗಿ ಇಲ್ಲಿ ಆ ಸಮಯದಲ್ಲಿ ಪುಣ್ಯ ಸ್ನಾನ, ಸತ್ಸಂಗ ಜೆಪ, ಧ್ಯಾನ ಎಲ್ಲಾ ನಡೆತ್ತಾ ಇರುತ್ತಾಡ.
ಈ ಭಾರತ ಹೊಳೆಯ ಬಡಗ ದಿಕ್ಕಿಲ್ಲಿ ತಿರುವಾಯ ಮುಕುಂದನ ದೇವಸ್ಥಾನ, ತೆಂಕದಿಕ್ಕಿಲ್ಲಿ ಬೃಹಸ್ಪತಿ ಪ್ರತಿಷ್ಠೆ ಮಾಡಿದ ಬ್ರಹ್ಮ ದೇವರ ದೇವಸ್ಥಾನ, ಅದರ ಹತ್ತರೆ ಶಿವನ ದೇವಸ್ಥಾನವು ಇದ್ದಡ. ಹಿಂಗೆ ತ್ರಿಮೂರ್ತಿಗಳ ದೇವಸ್ಥಾನಗಳು ಈ ಪವಿತ್ರ ಜಾಗೆಲಿ ಇಪ್ಪ ಕಾರಣವೇ ಇದು ಪುಣ್ಯ ಭೂಮಿ ಹೇಳಿ ಹೆಸರು ಪಡೆದ್ದಿದು.
ಈ ಮೂರು ದೇವಸ್ಥಾನಗಳು ಶ್ರೀಚಕ್ರದ ತ್ರಿಕೋನದ ಮೂರು ಮೂಲೆಗಳಲ್ಲಿ ಇದ್ದು ಹೇಳಿಯೂ ಆ ತ್ರಿಕೋನದ ನಡುಕೆ ರಾಜರಾಜೇಶ್ವರಿ ದೇವಿ ಇದ್ದು ಹೇಳಿಯು ನಂಬಿಕೆ, ಆ ರಾಜರಾಜೇಶ್ವರಿಯ ಸ್ಥಾನ ಇಪ್ಪದು ಹೊಳೆಲಿ ಈ ತ್ರಿಕೋನದ ಮಧ್ಯ ಭಾಗಲ್ಲಿ ಹೇಳಿ ನಂಬಿಕೆ. ಇಂತಹ ಅಪರೂಪದ ಪ್ರತಿಷ್ಠೆಯ ಈ ತಿರುನಾವಾಯಾ ಕ್ಷೇತ್ರಲ್ಲಿ ಕೇರಳ ಕುಂಭ ಮೇಳ ಅಥವಾ ಮಾಘ ಮಹೋತ್ಸವ ನಡದ್ದದು.
೧೭೫೫ ರಲ್ಲಿ ನಿಂದು ಹೋದ ಹಿಂದೂ ಧರ್ಮದ ಒಂದು ವಿಶೇಷ ಆಚರಣೆ ಶತಮಾನಗಳ ನಂತರ ತುಂಬಾ ಗೌಜಿಲಿ ಆಚರಿಸಿದವು. ಉತ್ತರ ಭಾರತಂದ ಬಂದ ಸನ್ಯಾಸಿಗೊ, ಕೇರಳದ ಬೇರೆ ಬೇರೆ ಮಠದ ಸ್ವಾಮಿಗೊ, ಆಚಾರ್ಯರು, ಪಂಡಿತಕ್ಕೊ ಮಾಂತ್ರ ಅಲ್ಲ ಕೇರಳ, ತಮಿಳುನಾಡಿನ ಲಕ್ಷಕ್ಕೂ ಹೆಚ್ಚಿನ ಭಕ್ತರು ಈ ಪವಿತ್ರ ಕಾರ್ಯಕ್ರಮಲ್ಲಿ ಭಾಗವಹಿಸಿದ್ದವಾಡ. ಪೂಜೆ, ಹೋಮ, ಸತ್ಸಂಗ. ಇದರ ಒಟ್ಟಿಂಗೆ ಉತ್ತರ ಭಾರತದ ಗಂಗಾರತಿಯ ಹಾಂಗೆ ಅಲ್ಯಾಣ ಪಂಡಿತರು ಇಲ್ಲಿ ಬಂದು ನಿಳಾ ಆರತಿಯನ್ನು ನಡೆಸಿಕೊಟ್ಟಿದವಾಡ.
ಮಾಘ ಮಾಸದ ಮಘಾ ನಕ್ಷತ್ರದ ದಿನ ಈ ಮಾಘ ಮಹೋತ್ಸವದ ಸಮಾಪ್ತಿ. ಈ ಸಮಯದ ಅಮೃತ ಸ್ನಾನ ಮಾಡ್ಲೆ ಉತ್ತರ ಭಾರತದ ನೂರಾರು ನಾಗಾ ಸಾಧುಗಳು ಕೂಡ ಬಂದು ಸೇರಿದ್ದವಾಡ. ಈ ಅಮೃತ ಸ್ನಾನ ಮಾಡಿದರೆ ಆತ್ಮಶುದ್ಧಿಯೂ, ಹುಟ್ಟು ಸಾವಿನ ಜೀವನಚಕ್ರಂದ ವಿಮೋಚನೆಯಾಗಿ ಮೋಕ್ಷ ಪ್ರಾಪ್ತಿ ಆವ್ತಾಡ.
ಕೇರಳದ ತಿರುನಾವಾಯದ ಭಾರತ ಹೊಳೆಯ ಪುಣ್ಯ ಜಾಗೆಲಿ ನಡದ ಕುಂಭ ಮೇಳದಷ್ಟೇ ಗೌಜಿಯ ಕಾರ್ಯಕ್ರಮದ ವಿಶಯ ಗೊಂತಪ್ಪಗ ಅದರ ಹಂಚುವ° ಹೇಳಿ ಕಂಡತ್ತು.
ಪ್ರಸನ್ನಾ ವಿ. ಚೆಕ್ಕೆಮನೆ