ನಮ್ಮ ಗುರುಗೊ ಮನ್ನೆ ನಮ್ಮ ಭಾಷೆಯ ಬಗ್ಗೆ
” ಹವಿಗನ್ನಡ ಮಾಧುರ್ಯವೂ ಅಪ್ಪು, ಮಾಂಗಲ್ಯವೂ ಅಪ್ಪು. ಅದರ ಒಳಿಶಿ ಬೆಳೆಶೆಕು ” ಹೇಳುದು ಕೇಳಿಯಪ್ಪಗ ಕೊಶೀ ಆತು.
ನಿಜ, ಅಷ್ಟು ಚಂದದ ನಮ್ಮ ಭಾಷೆಯ ಒಳಿಶಿ ಬೆಳೆಶುದು ನಮ್ಮ ಕರ್ತವ್ಯ. ನಮ್ಮ ಭಾಷೆಯ ನಾವು ಉಪಯೋಗಿಸದ್ರೆ ಬೇರೆ ಆರು ಉಪಯೋಗಿಸುತ್ತವಲ್ಲದಾ ? ಹಾಂಗಾಗಿ ಹವ್ಯಕ ಭಾಷೆಲಿ ‘ ಹೀಂಗೊಂದು ಸ್ವಗತ’ ಬರವ ಬಗ್ಗೆ ಆಲೋಚನೆ ಮಾಡಿದೆ.
ಹವ್ಯಕ ಭಾಷೆಲಿ ಬರದರೆ ಮನಸ್ಸಿಗೆ ಆಪ್ತ ಆವ್ತು. ಓದಲೆ ಕೊಂಗಾಟ ಆವ್ತು. ನಮ್ಮ ಹಳೇ ನೆಂಪುಗಳ ಹೇಮಾರಿಕೆ ಪೆಟ್ಟಿಗೆಂದ ಅದರೆಲ್ಲ ಒಂದರಿ ಹೆರ ತೆಗವಲೆ ಅವಕಾಶವೂ ಸಿಕ್ಕುತ್ತು.
ಮೊದಲೆಲ್ಲ ನಮ್ಮ ಮನೆಗಳಲ್ಲಿ ತುಂಬಾ ಜೆನಂಗ ಇಕ್ಕು. ಅಜ್ಜಿ, ಅಜ್ಜ, ದೊಡ್ಡಪ್ಪ, ದೊಡ್ಡಬ್ಬೆ, ಅಪ್ಪಚ್ಚಿ, ಕಿರಿಯಬ್ಬೆ….ಹೇಳಿ ಮನೆತುಂಬ ಜೆನ ಇಪ್ಪಗ ಅವರೊಟ್ಟಿಂಗೆಲ್ಲ ಮಾತಾಡುಗ ಸುಮಾರು ಪದಂಗಳ ಉಪಯೋಗಿಸಿಂಡಿದ್ದತ್ತು. ನಮ್ಮ ಮಾತಿನ ಎಡೇಲಿ ಹಳೆ ಶಬ್ದಂಗೊ ತುಂಬಾ ಬಂದುಕೊಂಡಿದ್ದತ್ತು. ಈಗ ಜನ ಕಮ್ಮಿ, ಮಾತುದೆ ತುಂಬಾ ಕಮ್ಮಿ.
ಜಂಗಮವಾಣಿ ಬಂದ ಮತ್ತೆ ಅತ್ಲಾಗಿತ್ಲಾಗಿ ಮಾತಾಡುದೇ ಕಮ್ಮಿ ಆಯಿದು. ಎಲ್ಲದಕ್ಕೂ ಸಂದೇಶ ಕಳುಸಿದರೆ ಮುಗುತ್ತು. ಆಂಗ್ಲಭಾಷೆಯ ಒಂದೆರಡು ಅಕ್ಷರದ ಸಂಕೇತಲ್ಲಿ ಎಲ್ಲವೂ ಮುಗಿತ್ತು.
ನಮ್ಮ ಬಾಶೆಲಿ ಸರಿಯಾಗಿ ಮಾತಾಡುಗಲೇ ಒಂದೊಂದು ಚೆಂದ ಚೆಂದದ ಪದಂಗೊ ನೆಂಪಪ್ಪದು. ಈಗ ಆರಿಂಗೂ ಹಳೇ ಶಬ್ದಂಗಳ ಅರ್ಥವೇ ಗೊಂತಿರ್ತಿಲ್ಲೆ. ಹಾಂಗೆ ಹೇಳಿ ಎನಗೆ ಎಲ್ಲಾ ಗೊಂತಿದ್ದು ಗ್ರೇಶೆಡಿ..!!
ಖಂಡಿತಾ ಇಲ್ಲೆ.
ನಮ್ಮ ಬಾಶೆಯ ಎಷ್ಟೋ ಪದಂಗಳ ಎಡೇಲಿ ಆಂಗ್ಲ ಪದಂಗೊ ನುಗ್ಗಿ ಈಗ ಅದೆಲ್ಲ ನೆಂಪೇ ಆವ್ತಿಲ್ಲೆ..
ಮದಲು ಸಣ್ಣಾದಿಪ್ಪಗ ಅಪ್ಪ, ಅಜ್ಜ, ಅಜ್ಜಿ ಸೋದರತ್ತೆ ಎಲ್ಲ ಹವ್ಯಕ ಭಾಷೆಯ ಹಳೇ ಪದಂಗೊ, ನುಡಿಗಟ್ಟು, ಗಾದೆಗಳೆಲ್ಲ ಸೇರ್ಸಿ ಮಾತಾಡುದು ಕೇಳಿಯೇ ದೊಡ್ಡಾದ ಕಾರಣ ಅಂದು ಸಾಕಷ್ಟು ದೊಡ್ಡ ಶಬ್ದ ಭಂಡಾರವೇ ಇದ್ದತ್ತು. ಈಗ ಹಾಂಗಿದ್ದ ಗಾದೆ, ನುಡಿಗಟ್ಟು ಪ್ರಯೋಗ ಆರತ್ರೆ ನಡೆಗು. ಹಾಂಗಾಗಿ ಹೆಚ್ಚಿನ ಶಬ್ದಂಗಳೂ ಮರದೇ ಹೋಯಿದು
ಈಗ ಆನು ಹೇಳ್ಲೆ ಹೆರಟ ವಿಶಯವೇ ಬೇರೆ. ‘ ಮಾತಾಡಿ ಮಾತಾಡಿ ಗಟ್ಟ ಹತ್ತಿದ್ದು ಗೊಂತಾಯಿದಿಲ್ಲೆ ‘ ಹೇಳುವ ಹಾಂಗೆ ಎಲ್ಲಿಂದ ಎಲ್ಲಿಗೋ ಎತ್ತಿತ್ತು ನಾವೀಗ. ಈಗ ಪುನಾ ತಿರುಗಿ ವಿಷಯಕ್ಕೆ ಹೋಪನಾ ಅಂಬಗ..!
ನಮ್ಮ ಹವ್ಯಕ ಸಂಪ್ರದಾಯಂಗೊ, ಆಚರಣೆಗೊ, ನಮ್ಮ ಸುತ್ತಮುತ್ತ ನಡವ ವಿಶೇಶ ಕಾರ್ಯಕ್ರಮಂಗೊ, ನಮ್ಮ ಜೀವನಲ್ಲಿ ನಡವ ಕೆಲವು ಅನುಭವಂಗಳೆಲ್ಲ ಹವ್ಯಕ ಭಾಷೆಲಿ ಬರವ ಆಲೋಚನೆ ಎನ್ನದು.
ನಮ್ಮ ಮನೆಯ ಹಿರಿಯ ಹೆಮ್ಮಕ್ಕೊ, ಕೆಲವು ಮನೆಗಳಲ್ಲಿ ಅಜ್ಜಿಯಕ್ಕೊ, ಮುದಿಯಜ್ಜಿಯಕ್ಕೊ ಇಕ್ಕು. ಅವು ಕೆಲವು ಆದರ್ಶಂಗಳ, ನಿಯಮಂಗಳ ಜೀವನಲ್ಲಿ ಪಾಲಿಸಿಕೊಂಡು ಬಯಿಂದವು. ಅದರ ಹಾಂಗೇ ಮುಂದಾಣ ತಲೆಮಾರಿಂಗೆ ದಾಂಟ್ಸುವ ಪ್ರಯತ್ನವನ್ನೂ ಮಾಡಿದ್ದವು.
ನಮ್ಮ ಸನಾತನ ಸಂಸ್ಕೃತಿಯ ಬೇರುಗೊ ಅವು. ಅವರ ಮಾರ್ಗದರ್ಶನಲ್ಲಿ ಬೆಳದ ಮಕ್ಕೊ ಮುಂದಂಗೆ ಅದೇ ಸಂಸ್ಕಾರಂಗಳ ನೆಂಪು ಮಡುಗುತ್ತವು.
ಅಜ್ಜಿ ಹೇಳುಗ ನಮ್ಮ ಮನಸ್ಸಿಂಗೆ ಬಪ್ಪ ಚಿತ್ರವೇ ಎಷ್ಟು ಚೆಂದ ಅಲ್ಲದಾ, ಬೆಳಿ ಬೆಳಿ ತಲೆಕಸವಿನ ಜೊಟ್ಟು ಕಟ್ಟಿ, ಅದಕ್ಕೊಂದು ಬೆಳಿ ದಾಸನ ಹೂಗೋ, ಮಂಜಟ್ಟಿ ಹೂಗೋ ಸೂಡಿ, ಮೋರೆಲಿ ರಜಾ ಅಗಲಕೆ ಕುಂಕುಮ ಬೊಟ್ಟು ಹಾಕಿ, ಕೆಂಪು ಪಟ್ಟೆನೂಲಿಲ್ಲಿ ತಾಲಿ ಸುರುದು ಕೊರಳಿಂಗೆ ಕಟ್ಟಿದ ಚೆಂದದ ರೂಪ.
ಮನೆಯ ಯೇವದೋ ಜೆಗುಲಿ ಕರೇಲಿ ಗೋಡೆಗೆರಗಿ ಕಾಲು ನೀಡಿ ಕೂದೊಂಡು, ಬಾಯಿಲಿ ಎಲೆ ಅಡಕೆ ತುಂಬ್ಸಿಂಡು, ಮನೆಯವಕ್ಕೆ ಒಂದು ರಜಾ ಉಪದೇಶ ಕೊಟ್ಟುಕೊಂಡು, ಪುಳ್ಳಿಯಕ್ಕೊಗೆ ಕಥೆ ಹೇಳಿಂಡು, ಅವು ಲೂಟಿ ಮಾಡಿರೆ ಪರಂಚಿಕೊಂಡು….!
ಅದಕ್ಕೆ ನಮ್ಮ ಹಿರಿಯರು ಹೇಳುದು ‘ ಮನಗೊಂದು ಅಜ್ಜಿ ಒಲಗೊಂದು ಕೊಳ್ಳಿ , ಹೇಳಿ. ಎಷ್ಟು ಅರ್ಥ ಇಪ್ಪ ಮಾತಲ್ಲದಾ ಇದು.
ಅಜ್ಜಿಯಕ್ಕೊ ಮನೆಲಿದ್ದರೆ ಅದೊಂದು ಬರ್ಮೇ ಬೇರೆ. ಬರ್ಮು ಹೇಳಿದರೆಂತರಾಳಿ ಆಲೋಚನೆ ಮಾಡೆಡಿ. ಬರ್ಮು ಹೇಳಿದರೆ ಗತ್ತು ಹೇಳುವ ಅರ್ಥಲ್ಲಿ ಹೇಳಿದ್ದು.
ಪ್ರತಿಯೊಂದು ಮನೆಯವಕ್ಕೂ ಅವರದ್ದೇ ಆದ ಕ್ರಮಂಗೊ ಇದ್ದು, ಆಚರಣೆಗೊ ಇದ್ದು, ಸಂಪ್ರದಾಯಂಗೊ ಇದ್ದು. ಹಾಂಗಿದ್ದದರ ಎಲ್ಲ ಒಳಿಶಿ ಬೆಳೆಶುವ ತಾಕತ್ತಿಪ್ಪವು ಮನೆಯ ಹೆಮ್ಮಕ್ಕೊ. ಹಾಂಗಾಗಿ ನಮ್ಮ ಹಳೇಕಾಲದ ಹೆಮ್ಮಕ್ಕಳ ಅಥವಾ ನಮ್ಮ ಅಜ್ಜಿಯಕ್ಕಳ ದಿನಚರಿಂದಲೇ ಸುರು ಮಾಡುವನಾ..
‘ ಉದಯಕಾಲದೊಳ್ ಎದ್ದು ಗೋಪಿಯೂ
ದಧಿಯ ಮಥಿಸುವೆನೆಂಬ ಸಮಯದೀ…..’
ಅದೇ…..ಅಜ್ಜಿಯ ದೆನಿಯೇ ಅದು. ನಾವು ಹೋಪ°, ಈಗಾಣವಕ್ಕೆ ಅಪರೂಪವಾದ ಆ ಹಾಡಿನ ಮೂಲ ಹುಡ್ಕಿಂಡು…..!!
ಪ್ರಸನ್ನಾ ವಿ. ಚೆಕ್ಕೆಮನೆ