ಮಧೂರು ದೇವಸ್ಥಾನದಲ್ಲಿ ಶ್ರೀರಾಮಚಂದ್ರಾಪುರ ಮಠದ ಸೇವೆ – 108 ಕಾಯಿ ಗಣಪತಿ ಹೋಮ, ಮುಡಿ ಅಕ್ಕಿ ಅಪ್ಪ, ಶತರುದ್ರಾಭಿಷೇಕ ಸೇವೆ

ಇತರೆ

ಕುಂಬಳೆ: ಸೀಮಾಕ್ಷೇತ್ರ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮಂಗಳವಾರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ದಿವ್ಯ ಅನುಗ್ರಹದೊಂದಿಗೆ ಶ್ರೀಮಠದ ವತಿಯಿಂದ 108 ಕಾಯಿ ಗಣಪತಿ ಹೋಮ, ಮುಡಿ ಅಕ್ಕಿ ಅಪ್ಪಸೇವೆ ಹಾಗೂ ಶತರುದ್ರಾಭಿಷೇಕ ಸೇವೆಗಳು ಜರಗಿತು.

ಗೌರಿಹಬ್ಬದ ಪ್ರಯುಕ್ತ ಮಾತೆಯರು ಕುಂಕುಮಾರ್ಚನೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಗೌರೀ ಸಂಪ್ರೀತಿಗಾಗಿ ಪ್ರಾರ್ಥಿಸಲಾಯಿತು. ರುದ್ರಪಾರಾಯಣ, ಗಣಪತಿ ಅಥರ್ವಶೀರ್ಷ ಪಾರಾಯಣ, ಶ್ರೀಗಣೇಶ ಪಂಚರತ್ನ ಸ್ತೋತ್ರ ಹಾಗೂ ಶಿವಪಂಚಾಕ್ಷರೀ ಸ್ತೋತ್ರ ಪಠಣ ನಡೆಯಿತು. ವಿವಿಧ ವಲಯಗಳಿಂದ 100ಕ್ಕೂ ಹೆಚ್ಚುಮಂದಿ ರುದ್ರಪಾಠಕರು ಶತರುದ್ರಾಭಿಷೇಕದ ಸಂದರ್ಭ ರುದ್ರಪಾರಾಯಣದಲ್ಲಿ ಜೊತೆಗೂಡಿದ್ದರು.

ಶ್ರೀರಾಮಚಂದ್ರಾಪುರ ಮಠ ಮಹಾಮಂಡಲದ ವಿವಿಧ ಮಂಡಲಗಳ ಪದಾಧಿಕಾರಿಗಳು, ಶಿಷ್ಯವೃಂದದವರು ಸೇವಾಕಾರ್ಯದಲ್ಲಿ ಪಾಲ್ಗೊಂಡಿದ್ದರು. ಮಂಗಳೂರು ಪ್ರಾಂತ್ಯದ ಮುಳ್ಳೇರಿಯ ಮಂಡಲ, ಉಪ್ಪಿನಂಗಡಿ ಮಂಡಲ, ಮಂಗಳೂರು ಮಂಡಲದ ಶಿಷ್ಯಭಕ್ತರು, ಪದಾಧಿಕಾರಿಗಳು, ಗುರಿಕ್ಕಾರರು ರುದ್ರ ಪಠಣ ಹಾಗೂ ಮಾತೆಯರು ಕುಂಕುಮಾರ್ಚನೆ ಸೇವೆಯಲ್ಲಿ ಜೊತೆಗೂಡಿದರು.

ಕ್ಷೇತ್ರದ ಪಾರಂಪರಿಕ ತಂತ್ರಿಗಳಾದ ವಿಷ್ಣು ಆಸ್ರ ಅವರ ಮಾರ್ಗದರ್ಶನದಲ್ಲಿ ಮುರಳೀಕೃಷ್ಣ ಆಸ್ರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಕರ್ತೃಗಳಾಗಿ ಶಿವಪ್ರಸಾದ ಕೈಂತಜೆ, ವಸಂತ ದಂಪತಿಗಳು ಪಾಲ್ಗೊಂಡಿದ್ದರು. ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ ಪೆರಿಯಪ್ಪು, ಮಾತೃತ್ವಂ ಪ್ರಮುಖರಾದ ಈಶ್ವರಿ ಬೇರ್ಕಡವು, ಸೇವಾಪ್ರಧಾನ ಕೃಷ್ಣಮೂರ್ತಿ ಮಾಡಾವು, ಮುಳ್ಳೇರಿಯ ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ, ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರೆಮೂಲೆ, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಅರವಿಂದ ದರ್ಬೆ, ವೈದಿಕ ಪ್ರಧಾನರಾದ ನವನೀತಪ್ರಿಯ ಕೈಪಂಗಳ, ಪ್ರಶಾಂತ ಪಂಜ, ಸೊಂದಿ ಶಂಕರನಾರಾಯಣ ಭಟ್ಟ, ಹಿರಿಯ ವಕೀಲ ಶಂಭುಶರ್ಮ ಹಾಗೂ ಶಿಷ್ಯಂದಿರು ಪಾಲ್ಗೊಂಡಿದ್ದರು.

 

 

ವರದಿ:- ಶಿಷ್ಯಮಾಧ್ಯಮ

ಮುಳ್ಳೇರಿಯಾ ಮಂಡಲ

Leave a Reply

Your email address will not be published. Required fields are marked *