ಸ್ವರ್ಣವಲ್ಲೀ ಮಠದಲ್ಲಿ ನಿನ್ನೆ ಒಂದು ಕಾರ್ಯಕ್ರಮವಿತ್ತು.. “ಶಂಕರ ನಮನ” ಮತ್ತು “ಶಂಕರ ಭಾಷ್ಯಮೃತ ವಾಹಿನೀ ಪ್ರವಚನಮಾಲಿಕೆಗಳ ಸಮಾರೋಪ” – ಬಹಳ ಗೌರವಯುತವಾದ ಕಾರ್ಯಕ್ರಮಗಳು. ಯತಿತ್ರಯರ ಸಾನ್ನಿಧ್ಯ ಕಾರ್ಯಕ್ರಮದ ಮೆರುಗನ್ನು ಇನ್ನೂ ಹೆಚ್ಚಿಸಬೇಕಿತ್ತು. ನಾಲ್ಕನೆಯ ಶಂಕರಾಚಾರ್ಯರ ಅಧಿಕೃತ ರಾಯಭಾರಿ ಬೇರೆ ಉಪಸ್ಥಿತರಾಗಿದ್ದರು. ಆಮೇಲೆ? ಅಲ್ಲೇ ಇರೋದು.. ರಾಮಚಂದ್ರಾಪುರಮಠದ ಮೇಲೆ, ಶ್ರೀಗಳ ಮೇಲೆ ವ್ಯವಸ್ಥಿತವಾದ ಆಕ್ರಮಣಗಳನ್ನು ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ನಡೆಸಿದ್ದ, ನಡೆಸುತ್ತಿರುವ ಪ್ರಮುಖರೆಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಯಾರೂ ಭಾಗವಹಿಸಬಹುದು, ಅವರ ಹೆಸರು ಆಮಂತ್ರಣ ಪತ್ರಿಕೆಯಲ್ಲೇ ಬೇಕೆ? ರಾಮಚಂದ್ರಾಪುರ ಮಠದ ವಿರುದ್ಧ ಗುಂಪುಕಟ್ಟಿ ಕೊಳ್ಳುವ ಈ ಕಾರ್ಯಕ್ರಮದಿಂದ ಸ್ವರ್ಣವಲ್ಲೀ ಶ್ರೀಗಳು ಕೊನೇ ಕ್ಷಣದಲ್ಲಾದರೂ ಹಿಂದೆ ಸರಿಯುತ್ತಾರೆ, ಸೋಗಿಗೆ ಬೇರೆ ಹೆಸರಿಟ್ಟುಕೊಂಡು ಸಹೋದರ ಪೀಠವನ್ನು ಹಳಿಯುವ ಈ ಸಮಾರಂಭದಲ್ಲಿ ಶ್ರೀಗಳು ಭಾಗವಹಿಸದಂತೆ ಸ್ವರ್ಣವಲ್ಲೀ ಶಿಷ್ಯವೃಂದವೂ ಒತ್ತಡಹೇರಿ ಯಶಸ್ಸು ಕಾಣುತ್ತದೆ ಎಂಬ ಆಶಾಭಾವನೆ ಕಾರ್ಯಕ್ರಮದ ಆರಂಭದ ವರೆಗೂ ನಮ್ಮ ಮನಸ್ಸಲ್ಲಿತ್ತು. ಇನ್ನು ಕಾರ್ಯಕ್ರಮವೊಂದಕ್ಕೆ ಹುಳಿ ಹಿಂಡುವ ದುಷ್ಕೃತ್ಯ ಸಾತ್ವಿಕ ಸಮಾಜಕ್ಕೆ ಭೂಷಣವೂ ಅಲ್ಲ; ಸ್ವಸ್ಥ ಮನಸ್ಸಿನ ಲಕ್ಷಣವೂ ಅಲ್ಲ; ನಮ್ಮ ಜಾಯಮಾನವೂ ಅಲ್ಲ!
ಕೆಲವೇ ದಿನಗಳ ಹಿಂದೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಖಿಲಹವ್ಯಕ ಮಹಾಸಭಾದ ಆಶ್ರಯದಲ್ಲಿ ಸಭಾದ ೭೫ನೆಯ ವರ್ಷದ ಸಂಭ್ರಮಾಚರಣೆ ಮತ್ತು ಎರಡನೆಯ ವಿಶ್ವ ಹವ್ಯಕ ಸಮ್ಮೇಳನ ನಡೆದಿದ್ದು ನಮಗೆಲ್ಲ ಗೊತ್ತೇ ಇದೆ. ರೂಢಿಯಂತೆ ಹವ್ಯಕ ಸಮುದಾಯದ ಉಭಯ ಗುರುಪೀಠಗಳ ಆಶೀರ್ವಾದ ಮಂತ್ರಾಕ್ಷತೆಯೊಂದಿಗೆ ನಿಶ್ಚಯವಾದ ಕಾರ್ಯಕ್ರಮ ಇದು. ಸ್ವರ್ಣವಲ್ಲಿ ಶ್ರೀಗಳು ಬರುವುದಾಗಿ ಒಪ್ಪಿಕೊಂಡಿದ್ದು ಮಾತ್ರವಲ್ಲ ಅವರ ಮುಖವಾಣಿ “ಸ್ವರ್ಣವಲ್ಲೀ ಪ್ರಭಾ”ದಲ್ಲೂ ಪ್ರವಾಸದ ವಿವರಗಳಲ್ಲಿ ಶ್ರೀಗಳು ಮಹಾಸಭಾದ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿವರ ಪ್ರಕಟವಾಗಿತ್ತು. ಇಷ್ಟಾದಮೇಲೂ, ಕಾರ್ಯಕ್ರಮಕ್ಕೆ ಇನ್ನೇನು ಕೆಲವೇ ದಿನಗಳಿವೆಯೆನ್ನುವಾಗ ಭಿನ್ನರಾಗ ತೆಗೆದರಲ್ಲ! ಕಾರ್ಯಕ್ರಮ ಹೀಗೆಯೇ ಇರಬೇಕು, ಇಂಥವರು ಇರಬಾರದು, ಹಿಂದೆ ತೆಗೆದುಕೊಂಡ ಖಂಡನಾ ನಿರ್ಣಯಕ್ಕೆ ಕ್ಷಮೆ ಯಾಚಿಸಬೇಕು.. ಈ ಷರತ್ತುಗಳನ್ನು ವಿಧಿಸಿದ್ದು ಡಿಸೆಂಬರ್ ಕೊನೆಯ ವಾರದಲ್ಲಿ. ಖಂಡನಾ ನಿರ್ಣಯ ತೆಗೆದುಕೊಂಡಿದ್ದು ಬರೋಬ್ಬರಿ ಹತ್ತು ತಿಂಗಳುಗಳ ಹಿಂದೆ. ಅದರ ನಂತರವೂ ಶ್ರೀ ಸ್ವರ್ಣವಲ್ಲೀ ಸಂಸ್ಥಾನದ ಅದೆಷ್ಟೋ ಕಾರ್ಯಕ್ರಮಗಳು ಮಹಾಸಭೆಯ ಜೊತೆಗೆ ನಡೆದಿವೆ. ಭಿಕ್ಷಾಸೇವೆ ನೆರವೇರಿದೆ, ಸ್ವರ್ಣವಲ್ಲೀ ಸಂಸ್ಥಾನ ನಡೆಸುವ “ಧನ್ಯೋ ಗೃಹಸ್ಥಾಶ್ರಮ” ಕಾರ್ಯಕ್ರಮ ಮಹಾಸಭೆಯ ಸಹಯೋಗದಲ್ಲೇ ನಡೆದಿದೆ, ಮಹಾಸಭೆಯ ಆಢಳಿತಮಂಡಳಿಯವರೇ ಅಭ್ಯಾಗತರೂ ಆಗಿದ್ದರು. ಇದೆಲ್ಲ ನಡೆದ ಮೇಲೆ ಕಾರ್ಯಕ್ರಮಕ್ಕೆ ಬರುವುದಿಲ್ಲ ಅನ್ನುವ ದಿಢೀರ್ ನಿರ್ಧಾರದ ಹಿಂದೆ ಏನಿತ್ತು? ಈ ಕಾರ್ಯಕ್ರಮದ ವಿವರಗಳು ಸಮಾಜವನ್ನು ತಲುಪಲು ಆರಂಭವಾದಂತೆ, ಅದನ್ನು ವಿಫಲಗೊಳಿಸಲು ಬೆರಳೆಣಿಕೆಯ ಕೆಲವರು ಸಜ್ಜಾದರು. ಆಮಂತ್ರಣ ಪತ್ರಿಕೆಯಲ್ಲಿ ಹೆಸರಿಸಲಾದ ಎಲ್ಲ ಗಣ್ಯರನ್ನು, ಪ್ರಶಸ್ತಿಗೆ ಭಾಜನರೆಂದು ಹೆಸರಿಸಲಾದ ಗೌರವಾನ್ವಿತರನ್ನು, ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾದ ಇತರ ಸಜ್ಜನರನ್ನು ವೈಯಕ್ತಿಕ ಫೋನ್ ಕರೆಗಳ ಮೂಲಕ, ಸಾಮಾಜಿಕ ಜಾಲತಾಣಗಳಲ್ಲಿ ಬರಹಗಳ ಮೂಲಕ ಬರದಂತೆ ತಡೆಯಲು ಇನ್ನಿಲ್ಲದ ಪ್ರಯತ್ನಗಳಾದವು. ಮಧ್ಯೆ ಯಾವ ಪತ್ರಿಕೆಯ್ಲಲೂ ಪ್ರಕಟವಾಗದ ಪತ್ರಿಕಾ ಹೇಳಿಕೆಯೊಂದು ಅನಧಿಕೃತವಾಗಿ ಹರಿದಾಡಿ ಬೆಂಬಲವಾಗಿ ನಿಂತ ಇನ್ನೊಂದು ಮಠದ ಸ್ವಾಮಿಗಳ ಗುರುತು ಸಮಾಜಕ್ಕೆ ಮಾಡಿಕೊಟ್ಟಿತು. ಇವೆಲ್ಲ ಅಡೆತಡೆಗಳನ್ನು ಸಮರ್ಥವಾಗಿ ನಿವಾರಿಸಿಕೊಂಡು ಕಾರ್ಯಕ್ರಮವು ಚರಿತ್ರಾರ್ಹವೆಂಬಂತೆ ನಡೆದುದು ಈಗ ಇತಿಹಾಸ.
ಅನುಮಾನದ ಬೀಜಗಳಾಗಿ ಮನಸ್ಸಿನಾಳದಲ್ಲಿ ಪಡಿಮೂಡಿದ್ದ ವಿಚಾರಗಳಿಗೆ ಮೂರ್ತರೂಪ ಬಂದಿದ್ದು ಇಂದಿನ ಕಾರ್ಯಕ್ರಮದ ನಂತರ. ಮಹಾಸಭೆ ನಡೆಸಿದ ಕಾರ್ಯಕ್ರಮಗಳಿಗೆ ಅಡ್ಡಗಾಲಿಕ್ಕಲು ಪ್ರಯತ್ನಿಸಿದ ಎಲ್ಲ ವ್ಯಕ್ತಿಗಳು ಒಂದೇ ವೇದಿಕೆಯ ಮೇಲೆ, ಅಂದು ಯಾರನ್ನು ಗುರಿಯಾಗಿಸಿ ಆಕ್ರಮಣ ಮಾಡಿದ್ದರೋ ಅವರನ್ನೇ ಗುರಿಯಾಗಿಸಿ ಮತ್ತೊಂದು ಗುಟುರು ಹಾಕಿದಾಗ ಮುಸುಕು ಸರಿಯಿತು. ಈ ಸಂದರ್ಭದಲ್ಲಿ ಯತಿತ್ರಯರ ದಿವ್ಯ ಮೌನ ಮಾತಾಡಿತು. ಶಂಕರಾಚಾರ್ಯ ಸ್ಥಾಪಿತ ಎಡತೊರೆ, ಎಡನೀರು, ಸ್ವರ್ಣವಲ್ಲಿ, ಶೃಂಗೇರಿ ಮಠಗಳೆಲ್ಲಿ? ಶಂಕರಾಚಾರ್ಯ ಸ್ಥಾಪಿತ ರಾಮಚಂದ್ರಾಪುರ ಮಠದಿಂದ ಹೊರನಡೆದು ಅಲ್ಲಿಯ ಗುರುಗಳ ಪೀಠತ್ಯಾಗಕ್ಕೆ ಬಹಿರಂಗವಾಗಿ ಆಗ್ರಹಿಸಿದ ಸ್ವಾರ್ಥಿಗಳ ಕೂಟವಾದ ಹವ್ಯಕ ಒಕ್ಕೂಟವೆಲ್ಲಿ? ಇವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಾಗ ಷೇಕ್ಸ್ಪಿಯರ್ ನೆನಪಾದ.. “ADVERSITY MAKES STRANGE BEDFELLOWS” – ಪ್ರತಿಕೂಲ ಸನ್ನಿವೇಶಗಳು ವಿಚಿತ್ರವಾದ ಸಂಬಂಧಗಳನ್ನು ಹುಟ್ಟುಹಾಕುತ್ತವೆ!