ಸೇವಾ ಅರ್ಘ್ಯವೆಂಬ ಯಜ್ಞದ ಸಮಿಧೆಗಳು : ಶ್ರೀಮತಿ ಪ್ರಸನ್ನಾ ವಿ. ಚೆಕ್ಕೆಮನೆ, ಧರ್ಮತ್ತಡ್ಕ

ಲೇಖನ

ಯಜ್ಞ ಎಂಬುದು ಅತ್ಯಂತ ಪವಿತ್ರ ಕಾರ್ಯ‌. ಅದರಲ್ಲಿ ಉಪಯೋಗಿಸುವ ಸಮಿಧೆಗಳಿಗೂ ಅಷ್ಟೇ ಮಹತ್ತ್ವವಿದೆ. ಎಲ್ಲ ಸೌದೆಗಳನ್ನೂ ಯಜ್ಞಕ್ಕೆ ಬಳಸಲಾಗುವುದಿಲ್ಲ. ಅರಳಿ, ಹಲಸು ಪಾಲಾಶಗಳಂತಹ ಪವಿತ್ರ ವೃಕ್ಷಗಳ ರೆಂಬೆಕೊಂಬೆಗಳಿಗೆ ಮಾತ್ರ ಅಲ್ಲಿ ಸ್ಥಾನ.

 


ಆದರೆ ಈ ಸೇವಾಅರ್ಘ್ಯವೆಂಬ ಪುಣ್ಯ ಯಜ್ಞದ ಸಮಿಧೆಗಳಾಗುವ ಸುಯೋಗ ನಮ್ಮದು. ‘ಇದೇನು ಹೊಸ ಯಜ್ಞ? ಯಾವುದು ಈ ಸಮಿಧೆ?’ ಎಂದು ಯೋಚಿಸುತ್ತಿರಬಹುದಲ್ಲವೇ? ಸೇವಾಅರ್ಘ್ಯ ಎಂದರೆ ಸಮಾಜಕ್ಕೆ ಸಲ್ಲಿಸುವುದು ನಮ್ಮಿಂದಾದ ಸೇವೆಯನ್ನು. ಅದರಲ್ಲಿ ಗೋಶಾಲೆಯ ಹಸುಗಳಿಗೆ ಮೇವು ಸಂಗ್ರಹಿಸುವ ಕಾರ್ಯವೂ ಒಂದು. ಅದುವೇ ಒಂದು ಯಜ್ಞವಾದಾಗ ಅದರಲ್ಲಿ ಸಮಿಧೆಯಾಗುವ ಭಾಗ್ಯ ನಮ್ಮದು. 

 


ನಾವು’ ಎಂದರೆ ಯಾರು ಗೊತ್ತೇ? ನಾವು ಮುಳಿಹುಲ್ಲುಗಳು. ಅದರಲ್ಲೂ ಗುಂಪೆಗುಡ್ಡೆಯೆಂದೇ ಆಪ್ತವಾಗಿ ಗುರುತಿಸಲ್ಪಡುವ ಪೊಸಡಿಗುಂಪೆಯ ಮುಳಿಹುಲ್ಲುಗಳು. 

 


ಮುಳಿಹುಲ್ಲುಗಳಿಗೂ ಭಾವನೆಗಳಿವೆಯೇ ಅಂತ ಭಾವಿಸಬೇಡಿ. ಅರಸಿದರೆ ಭಾವವಿಲ್ಲದ ವಸ್ತುಗಳಾವುದೂ ಈ ಪ್ರಕೃತಿಯಲ್ಲಿಲ್ಲ. ಬದುಕಿನ ಏರಿಳಿತಗಳನ್ನು ಹಾದು ಬರುವಾಗ ನಮ್ಮ ಮನಸಿನಲ್ಲೂ ನೋವು-ನಲಿವುಗಳು ಮೂಡುತ್ತವೆ. ಆ ಭಾವಗಳಿಗೆ ಅಕ್ಷರರೂಪ ಕೊಟ್ಟಾಗ ಹೇಗಾಗುತ್ತೋ ಗೊತ್ತಿಲ್ಲ. 

 


ಗೋಕರ್ಣಮಂಡಲಾಧೀಶ್ವರ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಪಾವನ ಚರಣಸ್ಪರ್ಶವಾದಂತಹ ಗುಂಪೆಗುಡ್ಡೆಯೇ ನಮ್ಮ ಆಲಯ. ಶ್ರೀಗುರುಗಳ ಮಹತ್ತ್ವದ ಯೋಜನೆಯಾದ ಶಂಕರ ಧ್ಯಾನಮಂದಿರದ ಪರಿಸರವೇ ನಮ್ಮ ನೆಲೆವೀಡು. ಗೋವುಗಳ ರಕ್ಷಣೆಗೆ ದೀಕ್ಷೆ ತೊಟ್ಟ ಅವರನ್ನು ಹಸುಗಳಿಗೆ ಮೇವಾಗಿರುವ ನಾವು ಕೂಡ ನಮ್ಮ ಶ್ರೀಗಳು ಎಂದೇ ಆಪ್ತವಾಗಿ ಕರೆಯುತ್ತೇವೆ. 

 


ಕೆಲವು ದಶಕಗಳ ಹಿಂದೆ ನಮ್ಮ ಬದುಕು ಸಂತಸದ ಸೆಲೆಯಾಗಿ ಉಕ್ಕಿ ಹರಿಯುತ್ತಿತ್ತು. ಬಾನಿನಿಂದ ಮೊದಲ ಹನಿ ಭುವಿಗೆ ಬಿದ್ದಾಗಲೇ ಕಣ್ತೆರೆಯುತ್ತಿದ್ದ ನಾವು ಗುಂಪೆಗುಡ್ಡೆಗೆ ಹಸಿರು ಸೀರೆ ತೊಡಿಸಿದಂತೆ ಮೆರೆದು ಸುತ್ತಮುತ್ತಲಿನ ಪ್ರದೇಶ ನಿವಾಸಿಗಳ ಹಟ್ಟಿಗಳಲ್ಲಿರುವ ಹಸುಗಳನ್ನು ಮೌನ ಭಾಷೆಯಲ್ಲಿಯೇ ಬಳಿಗೆ ಕರೆದು ಅವುಗಳು ಬೆಟ್ಟವೇರಿ ಬಂದು ಯಥೇಚ್ಛವಾಗಿ ಬೆಳೆದಿರುವ ನಮ್ಮನ್ನು ಮೇವಾಗಿ ಸ್ವೀಕರಿಸುವಾಗ ನಮ್ಮ ಬದುಕು ಹಸನಾಯಿತು ಎಂದುಕೊಳ್ಳುತ್ತಿದ್ದೆವು. ಆ ಕಾಲವನ್ನು ನೆನಪಿಸಿದರೆ ಈಗಲೂ ಮನಸಿಗೆ ಅದೇನೋ ಹರುಷ. 

‘ಅಂಬಾ’ ಎಂದು ಕೂಗುವ ಪುಟ್ಟ ಕರುವಿನಿಂದ ತೊಡಗಿ ‘೦ಹ್ಹುಂಬಾ…..’ ಎಂಬ ಕರೆಯ ಮೂಲಕವೇ ತಮ್ಮ ಮನೆಯವರಿಗೆ ತನ್ನಿರುವನ್ನು ಸೂಚಿಸುವ ಗೋಮಾತೆಯವರೆಗೆ ನೂರಾರು ಹಸುಗಳು ಸ್ವಚ್ಛಂದವಾಗಿ ಈ ಗುಂಪೆಗುಡ್ಡೆಯ ತುತ್ತ ತುದಿಯಲ್ಲಿ ವಿಹರಿಸುತ್ತಿದ್ದ ಆ ಕಾಲವೊಂದಿತ್ತು ಎಂದರೆ ಇಂದಿನ ತಲೆಮಾರಿನ ಮಕ್ಕಳಿಗೆ ನಂಬಿಕೆಯೇ ಬರಲಾರದು. 

ನಮ್ಮ ಶ್ರೀಗಳ ಮಹೋನ್ನತ ಪರಿಕಲ್ಪನೆಯಾಗಿರುವ ಗೋಸ್ವರ್ಗದಂತೆ ಅಂದು ಇಲ್ಲಿಯೂ ಅಪ್ಪಟ ದೇಶೀಯ ಹಸುಗಳು ಅಲೆದಾಡುತ್ತಿದ್ದವು. 

 


ಕೆಚ್ಚಲು ಮರೆತ ಕಂದನನ್ನು ಜೊತೆಗೆ ಕರೆದುಕೊಂಡು ಗುಂಪೆಗುಡ್ಡೆಗೆ ಬಂದಾಗ ಅದಕ್ಕೆಲ್ಲಿ ಸುಸ್ತಾಗುವುದೋ ಎಂಬ ಆತಂಕದಿಂದ ಮತ್ತೆ ಮರದ ನೆರಳಿನಲ್ಲಿ ನಿಂತು ಹಾಲುಣಿಸುವ ಮಾತೃವಾತ್ಸಲ್ಯದ ಮೂರ್ತರೂಪವಾದ ಗೋಮಾತೆಯರ ದರುಶನ ನಮಗೆ ನಿತ್ಯದ ನೋಟ. 

 


ಬಿರುಬಿಸಿಲಿನಲ್ಲಿ ಸಾಕಷ್ಟು ಮೇವುಂಡು, ಮರದ ನೆರಳಿನಲ್ಲಿ ಗುಂಪಾಗಿ ಪವಡಿಸಿ, ಮೆಲುಕು ಹಾಕುವ ಗೋವುಗಳ ಹಿಂಡುಗಳನ್ನು ನೋಡುವಾಗ  ತಂಗಾಳಿ ಹೊತ್ತು ತಂದು, ನಮ್ಮ ಕಿವಿಯಲ್ಲುಸುರಿ ಹೋದ ಗೋವಿಂದನೆಂಬ ದೇವನ ಗೋಕುಲ ಎಂಬ ಊರು ಇದುವೇಯೇನೋ ಎಂದು ಹೆಮ್ಮೆ ಪಟ್ಟುಕೊಳ್ಳುತ್ತಿದ್ದೆವು. ಅಷ್ಟು ಮುಕ್ತವಾಗಿ ಇಲ್ಲಿ ಹಸುಗಳು ಸಂಚರಿಸುತ್ತಿದ್ದವು. 

 


ಸಾಕಷ್ಟು ಆಹಾರ, ಬಾಯಾರಿದರೆ ಪಾರೆ ಕಲ್ಲುಗಳ ನಡುವೆ ಇರುವ ನೀರು. ಮುಕ್ತ ಸಂಚಾರ, ಮೇವು. ಇವುಗಳಿಂದಾಗಿಯೇ ಇರಬೇಕು ಆ ಹಸುಗಳು ಸುರಿಸುತ್ತಿದ್ದ ಹಾಲಿಗೆ ಅಮೃತದ ಸತ್ತ್ವವಿರುತ್ತಿತ್ತು. ಆ ಹಸುಗಳ ಗೊಬ್ಬರ ತೋಟ ಗದ್ದೆಗಳಲ್ಲಿ ಫಲವತ್ತಾದ ಬೆಳೆ ಬೆಳೆಯಲು ಕಾರಣವಾಗುತ್ತಿತ್ತು. 

 


ಹಸಿರು ಬಣ್ಣ ತಾಳಿ ಮೊಳೆತ ನಾವು ಬೆಳೆದಾಗ ಹಸುಗಳಿರುವ ಮನೆಯವರು ನಮ್ಮನ್ನು ಹೆರೆದು ಕಟ್ಟುಗಳಾಗಿ ಸಂಗ್ರಹಿಸಿ ಮಳೆಗಾಲಕ್ಕೆ ಹಸುಗಳ ಮೇವಾಗಿ ಬಳಸುತ್ತಿದ್ದರು. ಧಾರಾಕಾರವಾಗಿ ಮಳೆ ಸುರಿಯುವ ಸಂದರ್ಭಗಳಲ್ಲಿ ಹಸುಗಳಿಗೆ ಅದು ಬೆಚ್ಚಗಿನ ಆಹಾರವಾಗಿರುತ್ತಿತ್ತು. 

 


ಮುಕ್ಕೋಟಿ ದೇವರ ನಿವಾಸವಾಗಿರುವ ಗೋಮಾತೆಯ ಮೇವಾಗಿ, ಅದು ಸುರಿಸುವ ಕ್ಷೀರವಾಗಿ, ಅದರಡಿಯ ಗೊಬ್ಬರವಾಗಿ ನಮ್ಮ ಬದುಕು ಅಂದು ಧನ್ಯತೆಯನ್ನು ಪಡೆಯುತ್ತಿತ್ತು. ಹುಲ್ಲಾಗಿ ಜನಿಸಿದರೂ ಜನ್ಮ ಸಾರ್ಥಕ ಎಂಬ ಭಾವನೆ ನಮ್ಮಲ್ಲಿ ಮೂಡುತ್ತಿತ್ತು. 

 


ಸೂರ್ಯ ಮೇಲೇರಿ ಬರುವ ಹೊತ್ತಿಗೆ ಈ ಗುಂಪೆಗುಡ್ಡೆ ಏರಿ ಬರುವ ನೂರಾರು ಹಸುಗಳು ಸಂಜೆ ಮುಸುಕುವ ಮುನ್ನ ತಮ್ಮ ತಮ್ಮ ಮನೆಗಳ ಕಡೆಗೆ ತೆರಳುವ ಅಪೂರ್ವ ದೃಶ್ಯ ನಮ್ಮ ಮನದಿಂದ ಮರೆಯಾಗದ ನೆನಪುಗಳಾಗಿ ಇನ್ನೂ ಉಳಿದಿವೆ. 

 


ಆದರೆ ಇನ್ನೆಲ್ಲಿ ಆ ದಿನಗಳು? ಹಿಂಡು ಹಿಂಡಾಗಿ  ಗುಂಪೆಗುಡ್ಡೆ ಏರಿ ಬಂದು ಹೊಟ್ಟೆ ತುಂಬಿಸಿ ಮನೆಗೆ ಮರಳುವ ಹಸುಗಳಿಗೆ ಅನಿರೀಕ್ಷಿತವಾಗಿ ಸಂಚಕಾರ ಆರಂಭವಾಗತೊಡಗಿತು. ನೂರಾರು ಗೋವುಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಈ ತಾಣ ದುಷ್ಕರ್ಮಿಗಳಿಗೆ ತಮ್ಮ ಕ್ರೌರ್ಯ ಮೆರೆವ ಜಾಗವಾಗಿ ಬದಲಾಗಲಾರಂಭಿಸಿತು. ಹಸಿದು ಬರುವ ಹಸುಗಳು ಕಟುಕರ ಬಂಧನಕ್ಕೊಳಗಾಗಿ ಮರಳಿ ಮನೆ ಸೇರದಂತಹ ಪರಿಸ್ಥಿತಿ ಉಂಟಾಗಲಾರಂಭಿಸಿದಾಗ ನಮ್ಮೊಳಗಿನ ಸಂಕಟವನ್ನು ಹೊರಹಾಕಲಾರದೆ ಎದೆಯೊಳಗೇ ಕಟ್ಟಿಡಬೇಕಾಗಿ ಬಂದ ಅಸಹಾಯಕ ಜನ್ಮವಾಗಿತ್ತು ನಮ್ಮದು. 

ಎಷ್ಟು ಕರುಗಳು, ಎಷ್ಟು ಹಸುಗಳು, ಹೋರಿಗಳು? ಓಹ್! ಕಣ್ಣಿನಲ್ಲಿ ರಕ್ತವಿಲ್ಲದಂತಹ ರಕ್ತಪಿಪಾಸುಗಳಂತೆ, ಹಾಯಾಗಿ ಮೇಯುತ್ತಿದ್ದ ಹಸುಗಳನ್ನೆಲ್ಲ ಹಗ್ಗದಿಂದ ಸೆಳೆದು ಕಟ್ಟಿ ಗುಂಪೆಗುಡ್ಡೆಯ ಮತ್ತೊಂದು ಭಾಗಕ್ಕೆ ಎಳೆದೊಯ್ದು ತಮ್ಮ ವಾಹನಗಳಲ್ಲಿ ತುಂಬಿಸಿ ಕೊಂಡೊಯ್ಯಲಾರಂಭಿಸಿದ್ದರು ಆ ಕಟುಕರು. 

 


ಗೋಮಾತೆಯ ಆ ಆಕ್ರಂದನದ ಕೂಗು ಅಲೆಅಲೆಯಾಗಿ ಈಗಲೂ ಗುಂಪೆಗುಡ್ಡೆಯಲ್ಲಿ ಅನುರಣಿಸುತ್ತಿರ ಬಹುದು. ಹಟ್ಟಿ ತುಂಬ ಹಸುಗಳನ್ನು ಸಾಕುತ್ತಿದ್ದವರ ಹಟ್ಟಿ ಖಾಲಿಯಾಗಿ ಬಣಗುಡಲಾರಂಭಿಸಿತು. ಅಮ್ಮನ ಹಾಲಿಲ್ಲದೆ ನೊಂದ ಪುಟ್ಟ ಕರುಗಳನ್ನು ಬದುಕಿಸಲಾರದೆ ಅಸಹಾಯಕತೆಯ ಕಣ್ಣೀರು ಸುರಿಸಬೇಕಾಗಿ ಬಂದ ಮನೆಯೊಡತಿಯರ ನೋವು ನಮಗೂ ಅರ್ಥವಾಗುತ್ತದೆ. 

 


ನಿಧಾನವಾಗಿ ಹಸುಗಳ ಸಂಖ್ಯೆ ಕಡಿಮೆಯಾಗಿ ಒಂದು ಮನೆಯಲ್ಲಿ ಹತ್ತು, ಹದಿನೈದು ದನ ಸಾಕುತ್ತಿದ್ದವರು ಕೂಡ ಕೇವಲ ಒಂದೆರಡು ಹಸುಸಾಕಣೆಗೆ ಸೀಮಿತಗೊಳಿಸಿದರು. ಕೆಲವರಂತೂ ಗೋಸಾಕಣೆಯನ್ನೇ ತೊರೆಯುವಂತಾಯಿತು. 

ಸ್ವಚ್ಛಂದವಾದ ಬದುಕು ನಷ್ಟವಾದ ಗೋಮಾತೆಯ ಬದುಕು ಸಂಕಷ್ಟಮಯವಾದಾಗ ನಮ್ಮ ಬದುಕು ಕೂಡ ಅರ್ಥಶೂನ್ಯವಾಯಿತು. ಹಸುಗಳ ಸಗಣಿ, ಗಂಜಲಗಳೇ ನಮ್ಮನ್ನು ಇಷ್ಟು ಹುಲುಸಾಗಿ ಬೆಳೆಯುವಂತೆ ಮಾಡಿದ್ದು. ಗುಂಪೆಗುಡ್ಡೆಗೆ ಹಸುಗಳು ಬರುವುದು ಕಡಿಮೆಯಾದಂತೆ ನಾವೂ ಕೂಡ ಸೊರಗಿದೆವು. ಮನದಲ್ಲೇ ಕುಗ್ಗಿದೆವು. ಮಳೆಗಾಲದಲ್ಲಿ ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು, ಬಿರುಬೇಸಿಗೆಯಲ್ಲಿ ಇಲ್ಲೇ ಮಣ್ಣಾಗಿ, ಮತ್ತೊಂದು ಮಳೆಗಾಲಕ್ಕೆ ಮರುಹುಟ್ಟು, ಮತ್ತದೇ ನಿಷ್ಫಲ ಬದುಕು ನಮ್ಮದಾಯಿತು. 

 


ಮುಕ್ತವಾಗಿ ಓಡಾಡಿಕೊಂಡು ತಮ್ಮಿಷ್ಟದ ಬದುಕು ಕಂಡುಕೊಂಡಿದ್ದ ಗೋವುಗಳು ಕೂಡ ಒಂದೇ ಗೂಟದಲ್ಲಿ ಕಟ್ಟಿ, ಅಲ್ಲೇ ನಿಲ್ಲುವ ಸ್ಥಿತಿ ಬಂದಾಗ ನೊಂದುಕೊಳ್ಳಲಾರವೇ? ಸ್ವಚ್ಛಂದವಾಗಿ ಹಾರಾಡುತ್ತಿದ್ದ ಹಕ್ಕಿಗಳನ್ನು ಪಂಜರದಲ್ಲಿರಿಸಬೇಕಾದ ಅನಿವಾರ್ಯತೆ ಹಸು ಸಾಕುವವರದ್ದೂ ಆಗಿತ್ತು. ಕೃತಕ ಗರ್ಭಧಾರಣಾ ವಿಧಾನದಿಂದಲೇ ಕರುವನ್ನು ಪಡೆಯಬೇಕಾಗಿ ಬಂದ ದುಸ್ಸ್ಥಿತಿ ಹೆಚ್ಚಿನವರದ್ದು.  

ಅಪ್ಪಟ ದೇಶೀ ತಳಿ ಎಂದು ಹೆಮ್ಮೆ ಪಟ್ಟುಕೊಂಡಿದ್ದ ಕ್ಷಣಗಳು ಮರೆಯಾಗಿ ಯಾವ ತಳಿ ಎಂಬುದೇ ಅರಿಯದಾಯಿತು. ದೇಶೀ ಹಸುಗಳು ಇಷ್ಟಪಟ್ಟು ಮೆಲ್ಲುತ್ತಿದ್ದ ನಮ್ಮನ್ನು ಈ ಹಸುಗಳು ಮೂಸಿ ನೋಡಿ ತಿರಸ್ಕರಿಸುವುದನ್ನು ಕಂಡ ಮೇಲೆ ಯಾರಿಗಾದರೂ ನಮ್ಮ ಅಗತ್ಯವಿದೆಯೇ ಎಂಬ ನೋವು ನಮಗೆ.
ಗೋಳಿನಲ್ಲಿ ಮುಳುಗುತ್ತಿರುವ ಗೋವುಗಳ ಬಾಳಿನಂತೆ ನಮ್ಮದೂ ಆಗಿ ಹೋಯಿತಲ್ಲ ಎಂಬ ಚಿಂತೆ ನಮ್ಮನ್ನು ಸುಡುತ್ತಲೇ ಇತ್ತು. 

 


ನಮ್ಮ ಮೌನದ ಬಾಳುವೆಗೂ ಒಂದು ಅರ್ಥ ಬರುವ ದಿನ ಬರಬಹುದೆಂದು ನಿರೀಕ್ಷಿಸಿರಲೇ ಇರಲಿಲ್ಲ. ಆದರೆ ಶ್ರೀಗುರುಗಳ ಕಾರುಣ್ಯದಿಂದ ಅಂಥಹ ದಿನಗಳು ನಮ್ಮನ್ನರಸಿ ಬಂದವು.

 


ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಕಾಮದುಘಾ ಯೋಜನೆಯನ್ವಯ ಪೆರ್ಲ ಸಮೀಪದ ಬಜಕೂಡ್ಲಿನಲ್ಲಿ ಕಾರ್ಯವೆಸಗುತ್ತಿರುವ  ಗೋಶಾಲೆಯ ಹಸುಗಳಿಗೆ ನಮ್ಮನ್ನು ಕೊಂಡೊಯ್ಯುವ ಒಂದು ಮಹತ್ಕಾರ್ಯ ಯೋಜನೆ ಸಿದ್ಧವಾಯಿತು. ಹಿಂದಿನ ವರ್ಷಗಳಲ್ಲಿ ಅಲ್ಪ ಸ್ವಲ್ಪ  ಮುಳಿಹುಲ್ಲುಗಳಿಗೆ ಮಾತ್ರ ಆ ಭಾಗ್ಯ ಒದಗಿ ಬಂದರೆ ಈ ಬಾರಿ ಹಾಗಲ್ಲ. 

 


ಸೇವಾಅರ್ಘ್ಯ ಎಂಬ ಹೆಸರಿನ ಮೂಲಕ ‘ಗೋವಿಗಾಗಿ ಮೇವು’ ಎಂಬ ಯೋಜನೆಯನ್ನು ಸಿದ್ಧಪಡಿಸಿದರು. 

 


‘ಮನುಷ್ಯರಿಗೆ ಅನ್ನದಾನ ಮಾಡಿದರೆ ವಿಶೇಷ ಪುಣ್ಯ ದೊರಕುತ್ತದೆ. ಹಾಗಿರುವಾಗ ಮಾನವನಿಗಿಂತೂ ಶ್ರೇಷ್ಠತೆಯನ್ನು ಹೊಂದಿರುವ ಗೋಮಾತೆಯ ಹಸಿವನ್ನು ನೀಗಿಸಿದರೆ ಅದಕ್ಕಿಂತ ಮಿಗಿಲಾದ ಪುಣ್ಯಕಾರ್ಯ ಇನ್ನೊಂದಿಲ್ಲ. ಹೃದಯವುಳ್ಳವರು, ಗೋಪ್ರೇಮಿಗಳು, ಧರ್ಮಪ್ರೇಮಿಗಳು, ಮನುಷ್ಯ ಪ್ರೇಮಿಗಳೆಲ್ಲ ಈ ಕಾರ್ಯದಲ್ಲಿ ಕೈ ಜೋಡಿಸಬೇಕೆಂಬ ನಮ್ಮ ಶ್ರೀಗುರುಗಳ ಕರೆ ಎಲ್ಲರಲ್ಲೂ ಉತ್ಸಾಹ ಮೂಡಿಸಿತು. 

 


ಹಾಲುಗಲ್ಲದ ಕಂದಮ್ಮಗಳಿಂದ ತೊಡಗಿ, ತಲೆನರೆತ ಹಿರಿಯರವರೆಗೆ, ಮಾತೆಯರೂ ಸೇರಿ ನೂರಕ್ಕೂ ಮಿಕ್ಕಿ ಗೋಪ್ರೇಮಿಗಳು  ಒಂದಾಗಿ ನಮ್ಮನ್ನೆಲ್ಲ ಕತ್ತಿ, ಯಂತ್ರಗಳ ಸಹಾಯದಿಂದ ಹೆರೆದು ಕಟ್ಟಿ ಕೊಂಡೊಯ್ಯಲು ಸಡಗರದಿಂದ ಆಗಮಿಸಿದರು. ಗೋಮಾತೆಯ ಹಸಿವನ್ನು ನೀಗಿಸಲು ಬಂದವರ ಹಸಿವು, ಬಾಯಾರಿಕೆ ನೀಗಿಸಲು ಸಹ ಇಲ್ಲಿ ವ್ಯವಸ್ಥೆ ಇತ್ತು. ನೆತ್ತಿಯನ್ನು ಸುಡುವ ಬಿಸಿಲನ್ನು ಲೆಕ್ಕಿಸದೆ ಎಲ್ಲರೂ  ಕಾರ್ಯವೆಸಗುತ್ತಿರುವಾಗ ನಮಗೂ ಹರುಷ. 

ಗುಂಪೆ ಗುಡ್ಡೆ ಏರಿ ಬಂದು ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಗೋಮಾತೆಯ ಹಸಿವು ನೀಗಿಸುತ್ತಿದ್ದ ನಾವು ಇತ್ತೀಚೆಗೆ ಹಸುಗಳಿಗೆ ಮೇವಾಗದೆ ನಿಷ್ಪ್ರಯೋಜಕ ಬಾಳು ನಮ್ಮದೆಂದು ಒಳಗೊಳಗೆ ಕೊರಗಿ ಸೊರಗುತ್ತಾ  ಕೆಲವು ವರ್ಷಗಳಿಂದ ಅನುಭವಿಸುತ್ತಿದ್ದ ನೋವಿನ ಬದುಕಿಗೊಂದು ಪೂರ್ಣ ವಿದಾಯ. 

ಹಸುಗಳು ಇಲ್ಲಿಗೆ ಬಾರದಿದ್ದರೂ ನಾವೇ ಹಸುಗಳಿರುವಲ್ಲಿಗೆ ಹೋಗುವಂತಾಯಿತಲ್ಲ, ಮತ್ತೆ ಗೋಮಾತೆಯ ಮೇವಾಗಿ ಬದುಕು ಸಾರ್ಥಕಗೊಳಿಸುವ ಸುದಿನ ಸನ್ನಿಹಿತವಾಯಿತಲ್ಲ ಎಂಬ ಸಂತೋಷ ನಮ್ಮದು. ಗೋಪ್ರೇಮಿಗಳ ಶ್ರಮದಿಂದಾಗಿ, ಗುಂಪೆ ಗುಡ್ಡೆಯಲ್ಲಿ ಬಿಸಿಲಿಗೆ ಒಣಗಿ ಚದುರಿ ಹೋಗುತ್ತಿದ್ದ ನಮ್ಮ ಬದುಕು ಅಮೃತಧಾರಾ ಗೋಶಾಲೆಯ ಗೋಮಾತೆಯರ ಆಹಾರವಾಗಿ ಅಲ್ಲಿಗೆ ಹೋಗುವಂತಾಗಿದ್ದು ನಮ್ಮ ಸೌಭಾಗ್ಯ ಎಂದೇ ಭಾವಿಸುತ್ತೇವೆ. 

ನಾವು ಗೋಶಾಲೆಗೆ ಪಯಣ ಬೆಳೆಸಿದರೂ ನಮ್ಮ ಬೇರುಗಳು ಇನ್ನೂ ಗುಂಪೆಗುಡ್ಡೆಯ ನೆತ್ತಿಯಲ್ಲೇ ಇವೆ. ಮುಂದಿನ ಮಳೆಗಾಲದಲ್ಲಿ ಇನ್ನಷ್ಟು ಉತ್ಸಾಹದಿಂದ ಮೊಳೆತು ಬರುವೆವು. ಮುಂದಿನ ವರ್ಷವೂ ಈ ಸೇವಾ ಅರ್ಘ್ಯವೆಂಬ ಯಜ್ಞದ ಸಮಿಧೆಗಳಾಗಿ ಜನ್ಮಸಾರ್ಥಕಗೊಳಿಸಲು.ಗೋಮಾತೆಯ ಹಸಿವಿಂಗಿಸುವ ಮೂಲಕ ಬದುಕು ಪಾವನ ಗೊಳಿಸಲು. 

ನಮ್ಮನ್ನು ಕಟ್ಟುಗಳಾಗಿಸಿ ವಾಹನದಲ್ಲಿ ಪೇರಿಸಿಡುವಾಗ  ಕಣ್ಣಿಗೆ ಕಾಣದ ಆ ಗೋವಿಂದನೆಂಬ ದೇವನಲ್ಲಿ ನಾವು ಮನದುಂಬಿ ಪ್ರಾರ್ಥಿಸಿದ್ದು ಇಷ್ಟು ಮಾತ್ರ, “ಗೋಮಾತೆಗೊಂದು ನೆಮ್ಮದಿಯ ಬದುಕು ನೀಡು ತಂದೆಯೇ. ಅವಳ ಗೋಳಿನ ಬದುಕಿಗೆ ಮುಕ್ತಿ ನೀಡಿ ಹಿಂದಿನಂತೆ ಸ್ವಚ್ಛಂದವಾಗಿ ಬದುಕಲು ಅವಳಿಗೆ ಅವಕಾಶ ಮಾಡಿಕೊಡುವಂತಹ ಹೃದಯವಂತಿಕೆ ಜನರ ಮನದಲ್ಲಿ ಮೂಡಿ ಬರಲಿ”  ಎಂದು. 

 

Author Details


Srimukha

Leave a Reply

Your email address will not be published. Required fields are marked *