1
ಗೋಮಾತೆ ವೇದದ ಸಾಕಾರ ರೂಪ. ವೇದಗಳ ರಕ್ಷಣೆ ಧರ್ಮಪೀಠಗಳ ಹೊಣೆ. ಗೋಮಾತೆಯ ರಕ್ಷಣೆಯೂ ಧರ್ಮಪೀಠಗಳ ಹೊಣೆ ತಾನೇ?
ಗೋಹತ್ಯಾಚಾರದ ವಿರುದ್ಧ ಸರ್ಕಾರ ಧರ್ಮಪೀಠಾಧಿಪತಿಗಳು ಮೌನವಾಗಿದ್ದಾಗ;
ಸಮಾಜ ಅಸಹಾಯಕವಾಗಿ ತನಗೆ ತೋರಿದ ರೀತಿಯಲ್ಲಿ ಪ್ರತಿಭಟನೆಗಿಳಿದು ಅಶಾಂತಿ ಹುಟ್ಟತೊಡಗಿದಾಗ;
ಗೋರಕ್ಷಣೆಗೆ ಅಹಿಂಸಾತ್ಮಕವಾದ “ಭಾರತೀಯ ಗೋಸಂರಕ್ಷಣಾ ಆಂದೋಲನ” ವನ್ನು ಜನಜಾಗೃತಿ ಯಾತ್ರೆಯನ್ನು ದೇಶದೆಲ್ಲೆಡೆ ಕೈಗೊಂಡು ನಿರಂತರವಾಗಿ ಗೋಜಾಗೃತಿ ಮೂಡಿಸುತ್ತಿರುವ ಶಂಕರಕಿಂಕರ ಶ್ರೀ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರ ನಡೆ…
ರಾಮ, ಸರಿ ತಾನೇ?
2
ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ಭಾರತದಲ್ಲಿ ನೂರಕ್ಕೂ ಮಿಕ್ಕಿ ದೇಸೀಹಸುತಳಿಗಳು ಇದ್ದವು. ಕ್ಷೀರಕ್ರಾಂತಿಯ ಭ್ರಾಂತಿಗೆ ವರ್ಷದಿಂದ ವರ್ಷಕ್ಕೆ ಅವುಗಳ ಸಂಖ್ಯೆ ಕಡಿಮೆಯಾಗುತ್ತಾ ಇಂದಿಗೆ ಸರಿಸುಮಾರು ನಲವತ್ತರ ಆಸುಪಾಸಿನಲ್ಲಿದೆ.
ಅವುಗಳಲ್ಲೂ ಕೆಲವು ವಿನಾಶದ ಅಂಚಿನಲ್ಲಿವೆ.
ಒಂದಷ್ಟು ಪ್ರತಿರೋಧಗಳು ಬಂದರೂ ಜಡ್ಡು, ಮೊಂಡುತನಗಳನ್ನು ಮೈಗೂಡಿಸಿರುವ ಸರ್ಕಾರ ಇವಕ್ಕೆ ಕ್ಯಾರೇ ಅನ್ನಲಿಲ್ಲ. ಈ ಸಂದರ್ಭದಲ್ಲಿ “ಗೋಮಾತೆ ಭಾರತೀಯತೆಯ ಸಂಕೇತ, ಸಂಸ್ಕೃತಿಯ ಪ್ರತೀಕ…” ಎಂದೆಲ್ಲಾ ಹೇಳುವವರೂ ದಿವ್ಯಮೌನಕ್ಕೆ ಜಾರಿದರು.
ಅಂದು ಶಂಕರಾಚಾರ್ಯರು ಸನಾತನ ಧರ್ಮದ ಉಳಿವು – ಏಳಿಗೆಗಳಿಗೆ ರಾಜರುಗಳು ವಿಫಲಗೊಂಡಾಗ ತಾವೇ ಭಾರತದ ಎಲ್ಲೆಡೆ ಸಂಚಾರ ಕೈಗೊಂಡು ಜನಜಾಗೃತಿ ಮಾಡಿದುದು ನೆನಪಿದೆಯಲ್ಲವೇ? ಅದೇ ಶಂಕರ ಪರಂಪರೆಯ ವರಯತಿಯೋರ್ವರು ಸರ್ಕಾರ, ಸಂಘಟನೆಗಳು ವಿಫಲಗೊಂಡಾಗ ಸುಮ್ಮನಿರದೆ ದೇಶಮಟ್ಟದಲ್ಲಿ ಗೋಸಂರಕ್ಷಣಾ ಜಾಗೃತಿ ಮೂಡಿಸಲು ಮೇಲಿಂದ ಮೇಲೆ ಯಾತ್ರೆ ಕೈಗೊಂಡರು.
ಶಿಷ್ಯರ, ಗೋಪ್ರೇಮಿಗಳ ಸಂಘಟನೆ ಮಾಡಿ, ದೇಸೀ ಗೋತಳಿಗಳ ಸಂರಕ್ಷಣೆಗಾಗಿ ಗೋಶಾಲೆಗಳನ್ನು ತೆರೆದರು ಮತ್ತು ತೆರೆಸಿದರು. ತಮ್ಮ ಗೋಶಾಲೆಗಳಲ್ಲೇ 38ಕ್ಕೂ ಮಿಕ್ಕಿದ ದೇಸೀ ತಳಿಗಳನ್ನು ಸಲಹುವ ಮಹಾಕಾರ್ಯವನ್ನು ಮಾಡಿದರು.
ಗೊತ್ತು, ಇದು ಭಗೀರಥಯತ್ನ ಎನ್ನುವುದು. ಆದರೂ ಕೈಬಿಡಲಿಲ್ಲ. ಗೋಮಾತೆಯ ಹಿತಕ್ಕಾಗಿ ತಾವೂ ತಮ್ಮ ಅಭಿಮಾನಿಗಳನ್ನೂ ಹಗಲಿರುಳು ಶ್ರಮಿಸುತ್ತಿರುವಂತೆ ನೋಡಿದರು. ಶಂಕರರು ಧರ್ಮದ ಉಳಿವಿಗಾಗಿ, ಬೆಳವಿಗಾಗಿ ಅಂದು ಮಾಡಿದ ಮಹಾನ್ ಕಾರ್ಯವನ್ನು ನೆನಪಿಸುವಂತೆ ಇಂದು ಈ ಯತಿವರೇಣ್ಯರು ಗೋವಿಗಾಗಿ, ಭಾರತಾಂಬೆಯ ಆತ್ಮದಂತಿರುವ ಗೋಮಾತೆಯ ಉಳಿವಿಗಾಗಿ ಮಾಡುತ್ತಿದ್ದಾರೆ. ಅವರೇ ಪರಮಪೂಜ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು.
ಅವರೂ ತಾವಾಯಿತು ತಮ್ಮ ಮಠವಾಯಿತು ಎಂದು ಮಠದಲ್ಲೇ ಕುಳಿತಿರುತ್ತಿದ್ದರೆ ಜನಸಾಮಾನ್ಯರ ಗಮನಕ್ಕೆ “ಗೋಹತ್ಯಾಚಾರ” ಬರುತ್ತಿತ್ತೇ?
ಇದು ಶಂಕರಾಚಾರ್ಯರು ಬಯಸಿದ್ದ ಜನಜಾಗೃತಿಯ ಇಂದಿನ ಅಪೇಕ್ಷಿತ ನಡೆಯೇ ಅಲ್ಲವೇ? ಈ ರೀತಿ
ಶಂಕರರು ಹಾಕಿಕೊಟ್ಟ ದಾರಿಯಲ್ಲಿ ಶಂಕರಕಿಂಕರ ಶ್ರೀ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರು ನಡೆಯುತ್ತಿರುವುದು…
ರಾಮ, ಇದು ಸರಿ ತಾನೇ?
3
ರಾಮ, ಅಂದು ಋಷಿಸಂಘಟನೆ, ದುಷ್ಟರ ನಿಗ್ರಹಕ್ಕಾಗಿ ವಿಶ್ವಾಮಿತ್ರರೊಂದಿಗೆ ತಮ್ಮನೊಡಗೂಡಿ ನೀನು ಕಾಡಿಗೆ ತೆರಳಿದೆ. ಮೊದಲ ಸುತ್ತಿನಲ್ಲಿಯೇ ಗೆದ್ದೆ.
ಶಂಕರಾಚಾರ್ಯರು ಎರಡು ಸಲ ಭಾರತ ಪರ್ಯಟನ ಮಾಡಿ, ಧರ್ಮ ಸಂಸ್ಕೃತಿಗಳ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿ ಮುನ್ನಡೆಸುವ ಸಲುವಾಗಿ ಅದರ ಹೊಣೆಯನ್ನು ಹೊರಲು ಚತುರಾಮ್ನಾಯ ಪೀಠಗಳ ಸ್ಥಾಪನೆ ಮಾಡಿದರು. ಅದರ ಮುಂದುವರಿದ ಪೀಠವೇ ಅವಿಚ್ಛಿನ್ನ ಗುರುಪರಂಪರೆ ಖ್ಯಾತಿಯ ಶ್ರೀರಾಮಚಂದ್ರಾಪುರ ಮಠ.
ರಾಮ, ನೀನು ಮಾಡಿದ, ಶಂಕರಾಚಾರ್ಯರು ಮಾಡಿದ ಅದೇ ದೇಶಹಿತ ಜನಹಿತ ಕಾರ್ಯಕ್ರಮಗಳನ್ನು, ಅದರಲ್ಲೂ ವಿಶೇಷವಾಗಿ ಗೋಸಂರಕ್ಷಣೆಗೆ ತಮ್ಮ ಸಂನ್ಯಾಸ ಸಂತ ಬದುಕನ್ನೇ ಮೀಸಲಿಟ್ಟ ಏಕೈಕ ಪೀಠಾಧಿಪತಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಮಾಡುತ್ತಿರುವ ಅಹಿಂಸಾತ್ಮಕ
ಗೋರಕ್ಷಾ ಆಂದೋಲನ ಸರಿ ತಾನೇ?
“ಗೋವು ಬೇರೆಯಲ್ಲ ವೇದ ಬೇರೆಯಲ್ಲ” ಎಂದು ಸಾರಿದ ಜಗತ್ತಿನ ಸರ್ವಶ್ರೇಷ್ಠ ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ಇವರು ಮಾಡುತ್ತಿರುವ
ಜನ-ಜಗ ಜಾಗೃತಿಯ ಮಹತ್ಕಾರ್ಯ…
ರಾಮ, ನೀನೇ ಹೇಳು… ಸರಿ ತಾನೇ?
4
ರಾಮಾ, ಗುಹ ನಿನ್ನ ಆತ್ಮೀಯ ಸ್ನೇಹಿತ. ವನವಾಸದ ಅವಧಿಯಲ್ಲಿ ಶಬರಿ ರುಚಿ ನೋಡಿ ಕೊಟ್ಟ ಹಣ್ಣುಗಳನ್ನು ಪ್ರೀತಿ-ಸಂತಸಗಳಿಂದ ಸವಿದೆ. ಮೇಲು – ಕೀಳು, ಜಾತಿ-ವಿಜಾತಿ ಯಾವುದೂ ನೋಡದೆ ಒಲವಿಗೆ ಬೆಲೆ ಕೊಟ್ಟೆ.
ಆಚಾರ್ಯ ಶಂಕರರು ಗಂಗಾ ತಟದಲ್ಲಿ ಎದುರು ಸಿಕ್ಕ ಚಾಂಡಾಲನಲ್ಲಿ ಗುರುವನ್ನು ಕಂಡರು. ಗುಣ ಮಹತ್ವಗಳಿಗೆ ಅವರು ನೀಡಿದ ಗೌರವ ಅದು.
ಇಂದು ಇದೇ ನೀತಿಯನ್ನು ತಮ್ಮದಾಗಿಸಿ ಪ್ರೀತಿ ವಿಶ್ವಾಸ ಗೌರವಗಳಿಂದ ತಮ್ಮೆಡೆಗೆ ಯಾರು ಬರುತ್ತಾರೋ ಅವರ ಧರ್ಮ ಜಾತಿ ಲಿಂಗ ಅಂತಸ್ತು ಸಿರಿತನ ಬಡತನ ಸ್ಥಾನಮಾನಗಳನ್ನು ನೋಡದೆ ಹರಸುವ ಮಹಾನ್ ವ್ಯಕ್ತಿತ್ವದವರು ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.
ನೊಂದೆದೆಗಳನ್ನು ಸಾಂತ್ವನದ ಧೈರ್ಯದ ನುಡಿಗಳನ್ನಾಡಿ ಅಭಯ ತುಂಬುವವರು. ಅಂದು ಉತ್ತರ ಕರ್ನಾಟಕ ಭಾಗದಲ್ಲಿ ಜಲಪ್ರಳಯವಾದಾಗ, ಮೊನ್ನೆ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಉಂಟಾದಾಗ ಮಿಡಿದ ಸಹಕರಿಸಿದ ಕರುಣಾಮಯಿ.
ನಿನ್ನ, “ಭೂತದಯಾಂ ವಿಸ್ತಾರಯ..”
ಎಂದ ಶಂಕರರ ನಡೆಯೂ ಇದೇ ತಾನೇ?
ರಾಮಾ, ಸಂನ್ಯಾಸ ಸ್ವೀಕರಿಸಿದಂದಿನಿಂದ ಈ ಕ್ಷಣದ ತನಕ ಸಕಲಜೀವಹಿತಕ್ಕಾಗಿ ತ್ರಿಕರಣ ಪೂರ್ವಕವಾಗಿ ದುಡಿಯುತ್ತಿರುವ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ನಡೆಯೂ ಸರಿ ತಾನೇ?
5
ರಾಮ,
ವಾಲ್ಮೀಕಿ ಒಲಿದುಲಿದ ನಿನ್ನ ಚರಿತೆ “ರಾಮಾಯಣ”ವು ಬಾಯಿಯಿಂದ ಬಾಯಿಗೆ ಬರುತ್ತಿರುವ ತನಕ ಸರಿಯಾಗಿಯೇ ಇತ್ತು. ಹೃದಯ ಬುದ್ಧಿಯನ್ನು ನಿಯಂತ್ರಿಸುವವರ ಕೈಯಲ್ಲಿ ಇರುವ ತನಕ ನೀನೇ ನಾಯಕನಾಗಿ ಉಳಿದೆ; ಆದರ್ಶನಾದೆ. ಆದರೆ ಎಂದು ಬುದ್ಧಿ ಜೀವಿಗಳೆಂದು ಕರೆಯಲ್ಪಡುವ ಕೇವಲ ಬುದ್ಧಿವಂತರ ಕೈಯಲ್ಲಿ ನಿನ್ನ ಚರಿತೆ ಸಿಕ್ಕಿತೋ ಎಲ್ಲವೂ ಉಲ್ಟಾ. ನೀನು ಖಳನಾಯಕನಾದೆ, ರಾವಣ ನಾಯಕನಾದ. ಇದು ಎಲ್ಲಿಯವರೆಗೆ ಬಂತೆಂದರೆ ಎಳೆಯ-ಯುವಕರ ಶಿಕ್ಷಣದ ಪಠ್ಯಪುಸ್ತಕಗಳನ್ನೂ ಸೇರಿತು.
ಆರಾಧಿಸಬೇಕಾದವರ ಎಳೆಹೃದಯದಲ್ಲಿ ಸಂಶಯದ ವಿಷಬೀಜ ಬಿತ್ತುವ ಮೂಲಕ ಸಂಸ್ಕೃತಿಯ ತಾಯಿಬೇರಿಗೇ ವಿಷ ಸುರಿವ ಹುನ್ನಾರವಾಯಿತು.
ಶಾಲೆ ಕಾಲೇಜುಗಳಲ್ಲಿ ಕೊಡಲಾರದ್ದನ್ನು ಕೊಡುವುದಾದರೂ ಎಲ್ಲಿ? ಕೊಡಬೇಕಾದ ಕ್ರಮ, ಶೈಲಿಯಾದರೂ ಹೇಗೆ? ಇಂತಹ ಅನಿವಾರ್ಯ ಸಂದರ್ಭದಲ್ಲಿ ಹುಟ್ಟಿ, ಚಿಗುರಿ ಸಮೃದ್ಧವಾಗಿ ಬೆಳೆದದ್ದೇ “ರಾಮಕಥೆ” ಎನ್ನುವ ಅಪೂರ್ವ ಕಲಾಸಂಗಮ.
ಎಳೆ ಮಕ್ಕಳಿಂದ ತೊಡಗಿ ಮುದುಮುದುಕರವರೆಗಿನ ಎಲ್ಲಾ ವಯೋಮಾನದ ಸ್ತ್ರೀ ಪುರುಷರಿಗೆ ರಂಜನೆಯ ಮೂಲಕ ನಿನ್ನ ನಿಜ ಚರಿತೆಯನ್ನು ತಿಳಿಸುವ ಯಶಸ್ವೀ ಯತ್ನ ಮಾಡಲಾಯಿತು.ಅದು ಜನಮಾನಸವನ್ನು ಗೆದ್ದು ಜೈತ್ರಯಾತ್ರೆಯನ್ನೇ ಮಾಡಿತು.
ಹೇಳು ರಾಮ, ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ನಿನ್ನ ನಿಜಚರಿತೆಯನ್ನು ಮುಗ್ಧರಿಗೆ ತಿಳಿಸಿಕೊಡುವ ಮೂಲಕ ಶುದ್ಧ ಭಾಷೆ, ಸಾಹಿತ್ಯ, ಕಲೆಗಳನ್ನು ಜನರಿಗೆ ಪರಿಚಯಿಸುವ ಕಾರ್ಯ – ಸತ್ಕಾರ್ಯ
ಸರಿ ತಾನೇ?