ನವರಾತ್ರಿಯ ಅಕೇರಿಯಾಣ ದಿನಂಗೊ ಇದು. ಒಂಭತ್ತು ರೂಪಂಗಳಲ್ಲಿ ದೇವಿಯ ಉಪಾಸನೆ ಮಾಡುವ ಹಬ್ಬ ಈ ನವರಾತ್ರಿ. ಮನೆಮನೆಗಳಲ್ಲಿ ಪುಸ್ತಕ ಪೂಜೆಯ ಸಂಭ್ರಮವೂ ಸುರುವಾಗಿ ಪುಸ್ತಕಪೂಜೆಯನ್ನು ಸುರು ಮಾಡಿ ಆಯಿದು.
ದೇವಿ ಹೇಳಿದರೆ ನಮ್ಮೆಲ್ಲರ ಅಬ್ಬೆಯೇ. ಹುಟ್ಟಿನಿಂದಲೇ ಬಪ್ಪ ಸಂಬಂಧ ಅಬ್ಬೆದು. ಅಬ್ಬೆಯ ಹಾಂಗೆ ಕೊಂಗಾಟಲ್ಲಿ ನಮ್ಮ ನೋಡ್ಲೆ ಆರಿಂಗೆಡಿಗಲ್ಲದಾ. ಅದಕ್ಕೇ ಅಬ್ಬೆ ಹೇಳುವ ಪದಕ್ಕೆ ಅಷ್ಟು ಮಹತ್ವ. ಆದರೆ ಈಗ ಅಬ್ಬೆ ಹೇಳುವ ಶಬ್ದ ಪ್ರಯೋಗವೇ ಇಲ್ಲದ್ದಾಂಗಾಯಿದು. ಬಹುಶಃ ಅಬ್ಬೆಗೆ ಕೊಡುವ ಗೌರವ, ಪ್ರೀತಿಯೂ ಕಮ್ಮಿಯಾಯಿದೋ ಹೇಳಿಯೂ ಆವ್ತು.
ಜಗದಂಬೆ ಹೇಳಿದರೂ ಅಬ್ಬೆಯೇ. ನಮ್ಮ ಬದ್ಕಿಲ್ಲಿ ಬಪ್ಪ ಕಷ್ಟಂಗಳ ನಿವಾರಣೆ ಮಾಡಿ ಪರಿಪಾಲಿಸುವ ಈ ಜಗತ್ತಿನ ಅಬ್ಬೆ ದುರ್ಗೆ ಹೇಳಿ ಅಜ್ಜ ದೇವೀ ಸಪ್ತಶತಿಯ ಕಥೆ ಓದಿ ಹೇಳುಗು.
ದೇವಲೋಕದ ದೇವೇಂದ್ರಾದಿ ದೇವತೆಗೊಕ್ಕೆ ರಕ್ಕಸರು ಬಂದು ಹಿಂಸೆ ಕೊಟ್ಟಪ್ಪಗ ಅವು ಶರಣಾದ್ದು ಈ ದೇವಿಗೆ ಅಲ್ಲದೋ..
‘ ಮದಮುಖ ಮಹಿಷನ ಬಲಸಾರಣದಲ್ಲಿ
ಸದೆದು ಸಜ್ಜನರ ಪಾಲಿಸಿದಳಿಗೆ….’ ಹೇಳಿ ಅಜ್ಜಿಯ ಹಾಡಿಲ್ಲಿಯೂ ದೇವಿ ಮಹಾತ್ಮೆಯ ಕಥೆ ಇದ್ದು. ದೇವೀ ಮಹಾತ್ಮೆಯ ಕಥೆ ಎಷ್ಟು ಕೇಳಿದರೂ ಬೊಡಿತ್ತಿಲ್ಲೆ. ಯಕ್ಷಗಾನ ನೋಡಿದರೂ ಹಾಂಗೆಯೇ..!
ಚಂಡ, ಮುಂಡ, ರಕ್ತಬೀಜನ ಹಾಂಗಿದ್ದ ರಕ್ಕಸ ವೇಶಂಗೊ ಬಂದಪ್ಪಗ ನಿಜವಾದ ರಾಕ್ಷಸರೇ ಬಂದ ಹಾಂಗೆ ಹೆದರಿಂಡಿದ್ದ ನಾವು ದೇವಿ ಆ ದುಷ್ಟರ ಸಂಹಾರ ಮಾಡುದು ಕಂಡು ಎಷ್ಟು ಶ್ರದ್ಧೆಲಿ ಭಕ್ತಿಲಿ ನೋಡಿಂಡಿದ್ದತ್ತು.
ಎಂತ ಗೊಂತಿಲ್ಲೆ ಮನಸ್ಸು ಮತ್ತೆ ಮತ್ತೆ ಓಡುದು ಹಳೇ ನೆಂಪುಗಳ ಉಗ್ರಾಣದ ಹತ್ರಂಗೇ. ಆ ದಿನಂಗೊ ಇನ್ನೆಂದೂ ಪುನಾ ಬಾರ ಹೇಳಿ ಗೊಂತಿದ್ದರೂ ಇನ್ನೊಂದರಿ ಆ ಗೌಜಿ ಇರ್ತಿದ್ದರೇಳಿ ಆವ್ತು.
ನವರಾತ್ರಿಯ ಒಂಭತ್ತು ದಿನವುದೆ ಉದಿಯಪ್ಪಗಲೇ ಮಿಂದಿಕ್ಕಿ ಬಂದಪ್ಪಗ ಅಬ್ಬೆ ಶ್ಯಾಮಲಾದಂಡಕ ಹೇಳಿ ಕೊಡುಗು. ಮತ್ತೆ ಕೆಲವು ದೇವಿ ಸ್ತುತಿಗೊ. ದೇವಿಯ ಎಷ್ಟೋ ಸ್ತುತಿಗಳ, ಸ್ತೋತ್ರಂಗಳ ಕಲ್ತದೇ ಈ ನವರಾತ್ರಿಯ ಸಮಯಲ್ಲಿ.
ಸಣ್ಣಾದಿಪ್ಪಗ ನವರಾತ್ರಿ ಸಮಯಲ್ಲಿ ಶಾಲಗೋಪಲೆ ಹೆದರಿಕೆಯಪ್ಪದು. ನವರಾತ್ರಿ ವೇಶಂಗಳೇ ಅದಕ್ಕೆ ಕಾರಣ. ನಮ್ಮ ಮನೆಗೆ ಕೆಲಸಕ್ಕೆ ಬಪ್ಪವ್ವೇ ಆದಿಕ್ಕು ಬಣ್ಣ ಬಣ್ಣದ ವೇಶ ಕಟ್ಟಿಂಡು ದಾರಿಲಿ ಮಕ್ಕಳ ಕಾಂಬಗ ಕುಶಾಲಿಂಗೆ ಹೆದರ್ಸುದು. ವೇಷ ಕಟ್ಟಿದವಕ್ಕೆ ನಮ್ಮ ಗುರ್ತ ಇರ್ತ್ತು. ಆದರೆ ಮೈಗೆ ಬಣ್ಣ ಮೆತ್ಯಪ್ಪಗ ನಮಗವರ ಗುರ್ತವೇ ಸಿಕ್ಕಲಿಲ್ಲೆ. ಹಾಂಗಾಗಿ ಅವು ಎಂಥ ಮಾತಾಡ್ಸಿರು ಹೆದರಿಕೆಯಪ್ಪದು.
ಮೂಲಾ ನಕ್ಷತ್ರದ ದಿನ ಮನೆಮನೆಗಳಲ್ಲಿ ಪುಸ್ತಕ ಪೂಜೆಗೆ ಮಡುಗುವ ಕ್ರಮ. ಹಳೇ ತಾಳೆಗರಿ ಗ್ರಂಥಂಗೊ, ಪುರಾಣ ಪುಸ್ತಕಂಗಳ ಒಟ್ಟಿಂಗೆ ಮಕ್ಕಳ ಪಾಠಪುಸ್ತಕಂಗಳನ್ನೂ ಪೂಜೆಗೆ ಮಡುಗಿಂಡಿತ್ತು.
ಮದಲಿಂಗೆ ಶಾಲೆಗಳಲ್ಲೂ ಪುಸ್ತಕ ಮಡುಗಿ ಪೂಜೆ ಇದ್ದತ್ತು. ವಿದ್ಯಾ ದೇವತೆ ಶಾರದೆಯ ಸ್ತುತಿಸಿದರೆ ಒಳ್ಳೆ ವಿದ್ಯೆ, ಬುದ್ಧಿ ಸಿಕ್ಕುಗು ಹೇಳುದು ನಮ್ಮ ನಂಬಿಕೆ.
ಮೂಲಾ ನಕ್ಷತ್ರದ ದಿನ ಸರಸ್ವತೀ ದೇವಿಯ ಆವಾಹನೆ ಮಾಡಿ ಪುಸ್ತಕ ಪೂಜೆಗೆ ಮಡುಗಿದ ಮತ್ತೆ ಶ್ರವಣ ನಕ್ಷತ್ರಲ್ಲಿ ಉದ್ವಾಸನೆ ಮಾಡಿ, ಪುಸ್ತಕ ಓದಲೆ ಕೊಡುವವರೆಗೆ ಮಕ್ಕೊಗೆ ಕೊಶಿ. ಪುಸ್ತಕ ಓದುಲೆ ಆರೂ ಒತ್ತಾಯ ಮಾಡ್ಲಿಲ್ಲೆ. ಅವರಷ್ಟಕೇ ಲಾಗ ಹಾಕಿ ಸೊಕ್ಕುವ ಸುದಿನಂಗೊ ಅದು.
ಅಂಬಗ ಈ ಜಂಗಮವಾಣಿ ಇತ್ತಿದ್ದೇ ಇಲ್ಲೆ.
ದೂರದರ್ಶನ ಕೆಲವು ಮನೆಗಳಲ್ಲಿದ್ದರೂ ಈಗಣಾಂಗೆ ಇಡೀ ದಿನ ಕಾರ್ಯಕ್ರಮಂಗಳೂ ಇಲ್ಲೆ. ದೇವಸ್ಥಾನಕ್ಕೆ ಹೋಪದೋ, ಭಜನೆ ಮಾಡುದೋ ಹೀಂಗೇ ಏನಾರು ಧಾರ್ಮಿಕ ಕಾರ್ಯಕ್ರಮಂಗಳೇ ಅಂದು ಹೊತ್ತು ಕಳವಲೆ ಇದ್ದದು. ಅದರಿಂದ ಧಾರ್ಮಿಕ, ಪೌರಾಣಿಕ ವಿಶಯಂಗೊ ಎಲ್ಲರಿಂಗು ಗೊಂತಾಗಿಂಡಿದ್ದತ್ತು. ಮಕ್ಕೊಗೂ ಅದರ್ಲಿ ಆಸಕ್ತಿ ಬಂದುಕೊಂಡಿದ್ದತ್ತು.
ವಿಜಯದಶಮಿಯ ದಿನ ವಿಶೇಶ ಪೂಜೆ. ನವರಾತ್ರಿ ಕಳುದು ಹತ್ತನೇ ದಿನ. ಇದಕ್ಕೆ ಪೂರಕವಾಗಿ ಸುಮಾರು ಪುರಾಣ ಕಥೆಗಳೂ ಇದ್ದು. ದೇವಿ ದುಷ್ಟ ಮಹಿಷಾಸುರನ ಕೊಂದದು ಇದೇ ದಿನ ಆಡ. ಸೀತಾದೇವಿಯ ಕದ್ದ ಲಂಕೇಶ ರಾವಣನ ಶ್ರೀರಾಮಚಂದ್ರ ಸಂಹಾರ ಮಾಡಿದ್ದದೂದೆ ಇದೇ ದಿನ. ಪಾಂಡವರು ಅಜ್ಞಾತವಾಸ ಮುಗುಶಿ ಹೆರ ಬಂದದೂದೆ ವಿಜಯದಶಮಿ ದಿನ ಹೇಳಿ ಹೇಳುದು ಕೇಳಿದ್ದೆ.
ವಿಜಯದಶಮಿಯ ವಿದ್ಯಾದಶಮಿ ಹೇಳಿಯೂ ಹೇಳ್ತವು. ಹೊಸ ವಿದ್ಯೆ ಕಲಿವಲೆ ಅತ್ಯಂತ ಪ್ರಸಕ್ತವಾದ ದಿನ ವಿದ್ಯಾದಶಮಿ. ಸಣ್ಣ ಮಕ್ಕೊಗೆ ಅಕ್ಷರಾಭ್ಯಾಸ ಮಾಡ್ಸುದು ವಿದ್ಯಾದಶಮಿಗೆ. ಮನೆಯ ಹಿರಿಯರು ಉದಿಯಪ್ಪಗ ಸರಸ್ವತೀ ಪೂಜೆ ಮಾಡಿ, ಮಕ್ಕೊಗೆ ಅಕ್ಷರಾಭ್ಯಾಸ ಮಾಡ್ಸಿ, ಜ್ಞಾನಪ್ರಪಂಚಕ್ಕೆ ಹೋಪ ದಾರಿ ತೋರ್ಸುತ್ತವು.
ಪುಸ್ತಕಪೂಜೆ ಮಾಡಿ , ಪ್ರಸಾದದೊಟ್ಟಿಂಗೆ ಕೊಡುವ ಪುಸ್ತಕ ಬಿಡ್ಸಿ ಒಂದಿಷ್ಟಾದರು ಓದೆಕು ಹೇಳಿ ನಿಯಮ.
ಈಗ ಪುಸ್ತಕ ಪೂಜೆ ಮಾಡುವ ಮನೆಗಳೇ ಅಪರೂಪ ಆಯಿದು. ಹಿರಿಯರಿಪ್ಪ ಮನೆಗಳಲ್ಲಿ ಮಾಂತ್ರ ಪ್ರಾಕು ಪದ್ದತಿ ತಪ್ಪದ್ದ ಹಾಂಗೆ ನಡೆಶಿಕೊಂಡು ಬತ್ತವು. ಹಿರಿಯರು ಪಾಲಿಸಿಕೊಂಡು ಬಂದ ನಿಯಮಂಗಳ ಪಾಲಿಸಿಕೊಂಡು ಬಪ್ಪ ಮನಸ್ಸು, ಬುದ್ಧಿ ಕಿರಿಯರಿಂಗೂ ಆ ದೇವಿ ದಯಪಾಲಿಸಲಿ.
ಸಂಗೀತ, ನೃತ್ಯದ ಹಾಂಗಿದ್ದ ಕಲೆ ಒಲುದು ಬರೆಕಾದರೂ ದೇವಿಯ ಅನುಗ್ರಹ ಬೇಕು. ಕೆಲವು ಜೆನಕ್ಕೆ ಎಷ್ಟು ಕಷ್ಟಪಟ್ಟರೂ ಸಂಗೀತದ ಹಾಂಗಿದ್ದ ಲಲಿತಕಲೆ ಅಭ್ಯಾಸ ಮಾಡ್ಲೆಡಿತ್ತಿಲ್ಲೇಕೇಳಿ ಒಂದು ಸಂಶಯ ಮನಸ್ಸಿನ ಕೊರಕ್ಕೊಂಡಿದ್ದತ್ತು.
‘ ಶ್ಯಾಮಾಲಾ ದೇವಿಯ ಅನುಗ್ರಹ ಇಪ್ಪವಕ್ಕೆ ಮಾತ್ರ ಸಂಗೀತ, ವಾಕ್ಪಟುತ್ವ ಸಿದ್ಧಿಸುದು ಹೇಳಿ ಶ್ರೀಗುರುಗಳ ಪ್ರವಚನಲ್ಲಿ ಕೇಳಿಯಪ್ಪಗ ಆ ಪ್ರಶ್ನೆಗೆ ಉತ್ತರ ಸಿಕ್ಕಿತ್ತು.
ನಮ್ಮ ಗುರುಗಳ ನವರಾತ್ರ ನಮಸ್ಯಾದ ಲಲಿತಾಸಹಸ್ರನಾಮ ಪ್ರವಚನ ಸಾಗರದ ರಾಘವೇಶ್ವರ ಸಭಾಭವನಲ್ಲಿ ನಡೆತ್ತಾಯಿದ್ದು. ಪ್ರತಿದಿನವು ಅದೆಷ್ಟು ಚೆಂದಕೆ, ಅದ್ಭುತವಾಗಿ ಪ್ರವಚನ ಮಾಡ್ತವು ನಮ್ಮ ಗುರುಗೊ. ಲಲಿತಾಸಹಸ್ರನಾಮ ಬಾಯಿಪಾಠ ಬಪ್ಪ ಎಷ್ಟೋ ಜೆನಕ್ಕೆ ಅದರ ಅರ್ಥ ಗೊಂತಿರ್ತಿಲ್ಲೆ. ಈ ಪ್ರವಚನ ಕೇಳಿಯಪ್ಪಗ ಲಲಿತಾಸಹಸ್ರನಾಮದ ಪ್ರತಿಯೊಂದು ಸಾಲಿನ ಅರ್ಥವೂ ಗೊಂತಕ್ಕು. ಅಷ್ಟು ಮಾಂತ್ರ ಅಲ್ಲ, ನಮ್ಮ ಮನಸ್ಸಿಲ್ಲಿ ಬಪ್ಪ ಸುಮಾರು ಸಮಸ್ಯೆಗೊಕ್ಕೂ ಸುಲಭವಾದ ಪರಿಹಾರವು ಸಿಕ್ಕುತ್ತು.
ಪರಮಶಿವ ಮನ್ಮಥನ ಸುಟ್ಟ ಬೂದಿಲಿ ಹುಟ್ಟಿ ಬಂದ ಭಂಡಾಸುರನ ಕಥೆ,ಆ ಅಸುರನ ಕೊಲ್ಲಲೆ ಲಲಿತಾತ್ರಿಪುರಸುಂದರೀ ದೇವಿ ಜನ್ಮವೆತ್ತಿ ಬಂದ ಪುಣ್ಯ ಕಥನವ ಎಷ್ಟು ಸರ್ತಿ ಕೇಳಿದರೂ ಸಾಕಾವ್ತಿಲ್ಲೆ. ಅಲ್ಲಿಗೆ ಹೋಗಿ, ಕಾರ್ಯಕ್ರಮಲ್ಲಿ ಭಾಗವಹಿಸಿ, ಪ್ರತ್ಯಕ್ಷ ಕೇಳುವವು ನಿಜಕ್ಕೂ ಪುಣ್ಯವಂತರು. ಅಂದರೂ ಹೋಗಿ ಕೇಳ್ಲೆಡಿಯದ್ದವಕ್ಕೆ ಜಾಲತಾಣದ ಮೂಲಕವು ಕೇಳುವ ಅವಕಾಶ ಸಿಕ್ಕಿದ್ದು ಖಂಡಿತಾ ಪುಣ್ಯವೇ ಹೇಳಿ ಗ್ರೇಶಿ ಹೋವ್ತು.
ದುಷ್ಟಶಿಕ್ಷಕಿಯಾಗಿ, ಶಿಷ್ಟರಕ್ಷಕಿಯಾಗಿ, ಭಕ್ತರು ಬಯಸಿದ್ದರ ಎಲ್ಲ ಕೊಡುವ ಜಗಜ್ಜನನಿ ಲಲಿತಾಂಬಿಕೆಯ ಪುಣ್ಯಕಥೆಯ ಈ ದಿನಂಗಳಲ್ಲಿ ಮನನ ಮಾಡುವ°
ಪ್ರಸನ್ನಾ ವಿ. ಚೆಕ್ಕೆಮನೆ