ಹವಿ – ಸವಿ ತೋರಣ ೮ ಬೆಣಚ್ಚಿನ ಹಬ್ಬ ದೀಪಾವಳಿ

ಲೇಖನ

 

ದೀಪಾವಳಿ ಹೇಳುಗ ಮನಸ್ಸಿಂಗೆ ನೆಂಪಪ್ಪದೇ ಸಾಲು ಸಾಲು ದೀಪಂಗೊ, ಕೆಮಿಗೆ ಬಡಿವ ಪಟಾಕಿಯ ಶಬ್ದಂಗೊ, ದುರುಸು, ನಕ್ಷತ್ರ ಕಡ್ಡಿಗಳ ಸುರುಸುರು ಅಜನೆ (ಶಬ್ದ), ಬಲಿಯೇಂದ್ರನ ಪ್ರತಿಕೃತಿ, ಅದಕ್ಕೆ ಪೂಜೆ, ಗೋಪೂಜೆಯ ಸಂಭ್ರಮ, ಉದ್ದಿನ ಮೂಡೆ ಕೊಟ್ಟಿಗೆ, ಮುಳ್ಳುಸೌತೆ ಕೊಟ್ಟಿಗೆ, ಸೇಮಗೆ, ಕಾಯಾಲು, ರಸಾಯನ ಹೇಳಿ ಎಲ್ಲ ಒಟ್ಟು ಗೌಜಿಯೋ ಗೌಜಿ. ಅದಕ್ಕೇ ಆಗಿಕ್ಕು ಬೇರೆ ಎಷ್ಟು ಹಬ್ಬಂಗೋ ದೀಪಾವಳಿಗೆ ಮಾಂತ್ರ ಹಬ್ಬ ಹೇಳುದು.
ಹಾಂಗಾಗಿಯೇ ಬೇರೆ ಹಬ್ಬಗಳಿಂದ ಹೆಚ್ಚು ಮಹತ್ವ ಈ ದೀಪಾವಳಿ ಹಬ್ಬಕ್ಕೆ. ಮಳೆಕಾಲ ಮುಗುದು ಬೆಳೆಗೂ ಎಲ್ಲ ಫಲ ಸಮೃದ್ಧಿಯ ಕೊಡುವ ಕಾಲದ ಹಬ್ಬ ಇದು. ದೀಪಾವಳಿ ಹಬ್ಬದ ಆಚರಣೆಯೂ ಮೂರು ದಿನ ಇದ್ದು.

ದೀಪಾವಳಿ ಹಬ್ಬದ ಹೆಸರಿನ ಹಾಂಗೆ ದೀಪಂಗಳ ಹೊತ್ಸುವ ಹಬ್ಬ. ಮನೇಲಿ, ಜೆಗಿಲಿ ಕರೆಲಿ, ಹಟ್ಟಿ ಹತ್ತರೆ, ಎಲ್ಲಾ ಸಾಲು ಸಾಲು ದೀಪಂಗಳ ಹೊತ್ಸಿ ಮಡುಗುವ ಸಂಭ್ರಮದ ದಿನಂಗೊ ಇದು. ದೀಪಾವಳಿ ಹಬ್ಬದ ಸಂದೇಶವೇ ಕತ್ತಲೆಂದ ಬೆಣಚ್ಚಿನ ಕಡೆಗೆ ಹೋಪದು. ಒಟ್ಟಿಂಗೆ ಸಂತೋಷ ಸಂಭ್ರಮದ ಆಚರಣೆಯೂ ಇದ್ದು. ಬೇರೆ ಬೇರೆ ಊರಿಲ್ಲಿ ರಜ್ಜ ರಜ್ಜ ಬದಲಾವಣೆ ಇದ್ದರೂ ದೀಪಾವಳಿ ಹಬ್ಬಲ್ಲಿ ದೀಪ ಹೊತ್ಸುವ ಕ್ರಮ ಎಲ್ಲ ಊರಿಲಿಯು ಇದ್ದು.

ಸುರುವಾಣ ದಿನ ಮಕ್ಕಳ ಹಬ್ಬ ಹೇಳುವ ನರಕ ಚತುರ್ದಶಿ. ಈ ದಿನ ಉದೆಕಾಲಕ್ಕೆ ಎದ್ದು ಎಣ್ಣೆ ಕಿಟ್ಟಿ ಮೀವ ಸಂಭ್ರಮ. ಲೋಕ ಕಂಟಕ ಆಗಿತ್ತಿದ್ದ ನರಕಾಸುರನ ಕೃಷ್ಣ ದೇವರು ಸಂಹಾರ ಮಾಡಿದ ದಿನದ ನೆಂಪಿಂಗೆ ಬೇಕಾಗಿ ಈ ದಿನ ಎಲ್ಲೋರು ಎಣ್ಣೆಕ್ಕಿಟ್ಟಿ ಮೀವದು ಹೇಳಿ ಹಿರಿಯರು ಹೇಳುವ ಕಥೆ.

ಮಕ್ಕಳ ಹಬ್ಬ ಹೇಳುಗ ನೆಂಪಪ್ಪದೇ ಬಾಲ್ಯ. ಉದೇಕಾಲಕ್ಕೆ ಎದ್ದು ಎಣ್ಣೆ ಕಿಟ್ಟಿ ಮೀವ ಸಂಭ್ರಮ. ಮನೆ ಹಿರಿಯರು ಮುನ್ನಾಣದಿನವೇ ಬೆಶಿನೀರ ಕೊಟ್ಟಗೆ ಶುಭ್ರಮಾಡಿ ನೀರು ತುಂಬ್ಸಿ ಮಡುಗ್ಗು. ಉತ್ತರ ಕನ್ನಡದ ಹೊಡೆಲಿ ಚೆಂದದ ಹೂಗಿನ ಅಲಂಕಾರ ಮಾಡಿ ರಂಗೋಲಿ ಹಾಕುತ್ತವು. ನಮ್ಮಲ್ಲಿ ಆ ಕ್ರಮ ಇಲ್ಲದ್ರೂ, ಉದಿಯಪ್ಪಗ ಬೇಗ ಎದ್ದು ಬೆಶಿ ನೀರಿಂಗೆ ಕಿಚ್ಚು ಹಾಕಿ ಮಕ್ಕಳ ಬೇಗನೆ ಏಳ್ಸಿ ಅವರ ಮೈಗೆ ಎಣ್ಣೆ ಕಿಟ್ಟುವ ಗೌಜಿ.

ಹಬ್ಬ ಹೇಳಿದರೆ ಮನೆ ಹೆಮ್ಮಕ್ಕೊಗೆ ರಾಶಿ ಕೆಲಸ ಇರ್ತು. ಹಾಂಗಾಗಿಯೇ ಉದಿಯಪ್ಪಗ ಏಳ್ಲೆ ಉದಾಸೀನ ಮಾಡುವ ಮಕ್ಕಳ ಹಿಡುದು ಏಳ್ಸಿ, ಅವರ ಹಠ, ಕೂಗಾಟದ ಎಡೇಲಿ ಎಣ್ಣೆಕಿಟ್ಟಿ ಮೀಶಿಯಪ್ಪಗ ಇ‌ನ್ನೊಂದು ಹಬ್ಬ ಮಾಡಿದಷ್ಟು ಬೊಡಿಗು.‌ ಅಂದರೂ ಆ ದಿನ ಮನೆಯವೆಲ್ಲ ಎಣ್ಣೆ ಕಿಟ್ಟಿ ಮೀವಲಿದ್ದು.

ಮೀಯಾಣ ಆಗಿ ಉದ್ದಿನ ಕೊಟ್ಟಿಗೆಯ ರಸಾಯನವೋ, ಕಾಯಾಲೋ ಹಾಕಿ ತಿಂಬ ಗೌಜಿ.
ಹಬ್ಬದ ನಿಜವಾದ ಗೌಜಿ ಸುರುವಪ್ಪದೇ ಇರುಳಪ್ಪಗ. ದೀಪಾವಳಿಯ ಹೆಸರಿನ ಹಾಂಗೆ ದೀಪ ಹೊತ್ಸುವ ಗೌಜಿ. ಮನೆಯ ಸುತ್ತಮುತ್ತ ಎಲ್ಲಾ ಸಣ್ಣ ಪೆರ್ಣಾತೆ ( ಹಣತೆ) ಹೊತ್ಸಿ ಮಡುಗುದು. ಮೊದಲಿಂಗೆ ಈಗಾಣ ಹಾಂಗೆ ವಿದ್ಯುತ್ ಇಲ್ಲದ್ದ ಕಾಲಲ್ಲಿ ಜಾಲಿಂಗೆ ಬೆಣಚ್ಚು ಕಾಣೆಕಾರೆ ಹೀಂಗೆ ಪೆರ್ಣಾತೆ ಹೊತ್ಸೆಕಷ್ಟೆ.

ದೀಪ ಹೊತ್ಸಿಕ್ಕಿ ಬಲಿಯೇಂದ್ರನ ಪೂಜೆಯ ಸಂಭ್ರಮ. ಬಲಿ ಚಕ್ರವರ್ತಿಯ ಕತೆ ನಮಗೆಲ್ಲ ಗೊಂತಿದ್ದು. ಬಲಿ ಚಕ್ರವರ್ತಿ ಹೇಳಿದರೆ ಭಾರಿ ಧರ್ಮಿಷ್ಠ ರಾಜ. ಇಂದ್ರ ಪದವಿ ಬಯಸಿ ನೂರು ಅಶ್ವಮೇಧ ಯಾಗ ಮಾಡ್ಲೆ ಹೆರಟಪ್ಪಗ ದೇವೇಂದ್ರಂಗೆ ಹೆದರಿಕೆ ಆತು. ಮಹಾವಿಷ್ಣುವಿನ ಹತ್ತರೆ ಹೋಗಿ ಅಡ್ಡ ಬಿದ್ದ. ಭಕ್ತ ವತ್ಸಲ ಮಹಾವಿಷ್ಣು ಪುಟ್ಟು ಮಾಣಿ ವಾಮನನಾಗಿ ಅವತಾರ ಎತ್ತಿ ಬಂದ. ಮಹಾಬಲಿ ಯಾಗ ಮಾಡುವಲ್ಲಿಗೆ ಬಂದು ಮೂರು ಅಡಿ ಜಾಗೆ ಬೇಕು ಹೇಳಿ ಕೇಳಿಯಪ್ಪಗ ಬಲಿ ಕೊಡ್ಲೆ ಒಪ್ಪಿದ°. ಅಷ್ಟರವರೆಗೆ ಪುಟ್ಟು ಮಾಣಿಯಾಗಿದ್ದ ವಾಮನ ಕೂಡಲೇ ಇಷ್ಟೆತ್ತರ ಬೆಳದ°. ಭೂಮಿ, ಆಕಾಶಂಗಳ ಎರಡೇ ಪಾದಲ್ಲಿ ಅಳದು, ಮೂರನೇ ಅಡಿ ಎಲ್ಲಿ ಮಡುಗೆಕು ಕೇಳಿಯಪ್ಪಗ ಅವನ ತಲೆಯನ್ನೇ ವಾಮನನ ಪಾದಕ್ಕೆ ಒಡ್ಡಿದಾ°ಡ ಮಹಾಬಲಿ.

ಕೇಳಿದ ಕೂಡ್ಲೇ ಮೂರಡಿ ಜಾಗೆ ದಾನ ಮಾಡಿದ ಬಲಿಯ ಶ್ರದ್ಧೆಗೆ ಮೆಚ್ಚಿ ಅವನ ಪಾತಾಳಕ್ಕೆ ಮೆಟ್ಟಿ ತಗ್ಗುಸುವ ಮೊದಲೇ ವರ್ಷಕ್ಕೊಂದರಿ ಪ್ರೀತಿಯ ಪ್ರಜೆಗಳ ಕಾಂಬಲೆ ಭೂಮಿಗೆ ಬಪ್ಪಲೆ ವಾಮನ ವರ ಕೊಟ್ಟ °. ಹಾಂಗಾಗಿ ದೀಪಾವಳಿ ಹಬ್ಬದ ಸಮಯಲ್ಲೇ ಅವ° ಬಪ್ಪದು ಹೇಳುವ ನಂಬಿಕೆ. ಅದಕ್ಕೇ ತೋಟಂದ ಬಾಳೆ ಸೆಸಿಯ ತಂದು, ಅದರ ಹೆರಾಣ ಚೋಲಿ ತೆಗದು ಆ ದಂಡಿಂಗೆ ಮಸಿಗಟ್ಟಿಲಿ ಕಣ್ಣು ಬಾಯಿ ಬರದು, ಅಡಕೆ ಮರದ ಸಣ್ಣ ಸಣ್ಣ ಸಲಕೆ ತುಂಡಿನ ಕೈ ಹಾಂಗೆ ಅಡ್ಡಕೆ ಕುತ್ತಿ ಕೈ ಮಾಡಿ, ಮನುಶ್ಯನ ಆಕೃತಿಗೆ ತಂದು, ತುಳಸಿ ಕಟ್ಟೆಯ ಹತ್ತರೆ ನೆಲಕ್ಕೆ ಒಂದು ಸಣ್ಣ ಹೊಂಡ ಮಾಡಿ, ಸಲಕೆ ತುಂಡು ಕುತ್ತಿ ಬಲಿಯೇಂದ್ರನ ಕೂರ್ಸುದು. ಆ ಚಂದದ ಬಲಿಯೇಂದ್ರನ ಕೊರಳಿಂಗೆ ಪಾರೆ ಹೂಗಿನ ಮಾಲೆ, ಚೆಂಡುಮಲ್ಲಿಗೆ ಹೂಗಿನ ಮಾಲೆ ಹಾಕಿ ಅಲಂಕಾರ ಮಾಡುದು. ತಲೆಗೂದೆ ಪಾರೆ ಹೂಗಿನ ಅಥವಾ ರಥಪುಷ್ಪದ ಒಂದು ಜೊಟ್ಟು. ಸಲಕ್ಕೆ ಕುತ್ತಿದ ಕೈಗೆಲ್ಲ ದಂಡಿನ ಹಂಬೆಯ ಹಣತೆಯ ಹಾಂಗೆ ಕುತ್ತಿದಲ್ಲೆಲ್ಲ ನೆಣೆ ಹಾಕಿ ಪೂಜೆಗಪ್ಪಗ ಹೊತ್ಸುವ ಕ್ರಮ. ಅಷ್ಟಪ್ಪಗ ಈ ಬಲಿಯೇಂದ್ರನ ಭಾರೀ ಚೆಂದ ಕಾಂಗು.

ಮನೆ ಯಜಮಾನ ಇರುಳಾಣ ಪೂಜೆ ಆದ ಮತ್ತೆ , ಜಾಲಿಲ್ಲಿಪ್ಪ ಬಲಿಯೇಂದ್ರಂಗೂ ಪೂಜೆ ಮಾಡುಗು. ಇರುಳಿಂಗೆ ಮಾಡಿದ ತಿಂಡಿಯ ಬಲಿಯೇಂದ್ರಂಗೆ ನೈವೇದ್ಯ ಮಾಡುವ ಕ್ರಮವೂ ಇದ್ದು. ಪೂಜೆ ಮಾಡಿಕ್ಕಿ ಮನೆಯವೆಲ್ಲ ಸೇರಿ
” ಬಲಿಯೇಂದ್ರಾ..ಬಲಿಯೇಂದ್ರಾ..ಹರಿಯೋ..ಹರಿ…” ಹೇಳುದು.

ಎಷ್ಟು ಚಂದದ ನೆಂಪುಗೊ. ಮದಲಿಂಗೆ ಹೆಚ್ಚಿನ ಮನೆಗಳಲ್ಲಿದ್ದರೂ, ಈಗ ಬಲಿಯೇಂದ್ರನ ಪೂಜೆ ಮಾಡುವ ಮನೆಗಳೇ ಅಪರೂಪ ಆಯಿದು. ಪೂಜೆ ಮಾಡುಗ ಗೌಜಿ ಕಟ್ಟಿ ಸೊಕ್ಕಲೆ ಮಕ್ಕಳ ಸಂಖ್ಯೆ ಇನ್ನೂ ಕಮ್ಮಿ ಆಯಿದು. ಹಾಂಗಾಗಿ ಎಲ್ಲವೂ ಕಟ್ಟುಕಟ್ಲೆ ಆಗಿ ಬಿಟ್ಟಿದು.

ಹಬ್ಬದ ಅಮಾವಾಸ್ಯೆ ದಿನ ಲಕ್ಷ್ಮೀ ಪೂಜೆ ಮಾಡುದು. ದೀಪ ಹೊತ್ಸುವ ಗೌಜಿಯೊಟ್ಟಿಂಗೆ ಮಕ್ಕೊಗೆ ಪಟಾಕಿ ಹೊಟ್ಸುವ ಸಂಭ್ರಮವೂ ಇದ್ದು. ಲಕ್ಷ್ಮೀ ಪಟಾಕಿ, ಓಲೆ ಪಟಾಕಿ, ಬೀಡಿ ಪಟಾಕಿ ಹೇಳಿ ಹಳೆ ನಮೂನೆಯ ಪಟಾಕಿಗಳೊಟ್ಟಿಂಗೆ ಈಗ ಬೇರೆ ಬೇರೆ ನಮೂನೆಯ ಪಟಾಕಿಗಳು ಇದ್ದು. ಅದರೊಟ್ಟಿಂಗೆ ದುರುಸು, ನಕ್ಷತ್ರ ಕಡ್ಡಿಗಳ ಹೊತ್ಸುವ ಕೊಶಿಯುದೆ.

ಮರುದಿನ ಪಾಡ್ಯ. ಗೋಪೂಜೆಯ ದಿನ. ಹಟ್ಟಿಲಿಪ್ಪ ದನಗಳ ಮೀಶಿ, ಅವರ ಮೋರೆಗೊಂದು ಕುಂಕುಮ ಬೊಟ್ಟು ಹಾಕಿ, ಕೊರಳಿಂಗೆ ಹೂಗಿನ ಮಾಲೆ ಹಾಕಿ ಅಲಂಕಾರ ಮಾಡ್ಲಿದ್ದು. ಗೋಮಾತೆಗೆ ನಮ್ಮ ಸಂಸ್ಕೃತಿಲಿ ಪೂಜನೀಯ ಸ್ಥಾನ ಇಪ್ಪ ಕಾರಣಂದಲೇ ಹಬ್ಬದ ದಿನ ಅದಕ್ಕೆ ಪೂಜೆ ಮಾಡಿ, ಮುಳ್ಳುಸೌತೆ ಕೊಟ್ಟಿಗೆಯನ್ನೋ, ಉದ್ದಿನ ಕೊಟ್ಟಿಗೆಯನ್ನೋ ಅಥವಾ ಅವರವರ ಮನೆಗಳಲ್ಲಿ ಮಾಡಿದ ತಿಂಡಿಗಳ ಕೊಟ್ಟು ಕೊಶಿಪಡುದು.

ಕೆಲವು ದಿಕೆ ಹಬ್ಬದೊಟ್ಟಿಂಗೆ ತುಳಸಿ ಪೂಜೆಯನ್ನು ಮಾಡ್ತವು. ಇಲ್ಲದ್ರೆ ಉತ್ಥಾನ ದ್ವಾದಶಿಯ ದಿನ ಮಾಡುದು. ಅಂತೂ ಮೂರು ದಿನವುದೆ ದೀಪ ಹೊತ್ಸಿ, ಪಟಾಕಿ ಹೊಟ್ಸಿ ಗೌಜಿ ಮಾಡ್ಲಿದ್ದು. ಎಲ್ಲ ಆಗಿ ಬಿದಿಗೆ ದಿನ ಉದೆಕಾಲಕ್ಕೆ ಬಲಿಯೇಂದ್ರನ ಕಳ್ಸಿ ಕೊಡುದು. ಬಲಿಯೇಂದ್ರ ರಾಕ್ಷಸರ ರಾಜ ಆದ ಕಾರಣವೋ ಗೊಂತಿಲ್ಲೆ, ಅದರ ಆರೂದೆ ಅಂತೆ ಮುಟ್ಟುವ ಕ್ರಮ ಇಲ್ಲೆ. ಮುಟ್ಟಿದರೆ ಮಿಂದಿಕ್ಕಿ ಬರೆಕಕ್ಕು ಹೇಳುವ ಕಾರಣಕ್ಕೆ ಮಕ್ಕೊ ಬಲಿಯೇಂದ್ರನ ಮುಟ್ಟುವ ಸುದ್ದಿಗೆ ಹೋಗವು. ಬಲಿಯೇಂದ್ರನ ಪಾತಾಳಕ್ಕೆ ಕಳ್ಸಿ ಕೊಡುಗ ಒಂದು ಮುಷ್ಟಿ ಅಕ್ಕಿಯ ಬೆಳಿ ವಸ್ತ್ರಲ್ಲಿ ಕಟ್ಟಿ ಅದರ ಕೈ ಗೆ ಕಟ್ಟಿಕ್ಕಿ ‘ ಇನ್ನಾಣ ವರ್ಷ ಬೇಗನೆ ಬಾ’ ಹೇಳಿ ತುಳುವಿಲ್ಲಿ ಹೇಳುವ ಕ್ರಮ.

ಅಲ್ಲಿಗೆ ಈ ವರ್ಷದ ಹಬ್ಬದ ಗೌಜಿ ಮುಗುದ ಲೆಕ್ಕ. ತುಳುನಾಡಿನ ಒಟ್ಟಿಂಗೆ ಇಪ್ಪ ನಮ್ಮಲ್ಲಿ ದೀಪಾವಳಿ ಆಚರಣೆ ಒಂದು ಕ್ರಮ ಆದರೆ ಕೆಲವು ದಿಕೆ ವೆತ್ಯಾಸ ಇರ್ತು. ಕೆಲವು ಆಚರಣೆಗೊ, ಸಂಪ್ರದಾಯಂಗೊ ನಮ್ಮಿಂದ ಬಿಟ್ಟು ಹೊವ್ತಾಯಿದ್ದು. ಹಳ್ಳಿಯ ಮನೆಗಳ ಹಬ್ಬದ ಆಚರಣೆ ವಿಶಯಂಗಳ ಬಗ್ಗೆ ಸರಿಯಾದ ಮಾರ್ಗದರ್ಶನ ಕೊಡುವವಿಲ್ಲೆ, ಆಚರಿಸುವವು ಅಷ್ಟೂ ಇಲ್ಲೆ ಹೇಳುವ ಸ್ಥಿತಿ ಕಾಣ್ತಾಯಿದ್ದು. ಅಂದರೂ ಕೆಲವು ಮನೆಗಳಲ್ಲಿ ಇಂದೂದೆ ಹಬ್ಬ, ಗೋಪೂಜೆಗಳ ಕ್ರಮ ಪ್ರಕಾರ ಮಾಡ್ತವು ಹೇಳುದೇ ಸಂತೋಷ.

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *