ಹರಿಯಿತು ಮಾನವೀಯತೆಯ ‘ಅಮೃತ ಧಾರೆ’ –  ಆಯಿತು ಬಜಕೂಡ್ಲು ಗೋಶಾಲೆ : ಶೀಲಾಲಕ್ಷ್ಮೀ ಕಾಸರಗೋಡು

ಲೇಖನ

1998ರಲ್ಲಿ ನಮ್ಮ ಸಂಸ್ಥಾನ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಪೀಠಾರೋಹಣ. 2000ದಲ್ಲಿ ಶ್ರೀಗಳಿಂದ ಘೋಷಣೆಯೊಂದು ಹೊರಬಿತ್ತು `ಗೋವಿಗಾಗಿ ನಾವು, ಗೋವಿರುವಲ್ಲಿ ನಾವು, ಗೋವೊಂದೇ ನಮ್ಮ ಗಮ್ಯ, ಗುರಿ’. ಹಿರಿಯರೊಬ್ಬರು ಇದರ ಬಗ್ಗೆ ತಮ್ಮ ಅನಿಸಿಕೆಯನ್ನು ಹೇಳಿದ್ದರು. ಅದು ಇಂದಿಗೂ ನನ್ನ ಕಿವಿಯಲ್ಲಿ ಮಾರ್ದನಿಗೊಳ್ಳುತ್ತಿದೆ,
`ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ. ಅಂಬಿಕಾತನಯದತ್ತರ ಈ ಸಾಲು ಬುದ್ಧನನ್ನು ಉದ್ದೇಶಿಸಿದ್ದಾದರೂ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳಿಗೆ ಬಹಳ ಚೆನ್ನಾಗಿ ಹೊಂದುತ್ತದೆ.’

 


ಭಾರತಮಾತೆಯ ಪೀತಾಂಬರ ಗೋನೆತ್ತರೋಕುಳಿಯಲ್ಲಿ ಒದ್ದೆಮುದ್ದೆಯಾಗಿ ದುರ್ನಾತ ಬೀರುತ್ತಿದೆ. ಅದನ್ನು ಕಿತ್ತೊಗೆಯಬೇಕು. ಆಕೆ ಶುಭ್ರವಸನಧಾರಿಣಿಯಾಗಬೇಕು.  ಭಾರತಮಾತೆಯ ಸುಪುತ್ರರೊಳಗೆ ಇಂತಹುದೊಂದು ತುಡಿತವಿದ್ದುದು ನಿಜ. ಆದರೆ ಅದಕ್ಕೊಂದು ಸ್ಪಷ್ಟತೆಯಿರಲಿಲ್ಲ. ಬೆಕ್ಕಿನ ಕೊರಳಿಗೆ ಘಂಟೆಯನ್ನು ಕಟ್ಟುವವರು ಯಾರು?

 

ಸೂತ್ರಧಾರರಾದರು ಶ್ರೀಸಂಸ್ಥಾನ. ಪುಣೆಯಿಂದ ಬಂದ ಮಹಾನಂದಿ ಪ್ರೇರಣೆಯಾಯಿತು. ಪ್ರೇರಣೆಯ ಜೊತೆಜೊತೆಗೆ ಪ್ರೇಮವೂ ತುಂಬಿ ಹರಿಯಿತು. ನೂರಾರು, ಸಾವಿರಾರು, ಲಕ್ಷ ಲಕ್ಷ ಸಂಖ್ಯೆಯಲ್ಲಿ ತೋಳೇರಿಸಿ ಬಂದೇಬಂದರು ಗೋಪ್ರೇಮಿಗಳು, ಗುರುಪ್ರೇಮಿಗಳು. ಮಹತ್ತರ ಉದ್ದೇಶವೊಂದಕ್ಕಾಗಿ ಒಗ್ಗಟ್ಟು, ಭಕ್ತಿ, ಪ್ರೀತಿಗಳು ಮಾನವ ಹೃದಯದಲ್ಲಿ ಮಡುಗಟ್ಟಿದಾಗ ಆತ  ಅದ್ಭುತ ಸಮಾಜಮುಖಿ ಕೆಲಸಗಳನ್ನು ಮಾಡಬಲ್ಲ. ಗುರು ಮುಂದೆ ಗುರಿ ಹಿಂದೆ. ಪರಿಣಾಮ? ಕರ್ನಾಟಕದಾದ್ಯಂತ ಮಧುಗಿರಿ, ಹುಬ್ಬಳ್ಳಿ, ಮುಧೋಳ, ಶಿರಾಲಿ, ಗೋವಿಹಾರ, ಮುಳಿಯ ಮತ್ತು ಕೇರಳದ ಬಜಕೂಡ್ಲು, ಪೂಚಕ್ಕಾಡುಗಳಲ್ಲಿ ಕಾರ್ಯಾಚರಿಸುತ್ತಿರುವ ಹಲವಾರು ಗೋಶಾಲೆಗಳು.

 

ಗೋವಧೆ, ಇತಿಮಿತಿಯಿಲ್ಲದ ಕಸಾಯಿಖಾನೆಗಳು, ಗೋಮಾಂಸಭಕ್ಷಣೆಗಳೇ ಜೀವನ ವಿಧಾನವಾಗಿರುವ ರಾಜ್ಯವೊಂದರಲ್ಲಿ ಗೋಶಾಲೆಗಳನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸುವುದು ಹುಲಿಯ ಹಾಲನ್ನು ತಂದಂತೆ. ಕೇರಳ ರಾಜ್ಯದಲ್ಲಿರುವ ಕನ್ನಡಮ್ಮನ ಮಕ್ಕಳ ಊರು ಕಾಸರಗೋಡು. ಜಿಲ್ಲೆಯ ಪರಿಧಿಯಿನ್ನೇನು ಮುಗಿಯಬೇಕು ಎನ್ನುವಲ್ಲಿ ನೆಲೆಗೊಂಡ ಪೆರ್ಲವೆಂಬ ಪುಟ್ಟ ಪಟ್ಟಣದ ಮಗ್ಗುಲಿನಲ್ಲಿಯೇ ಬಜಕೂಡ್ಲು ಎಂಬ ಹೆಸರಿನ ಪುಟ್ಟ ಹಳ್ಳಿ. ಆ ಹಳ್ಳಿಯಲ್ಲೊಂದು ಅಮೃತಧಾರಾ ಗೋಶಾಲೆ. ಕಾಸರಗೋಡು ತಳಿಯ ಗೋವು ಅಳಿವಿನಂಚಿನಲ್ಲಿರುವ ಅಪಾಯವನ್ನರಿತು ಸೃಷ್ಟಿಯಾದದ್ದು ಕಾಸರಗೋಡು ಬ್ರೀಡ್ ಕನ್ಸರ್ವೇಶನ್ ಚಾರಿಟೆಬಲ್ ಟ್ರಸ್ಟ್. ಶ್ರೀಗಳು ಸರ್ವಸಂರಕ್ಷಕರಾಗಿ, ಅವರ ನಾಯಕತ್ವ, ಮಾರ್ಗದರ್ಶನ, ಆದೇಶ, ಆಶೀರ್ವಾದಗಳ ಫಲವಾಗಿ ಕಾಸರಗೋಡು ತಳಿಯ ಸಂರಕ್ಷಣೆ, ಸಂವರ್ಧನೆ, ಸಂಶೋಧನೆ ಹಾಗೂ ಸಂಬೋಧನೆಗಳಿಗಾಗಿ ಇದು ದುಡಿಯುತ್ತಿದೆ.

 

2004ರಲ್ಲಿ ಗೋಶಾಲೆ ಪ್ರಾರಂಭಗೊಂಡಿದ್ದು ಬಜಕೂಡ್ಲು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಪರಿಸರದಲ್ಲಿ. ಅಂದು ಶ್ರೀಸವಾರಿ ಕಾಸರಗೋಡಿಗೆ ಬಂದಿದ್ದಾಗ ಗೋಶಾಲೆಯ ನಿರ್ಮಾಣ ಕಾರ್ಯಪ್ರಗತಿಯನ್ನು ವೀಕ್ಷಿಸಲು ಶ್ರೀಗಳು ಬಜಕೂಡ್ಲಿಗೆ ಆಗಮಿಸಿದ್ದರು. ವಾಹನದಿಂದಿಳಿದು ದೇವಸ್ಥಾನದೆಡೆಗೆ ಹೆಜ್ಜೆಯಿಟ್ಟರೋ ಇಲ್ಲವೋ, ಅಲ್ಲೆಲ್ಲೋ ಸುತ್ತಮುತ್ತಲಿನ ಗುಡ್ಡದಲ್ಲಿ ಮೇಯುತ್ತಿದ್ದ ಕಾಸರಗೋಡು ತಳಿಯ ಹೋರಿಯೊಂದು ಓಡೋಡಿ ಬಂತು. ಶ್ರೀಗಳ ಬಳಿ ನಿಂತು ಯಾವ ಜನ್ಮದ ಮೈತ್ರಿಯಿದೋ ಕಾಣೆ ಎನ್ನುವಂತೆ ಗುರುಗಳನ್ನು ಆಪ್ಯಾಯತೆಯಿಂದ ಮೂಸಿತು, ನೆಕ್ಕಿತು, ಮೈಯ್ಯನ್ನೊಮ್ಮೆ ಉಜ್ಜಿಬಿಡು ಎನ್ನುವಂತೆ ಬಳಿ ಸಾರಿ ನಿಂತಿತು. ಮಾತೃಹೃದಯದ ಗುರುಗಳಿಂದ ಪೂರಕವಾದ ಸ್ಪಂದನೆ. ಈ ಕೊಡು-ಕೊಳ್ಳುವಿಕೆ ಮುಂದೆಯೂ ಒಂದೆರಡು ಬಾರಿ ನಡೆಯಿತು. ಕೆಲವು ಸಮಯದ ಅನಂತರ ಮೂರನೆಯ ಬಾರಿಗೆ ಆಗಮಿಸಿದ ಶ್ರೀಗಳು ವಾಹನದಿಂದಿಳಿದು ದೇವಾಲಯವನ್ನು ಪ್ರವೇಶಿಸುವಾಗ ಅದೇ ಹೋರಿ ದಾರಿ ತೋರುತ್ತಾ ತಾನೇ ಮೊದಲಿಗೆ ದೇಗುಲವನ್ನು ಪ್ರವೇಶಿಸಿತ್ತು! ರಾಜಾಂಗಣದಲ್ಲಿ ವಿನಮ್ರವಾಗಿ ನಿಂತು ಗುರುಗಳನ್ನು ಪ್ರೀತಿಯಿಂದ ಸ್ವಾಗತಿಸಿತ್ತು. ‘ಈ ಹೋರಿ ಅಮೃತಧಾರಾ ಗೋಶಾಲೆಯನ್ನು ಅಲಂಕರಿಸಲು ಅರ್ಹ’ ಎಂಬ ಅಭಿಪ್ರಾಯ ಶ್ರೀಗಳಿಂದ ಬಂತು. ಗೋಕಿಂಕರ ಕಾರ್ಯಪಡೆ ಈ ಬೀಡಾಡಿ ಹೋರಿಯ ಮೂಲವನ್ನು ಅರಸುತ್ತಾ ಹೋಯಿತು. ಅದರ ಯಜಮಾನ ಪೆರ್ಲ ಸಮೀಪದ ಬೋಳು ಬೈಲಿನ ಅಬ್ದುಲ್ಲ ಕುಂಞಿ. ಹೋರಿಯನ್ನು ಮಸೀದಿಗೆ ಹರಕೆಯ ರೂಪದಲ್ಲಿ ಒಪ್ಪಿಸಲಾಗಿದೆ ಎಂದ. ಇಮಾಮರೊಡನೆ ಮಾತುಕತೆ ನಡೆಯಿತು. ಹೋರಿಯ ವರ್ತನೆ, ಗುರುಗಳ ಅಭಿಪ್ರಾಯ ಎಲ್ಲವನ್ನೂ ಮನದಟ್ಟು ಮಾಡಿಕೊಡಲಾಯಿತು. ಹಿಂದು ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿ ಆ ಹೋರಿ ಗೋಶಾಲೆಯ ಸೊತ್ತಾಯಿತು. ಇಂದು ಅದು ಸವಿನೆನಪು ಮಾತ್ರ. ಕಾಸರಗೋಡು ತಳಿಯ ಇತರ ಹೋರಿಗಳು ಇಂದು ಅದರ ಸ್ಥಾನವನ್ನು ತುಂಬಿವೆ.

 

ಕೆಲವು ವರ್ಷಗಳು ಕಳೆಯುತ್ತಿದ್ದಂತೆ ಕಟುಕರ ಖಡ್ಗದಿಂದ ರಕ್ಷಿಸಿ ತಂದ, ಸಾಕಲಸಾಧ್ಯವಾದವರು ಒಪ್ಪಿಸಿದ ಗೋವುಗಳಿಂದ ಗೋಶಾಲೆ ತುಂಬಿ ತುಳುಕಿತು. ಗೋಶಾಲೆಯ ಸ್ಥಳ ಸ್ವಂತವಲ್ಲ ಮತ್ತು ಅಭಿವೃದ್ಧಿಗೆ ಸ್ಥಳಾವಕಾಶದ ಕೊರತೆಯನ್ನು ಮನಗಂಡು ಕೇವಲ ಒಂದು ಕಿ.ಮೀ ದೂರದಲ್ಲಿ ಸ್ವಂತ ಸ್ಥಳದಲ್ಲಿ 2015ರಲ್ಲಿ ವಿಶಾಲವಾದ ಗೋಶಾಲೆಯ ನಿರ್ಮಾಣವಾಯ್ತು. ಶ್ರೀಗಳ ಉಪಸ್ಥಿತಿ, ಉದ್ಘಾಟನೆ, ಆಶೀರ್ವಾದಗಳ ಬಲದಿಂದ ಇಂದು ಈ ಗೋಶಾಲೆ ತನ್ನ ನಾಲ್ಕೂ ಧ್ಯೇಯಗಳನ್ನು ಸಫಲವಾಗಿ ಪೂರೈಸುತ್ತಿದೆ.

 

ಇಲ್ಲಿ ಅರುವತ್ತೈದಕ್ಕೂ ಹೆಚ್ಚು ಕಾಸರಗೋಡು ತಳಿಯ ಜಾನುವಾರುಗಳಿವೆ.  ಈ ತಳಿಯ ಹಸುಗಳು ಶೂನ್ಯ ಬಂಡವಾಳದ ಗೋಸಾಕಣಿಕೆ, ಕೃಷಿಗೆ ಅತ್ಯಂತ ಯೋಗ್ಯವಾದವುಗಳು. ಅತಿ ಕಡಿಮೆ ಆಹಾರ ಸೇವನೆಯ ಆ ಗೋವುಗಳ ಹಾಲು, ಮೂತ್ರ, ಸೆಗಣಿ ಅತ್ಯಂತ ಶ್ರೇಷ್ಠ ಮಟ್ಟದ್ದಾಗಿದೆ. ಗ್ಯವ್ಯೋತ್ಪನ್ನ ತಯಾರಿಕಾ ಘಟಕವು ಗೋಶಾಲೆಯ ನಿತ್ಯದ ನಿರ್ವಹಣೆಯನ್ನು ಪೂರೈಸುವಲ್ಲಿ ಶ್ರಮವಹಿಸುತ್ತದೆ. ಶಮನತೈಲ, ಜ್ವರಾಮೃತ, ಗೋಸರಾವಟಿ, ವೈಶ್ವಾನರ ಚೂರ್ಣ ಮೊದಲಾದ ಉತ್ಪನ್ನಗಳು ಇಲ್ಲಿ ತಯಾರಾಗುತ್ತವೆ. ಆಯುರ್ವೇದ ಚಿಕಿತ್ಸೆಯ ಕಡೆಗೆ ಒಲವು ಹೆಚ್ಚುತ್ತಿರುವ ಈ ದಿವಸಗಳಲ್ಲಿ ಇವುಗಳ ಕಡೆಗೆ ಜನರು ಆಕರ್ಷಿತರಾಗುತ್ತಿದ್ದಾರೆ. ಚಿಕುನ್‌ಗುನ್ಯಾ ಕಾಡಿದ ಸಂದರ್ಭದಲ್ಲಿ ಕಾಸರಗೋಡು ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಮೂವತ್ತಕ್ಕೂ ಹೆಚ್ಚಿನ ಉಚಿತ ಗವ್ಯಚಿಕಿತ್ಸಾ ಶಿಬಿರಗಳಿಗೆ ಬಜಕೂಡ್ಲು ಗೋಶಾಲೆಯೇ ನೇತೃತ್ವ ವಹಿಸಿಕೊಂಡಿತ್ತು. ಕಾಸರಗೋಡು ತಳಿಯ ಗೋವಿನೊಂದಿಗೆ ಪಾಳೇಕರರ ಶೂನ್ಯ ಬಂಡವಾಳದ ಕೃಷಿ ಹೆಚ್ಚಿನ ಪ್ರಚಾರ ಗಳಿಸುವುದರೊಂದಿಗೆ ಈ ತಳಿಗೆ ಕೇರಳದಲ್ಲಿ ಅತೀವ ಬೇಡಿಕೆ ಉಂಟಾಗಿದೆ. ಈಗಾಗಲೇ ಸಾವಿರದ ಇನ್ನೂರಕ್ಕೂ ಹೆಚ್ಚು ಗೋವುಗಳನ್ನು ಕೇರಳದಾದ್ಯಂತ ವಿತರಿಸಲಾಗಿದೆ. ಈ ಗೋಶಾಲೆಯಲ್ಲಿರುವ `ಬಂಗಾರಿ’ ಎಂಬ ಗೋವು ಅತಿ ಗಿಡ್ಡ ದನ ಎಂಬುದಾಗಿ `ಲಿಮ್ಕಾ ಬುಕ್ ಆಫ್ ರೆಕಾರ್ಡ್’ನಲ್ಲಿ ದಾಖಲಾಗಿರುತ್ತದೆ.

 

ಗೋತುಲಾಭಾರ, ಜನಜನನಿ, ಅನಂತ ಗೋ ಯಾತ್ರೆಗಳಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ಇಲ್ಲಿನ ಗೋ ಭಕ್ತರು ಆಯೋಜಿಸಿದ್ದಾರೆ. ಅನಂತ ಗೋಯಾತ್ರೆ ಕಾಸರಗೋಡಿನ ಅನಂತಪುರದಿಂದ ತಿರುವನಂತಪುರದ ಅನಂತಪದ್ಮನಾಭಸ್ವಾಮಿ ದೇವಾಲಯದವರೆಗೂ ಸಾಗಿ ಜನರಲ್ಲಿ ಅರಿವನ್ನು ಮೂಡಿಸುವಲ್ಲಿ ಸಫಲವಾಗಿದೆ. ಈ ಸಂದರ್ಭದಲ್ಲಿ ಶ್ರೀಗಳು ತಮ್ಮ ಅಮೃತಹಸ್ತಗಳಿಂದ ಕಾಸರಗೋಡು ತಳಿ ಹಸುಗಳನ್ನು ತಿರುವನಂತಪುರದ ಉತ್ರಾಡತಿರುನಾಳ್ ರಾಜಾ ಮಾರ್ತಾಂಡವರ್ಮ ಇವರಿಗೆ ಹಸ್ತಾಂತರಿಸಿದರು. ತದನಂತರ ಶ್ರೀ ಅನಂತಪದ್ಮನಾಭಸ್ವಾಮಿಯ ಅಭಿಷೇಕಕ್ಕಾಗಿ ಕಾಸರಗೋಡು ತಳಿಯ ಹಾಲನ್ನೇ ಉಪಯೋಗಿಸುವ ನಿಟ್ಟಿನಲ್ಲಿ ಅಲ್ಲಿ ಗೋಶಾಲೆಯೊಂದು ನಿರ್ಮಾಣಗೊಂಡಿತು.

‘ಗೋತುಲಭಾರ’ ಪೆರ್ಲದಲ್ಲಿ ನಡೆದ ಅಭೂತಪೂರ್ವ ಕಾರ್ಯಕ್ರಮ. ಜನರಲ್ಲಿ ಗೋವುಗಳ ಕುರಿತಾದ ಕಾಳಜಿಯನ್ನು ಬಡಿದೆಬ್ಬಿಸಿತು. ‘ಜನಜನನಿ’ ಜನರಿಗಾಗಿ ಗೋವು ಎಂಬ ಸಂದೇಶವನ್ನು ಹೊತ್ತು ಜಸಾಮಾನ್ಯರ ಮನಮುಟ್ಟಿತು.
ಗೋವುಗಳಿರುವ ನೆಲೆಯಲ್ಲಿ ಧರ್ಮ ತಾನಾಗಿಯೇ ನೆಲೆಗೊಳ್ಳುತ್ತದೆ. ಇಲ್ಲಿಯೂ ಹಾಗೆಯೇ ಇದೆ. ವಿಶ್ವಮಂಗಳ ಗೋಯಾತ್ರೆಯ ಸಂದರ್ಭದಲ್ಲಿ ಭಾರತದಾದ್ಯಂತ ಸಂಚರಿಸಿದ ಶ್ರೀಗೋಪಾಲಕೃಷ್ಣ ಸ್ವಾಮಿ ಇಂದು ಬಜಕೂಡ್ಲಿನಲ್ಲಿ ನೆಲೆನಿಂತಿದ್ದಾನೆ. ವಿಶೇಷ ಸಂದರ್ಭಗಳಲ್ಲಿ ವಿಶಿಷ್ಟ ರೀತಿ(ಬೆರಣಿಯ ಮಂಟಪದೊಳಗೆ ಶ್ರೀಕೃಷ್ಣನ ಪ್ರತಿಮೆಯನ್ನಿಡುವುದೇ ಮೊದಲಾದ ಆಚರಣೆ)ಯಲ್ಲಿ ಪೂಜಿಸಲ್ಪಡುತ್ತಾನೆ. ಗೋಪಾಷ್ಟಮಿ ಆಚರಣೆಯ ವಿಜ್ರಂಭಣೆ, ಊರಪರವೂರ ಸಾವಿರಾರು ಜನರು ಪಾಲ್ಗೊಳ್ಳುವ ಸಡಗರವನ್ನು ಕಣ್ಮನಗಳಲ್ಲಿ ತುಂಬಿಕೊಳ್ಳಲು ಜೀವಿತಾವಧಿಯಲ್ಲಿ ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಲೇಬೆಕು. ಇಂತಹ ಹಲವು ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಆಚರಣೆಗಳಿಗೆ ಸಭಾಭವನವೊಂದರ ಅಗತ್ಯವು ಕಂಡುಬಂದಾಗ ರೂಪುಗೊಂಡಿದ್ದೇ ಮೂರು ಸಾವಿರ ಚದರಡಿ ವಿಸ್ತೀರ್ಣದ ಶ್ರೀಗೋವರ್ಧನ ಧರ್ಮಮಂದಿರ. ಇತ್ತೀಚೆಗಷ್ಟೇ ಇದರ ಪ್ರಾರಂಭೋತ್ಸವವು ಅತ್ಯಂತ ಸಾಂಪ್ರದಾಯಿಕ ರೀತಿಯಲ್ಲಿ ವೈವಿಧ್ಯಮಯವಾಗಿ ಸಂಪನ್ನಗೊಂಡಿತು. ದಾನಿಗಳ ಪ್ರೋತ್ಸಾಹದಿಂದಲೇ ಕಟ್ಟಲ್ಪಟ್ಟ ಈ ಕಟ್ಟಡವು ಪರಿಪೂರ್ಣ ಎನಿಸಿಕೊಳ್ಳಲು ಇನ್ನಷ್ಟು ಸೌಕರ್ಯಗಳ ಅಗತ್ಯವಿದೆ. ಕೊಡುಗೈದಾನಿಗಳ ಅಗತ್ಯವೂ ಇದೆ.

 

ಏಕಮಾತ್ರ ಶಿಶುವಿನ ಹೆತ್ತವರು ಅದರ ಬಗ್ಗೆ ಇನ್ನಿಲ್ಲದ ಕಾಳಜಿ ತೋರಿಸುವುದು ಸಹಜವಷ್ಟೆ? ಬಜಕೂಡ್ಲು ಅಮೃತಧಾರಾ ಗೋಶಾಲೆ ಮುಳ್ಳೇರಿಯಾ ಮಂಡಲದ ಏಕೈಕ ಗೋಶಾಲೆ. ಶ್ರೀಗುರುಗಳ ಪೂರ್ಣಾಶೀರ್ವಾದಗಳೊಂದಿಗೆ ಗೋಪ್ರೇಮಿಗಳು ಇದನ್ನು ಮುಚ್ಚಟೆಯಿಂದ ಸಾಕಿ ಸಲಹಿ ಇಷ್ಟೆತ್ತರಕ್ಕೆ ಬೆಳೆಸಿದ್ದಾರೆ. ಈ ಬೆಳವಣಿಗೆ ನಿರಂತರವಾಗಿರಬೇಕು. ಒಂದೊಂದು ಗೋವಿಗೂ ಸಿಗುವ ನೀರು, ಹುಲ್ಲು, ಹಿಂಡಿಗೆ ಒಂದಿನಿತೂ ಕುಂದುಂಟಾಗಕೂಡದು. ಗುರುಗಳ ಈ ಇಚ್ಛೆ ಧನಾತ್ಮಕ ಚಿಂತನೆಯಾಗಿ ಗೋಪ್ರೇಮಿಗಳ ತನುಮನಗಳಲ್ಲಿ ಬೆರೆತು ಕಾರ್ಯರೂಪಕ್ಕಿಳಿಯಲು ಯುಕ್ತ ಸಮಯವನ್ನು ಕಾಯುತ್ತಿತ್ತು. 2017 ಜನವರಿ 29ರಂದು ಮಂಗಳೂರಿನಲ್ಲಿ ಮಂಗಲ ಗೋಯಾತ್ರೆಯ ಸಮಾರೋಪ ಸಮಾರಂಭ. ಶ್ರೀಗಳು ಗೋರಕ್ಷಣೆಗಾಗಿ ದೀಕ್ಷಾಬದ್ಧರಾಗಲು ಕರೆನೀಡಿದರು. ಬಜಕೂಡ್ಲು ಗೋಶಾಲೆಗಾಗಿ ಏನನ್ನಾದರೂ ಮಾಡಲೇಬೇಕೆಂಬ ಗೋಕಿಂಕರರೊಳಗಿನ ತುಡಿತ ಕಾರ್ಯರೂಪಕ್ಕಿಳಿಯಲು ಅದು ಪ್ರೇರಣೆಯಾಯಿತು. ಮಾತೆಯರು ಸೆರಗನ್ನು ಸೊಂಟಕ್ಕೆ ಬಿಗಿದು ಹೊರಟೇಬಿಟ್ಟರು. ಗೋವುಗಳಿಗಾಗಿ ಹಿಂಡಿ ಸಂಗ್ರಹಣೆ ಅವರ ಗುರಿಯಾಗಿತ್ತು. ಅದುವೇ ‘ಗೋಗ್ರಾಸನಿಧಿ ಬಜಕೂಡ್ಲು’. ಮಹನೀಯರು ಹೆಗಲೆಣೆಯಾಗಿ ದುಡಿದರು. ಎಲ್ಲ ಸಮಾಜದವರೂ ಅಷ್ಟಿಷ್ಟು ಧನಸಹಾಯ ಮಾಡಿದರು. ತಿಂಗಳಿಗೆ ಏಳೆಂಟು ಚೀಲ ಹಿಂಡಿ ಸಂಗ್ರಹವಾಗುತ್ತಿತ್ತು.

2017ರ ಮಾರ್ಚ್ ತಿಂಗಳಲ್ಲಿ ಶ್ರೀಗಳು ಮಲೆಮಹದೇಶ್ವರ ಬೆಟ್ಟದ ಚಳವಳಿಯ ಭಾಗವಾಗಿ ‘ಗೋ ಪ್ರಾಣಭಿಕ್ಷೆ’ ಗೆ ಕರೆ ನೀಡಿದರು. ‘ಐದು ಹೊತ್ತು ತಿನ್ನುವ ನಾವು ಒಂದು ತುತ್ತು ಗೋವಿಗಾಗಿ ಮೀಸಲಿಡೋಣ’ ಎನ್ನುವ ಕರೆ ಬೆಟ್ಟದಿಂದೀಚೆಗೆ ಅಷ್ಟದಿಕ್ಕುಗಳಲ್ಲಿ ಮಾರ್ದನಿಗೊಂಡಿತು. ಗೋಗ್ರಾಸನಿಧಿಗೆ ಅಧಿಕೃತ, ಪಾರದರ್ಶಕ ರೂಪ ನೀಡಲು ಸಮಯ ಪಕ್ವವಾಗಿತ್ತು. ‘ಗೋಗ್ರಾಸನಿಧಿ’ ಎನ್ನುವ ಹೆಸರಿನಲ್ಲೇ ಬ್ಯಾಂಕ್ ಖಾತೆ ತೆರೆಯಲಾಯಿತು. ಗೋಗ್ರಾಸ ನಿಧಿ ತಂಡ ಇದನ್ನು ಪ್ರಚುರಪಡಿಸಿತು. ಇದರ ಜೊತೆ ಜೊತೆಗೇ ‘ಗೋಧನ ಹುಂಡಿ’ಯೂ ತಯಾರಾಯಿತು. ಪೆರ್ಲ, ನೀರ್ಚಾಲು ಪರಿಸರದ ಗೋಪ್ರೇಮಿ ವೈದ್ಯರ ಆಸ್ಪತ್ರೆಗಳಲ್ಲಿ, ವ್ಯಾಪಾರಿ ಮಳಿಗೆಗಳಲ್ಲಿ ಎಲ್ಲರಿಗೂ ಕಾಣುವಂತೆ ಇದನ್ನು ಇಡಲಾಗುತ್ತದೆ. ಇಚ್ಛೆ ಇರುವವರು ಇದಕ್ಕೆ ಕಾಣಿಕೆಯನ್ನು ಹಾಕಬಹುದು. ಮೊದಲು ಗೋಗ್ರಾಸ ನಿಧಿ ತಂಡದವರು ಪ್ರತಿ ತಿಂಗಳು ಏಳೆಂಟು ಚೀಲಗಳಷ್ಟು ಹಿಂಡಿಯನ್ನು ಗೋಶಾಲೆಗೆ ತಲಪಿಸುತ್ತಿದ್ದರು. ಬ್ಯಾಂಕ್ ಖಾತೆಗೆ ಜಮೆಯಾಗುತ್ತಿರುವ ಮತ್ತು ಗೋನಿಧಿಹುಂಡಿಯ ಮೂಲಕ ಸಂಗ್ರಹವಾದ ಮೊತ್ತದಿಂದ ಈಗ ಮೂವತ್ತು ಚೀಲಗಳಷ್ಟು ಹಿಂಡಿಯನ್ನು ಒದಗಿಸಲು ಸಾಧ್ಯವಾಗುತ್ತದೆ (ಸುಮಾರು 20,000 ರೂಪಾಯಿಗಳು). ಇದರ ಅಭೂತಪೂರ್ವ ಯಶಸ್ಸಿನಿಂದ ಪ್ರೇರಣೆ ಪಡೆದ ಇನ್ನೊಂದಷ್ಟು ಗೋಭಕ್ತರು ‘ಮೇವುಬ್ಯಾಂಕ್’ ಎನ್ನುವ ಹೊಸ ಯೋಜನೆಯೊಂದನ್ನು ಹುಟ್ಟು ಹಾಕಿದರು. ಖಾಲಿಸ್ಥಳಗಳಲ್ಲಿರುವ ಆಯಾ ಋತುಮಾನಕ್ಕನುಗುಣವಾಗಿ ಹಸಿಹುಲ್ಲು, ಒಣಹುಲ್ಲುಗಳನ್ನು, ಸ್ಥಳದ ಒಡೆಯನ ಅನುಮತಿಯ ಮೇರೆಗೆ ಕೂಲಿಗಳ ಸಹಾಯವಿಲ್ಲದೆ ಸ್ವತಃ ಗೋಪ್ರೇಮಿಗಳೇ ಖಟಾವು ಮಾಡಿ ಗೋಶಾಲೆಗೆ ಮುಟ್ಟಿಸುವ ಯೋಜನೆಯಿದು. ಆಯಾಯ ವಲಯದಲ್ಲಿ ಖಟಾವು ನಡೆಯುವಾಗ ವಲಯದ ಪದಾಧಿಕಾರಿಗಳು ನೇತ್ರತ್ವ ವಹಿಸುತ್ತಾರೆ. ಹುಲ್ಲು ಹೆರೆಯುವ ಯಂತ್ರದ ವೆಚ್ಚ, ಸಾಗಾಟದ ವೆಚ್ಚ ಇತ್ಯಾದಿಗಳನ್ನು ವಲಯದವರೇ ಭರಿಸುತ್ತಾರೆ. ಇಲ್ಲವೇ ಯಾರಾದರೊಬ್ಬರು ಪ್ರಾಯೊಜಕತ್ವ ವಹಿಸಿಕೊಳ್ಳುತ್ತಾರೆ. ಹುಲ್ಲು ಹೆರೆಯಲು ಹೋಗಬೇಕೆಂಬ ತುಡಿತವಿದ್ದೂ ಹೊಗಲಾರದವರು ಮೇವುಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡಬಹುದು. ಜಾತಿ-ಮತ ಬೇಧಭಾವವಿಲ್ಲದೆ, ಇದುವರೆಗೆ ನೂರಕ್ಕೂ ಹೆಚ್ಚು ಮಹನೀಯರು ತಮ್ಮ ಖಾಲಿ ನಿವೇಶನಗಳಿಂದ ಹುಲ್ಲು ಹೆರೆಯಲು ಪ್ರೋತ್ಸಾಹ ನೀಡಿದ್ದಾರೆ. ಗೋಶಾಲೆಯ ಹುಲ್ಲಿನ ಅಗತ್ಯದ ಶೇಕಡ ಎಪ್ಪತೈದು ಈ ವಿಧದಲ್ಲಿ ಪೂರೈಕೆಯಾಗುತ್ತಿದೆ. ಇದರ ಪರಿಸರದಲ್ಲೇ ಬೆಳೆಯುವ ಹಸಿ ಹುಲ್ಲೂ ಹಸುಗಳ ಹೊಟ್ಟೆ ತುಂಬಿಸುವಲ್ಲಿ ಹಿಂದೆ ಬಿದ್ದಿಲ್ಲ.

 


ಇತ್ತೀಚೆಗೆ ಶ್ರೀಗಳು ನೀಡಿದ ಕರೆ ‘ಸೇವಾ ಅರ್ಘ್ಯ’. ‘ಗೋವಿಗಾಗಿ ಮೇವು ಮೇವಿಗಾಗಿ ನಾವು. ಗೋವು ಮೇವುಗಳ ನಡುವೆ ಸೇತುವಾಗೋಣ ಬನ್ನಿ’ ಎಂದರು ಶ್ರೀಗಳು. ಈ ಒಂದು ಕರೆ ಎಂತಹ ಪವಾಡ ಮಾಡಿತೆಂದರೆ ಘಟಕ, ವಲಯ, ಮಂಡಲಗಳೆಂಬ ಗಡಿಗಳನ್ನು ಮೀರಿ ಗೋಭಕ್ತರು ಹುಲ್ಲು ಹೆರೆಯಲು ಧಾವಿಸಿ ಬಂದರು. ಸಾಗರದೋಪಾದಿಯಲ್ಲಿ ಹರಿದುಬಂತು ಮುಳಿಹುಲ್ಲು, ಹಸಿಹುಲ್ಲು. ಪುತ್ತೂರಿನವರು ಬಜಕೂಡ್ಲು ಸಮೀಪದ ಗುಂಪೆ ಗುಡ್ಡೆಗೆ ತಮ್ಮ ಸಲಕರಣೆಗಳ ಸಮೇತ ಒಡೋಡಿ ಬಂದರು ಹುಲ್ಲು ಹೆರೆಯಲು, ಗೋಕಿಂಕರರ ಆಸರು ನೀಗಲು. ತಾಯಂದಿರು ತಮ್ಮ ಕುಟುಂಬ, ಇನ್ನೊಬ್ಬರ ಕುಟುಂಬ ಎಂದು ನೋಡದೆ ಹುಲ್ಲಿಗಾಗಿ ಬೆವರು ಸುರಿಸಿದ ಪ್ರತಿಯೊಬ್ಬರಿಗೂ ತಣ್ಣಗಿನ ಪಾನೀಯವಿತ್ತರು, ತಿಂಡಿ ತಯಾರಿಸಿ ಹಸಿವನ್ನೂ ನೀಗಿದರು. ಪಕ್ಕದಲ್ಲೇ ಮನೆಯಿದ್ದ ಗೋಪ್ರೇಮಿಗಳು ಊಟವಿತ್ತು ಉಪಚರಿಸಿ ವಿಶ್ರಾಂತಿಗೆ ಅನುವು ಮಾಡಿಕೊಟ್ಟರು. ಒಂದೇ ದಿನದಲ್ಲಿ ಹತ್ತರಿಂದ ಹದಿನೈದು ಲೋಡುಗಳಷ್ಟು ಮುಳಿಹುಲ್ಲು ಬಜಕೂಡ್ಲು ಗೋಶಾಲೆಯ ಅಂಗಳದಲ್ಲಿ ಬಂದು ಬಿದ್ದಿತ್ತು. ಇದು ನಿರಂತರವಾಗಿರಲಿ ಎನ್ನುವ ಉದ್ದೇಶದಿಂದ `ಮೇವುಬ್ಯಾಂಕ್’ ವಾಟ್ಸ್ಯಾಪ್ ಗ್ರೂಪು ಹುಟ್ಟಿಕೊಂಡಿತು. ಕೇರಳಕ್ಕೂ ಹರತಾಳಕ್ಕೂ ಬಿಡಲಾಗದ ನಂಟು. ಆದರೆ ಬಜಕೂಡ್ಲು ಗೋಶಾಲೆಯ ಗೋವುಗಳು ಪುಣ್ಯಜೀವಿಗಳು. ಹರತಾಳದ ತಾಳಕ್ಕೆ ನಾವು ಕುಣಿಯಲಾರೆವು ಎನ್ನುವುದನ್ನು ಗೋಕಿಂಕರರು ತಮ್ಮ ಕಾರ್ಯದ ಮೂಲಕ ತೋರಿಸಿಕೊಟ್ಟರು. ಹರತಾಳದ ದಿನವೂ ಹದಿನೈದು ಚೀಲ ಹಸಿಹುಲ್ಲನ್ನು ಗೋಶಾಲೆಗೆ ತಲುಪಿಸಿಯೇ ಅವರು ನಿಶ್ಚಿಂತರಾದದ್ದು.  

 

ಗೋವು ಉಳಿದರೆ ಮಾತ್ರ ಜಗತ್ತು ಸುಖವಾಗಿ ಉಳಿಯಲು ಸಾಧ್ಯ ಎಂಬುದನ್ನು ಜಗಕ್ಕೆ ತಲಪಿಸುವ ನಿಟ್ಟಿನಲ್ಲಿ ಶ್ರೀಗಳಿತ್ತ ಕರೆಯನ್ನು ಶಿರಸಾವಹಿಸಿ ಗೋಸಂರಕ್ಷಣೆ, ಗೋಸಂವರ್ಧನೆ, ಗೋಸಂಶೋಧನಾ ಕಾರ್ಯಕ್ರಮಗಳು ಅಮೃತಧಾರಾ ಗೋಶಾಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ. ಗೋಸಂಬೋಧನೆ(ಸಮ್ಯಕ್ ಬೋಧನೆ= ಎಚ್ಚರ ಮೂಡಿಸುವುದು, ಗೋವುಗಳ ಮಹತಿಯ ಬಗ್ಗೆ  ಅರಿವು ಮೂಡಿಸುವುದು)ಗೆ ಸಂಬಂಧಪಟ್ಟಂತೆ ಕಾಸರಗೋಡಿನಿಂದ ರಾಜಧಾನಿ ತಿರುವನಂತಪುರದವರೆಗೂ ಸಂಚರಿಸಿ(ಅನಂತಗೋಯಾತ್ರೆ) ಗೋವಿನ ಮಹತ್ತ್ವವನ್ನು ಸಾರಿದ್ದೂ ಅಲ್ಲದೆ ಗೋತುಲಾಭಾರ, ಜನಜನನಿಯಂತಹ ಬೃಹತ್ ಕಾರ್ಯಕ್ರಮಗಳ ಮೂಲಕ ಗೋಸಂಬೋಧನೆಯ ಸಾರ್ಥಕತೆಯನ್ನು ಈ ಗೋಶಾಲೆ ತನ್ನ ಹೆಗಲಿಗೇರಿಸಿಕೊಂಡಿದೆ. ಇತ್ತೀಚೆಗೆ ಇದೇ ಗೋಶಾಲೆಯಲ್ಲಿ `ಪಂಚಗವ್ಯ ಪ್ರಶಿಕ್ಷಣ’ ಎನ್ನವ ಮೂರು ದಿನಗಳ ಶಿಬಿರವು ಬಹು ಯಶಸ್ವಿಯಾಗಿ ನೆರವೇರಿತು. ಇದರಲ್ಲಿ ಸಾರ್ವಜನಿಕರಿಗೆ ಗೋವುಗಳ ಪರಿಚಯ, ಗವ್ಯ ಉತ್ಪನ್ನಗಳ ಪರಿಚಯ,ಗೋ ಆದಾರಿತ ಕೃಷಿ ಇತ್ಯಾದಿ ಮೂಲಭೂತ ತಿಳುವಳಿಕೆಯನ್ನು ಊರ ಪರವೂರ ತಜ್ಞರು ನೀಡಿದರು.

 


ಗೋಶಾಲೆಯೊಂದು ಪಕ್ಕಕ್ಕಿದ್ದರೆ ಮಾನವೀಯತೆ ಹೇಗೆ ಎಚ್ಚರಗೊಳ್ಳತ್ತದೆ ಎನ್ನುವುದಕ್ಕೆ ಬಜಕೂಡ್ಲು ಗೋಶಾಲೆಯೇ ಸಾಕ್ಷಿ. ಇಂತಹ ಗೋಪ್ರೇಮಿಗಳಿಗೆ ಹೆಗಲಿಗೆ ಹೆಗಲು ಕೊಟ್ಟು ಒಂದಷ್ಟು ಸಮರ್ಪಣೆಯನ್ನು ಮಾಡಿದವರು ಎಷ್ಟೋ ಮಂದಿ. ಈ ಕೆಳಗೆ ನಮೂದಿಸಿದ ಬ್ಯಾಂಕ್ ಖಾತೆಯನ್ನು ನಾವೂ ಅದಕ್ಕಾಗಿ ಬಳಸಿಕೊಳ್ಳೋಣ.
ಕರ್ನಾಟಕ ಬ್ಯಾಂಕ್ ನೀರ್ಚಾಲು, ಖಾತೆ ನಂಬ್ರ: 5322500101464101 , IFSC CODE:KARB0000532

ಸಂಪರ್ಕ: ೯೪೪೬೬೮೧೨೩೨,  ೯೪೯೫೨೬೩೮೬೧, ೦೮೫೪೭೧೮೪೧೦೭
                                                                  
                                                                                 

1 thought on “ಹರಿಯಿತು ಮಾನವೀಯತೆಯ ‘ಅಮೃತ ಧಾರೆ’ –  ಆಯಿತು ಬಜಕೂಡ್ಲು ಗೋಶಾಲೆ : ಶೀಲಾಲಕ್ಷ್ಮೀ ಕಾಸರಗೋಡು

  1. ಗೋವಿಗಾಗಿ ಮೇವು ಮೇವಿಗಾಗಿ ನಾವು #ಸೇವಾಅಘ್ಯ ಧನ್ಯವಾದ

Leave a Reply

Your email address will not be published. Required fields are marked *