ಮಠದ ಮೂಲ ಕಥೆ – ಮೂಲ ಮಠದ ಕಥೆ – ೧ ; ಮಹೇಶ್ ಎಳ್ಯಡ್ಕ

ಲೇಖನ

 

ಸುಮಾರು ಎಂಟನೆಯ ಶತಮಾನದಲ್ಲಿ ಭಾರತದಲ್ಲಿ ಪರಂಪರೆಯ ಬಗೆಗೆ ನಿರುತ್ಸಾಹ, ಅಂಧಶ್ರದ್ಧೆಗಳು ಮೇಳೈಸಿದ್ದವು. ಧರ್ಮದ ಬಗೆಗೆ ಜ್ಞಾನವು ಕಡಿಮೆಯಾಗುತ್ತಾ, ಇತರೇ ಧರ್ಮಗಳ ಪ್ರಭೆಯು ರಾರಾಜಿಸುತ್ತಿದ್ದವು. ಆ ಸಂದರ್ಭದಲ್ಲಿ ಮುದುಡಿ ಹೋಗುತ್ತಿದ್ದ ಸನಾತನ ಪರಂಪರೆಯನ್ನು ಮತ್ತೆ ಚಿಗುರಿಸಿದ ಮಹಾನ್ ಸಂತ – ಶ್ರೀಶಂಕರಾಚಾರ್ಯರು. ಶಂಕರಾಚಾರ್ಯರು ಅವತರಿಸಿದುದರಿಂದ ಏನಾಯಿತು ಎಂದು ತಿಳಿಯಬೇಕಾದರೆ, ಅವರು ಅವತರಿಸಿಲ್ಲದೇ ಇದ್ದಿದ್ದರೆ ಏನಾಗುತ್ತಿತ್ತು ಎಂಬುದನ್ನು ಒಂದು ಕ್ಷಣ ಯೋಚಿಸೋಣ. ಧರ್ಮದ ಬಗ್ಗೆ ತಿಳುವಳಿಕೆಯಿಲ್ಲದ ಜನಸಮೂಹವಿತ್ತು, ಅವೈದಿಕ ಮತಗಳ ಪ್ರಭೆ ಏರುತ್ತಿತ್ತು. ವೇದ-ಉಪನಿಷತ್ತುಗಳು ನಿರುಪಯುಕ್ತವಾಗುತ್ತಿತ್ತು. ಕ್ರಮೇಣ ಈ ಅಮೂಲ್ಯ ಜೀವನಸಾರದ ಸಂಗ್ರಹ ನಶಿಸುತ್ತಿತ್ತು. ಮಹಾಭಾರತ, ರಾಮಾಯಣಗಳು ಜನಮಾನಸದಿಂದ ನಿರ್ನಾಮವಾಗುತ್ತಿದ್ದವು. ಒಟ್ಟಿನಲ್ಲಿ ಭಾರತವು ಭಾರತವಾಗಿ ಉಳಿಯುತ್ತಿರುತ್ತಿರಲಿಲ್ಲ.

 

ಶ್ರೀಶಂಕರಾಚಾರ್ಯರು ಅವತರಿಸಿ ಭಾರತದ ಉದ್ದಗಲವನ್ನು ಮೂರು ಬಾರಿ ನಡೆದು ಸಂಚರಿಸಿ, ವೈದಿಕಧರ್ಮವನ್ನು ಮತ್ತೆ ಸ್ಥಾಪಿಸಿದರು. ದೇವೋಪಾಸನೆಯ ಭಿನ್ನಮತವನ್ನು ಹೋಗಲಾಡಿಸಿ ಪಂಚಾಯತನ ಪೂಜಾಪದ್ಧತಿಯನ್ನು ಸಾರಿದರು. ಸರಳ ಸಂಸ್ಕೃತದಲ್ಲಿ ಸಹಸ್ರಾರು ಶ್ಲೋಕಗುಚ್ಛ, ಪಂಚಕ, ಅಷ್ಟಕಗಳನ್ನು ರಚಿಸಿದರು. ಹಲವಾರು ಭಾಷ್ಯಗಳನ್ನು ರಚಿಸಿ ಜನರಿಗೆ ಸುಲಭವಾಗಿ ವೇದಾಂತವು ಅರ್ಥವಾಗುವಲ್ಲಿ ಹರಸಿದರು. ನಮ್ಮೊಳಗಿರುವುದು ದೇವರ ಸತ್ತ್ವವೇ, ಅವನೂ-ನಾನೂ ಒಂದೇ ಶಕ್ತಿಯ ಅಂಶಗಳು, ಅವೆರಡರಲ್ಲಿ ವಿಭಾಗವಿಲ್ಲ ಎಂಬರ್ಥದ ಅದ್ವೈತತತ್ತ್ವವನ್ನೂ ಬೋಧಿಸಿದರು.

 

ಇದೆಲ್ಲವೂ ಕೇವಲ ಆ ತಲೆಮಾರಿಗೆ ಮಾತ್ರವಲ್ಲದೇ, ಅನಂತವಾಗಿ ಧರ್ಮಸತ್ತ್ವವು ಹರಿಯುತ್ತಿರಬೇಕು ಎಂಬ ಕಾರಣದಲ್ಲಿ ಅಲ್ಲಲ್ಲಿ ಧರ್ಮಕೇಂದ್ರಗಳನ್ನು ಸ್ಥಾಪಿಸಿದರು. ಶಂಕರಾಚಾರ್ಯರು ಸ್ಥಾಪಿಸಿದ ಧರ್ಮಕೇಂದ್ರಗಳೇ ಮಠಗಳು. ನಿರ್ದಿಷ್ಟವಾದ ಪೀಠಾಧಿಪತಿಗಳು ಆ ಮಠಗಳ ಮುಖ್ಯಕೇಂದ್ರ. ಆಯಾಕಾಲಕ್ಕೆ ಅಗತ್ಯವಾದ ಮಾರ್ಗದರ್ಶನವನ್ನು ಕೊಡುತ್ತಾ, ಸನಾತನ ಧರ್ಮದ ಪುನರುತ್ಥಾನಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಡುವುದು ಅವರ ಜೀವನದ ಸರ್ವಸ್ವ ಧ್ಯೇಯ.

 

ಸಂನ್ಯಾಸಿಗಳು ಎಂಬ ಕಲ್ಪನೆಯು ಆಚಾರ್ಯ ಶಂಕರರಿಗಿಂತ ಮೊದಲಿನದ್ದೇ ಆದರೂ, ಸಂನ್ಯಾಸಿಗಳು ಒಂದು ಮಠದ ಅಧಿಪತಿಯಾಗಿ ಧರ್ಮಕರ್ಮವನ್ನು ನಿರ್ದೇಶಿಸುತ್ತಾ ಸಮಾಜಕ್ಕೆ ಮಾರ್ಗದರ್ಶಿಸುವ ಕಲ್ಪನೆಯು ಅತಿವಿನೂತನವಾದುದಾಗಿತ್ತು. ಈ ಕ್ರಾಂತಿಕಾರೀ ಚಿಂತನೆಯಿಂದಾಗಿ ಶಂಕರರು ಮತ್ತೆ ಮಿಂಚಿಸಿದ ಸನಾತನಧರ್ಮವು ನಶಿಸದೆ ಜ್ವಾಜ್ವಲ್ಯಮಾನವಾಗಿ ಇಂದಿನವರೆಗೂ ಪ್ರಕಾಶಿಸುತ್ತಿದೆ.

 

ಶಂಕರರು ದೇಶವನ್ನು ಸುತ್ತುತ್ತಾ, ಅಲ್ಲಲ್ಲಿ ದೇವಸ್ಥಾನಗಳನ್ನು ಸ್ಥಾಪಿಸಿ, ಪಾಳುಬಿದ್ದ ಬಿಂಬಕ್ಕೆ ಪುನಃ ಪ್ರಾಣಪ್ರತಿಷ್ಠೆಗೈದು, ಪುನಶ್ಚೇತನವಿತ್ತು, ಸಮಾಜದಲ್ಲಿ ಧರ್ಮಶ್ರದ್ಧೆಯನ್ನು ಕಟ್ಟುತ್ತಾ ಬಂದರು. ಕಾಂಚಿಯಿಂದ ಬದರಿಯ ತನಕ ದೇಶದ ಉದ್ದಗಲಕ್ಕೂ ಅವರ ಧರ್ಮಪ್ರತಿಷ್ಠಾಕಾರ್ಯವು ನೆರವೇರಿತ್ತು. ನಮ್ಮೂರಿನ ಪಶ್ಚಿಮಘಟ್ಟದ ಕುಮಾರಪರ್ವತದ ಬಳಿಯ ಸುಬ್ರಹ್ಮಣ್ಯೇಶ್ವರ ದೇವರ ಬಳಿಗೂ ಬಂದಿದ್ದರು, ಕಡಲ ತೀರದ ಗೋಕರ್ಣಕ್ಕೂ ಬಂದಿದ್ದರು.

 

ರಾಮಾದಿ ವಿಗ್ರಹ:

ಮಹರ್ಷಿ ಅಗಸ್ತ್ಯರು ಶ್ರೀರಾಮನನ್ ದರ್ಶನಗೈದು ರಾವಣಸಂಹಾರದ ಸಮಯದಲ್ಲಿ ಮಾರ್ಗದರ್ಶಿಸಿದ ವಿಷಯ ನಮಗೆ ರಾಮಾಯಣದಲ್ಲಿ ತಿಳಿದು ಬರುತ್ತದೆ. ಅಗಸ್ತ್ಯರು ರಾಮನ ಆರಾಧಕರೂ ಹೌದು. ಅಗಸ್ತ್ಯರು ಶ್ರೀಸೀತಾರಾಮಚಂದ್ರರನ್ನು ವಿಗ್ರಹರೂಪದಲ್ಲಿ ಆರಾಧಿಸುತ್ತಾ ಬಂದಿದ್ದರು. ಅವರು ಆರಾಧಿಸಿದ ವಿಗ್ರಹಗಳನ್ನು ಅವರ ಶಿಷ್ಯ ವರದಮುನಿಗಳಿಗೆ ಆಶೀರ್ವಾದರೂಪದಲ್ಲಿ ಕರುಣಿಸಿದ್ದರು. ವರದಮುನಿಗಳು ತಮ್ಮ ಜೀವಿತ ಕಾಲ ಪೂರ್ತಿ ಅದನ್ನು ಪೂಜಿಸುತ್ತಾ ಬಂದಿದ್ದರು. ತನ್ನ ಮೋಕ್ಷಪ್ರಯಾಣ ಸನ್ನಿಹಿತವಾದಂತೆ ಆ ರಾಮಾದಿವಿಗ್ರಹಗಳ ಮುಂದಿನ ಪೂಜಾಕೈಂಕರ್ಯದ ಬಗೆಗೆ ಯೋಗ್ಯರನ್ನು ಇದಿರುನೋಡುತ್ತಿದ್ದರು. ಆಚಾರ್ಯ ಶಂಕರರು ಗೋಕರ್ಣದ ಮಹಾಬಲೇಶ್ವರ ಆತ್ಮಲಿಂಗಕ್ಕೆ ಅಭಿಷೇಕ, ದರ್ಶನಗೈದು ಬರುತ್ತಿರುವಾಗ ವರದಮುನಿಗಳ ದರ್ಶನವಾಗುತ್ತದೆ. ಸನಾತನ ಧರ್ಮವನ್ನು ಪುನರುತ್ಥಾನಗೈಯಲು ಕೈಲಾಸ ಶಂಕರನೇ ಶಂಕರಾಚಾರ್ಯರಾಗಿ ಅವತರಿಸಿ ಬಂದಿದ್ದನ್ನು ಮನಗಾಣುತ್ತಾರೆ. ಅಗಸ್ತ್ಯಶಿಷ್ಯ ವರದಮುನಿಗಳು ಆಚಾರ್ಯ ಶಂಕರರನ್ನು ಕಂಡಾಗ  ಅಗಸ್ತ್ಯಪೂಜಿತ ಆ ವಿಗ್ರಹವನ್ನು ಮುಂದಿನ ಅನಂತಕಾಲದ ವರೆಗೆ ನಿರಾತಂಕವಾಗಿ ಅವಿಚ್ಛಿನ್ನವಾಗಿ ಪೂಜಿಸುತ್ತಾ ಬರಲು ಯೋಗ್ಯ ವ್ಯಕ್ತಿ ಇವರೇ ಎಂಬುದನ್ನು ತಮ್ಮ ತಪೋಶಕ್ತಿಯಿಂದ ತಿಳಿದುಕೊಳ್ಳುತ್ತಾರೆ.

 

ಆ ಪ್ರಕಾರ, ಅಗಸ್ತ್ಯರು ಪೂಜಿಸುತ್ತಿದ್ದ, ಅನಂತರ ವರದಮುನಿಗಳಿಗೆ ಅನುಗ್ರಹಿತವಾಗಿ ಪೂಜಿಸಲ್ಪಡುತ್ತಿದ್ದ ಪಟ್ಟಾಭಿಷಿಕ್ತ ಶ್ರೀಸೀತಾರಾಮಚಂದ್ರ ಲಕ್ಷ್ಮಣರ ವಿಗ್ರಹವನ್ನು ಶಂಕರಾಚಾರ್ಯರ ಕೈಗಿತ್ತು, ಸಾರ್ಥಕ್ಯದಿಂದ ಉತ್ತರಮುಖಿಯಾಗಿ ಯಾತ್ರೆ ಕೈಗೊಳ್ಳುತ್ತಾರೆ.

 

ವರದಮುನಿಗಳಿಂದ ವಿಗ್ರಹವನ್ನು ಸ್ವೀಕರಿಸಿದ ಶಂಕರರು ಶಿಷ್ಯಸಮೇತರಾಗಿ ಮುಂದುವರಿದು, ಮುಂದೆ ರಮಣೀಯ ಪರಿಸರವೊಂದನ್ನು ತಲುಪುತ್ತಾರೆ.

 

Author Details


Srimukha

Leave a Reply

Your email address will not be published. Required fields are marked *