ಮೌನ ಮುರಿಯಿತು!

ಲೇಖನ

ಹವ್ಯಕ ಸಮಾಜದ ಎರಡು ಕಣ್ಣುಗಳು ಎನ್ನುವ ಮಾತಿಗೆ ಪ್ರತಿರೂಪವಾಗಿ ಶೋಭಿಸುತ್ತಿರುವ ಯತಿವರೇಣ್ಯರಾದ ಶ್ರೀರಾಮಚಂದ್ರಾಪುರಮಠದ ಹಾಗೂ ಶ್ರೀಸ್ವರ್ಣವಲ್ಲಿಮಠದ ಗುರುಗಳ ಬಗ್ಗೆ ವಿಶೇಷವಾದ ಗೌರವ ಇಟ್ಟವನು ನಾನು. ಆದರೆ ಇಂದು ನನ್ನ ನಂಬಿಕೆ ಹುಸಿಯಾಯಿತು. ಮೌನದಲ್ಲಿದ್ದರೂ, ಅವರು ನಮ್ಮ ಜೊತೆ ಇದ್ದಾರು ಎನ್ನುವ ನನ್ನ ಅಚಲ ವಿಶ್ವಾಸ ಹುಸಿಯಾಯಿತು.

 

ಪೀಠಾಧಿಪತಿಗಳು ಸಮಾಜಮುಖಿ ಕೆಲಸಕ್ಕೆ ಹೊರಟಾಗ ಆರೋಪಗಳು ಬರುವದು ಹೊಸತಲ್ಲ. ದುಷ್ಟ ವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ನಿಂತಾಗ, ಹೋರಾಟಗಾರರನ್ನು ದಮನಿಸುವ ಪ್ರವೃತ್ತಿ ಈ ದೇಶಕ್ಕೆ ಹೊಸತಲ್ಲ. ಸತ್ಯದ ವಿಜಯ ಕೊನೆಯಲ್ಲಿ ಇದ್ದೇ ಇದ್ದರು ಮಧ್ಯೆ ರಾಕ್ಷಸರ ಅಟ್ಟಹಾಸ ಇದ್ದೇ ಇದೆ. ಅಕ್ರಮ ಗಣಿಗಾರಿಕೆ, ಖಸಾಯಿಕಾನೆ ವಿರುದ್ಧ ಹೋರಾಟದ ಜೊತೆ ಜೊತೆಗೆ ಇಡೀ ವಿಶ್ವದ ಗಮನ ಸೆಳೆದ ವಿಶ್ವಗೋಸಮ್ಮೇಳನ, ಮಂಗಲ ಮತ್ತು ಅಭಯಗೋಯಾತ್ರೆಗಳು , ಸಾಲು ಸಾಲು ಗೋಸಂರಕ್ಷಣಾ ಕಾರ್ಯಕ್ರಮಗಳು ಶ್ರೀಗಳ ಸಂಕಲ್ಪದಿಂದ ಸಾಕಾರಗೊಂಡ ಸಮಾಜಮುಖಿ ಕಾರ್ಯಕ್ರಮಗಳು.

 

ನಿತ್ಯಾನುಷ್ಠಾನ, ಶ್ರೀಕರಾರ್ಚಿತ ಸಪರಿವಾರ ಶ್ರೀರಾಮದೇವರ ಪೂಜೆ, ಜೊತೆಗೆ ನೊಂದ ಜನರಿಗೆ ಸಾಂತ್ವನ ಅತ್ತ ಗೋಸಂಬಂಧಿ ಕಾರ್ಯಕ್ರಮ ಇದೇ ಶ್ರೀಗಳ ನಿತ್ಯ ದಿನಚರಿ. ಇಂತಹ ಗುರುಗಳ ಮೇಲೆ ಆರೋಪ ಬರುವದು, ಅವರನ್ನು ತೇಜೋವಧೆ ಮಾಡುವ ಕೆಲಸ ಸಹಜವಾದದ್ದೇ.

 

ಮಿಥ್ಯಾರೋಪ ಬಂದ ಕ್ಷಣದಿಂದ ವಿರೋಧಿಗಳ ನಿರಂತರ ಅಪಪ್ರಚಾರ ಕೂಡ ಸಹಿಸಿ ನಗುಮುಖ ಹೊತ್ತು ಭಕ್ತರ ಕಷ್ಟವನ್ನು ಎಂದಿನಂತೆ
ಆಲಿಸಿ – ಪರಿಹರಿಸಿದ ರೀತಿ ಅವರ ಸ್ಥಿತಪ್ರಜ್ಞತ್ವಕ್ಕೆ ಸಾಕ್ಷಿಯಾಯಿತು. ಸಮ್ಮಾನ ಮತ್ತು ಅವಮಾನ ಇವೆರಡನ್ನೂ ಸಮಾನವಾಗಿ ಸ್ವೀಕರಿಸಿ ಗೀತೋಕ್ತಿಗೆ ತಕ್ಕಂತೆ ನುಡಿದು ನಡೆದ ರೀತಿ ಎಲ್ಲ ಶಿಷ್ಯರ ಹೃದಯ ತಟ್ಟಿತು.

 

ಮಿಥ್ಯಾರೋಪದ ಅನಂತರ ಭ್ರಷ್ಟ ವ್ಯವಸ್ಥೆಯ ನಿರಂತರ ಕಿರುಕುಳ ಸಹಿಸಿ ಕಾನೂನಿನ ಚೌಕಟ್ಟಿನಲ್ಲಿಯೇ ಹೋರಾಟ ನಡೆಸಿ ನ್ಯಾಯಾಧೀಶರೇ ಶ್ರೀಗಳು ನಿರ್ದೋಷಿ ಅಂತ ಘೋಷಿಸಿದ್ದು ಇಡೀ ಜಗತ್ತಿಗೆ ಗೊತ್ತಿರುವ ವಿಷಯವೇ. ಇದನ್ನೆಲ್ಲ ಎದುರಿಸಿದ್ದು ಸ್ವತಃ ಶ್ರೀಗಳು ಒಬ್ಬರೇ, ಜೊತೆಯಲ್ಲಿ ನಿಂತದ್ದು ಶಿಷ್ಯಸ್ತೋಮ ಮತ್ತು ಹಲವು ಮಹನೀಯರು!

 

ಅಂದು ಆರೋಪ ಬಂದಾಗ ನಾನೆಣಿಸಿದ್ದೆ:

 

– ಸ್ವರ್ಣವಲ್ಲಿ ಶ್ರೀಗಳು ಈ ಪ್ರಕರಣವನ್ನು ಖಂಡಿಸಿ ಒಂದು ಪತ್ರಿಕಾ ಪ್ರಕಟಣೆ ನೀಡಬಹುದು ಎಂದು. ಅಂದಿನಿಂದ ಇಲ್ಲಿಯವರೆಗೆ ಅವರು ತಾಳಿದ್ದು ಧೀರ್ಘ ಮೌನ!

 

– ಸ್ವರ್ಣವಲ್ಲಿ ಶ್ರೀಗಳು ಒಂದು ದೂರವಾಣಿ ಕರೆ ಮಾಡಿ ಮಾತನಾಡಬಹುದು ಎನ್ನುವ ನೀರೀಕ್ಷೆ ಇಟ್ಟಿದ್ದೆ. ಆದರೆ ಅವರು ದೂರವಾಗಿಯೇ ಉಳಿದರು!!

 

– ಸ್ವರ್ಣವಲ್ಲಿ ಶ್ರೀಗಳು ಒಮ್ಮೆಯಾದರೂ ಬಂದು ಭೇಟಿಯಾಗಿ, ನಾವಿದ್ದೇವೆ ಎಂಬ ಭಾವ ತೋರ್ಪಡಿಸುವರು ಎನ್ನುವ ನೀರಿಕ್ಷೆಯಲ್ಲಿದ್ದೆ ಆದರೆ ಅವರು ಬರಲೇ ಇಲ್ಲ!!!

 

ಇಷ್ಟಾದರೂ, ಯಾವುದೋ ಅನ್ಯಾನ್ಯ ಕಾರಣಕ್ಕೆ ಅವರಿಗೆ ಸ್ಪಂದಿಸಲು ಸಾಧ್ಯವಾಗಲಿಲ್ಲ ಎಂಬುದಾಗಿ ಸಮಾಧಾನ ಹೊಂದಿದ್ದೆ. ಆದರೆ, ವಿಶ್ವಹವ್ಯಕ ಸಮ್ಮೇಳನದ ಪೂರ್ವಭಾವಿ ನಡೆಗಳು ಮತ್ತು ಅನಂತರದ ಬೆಳವಣಿಗೆಗಳು ನನ್ನ ಪೂರ್ಣ ಭರವಸೆಯನ್ನು ಛಿದ್ರಗೊಳಿಸಿತು ಮತ್ತು ಪ್ರಕರಣದ ಆರಂಭದಿಂದ ಇವರು ತಾಳಿದ ಮೌನಕ್ಕೆ ಸೂಕ್ತ ಅರ್ಥ ಈಗ ಕಲ್ಪಿತವಾಯಿತು.

 

ಕಂಚಿಯ ಶ್ರೀಜಯೇಂದ್ರ ಸರಸ್ವತೀ ಮಹಾಸ್ವಾಮಿಗಳ ಮೇಲೂ ಕೂಡ ಮಿಥ್ಯಾರೋಪ ಬಂದಿತ್ತು ಅಲ್ಲವೇ? ಆಮೇಲೆ ತಾನೇ, ನಿರ್ದೋಷಿ ಎಂದು ನ್ಯಾಯಾಲಯ ಘೋಷಿಸಿದ್ದು.
ಆರೋಪ ಯಾರ ಮೇಲೂ ಬರಬಹುದು. ಆರೋಪಿತರನ್ನು, ದೋಷಿ ಎಂದು ಕರೆಯುವ ಮನಸ್ಸೇ ದೋಷಿ ಅಲ್ಲವೇ? ಹವ್ಯಕ ಸಮ್ಮೇಳನ ಮೊದಲು ಬಂದ ಪತ್ರಿಕಾ ಪ್ರಕಟಣೆಯಲ್ಲಿ, ಶಾಂಕರತ್ತ್ವದಿಂದ ಪತಿತರಾದವರು ಭಾಗವಹಿಸುವ ಕಾರ್ಯಕ್ರಮಕ್ಕೆ ನಾವು ಬರುವುದಿಲ್ಲ ಎಂಬಲ್ಲಿಗೆ ಹೊಸ ವರಸೆ ಆರಂಭವಾಯಿತು. ಅರೇ, ಆರೋಪಿತರನ್ನು ಶಾಂಕರತತ್ತ್ವದಿಂದ ಜಾರಿದವರು ಎಂದರೆ ಕಾಂಚಿಯ ಶ್ರೀಜಯೇಂದ್ರ ಸರಸ್ವತಿಮಹಾಸ್ವಾಮಿಗಳನ್ನು ಕೂಡ ಅವಮಾನಿಸಿದಂತೆಯೇ ಅಲ್ಲವೇ?

 

ಇನ್ನು, ಶಂಕರನಮನ ಕಾರ್ಯಕ್ರಮದಲ್ಲಿ, ಸಂತ್ರಸ್ತೆಯೇ ಬಂದು ಹೇಳಿದ ಮೇಲೆ ನಂಬಬೇಕಾಯಿತು ಎಂಬುದಾಗಿ ಹೇಳಿದ್ದೀರಿ. ಅರೇ, ಆರೋಪ ಮಾಡುವವರು ನಾವು ಮಾಡಿದ್ದು ಸುಳ್ಳು ಆರೋಪ ಅಂತ ಹೇಳಿಕೊಂಡು ತಿರುಗಾಡುತ್ತಾರೆಯೇ? ವೇದ ವೇದಾಂತ ಸಾರ ತಿಳಿದ ಸ್ವಾಮಿಗಳಿಗೆ ಇಷ್ಟು ಸಣ್ಣ ವಿಷಯ ತಿಳಿಯದೇ ಹೋಯಿತಾ? ಖಂಡಿತಾ ಇಲ್ಲ ..

 

ಸ್ವರ್ಣವಲ್ಲಿ ನಮ್ಮ ಸಮಾಜದ ಇನ್ನೊಂದು ಗುರುಪೀಠ ಎನ್ನುವ ಕಾರಣಕ್ಕೆ ಇಷ್ಟೆಲ್ಲ ಹೇಳುವ ಮನಸ್ಸಾಯಿತು ಅಷ್ಟೇ. ಇನ್ನು ಒಕ್ಕೂಟದ ಬಗ್ಗೆ ಹಾಗೂ ಮತ್ತೆರಡು ಸ್ವಾಮಿಗಳ ಬಗ್ಗೆ ಹೇಳುವ ಆಸಕ್ತಿ ಇಲ್ಲವೇ ಇಲ್ಲ.

 

ಮತ್ತೆ, ನನಗೆ ತಿಳಿದಿರುವ ಹಾಗೆ, ರಾಮಚಂದ್ರಾಪುರಮಠ, ಸ್ವರ್ಣವಲ್ಲಿ ಮಠದ ಸಹಾಯ ಬಯಸಿಲ್ಲ, ಕೇಳಿಲ್ಲ, ಕೇಳುವದೂ ಇಲ್ಲ… ಇದು ಸಾಮಾನ್ಯ ಮನುಷ್ಯರಾದ ನಮ್ಮ ನೀರೀಕ್ಷೆಯಾಗಿತ್ತು ಅಷ್ಟೇ. ಆದರೆ, ಇಲ್ಲಿ ಕೆಡಿಸಲು ಬಂದ ಕೋತಿಗಳಿಗೆ ಅಲ್ಲಿ ಆಸನ ಕೊಟ್ಟಿದ್ದೀರಿ, ಅವರ ನಂಬಿ ನೀವು ಅಡಿಯಿಡುತ್ತಿದ್ದಿರಿ.. ಎಚ್ಚರವಾಗಿರಿ ಎನ್ನುವ ಕಾಳಜಿ ನಮ್ಮದು.

 

Leave a Reply

Your email address will not be published. Required fields are marked *