ಪ್ರಯೋಗಸಮವೇತ ಅರ್ಥಸ್ಮಾರಕಾಃ ಮಂತ್ರಾಃ

ಲೇಖನ

ವೇದವು ಕೈದೋರುವ ಪರಮಪುರುಷನ ಆರಾಧನೆಗಾಗಿ ಸಂಚಾರವನ್ನು ಬಿಟ್ಟು ಯತಿಗಳು ಒಂದೆಡೆ ನೆಲೆನಿಂತು, ಮನಸ್ಸನ್ನು ಭಗವಂತನಲ್ಲಿಯೇ ನೆಲೆನಿಲ್ಲಿಸಿ ಆತ್ಮಕಲ್ಯಾಣವನ್ನು ಸಾಧಿಸುವ, ಶಿಷ್ಯರನ್ನು ಆ ದಿಕ್ಕಿನಲ್ಲಿ ಬರುವಂತೆ ಅನುಗ್ರಹಿಸುವ ಪರಮಪವಿತ್ರವಾದ ಕಾಲ ಚಾತುರ್ಮಾಸ್ಯ ಕಾಲ. ಪರಮಪೂಜ್ಯ ಶ್ರೀಸಂಸ್ಥಾನದವರು ಹೀಗೆ ಚಾತುರ್ಮಾಸ್ಯವನ್ನು ಸಂಕಲ್ಪಿಸಿ, ವೇದವೇದ್ಯನ ಆರಾಧನೆಯಲ್ಲಿ ನಿರತರಾಗಿರುವಾಗ, ಆ ವೇದಪುರುಷನ ಆಶಯವೇನು, ಅವನ ಶಾಸನವೇನು ಎಂದು ಪೂರ್ಣವಾಗಿ ತಿಳಿಸುವ ಅನುಪಮ ಸಾಹಿತ್ಯವಾದ ವೇದಮಂತ್ರಗಳ ಪಾರಾಯಣ, ಅನುಸಂಧಾನ, ಯಾಗಗಳು ನಡೆಯುವುದು ಒಂದು ರೀತಿಯಲ್ಲಿ ಗುರುವಿನ ಹೆಜ್ಜೆಗೆ ಗೆಜ್ಜೆಯಾದಂತೆ. ಹಾಗೆ ಗುರುವಿನ ಜೊತೆ ಸಾಗಲು ಶಿಷ್ಯಕೋಟಿಯು ಶ್ರೀಸಂಸ್ಥಾನದ ಆದೇಶದಂತೆ ಈ ಸಮಯದಲ್ಲಿ ನಾಲ್ಕು ವೇದಗಳ ಸಂಹಿತಾ ಹವನವನ್ನು (ಪಾರಾಯಣ ಸಹಿತ) ವಿಧ್ಯುಕ್ತವಾಗಿ ಸಂಪನ್ನಗೊಳಿಸಿದೆ. ಆ ಹಿನ್ನೆಲೆಯಲ್ಲಿ ಸಂಕ್ಷಿಪ್ತವಾಗಿ ವೇದಕ್ಕೂ ನಮ್ಮ ಬದುಕಿಗೂ ಇರುವ ಸಂಬಂಧವನ್ನು ಸಾಮಾನ್ಯ ಜನರಿಗೆ ಸರಳವಾಗಿ ಹೇಳಲೆಂದು ಈ ಬರಹ.

ನಮ್ಮ ಕಣ್ಣೆದುರು ಕಾಣುವ, ಕಣ್ಣಿಗೆ ನಿಲ‌ುಕದ ವಿಸ್ತಾರವಾದ ಈ ಸೃಷ್ಟಿಯ ಮೂಲವು ಭಗವಂತನೆಂಬ ಬೆಳಕು. ಅಷ್ಟೇಕೆ, ನಮ್ಮ ಮೂಲವೂ ಅದೇ‌. ಅದು ಪ್ರಜೆಗಳ ತವರು ಮನೆ. ಪರಮಾತ್ಮನೆಂಬ ಬೆಳಕು ತಾನು ಬಹುವಿಧವಾಗಿ ವಿಸ್ತಾರವನ್ನು ಹೊಂದಿ ತನ್ನ ವೈಭವವನ್ನು ತಾನು ಕಾಣಬೇಕೆಂದು ಸಂಕಲ್ಪಿಸಿ ಸೃಷ್ಟಿಗೆ ತೊಡಗಿತು. ನಾಶವಿಲ್ಲದ ಕೇವಲಾನಂದರೂಪದ ಈ ಬೆಳಕಿನ ನಾದ ರೂಪವು ಓಂಕಾರ. ಬೆಳಕೇ ನಾದವಾಗಿ ಕೇಳಿದಾಗ ಅದು ಪ್ರಣವವಾಗಿ ಕೇಳುತ್ತದೆ. ಹೀಗೆ ಮೂಲದಲ್ಲಿ ಎರಡು ರೂಪದಲ್ಲಿ ಇದ್ದ ಭಗವಂತನು ಅರ್ಥರೂಪವಾಗಿಯೂ(ವಸ್ತು ರೂಪ) ಶಬ್ದ ರೂಪವಾಗಿಯೂ ವಿಕಾಸವಾದನು. ಆ ಬೆಳಕಿನ ಒಂದಂಶವೇ ನಮ್ಮೆದುರು ಕಾಣುವ ಈ ಜಗತ್ತು. ಅದರದ್ದೇ ಧ್ವನಿರೂಪವಾದ ಪ್ರಣವವು ತನ್ನೊಳಗಿನ ಮೂರು ವರ್ಣಗಳಿಂದ ಮೂರು ವ್ಯಾಹೃತಿಗಳಾಗಿ, ಗಾಯತ್ರಿಯಾಗಿ, ಮೂರು ವೇದವಾಗಿ ವಿಕಾಸವಾಯಿತು ಪ್ರಣವದ ಕೊನೆಯ ಅರ್ಧಮಾತ್ರೆಯಿಂದ ಅಥರ್ವ ವೇದದ ವಿಸ್ತಾರ. ವೇದವು ಭಗವಂತನ ವಿಸ್ತಾರವೇ ಆದ್ದರಿಂದ ಅದು ಭಗವಂತನಂತೆಯೇ ನಾಶವಿಲ್ಲದ್ದು.

ವಾಕ್ಯಗಳಂತೆ ಕೇಳುವ ಈ ವೇದ ರಾಶಿಯು ಇತರ ಶಬ್ದಗಳಂತಲ್ಲ. ನಮ್ಮ ಕಿವಿಗೆ ಕೇಳುವ ಎಲ್ಲ ಶಬ್ದಗಳೂ ಎರಡು ವಸ್ತುಗಳ ಘರ್ಷದಿಂದ ಹುಟ್ಟುವಂತದ್ದು. ಆಡುವ ಮಾತುಗಳೆಲ್ಲ ಯಾರದೋ ಒಬ್ಬರ ಮನದಲ್ಲಿ ಹುಟ್ಟುವಂಥದ್ದು. ಪ್ರಪಂಚದ ಶಬ್ದವೆಲ್ಲವೂ ಹೀಗೆ ಯಾರೋ ಒಬ್ಬರ ನಿರ್ಮಿತಿ ಅಥವಾ ಎರಡು ವಸ್ತುಗಳ ಬಡಿತದಿಂದ ಬಂದಿರುವಂತದ್ದು. ಆದರೆ ವೇದಗಳು ಹೀಗಲ್ಲ. ವೇದದಲ್ಲಿ ಪದವಿದೆ, ವಾಕ್ಯವಿದೆ, ವಿಷಯವಿದೆ, ಕಥೆಯಿದೆ. ಆದರೆ ಅದು ಯಾರೂ ಬರೆದದ್ದಲ್ಲ. ಯಾರೊಬ್ಬರೂ ಹೀಗೆ ಹೇಳಬೇಕೆಂದು ಹೇಳಿದ್ದಲ್ಲ. ಈ ತರಹದ್ದೊಂದು ವಾಕ್ಯವಿರಬಹುದು ಎಂದು ನಮಗೆ ನಂಬಲಾಗದು. ಆದರದು ವಾಸ್ತವ. ಎಂದೆಂದೂ ಇದ್ದ ವೇದಗಳು ತಪಸ್ಸಿನಲ್ಲಿ ಮುಳುಗಿದ ಮಹರ್ಷಿಗಳಿಗೆ ತಾವಾಗಿಯೇ ಕೇಳಿಸಿದವೇ ಹೊರತು ಅದನ್ನಾದರೂ ಹೇಳಿದ್ದಿಲ್ಲ, ಬರೆದಿದ್ದಲ್ಲ! ಉಳಿದೆಲ್ಲ ಸಾಹಿತ್ಯರಾಶಿಗಿಂತ ವೇದ ಸಾಹಿತ್ಯವು ಭಿನ್ನವಾಗುವುದು, ವಿಶಿಷ್ಟವಾಗುವುದು ಹೀಗೆ.

ಅನಂತವಾದ ವೇದವನ್ನು ಅಲ್ಪವಾಗಿ ಪರಿಚಯಿಸುವುದೂ ಕೂಡ ದುಷ್ಕರ. ಅದರ ನಾದ – ಸ್ವರ – ಉಚ್ಚಾರಣವಿಧಾನ‌ – ಪ್ರತಿಪಾದ್ಯ ದೇವತೆ ಹೀಗೆ ಒಂದು ಬಗೆ. ವೇದ ಸಾಹಿತ್ಯದೊಳಗಿನ ವಿಷಯದೃಷ್ಟಿಯಿಂದ ಅದರ ವಿಭಾಗಗಳನ್ನು ತೋರಿಸುವುದು ಮತ್ತೊಂದು ಬಗೆ. ಪ್ರಯೋಗದಲ್ಲಿ ಅದರ ಬಳಕೆ, ಅದರ ಅರ್ಥ ಸ್ವಾರಸ್ಯ ಹೀಗೆ ಇನ್ನೊಂದು ರೀತಿ. ಪ್ರಕೃತವಿಲ್ಲಿ ಸಾಮಾನ್ಯ ಜನರ ಉಪಯೋಗಕ್ಕಾಗಿ ಮಂತ್ರ – ವಿನಿಯೋಗದ ಹಿನ್ನೆಲೆಯನ್ನಿಟ್ಟುಕೊಂಡು ಒಂದು ಘನ ಪರಿಚಯವು ಬರಹದ ಉದ್ದೇಶ.

ವೇದಮಂತ್ರಗಳಿಗೆ ಕರ್ಮದಲ್ಲಿ ವಿನಿಯೋಗ, ಕ್ರಿಯೆಗೂ ಮಂತ್ರಕ್ಕೂ ಹೇಗೆ ಸಂಬಂಧವೆಂದರೆ, ಕ್ರಿಯೆಯ ಒಳಾರ್ಥವನ್ನು ಮಂತ್ರವು ತೋರಿಸುವುವಂತೆ “ಪ್ರಯೋಗಸಮವೇತ ಅರ್ಥಸ್ಮಾರಕಾಃ ಮಂತ್ರಾಃ” ಎಂದು ಆಪಸ್ತಂಬ ಮಹರ್ಷಿಗಳು ಹೇಳಿದ್ದು ಇದನ್ನೇ ಹೋಮ, ಹವನ, ಪೂಜೆಯಲ್ಲೊಂದು ಕ್ರಿಯೆಯನ್ನು ಮಾಡುತ್ತೇವೆ. ಆ ಕ್ರಿಯೆಯ ಆಶಯವೇನೆಂಬುದು ಅಲ್ಲಿನ ಮಂತ್ರದಿಂದ ತಿಳಿಯಬೇಕು. ದೇವರಿಗೆ ದೀಪವನ್ನ ತೋರಿಸುವ ಒಂದು ಕ್ರಿಯೆ – ಅದರ ಮಂತ್ರ ಉದ್ವಿಪ್ಯಸ್ವ ಜಾತವೇದೋs, ಪಘ್ನನ್ನಿರ್ ಋತಿಂ ಮಮ…. ದೀಪಬೆಳಗುವುದರ ಹಿಂದಿನ ಆಶಯಭಾವವು ಮಂತ್ರದಲ್ಲಿರುತ್ತದೆ. ಅಗ್ನಿಯೇ! ನೀನು ಬೆಳಗು, ಬೆಳಗುತ್ತ ಬೆಳಗುತ್ತ ನನಗೆ ಸಂಬಂಧಿಸಿದ ದುಷ್ಟಸಂಗತಿಗಳನ್ನು ನಾಶಪಡಿಸು, ನನ್ನ ಜೀವನವನ್ನು ಪೂರ್ಣವಾಗಿ ತೋರಿಸು ಇತ್ಯಾದಿ. ನಾವು ಯಾವ ವಿಷಯವನ್ನು ಚಿಂತಿಸುತ್ತ ಮುಂದುವರೆಯುತ್ತೇವೋ ಅದಕ್ಕೆ ತಕ್ಕಂತೆ ನಮ್ಮ ಮನೋಧರ್ಮವು ಬೆಳೆದು, ಆ ಮನೋಧರ್ಮವು ಅದಕ್ಕೆ ತಕ್ಕಂತೆ ದೇಹದಲ್ಲಿಯೂ ಬದಲಾವಣೆಯನ್ನು ತಂದು ಬಿಡುತ್ತದೆ.

ಹಾವನ್ನು ನೋಡಿಕೊಂಡು ಗಾಬರಿಯ ಧ್ವನಿಯಲ್ಲಿ ಅಬ್ಬಾ! ಭಯಂಕರ ಹಾವು ಎಂದು ಕೂಗುವಾಗ ಮನಸ್ಸಿನಲ್ಲಿ ಭಯ, ದೇಹದಲ್ಲಿ ಗಾಬರಿಯ ಲಕ್ಷಣಗಳು ಜೊತೆಗೆ ಇದನ್ನು ಕೇಳಿದವನಿಗೂ ತತ್ಕಾಲದಲ್ಲಿ ಅದೇ ಪರಿಣಾಮವನ್ನು ಉಂಟುಮಾಡುತ್ತದೆ. ಮನಸ್ಸಿನ ಆತಂಕ, ಗಾಬರಿಗಳು ರಕ್ತದೊತ್ತಡವೇ ಮೊದಲಾದ ರೋಗಗಳನ್ನು ತರುವುದು ನಮಗೆ ಗೊತ್ತೇ ಇದೆ. ಅದೇ ರೀತಿಯಲ್ಲಿ ಸಂತೋಷ – ಸಮೃದ್ಧಿಗಳು ಕೂಡ ಆ ಮನೋಧರ್ಮವು ತುಂಬಿರುವ ಮಾತುಗಳಿಂದ ನಮ್ಮಲ್ಲಿ ವೃದ್ಧಿಯಾಗುತ್ತದೆ ಎಂಬುದನ್ನು ಒಪ್ಪಲೇಬೇಕು. ಇದು ಮನಸ್ಸಿಗೂ, ಮಾತಿಗೂ, ದೇಹಕ್ಕೂ, ಕರ್ಮಕ್ಕೂ ಇರುವ ಸಂಬಂಧ.

ವೇದವು ತನ್ನೊಡಲೊಳಗೆ ಮನುಷ್ಯನ ಪರಿಪೂರ್ಣ ಸುಖಕ್ಕೆ ಬೇಕಿರುವ ಎಲ್ಲವನ್ನೂ ತುಂಬಿಕೊಂಡಿದೆ. ಅದರ ಅರ್ಥವನ್ನು ತಿಳಿದು ಅದನ್ನು ಹೇಳಬೇಕಾದ ರೀತಿಯಲ್ಲಿಯೇ ಶುದ್ಧವಾಗಿ ಪಠಿಸುವುದಾದರೆ ಅದು ಕಾಮಧೇನುವಾಗಿ ಎಲ್ಲವನ್ನೂ ಕೊಡಬಲ್ಲದು. ಬರಿಯ ಅರ್ಥ ತಿಳಿದರೆ ಸಾಕಲ್ಲವೇ ಎನ್ನಿಸಬಹುದು. ಸಾಲದು, ಅರ್ಥವು ತಿಳಿದಿದ್ದರೂ ಹೇಳುವ ವಿಧಾನ ಸರಿಯಿಲ್ಲದಿದ್ದಾಗ ಅದು ಆ ಪರಿಣಾಮವನ್ನು ಕೊಡುವುದಿಲ್ಲ. ಕೆಲವೊಮ್ಮೆ ಅದು ವಿರುದ್ಧ ಪರಿಣಾಮವನ್ನೂ ಕೊಡಬಹುದು. ಬಹಳ ಸಂತೋಷವಾಗಿದ್ದರೂ ಸಹ ಸಪ್ಪೆ ಧ್ವನಿಯಲ್ಲಿ ಮಾತನಾಡಿಬಿಟ್ಟರೆ ನಮ್ಮಲ್ಲಿ ಸಂತೋಷವು ವ್ಯಕ್ತವಾಗುವುದಿಲ್ಲವೆಂಬುದು ಹಾಗೆಯೇ ವೇದ ಉಚ್ಚಾರಣೆಯಲ್ಲಿ ನಿರ್ದಿಷ್ಟವಾದ ಸ್ವರವಿದೆ, ಸ್ಥಾಯಿಯಿದೆ. ಅದರ ಹಿಂದೆ ಬಹಳ ಸೂಕ್ಷ್ಮವಾದ, ವಿಸ್ತಾರದ ಧ್ವನಿಯ ವಿಜ್ಞಾನವಡಗಿದೆ. ಹಾಗಾಗಿ ಅರ್ಥವನ್ನ ಸ್ಮರಿಸುತ್ತಾ ಸರಿಯಾದ ಸ್ವರದಲ್ಲಿಯೇ ಅದನ್ನ ಪಠಿಸಬೇಕು. ಸ್ವರವು ತಪ್ಪಾದಲ್ಲಿ ರೋಗವೂ ಬರಬಹುದೆಂದು ಹೇಳಿದೆ ಶಾಸ್ತ್ರ. ಇದೊಂದು ಮಾತು ಆ ಸ್ವರ – ಧ್ವನಿಯ ಹಿಂದೆ ಎಷ್ಟೆಲ್ಲ ವಿಜ್ಞಾನವಿದೆಯೆಂದು ಹೇಳುತ್ತದೆ.
ವೇದ ವೈದಿಕಕರ್ಮಗಳು ಸೃಷ್ಟಿಯಲ್ಲಿರುವ ಸತ್ಯವನ್ನೇ ಹೇಳುತ್ತವೆ. ಅಗ್ನಿಗೆ ಅದರ ಪರಿಚರ್ಯೆ ಮಾಡುವ ಬ್ರಹ್ಮಚಾರಿ ಹೇಳುತ್ತಾನೆ –
ತೇಜೋsಸಿ ತೇಜೋ ಮಯಿ ಧೇಹಿ. ನೀನು ತೇಜಸ್ವಿಯಾಗಿ ಇದ್ದೀಯೆ. ಹಾಗಾಗಿ ನನ್ನಲ್ಲಿ ತೇಜಸ್ಸನ್ನು ಉಂಟುಮಾಡಿ ಉಳಿಯುವಂತೆ ಮಾಡು ಎಂದು. ಇದೊಂದು ಸಾಮಾನ್ಯ ಉದಾಹರಣೆ. ತನಗೆ ಏನೋ ಒಂದು ಬೇಕಿದೆ ಎಂದಾಗ ಅದು ನಿಜವಾಗಿ ಇರುವಲ್ಲಿ ನಾವು ಕೇಳಬೇಕು. ಎಲ್ಲಿ ಏನಿದೆ, ಅದರಿಂದ ನಮ್ಮ ಜೀವನದ ಯಾವ ಅಂಶವು ಪೂರ್ಣವಾಗುತ್ತದೆ ಎಂದು ವೇದವು ತಾನಾಗಿಯೇ ಹೇಳಿ, ತೋರಿ ಅನುಗ್ರಹಿಸಿದೆ.

ಭೂಮಿಯ ಗರ್ಭದಲ್ಲಿ ಅಗ್ನಿ ಇದೆ. ಅದು ಆ ಅಗ್ನಿಯಿಂದಾಗಿಯೇ ಒಂದು ಸಮಸ್ಥಿತಿಯಲ್ಲಿ ಶಾಂತವಾಗಿದೆ ಎಂದು ವೇದವು ಹೇಳುತ್ತದೆ. ಇದು ಸತ್ಯವೂ ಹೌದು. ಆಧುನಿಕ ವಿಜ್ಞಾನವೂ ಇದನ್ನು ಪ್ರಮಾಣೀಕರಿಸಿದೆ. ಈ ಸತ್ಯವನ್ನು ಹೇಳಿ ಪೃಥ್ವಿಯು ಹೇಗೆ ಅಗ್ನಿಯಿಂದ ಶಾಂತವಾಗಿದೆಯೋ ಹಾಗೆಯೇ ಅದು ನನ್ನ ದುಃಖವನ್ನು ಶಾಂತಗೊಳಿಸಲಿ ಎಂದು ಪ್ರಾರ್ಥನೆ – ಪೃಥಿವೀ ಶಾಂತಾ ಸಾಗ್ನಿನಾ ಶಾಂತಾ ಸಾ ಮೇ ಶಾಂತಾ ಶುಚಗ್ಂ ಶಮಯತು ಎಂದು. ಹೀಗೆ ಸಹಸ್ರಾರು ವಿಷಯಗಳು ಜೊತೆಗೆ ಅವುಗಳಿಂದ ನಮ್ಮ ಜೀವನವು ಸಮೃದ್ಧಿಯಾಗಲು ಏನು ಬೇಕೆಂದು ವೇದವು ದಾರಿ ತೋರಿದೆ. ಸಾರವಾಗಿ ಹೇಳುವುದಾದರೆ ನಮ್ಮೆಲ್ಲ ನಿಜವಾದ ಇಷ್ಟವನ್ನು ಕೊಡುವ, ಅನಿಷ್ಟವನ್ನು ದೂರ ಮಾಡುವ ಕಲ್ಪವೃಕ್ಷ ವೇದ.

ಇಂತಹ ಮಂಗಲಕರವಾದ, ಭಗವಂತನ ಉಸಿರಾದ ವೇದವು ನಿತ್ಯವೂ ಮನೆ ಮನೆಯಲ್ಲಿ ಅನುಸಂಧಾನವಾಗಬೇಕಾದ ಶಬ್ದಾಮೃತ. ಅದರ ಪಾರಾಯಣ ಹವನರೂಪದ ಅನುಸಂಧಾನವು ಶ್ರೀಮಠದಲ್ಲಿ ನಡೆದಿದೆ. ಈ ವೇದಾನುಸಂಧಾನವೆಂದರೆ ಅದು ಜೀವಕುಲದ ಸರ್ವತೋಮುಖವಾದ ಕಲ್ಯಾಣವೇ ಆಗಿದೆ.

 

ಲೇಖಕರು- ವಿ. ಕೀರ್ತಿ ಭಟ್ಟ್ ಚುಟ್ಟೀಕೆರೆ

ಧರ್ಮಶಾಸ್ತ್ರ,ಯೋಗಶಾಸ್ತ್ರ,ಜೌತಿಷ,ಆಗಮ ಶಾಸ್ತ್ರ ಅಧ್ಯಯನ ಸಂಪನ್ನರು-ಪ್ರಸಿದ್ಧ ವಿದ್ವಾಂಸರು,ಪೂರ್ವಾಪರ ಪ್ರಯೋಗ ಕುಶಲರು

Leave a Reply

Your email address will not be published. Required fields are marked *