ಮಾತೆಯ ಮಮತೆಯ ಕರೆ : ಸಿಗಂದೂರು ಚೌಡೇಶ್ವರೀದೇವಿಯ ರಥೋತ್ಸವ

ಲೇಖನ

ಶ್ರೀಸಿಗಂದೂರುಚೌಡೇಶ್ವರಿ! ‘ನೀನೇ ಎಲ್ಲ’ ಎನ್ನುವ ಭಾವದಲ್ಲಿ ಬೇಡಿ ಬರುವ ಭಕುತರಿಗೆ ಎಂದೂ ‘ಇಲ್ಲ’ ಎನ್ನದ ಕರುಣಾಕರೀ. ಹಾಗೆಯೇ ‘ನೀನೇನಲ್ಲ’ ಎನ್ನುವ ದುರುಳರ ದುರಹಂಕಾರವನ್ನು ‘ಹುಂ’ಕಾರ ಮಾತ್ರದಿಂದಲೇ ಸಂಹರಿಸುವ ದುಷ್ಟಭಯಂಕರಿಯೂ ಹೌದು.

 

ಮಾತೆಯ ಶಕ್ತಿಯೇ ಅಂತಹದ್ದು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ನದಿಯ ಹಿನ್ನೀರ ಪ್ರದೇಶದ ಮೂಲೆಯಲ್ಲಿರುವ, ಗೂಗಲ್ಲಿಗೂ ಸಿಗದ ಸಿಗಂದೂರಿನ ಕಾನನದಲ್ಲಿ ತಾನು ಕುಳಿತು, ದೇಶದ ಮೂಲೆ-ಮೂಲೆಯಿಂದ ಸಾಮಾನ್ಯ ಆದ್ಮಿ-ಉದ್ಯಮಿ, ಸಂತ-ಶ್ರೀಮಂತ ಮುಂತಾದ ಯಾವುದೇ ಭೇದವಿಲ್ಲದೇ, ಲಕ್ಷಾಂತರ ಜನರನ್ನು ತನ್ನಲ್ಲಿಗೆ ಕರೆಸಿಕೊಳ್ಳುತ್ತಿರುವುದು ಆಕೆಯ ಪ್ರಭಾವವನ್ನು ವರ್ಣಿಸಲು ಇರುವ ಹಲವು ನಿದರ್ಶನಗಳಲ್ಲೊಂದಷ್ಟೇ!

 

ಎರಡು ದಶಕದ ಹಿಂದೆ ಕುಗ್ರಾಮವಾಗಿದ್ದ ಸಿಗಂದೂರು ಜಗನ್ಮಾತೆಯ ಉಪಸ್ಥಿತಿಯಿಂದಾಗಿ ಇಂದು ದಿವ್ಯಕ್ಷೇತ್ರವಾಗಿ ಪರಿಣಮಿಸಿದೆ. ಈ ಕ್ಷೇತ್ರದ ಅಧಿದೇವತೆಯಾಗಿ ತಾಯಿ ಚೌಡೇಶ್ವರಿ, ಲಕ್ಷಾಂತರ ಜನರ ಬೇಸರವ ನೀಗಿಸುತ್ತಾ, ಲೋಕದೊಳಿತಿನ ಆಶಯಕ್ಕೆ ಧಕ್ಕೆ ತರುವವರ ಮನಸ್ಸೆಂಬ ಅರೆಗಾಯನ್ನು ಮಾಗಿಸುತ್ತಾ, ತಾನೇ ದೊಡ್ಡವನೆಂದು ಭಾವಿಸಿ ಬದುಕುವ ಮಾನವರ ಧಿಮಾಕನ್ನು ಕುಗ್ಗಿಸಿ, ಬಾಗಿಸುತ್ತಾ, ತನ್ನ ಪ್ರಭಾವದ ಅರಿವಿನ ರವವನ್ನು ಭಕ್ತರ ಭಾವ ಬಾಂದಳದಲ್ಲಿ ನಿರಂತರ ಮೊಳಗಿಸುತ್ತಿದ್ದಾಳೆ.

 

28 ವರ್ಷಗಳ ಹಿಂದೆ:
ಸಿಗಂದೂರು ಐತಿಹಾಸಿಕ ಕ್ಷೇತ್ರವಲ್ಲ. ಬದಲಾಗಿ ನಮ್ಮ ಕಣ್ಣೆದುರಿಗೇ ಹುಟ್ಟಿ, ಈಗ ಕಣ್ಣ ಅಂದಾಜಿಗೂ ನಿಲುಕದಷ್ಟು ದೊಡ್ಡದಾಗಿ ಬೆಳೆದಿರುವ ಕ್ಷೇತ್ರವದು. 28 ವರ್ಷಗಳ ಹಿಂದಿನವೆರೆಗೂ ಈ ದೇವಿ ಶರಾವತಿ ತೀರದ ಗೊಂಡಾರಣ್ಯದ ಗುಹೆಯೊಂದರಲ್ಲಿ ನೆಲೆಸಿದ್ದಳಾಕೆ. ಸೀಮಿತ ಭಕ್ತರನ್ನು ಸಲಹುತ್ತಾ, ಅಲ್ಲಿನ ನೇಸರನ ಸೊಬಗಿನ ಭವ್ಯತೆಗೆ ತನ್ನ ದಿವ್ಯತೆಯ ಎರಕ ಹೊಯ್ಯುತ್ತಾ, ತಾನೇತಾನಾಗಿ ನೆಲೆ ನಿಂತಿದ್ದಳಾಕೆ.

 

ಅದೊಂದು ಸುದಿನ. ಅಂದು ಆ ಮಾತೆಗೆ ಅದೇನಾಯಿತೋ?
ಬಹುಶಃ, ಅದುವರೆಗೂ ತೊಟ್ಟಿಕ್ಕುತ್ತಿದ್ದ ಭಕ್ತರೆಡೆಗಿನ ಕಾರುಣ್ಯ, ಒಳಗಿರಲಾಗದೆ ಕೋಡಿಯಾಗಿ ಹರಿದಿರಬೇಕು. ಸಜ್ಜನರ ಬೆಂಬಿಡದೇ ಕಾಡುವ ಭವದ ತಾಪವನ್ನು ನೋಡಿ, ಆ ಮಾತೃಹೃದಯ ಆರ್ದ್ರವಾಗಿರಬೇಕು. ಕಷ್ಟಕೋಟಲೆಯಿಂದ ಪರಿತಪಿಸುತ್ತಿರುವ ತನ್ನ ಮಕ್ಕಳ ಅಂತರಾಳದ ಆರ್ತನಾದಕ್ಕೆ ದೇವಿಯ ಅಂತರಂಗ ‘ಓ’ಗೊಟ್ಟಿರಬೇಕು. ಅಥವಾ ತನ್ನ ಸಾಮರ್ಥ್ಯವನ್ನು ಲೋಕಮುಖಕ್ಕೆ ಒಮ್ಮೆಲೆ ಪ್ರಕಟಿಸಿಬಿಡಬೇಕು ಎಂದೆನ್ನಿಸಿರಬೇಕು. ಹಾಗಾಗಿಯೇ ಅಂದು, ದೇವಸ್ಥಾನದ ಇಂದಿನ ಧರ್ಮದರ್ಶಿ ರಾಮಪ್ಪ ಹಾಗೂ ಪ್ರಧಾನ ಅರ್ಚಕ ಶೇಷಗಿರಿ ಭಟ್ಟರಿಗೆ ಪ್ರೇರಣೆಯಿತ್ತಳು. ಆ ಪ್ರೇರಣೆಯ ಫಲಶೃತಿಯೇ ಇಂದು ಕಂಗೊಳಿಸುತ್ತಿರುವ ಚೌಡೇಶ್ವರಿ ದೇವಾಲಯ.

 

ಹೀಗೆ ತನ್ನ ಅನಂತಶಕ್ತಿಯನ್ನು ಒಮ್ಮೆಲೆ ತೋರ್ಪಡಿಸಿzÀ, ¨sÀPÀÛgÀ ಭಯವನ್ನು ಅಭಯದ ಮೂಲಕ ನಿವಾರಿಸುವ, ಕಷ್ಟ – ಕಾರ್ಪಣ್ಯಗಳನ್ನು ಹೇಳಿಕೊಂಡು ಬರುವ ಭಕ್ತರಿಗೆ ಇಷ್ಟಾರ್ಥಗಳನ್ನು ಕರುಣಿಸುವ ಆ ಜಗನ್ಮಾತೆಯ ಮಮತೆ, ಅಪಾರ ಕರುಣೆ, ಅನನ್ಯ ಮಹಿಮೆಗಳು ಈಗಂತೂ ದೇಶದ ಮೂಲೆಮೂಲೆಗೆ ಪರಿಚಿತ.

 

ಶ್ರೀರಾಮಚಂದ್ರಾಪುರಮಠದ ಗೋಕರ್ಣಮಂಡಲಾಚಾರ್ಯ ಜಗದ್ಗುರುಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶದಲ್ಲಿ ಮುನ್ನಡೆಯುತ್ತಿರುವ ಈ ದೇವಾಲಯದಲ್ಲಿ ಸಂಕ್ರಮಣದ ಪುಣ್ಯಕಾಲದಲ್ಲಿ ಪ್ರತಿವರ್ಷ ರಥೋತ್ಸವವೇ ಮುಂತಾದ ಪುಣ್ಯಕಾರ್ಯಗಳು ಸಂಪನ್ನವಾಗುತ್ತಲಿವೆ.

 

ಮಲೆನಾಡಿನ ಕಡುಕಾಡಿನಲ್ಲಿ ಗುಪ್ತವಾಗಿ ಕುಳಿತು, ತನ್ನ ಶಕ್ತಿಯ ವಿಶ್ವರೂಪದರ್ಶನ ಮಾಡಿಸಿ, ತನ್ನಲ್ಲಿಗೆ ಭಕ್ತಕೋಟಿಯನ್ನು ಕರೆಸಿಕೊಳ್ಳುತ್ತಿರುವ ಆ ಶಕ್ತಿಸ್ವರೂಪಿಣಿ, ತಾನೇ ಗರ್ಭಗುಡಿಯಿಂದ ಹೊರಬಂದು, ರಥೋತ್ಸವದ ಮೂಲಕ ಭಕ್ತರಿಗೆ ತನ್ನನ್ನು ಹತ್ತಿರದಿಂದ ದರ್ಶನ ಮಾಡಿಸಿ, ಪೊರೆಯುವ ಕರುಣಾಸ್ವರೂಪಿಣಿಯಾಗುವ ಪುಣ್ಯಸಮಯ ಜನವರಿ 15.

ಜನವರಿ 14ರಿಂದ ಶುರುವಾಗಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು 15 ರಂದು ಸಂಪನ್ನಗೊಳ್ಳಲಿವೆ. ಕೊನೆಯಲ್ಲಿ ಶ್ರೀಕ್ಷೇತ್ರದ ಮೇಳದಿಂದ ಯಕ್ಷಗಾನ ಕಾರ್ಯಕ್ರಮ ಕೂಡ ಉತ್ಸವದ ಮೆರುಗನ್ನು ಹೆಚ್ಚಿಸಲಿದೆ.

 

ಇಂತಹ ಅನೇಕ ಅದ್ಭುತ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿ, ರಥದಲ್ಲಿ ರಾರಾಜಿಸುವ ಶ್ರೀಮಾತೆಯನ್ನು ರಥೋತ್ಸವದಲ್ಲಿ ಕಣ್ದುಂಬಿಕೊಳ್ಳೋಣ. ಆ ದಿವ್ಯಮಂಗಲವಿಗ್ರಹವನ್ನು ನಮ್ಮ ಹೃದ್ರಥದಲ್ಲಿ ಕೂರಿಸಿ, ಜೀವನ ಪೂರ್ತಿ ಶ್ರೀಮಾತೆಯ ರಥೋತ್ಸವ ಮಾಡೋಣ.

 

ಈ ಎಲ್ಲ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಲು, ಭವದ ಕಾವನ್ನು ಶಮನಗೊಳಿಸಿಕೊಳ್ಳಲು, ತಾನೇತಾನಾಗಿ ಬೆಳಗುವ, ಜಗನ್ಮಾತೆಯ ತಾವಾದ ಸಿಗಂದೂರಿಗೆ ಸಂಸಾರದ ಕಾವು ಕಳೆಯಲು ತಾವು ಹೋಗೋಣವಾಗಲಿ.

Author Details


Srimukha

Leave a Reply

Your email address will not be published. Required fields are marked *