ಜ್ಞಾನದ ದೀಪ ‘ಧರ್ಮ ಭಾರತೀ’ : ವಿದ್ಯಾರವಿಶಂಕರ್ ಯೇಳ್ಕಾನ, ಪುತ್ತೂರು

ಲೇಖನ

 

 



ಇಡೀ ವಿಶ್ವಕ್ಕೆ ಧಾರ್ಮಿಕತೆ, ಆಧ್ಯಾತ್ಮಿಕತೆ, ಆಚಾರ, ವಿಚಾರ, ಸಂಸ್ಕೃತಿಗಳ ಭೋದಿಸಿದ ಭಾರತ ಇಂದು ದೇವರು – ಧರ್ಮಗಳಿಂದ ದೂರ ಸರಿಯುತ್ತಾ ಇದೆ. ಆಧುನಿಕ ಸಂಸ್ಕೃತಿ, ತಂತ್ರಜ್ಞಾನಗಳ ಬೆನ್ನೆತ್ತಿ, ಸನಾತನ ಧರ್ಮ, ಸಂಸ್ಕೃತಿ, ಕಲೆಗಳ ಮರೆತು ನಾಶದಂಚಿಗೆ ಸಾಗುತ್ತಾ ಇದೆ. ಹೀಗೆ ಕಲಿಯುಗದಲ್ಲಿ ಇಂದು ಧರ್ಮ ಹಂತ ಹಂತವಾಗಿ ಮರೆಯಾಗುತ್ತಾ ಅಧರ್ಮ ತಾಂಡವವಾಡುತ್ತಿದೆ. 

 

ಇಂತಹ ಈ ಸಂದಿಗ್ಧ ಕಾಲದಲ್ಲಿ ನಮ್ಮ ಸನಾತನ ಧರ್ಮ, ಸಂಸ್ಕೃತಿ, ಆಚಾರ ವಿಚಾರ, ಸಂಪ್ರದಾಯಗಳನ್ನು ಜನಮಾನಸಕ್ಕೆ ಪರಿಚಯಿಸುವ ಅಗತ್ಯವನ್ನರಿತ ನಮ್ಮ ಶ್ರೀಸಂಸ್ಥಾನ  ‘ಧರ್ಮಭಾರತೀ’ ಎನ್ನುವ ಮಾಸಪತ್ರಿಕೆಯನ್ನು 15.10.2000ದಂದು ಶ್ರೀರಾಮಾಶ್ರಮ ಗಿರಿನಗರದಲ್ಲಿ ಲೋಕಾರ್ಪಣೆ ಮಾಡಿದರು. ಈ ಮಾಸಪತ್ರಿಕೆಯಲ್ಲಿ ಮುಖ್ಯವಾಗಿ ಶ್ರೀಗುರುಗಳ ದಿವ್ಯಸಂದೇಶಗಳು, ಲೇಖನಾಮೃತಗಳು, ಆಶೀರ್ವಚನದ ತುಣುಕುಗಳು, ಪ್ರಸಿದ್ಧ ವಿದ್ವಾಂಸರು, ತಜ್ಞರು ಬರೆದ ಧರ್ಮಸಂದೇಶಗಳು ಆಧ್ಯಾತ್ಮಿಕ ಕಥಾಧಾರೆಗಳು ಜನರ, ಧರ್ಮಾಭಿಮಾನಿಗಳ ಮನಮುಟ್ಟುವ ರೀತಿಯಲ್ಲಿ ಪ್ರಕಟವಾಗುತ್ತಿವೆ. ಇವಲ್ಲದೆ ಶ್ರೀರಾಮಾಯಣದರ್ಶನ, ಶ್ರೀಕೃಷ್ಣಲೀಲಾವಳಿ, ಶ್ರೀಮಹಾಭಾರತ ಕಥಾಧಾರೆ, ಭಾರತೀಯ ಗೋವಂಶವೈಭವ, ಸನಾತನ ಭಾರತ, ಪ್ರಾಚೀನ ಶಿಕ್ಷಣ ವಿಧಾನ, ವನೌಷಧಿ ಸಸ್ಯಗಳು, ಸುಭಾಷಿತ, ಬಾಲಭಾರತಿ, ಆಹಾರ-ವಿಹಾರ, ಆರೋಗ್ಯವಿಚಾರಗಳು ಇತ್ಯಾದಿಗಳಿಂದ ಕೂಡಿದ, ಜನರಿಗೆ ತೃಪ್ತಿ ನೀಡುವ ಲೇಖನಗಳು ಮೂಡಿ ಬರುತ್ತಿವೆ. ಹೀಗೆ ಮೂಲೆಗುಂಪಾದ ಪುರಾಣ ಪುಣ್ಯಕಥೆಗಳು ‘ಪುನರಪಿ ಜನನಂ’ ಎನ್ನುವಂತೆ ಬೆಳಕಿಗೆ ತರುತ್ತಿದೆ. ಅಂದರೆ ಇಂದು ಸಾಮಾನ್ಯ ಮನುಷ್ಯನಿಗೂ ಧರ್ಮದ ಬಗ್ಗೆ ಅರಿವು ಮೂಡುವಂತಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಮನುಷ್ಯನ ಅಧ್ಯಾತ್ಮದ ಹಸಿವು ನೀಗಿಸುವ ತಾಣವೇ ಈ ‘ಧರ್ಮಭಾರತೀ’. 

 


ಈ ಮಾಸಪತ್ರಿಕೆ ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಆಕರ್ಷಣೀಯವಾಗಿ ಜನಪ್ರಿಯವಾಗಿ ಮೂಡಿ ಬರುತ್ತಿದೆ. ನಮ್ಮ ಋಷಿ ಮುನಿಗಳು ಹೇಳಿದ ವೇದ, ಶಾಸ್ತ್ರ, ಇತಿಹಾಸ, ಪುರಾಣ, ಕಾವ್ಯ, ಸಾಹಿತ್ಯ ಇತ್ಯಾದಿ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವ ಉದ್ದೇಶದಿಂದ ಹುಟ್ಟಿದ ಮಾಧ್ಯಮವೇ ಧರ್ಮಭಾರತೀ. ಇದರಲ್ಲಿ ಧರ್ಮದ ತಿರುಳನ್ನು ಸುಲಭವಾಗಿ ಜನರಿಗೆ ತಿಳಿಸುವ ಪ್ರಯತ್ನವಾಗುತ್ತಿದೆ. ಅದರ ಮರ್ಮವ ಅರಿಯುವ ಪ್ರಯತ್ನ ನಮ್ಮದಾಗಬೇಕಿದೆ.
ಬೇರೆ ಬೇರೆ ಅಭಿರುಚಿ ಇರುವ ಜನರಿಗೆ ತೃಪ್ತಿಯಾಗುವಂತೆ ಉಣಬಡಿಸುವುದು ಸುಲಭದ ಕೆಲಸವಲ್ಲ. ಒಬ್ಬರಿಗೆ ರುಚಿಸುವುದು ಇನ್ನೊಬ್ಬರಿಗೆ ರುಚಿಸದೇ ಇರಬಹುದು. ಎಲ್ಲರನ್ನೂ ತೃಪ್ತಿ ಪಡಿಸುವ ಆಸೆ ಈ ಧರ್ಮಭಾರತೀ ಸಂಪಾದಕರದ್ದು.ಈ ನಿಟ್ಟಿನಲ್ಲಿ ಹೇಳುವುದಾದರೆ ಈ ಮಾಸಪತ್ರಿಕೆಯು ಆಬಾಲವೃದ್ಧರಿಗೂ ತೃಪ್ತಿಯಾಗುವ ಸಾಹಿತ್ಯ ಕೊಟ್ಟು ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಸಾಮಾನ್ಯವಾಗಿ ದಿನಪತ್ರಿಕೆಗಳಿಗೆ ದಿನದ ಆಯುಷ್ಯ, ವಾರಪತ್ರಿಕೆಗಳಿಗೆ ವಾರದ ಆಯುಷ್ಯ, ಮಾಸಿಕಕ್ಕೆ ಮಾಸಿಕ. ಆದರೆ ಈ ಧರ್ಮಭಾರತೀ ಇಡೀ ಜೀವಮಾನಕ್ಕೆ ಅಮೂಲ್ಯವಾದ ನೀತಿ, ತತ್ತ್ವ, ಧರ್ಮಗಳ ಮೌಲ್ಯಗಳನ್ನು ಅಪೂರ್ವವಾಗಿ ಉಣಬಡಿಸುವ ಪತ್ರಿಕೆ. ಹೀಗೆ ಅಂದು ವಾಮನನ ಹಾಗೆ ಹುಟ್ಟಿದ ಈ ಪತ್ರಿಕೆ ಇಂದು ತ್ರಿವಿಕ್ರಮನ ಹಾಗೆ ಬೆಳೆಯುತ್ತಾ ಇದೆ. ಸಮಾಜದ ಎಲ್ಲ ಜನರಿಗೂ ಅವರ ಜೀವನ ಮೌಲ್ಯಗಳ ತಿಳಿಸುತ್ತಾ ಇದೆ. ಮುಖ್ಯವಾಗಿ ಶ್ರೀಗುರುಗಳು ಪಣತೊಟ್ಟ ಗೋವಿಗಾಗಿ ಧರ್ಮಯುದ್ಧ, ಗೋತಳಿಗಳ ಸಂರಕ್ಷಣೆ, ಸಂವರ್ಧನೆ, ಗೋಹತ್ಯಾನಿಷೇಧವನ್ನು ಆಳುವವರಿಗೆ ನೆನಪಿಸುವ ಬರಹಗಳು ಜನಗಳಲ್ಲಿ ಸ್ಫೂರ್ತಿ ತುಂಬಿ ಜಾಗೃತಿಗೆ ನಾಂದಿ ಹಾಡಿತು. ಇದರಿಂದ ‘ವಂದೇ ಗೋಮಾತರಮ್’ ನಾಡಿನೆಲ್ಲೆಡೆ ಮೊಳಗುವಂತಾಯಿತು. 

 

ಇವಲ್ಲದೇ ಭಾರತೀಯ ಹಬ್ಬ ಹರಿದಿನಗಳು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹೊಸರೂಪ ಕೊಟ್ಟ ಕೀರ್ತಿ ಧರ್ಮಭಾರತಿಗೆ ಸಲ್ಲಬೇಕು. ಒಟ್ಟಿನಲ್ಲಿ ಈ ಪತ್ರಿಕೆಯಿಂದಾಗಿ  ಸಮಾಜದಲ್ಲಿ ಆರೋಗ್ಯಕರ ಪರಿಸರ ನಿರ್ಮಾಣವಾಗುತ್ತಿದೆ. 

 

ಹೊಸಬೇರು ಹಳೆಚಿಗುರು ಕೂಡಿರಲು ಮರಸೊಬಗು
ಹೊಸಯುಕ್ತಿ ಹಳೆತತ್ತ್ವದೊಡಗೂಡಿ ಧರ್ಮ
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜೀವನಕೆ- ಮಂಕುತಿಮ್ಮ


ಹೀಗೆ ಸಾಹಿತ್ಯಲೋಕದ ಒಬ್ಬ ಅನರ್ಘ್ಯರತ್ನವೇ ಆದ ಡಿವಿಜಿಯವರ ಕವಿವಾಣಿ ನೆನಪಾಯಿತು. ಇಂದಿನ ಆಧುನಿಕ ಸಮಾಜದಲ್ಲಿ ಪ್ರಾಚೀನ ಸಂಸ್ಕೃತಿ, ಸಂಪ್ರದಾಯಗಳೆಲ್ಲ ಮೂಢನಂಬಿಕೆಗಳೆಂದು ಅಪಹಾಸ್ಯಕ್ಕೀಡಾಗಿ ಮೂಲೆಗುಂಪಾಗುತ್ತಿದೆ. ಆದರೆ ಹಿರಿಯರು ಮಾಡಿದ, ಆಚರಿಸಿಕೊಂಡು ಬಂದ ಸಂಪ್ರದಾಯಗಳ ಪರಾಂಬರಿಸಿ ನೋಡಿದರೆ ಅದರ ಹಿಂದೆ ಅಡಗಿರುವ ವೈಜ್ಞಾನಿಕ ಮೌಲ್ಯ ಬೆಳಕಿನಷ್ಟೇ ಸತ್ಯವಲ್ಲವೇ? ಇಂತಹ ಈ ವೈಜ್ಞಾನಿಕ ಮೌಲಿಕ ಸತ್ಯಗಳ ಇಂದು ಧರ್ಮಭಾರತೀ ಮಾಸಪತ್ರಿಕೆ ಬೆಳಕಿಗೆ ತರುತ್ತಾ ಇದೆ. ಆದ್ದರಿಂದ ಜೀವನದ ಧನ್ಯತೆಯ ಮಾರ್ಗದಲ್ಲಿ ಕೊಂಡೊಯ್ಯುವ ಈ ಧರ್ಮಭಾರತೀ ಯ ಬೆಳಕಿನಡಿ ನಾವೆಲ್ಲ ಸಾಗೋಣವಲ್ಲವೇ? 

 


ಸಮಾಜವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಈ ‘ಧರ್ಮಭಾರತಿಗೆ ಅನಂತ ನಮನಗಳು.

Author Details


Srimukha

Leave a Reply

Your email address will not be published. Required fields are marked *