ಮಠದ ಮೂಲ ಕಥೆ – ಮೂಲ ಮಠದ ಕಥೆ – ೩ : ಮಹೇಶ ಎಳ್ಯಡ್ಕ

ಲೇಖನ

ಆಚಾರ್ಯ ಶಂಕರರಿಂದ ಪರಂಪರೆಯು ಆರಂಭಗೊಂಡಿತು. ಸುರೇಶ್ವರಾಚಾರ್ಯರ ಮೂಲಕ ವಿದ್ಯಾನಂದಾಚಾರ್ಯರು ಪ್ರಥಮ ಪೀಠಾಧಿಪತಿಗಳಾದರು. ವಿದ್ಯಾನಂದರ ತರುವಾಯ ಚಿದ್ಭೋದಭಾರತೀ ಶ್ರೀಗಳವರು, ಅವರ ಶಿಷ್ಯರು ನಿತ್ಯಾನಂದಭಾರತೀ ಶ್ರೀಗಳು, ಅವರ ಶಿಷ್ಯರು ನಿತ್ಯಬೋಧಘನೇಂದ್ರಭಾರತೀ ಶ್ರೀಗಳು ಹೀಗೇ ಸಾಗುತ್ತದೆ ಶಾಂಕರ ಪರಂಪರೆ.

 

ಹನ್ನೊಂದನೆಯ ಪೀಠಾಧಿಪತಿಗಳಾದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು (ಪರಂಪರೆಯ ಪ್ರಥಮ ರಾಘವೇಶ್ವರಭಾರತೀ ಶ್ರೀಗಳು, ಶಾ.ಶಕೆ 1386) ಯೋಗ್ಯ ವಟುವನ್ನು ಶಿಷ್ಯರನ್ನಾಗಿ ಸ್ವೀಕರಿಸಿ, ತಮ್ಮ ಆರಾಧ್ಯದೈವ ಶ್ರೀರಾಮಚಂದ್ರನ ಹೆಸರನ್ನೇ ನಾಮಕರಣ ಮಾಡಿ ಯೋಗಪಟ್ಟವನ್ನು ಅನುಗ್ರಹಿಸುತ್ತಾರೆ. ಶ್ರೀಶ್ರೀರಾಮಚಂದ್ರಭಾರತೀ ಶ್ರೀಗಳ ಪ್ರೌಢಿಮೆ ಮತ್ತು ಧರ್ಮಬೋಧೆಗಳು ಕೆಳದಿ ಚೌಡಪ್ಪನಾಯಕನ ಗಮನಕ್ಕೆ ಬಂದು, ತನ್ನ ಸೀಮಾ ವ್ಯಾಪ್ತಿಯಲ್ಲಿ ಮಠವೊಂದು ಸ್ಥಾಪನೆಯಾಗಬೇಕೆಂಬ ಕೋರಿಕೆಯನ್ನು ಮಂಡಿಸುತ್ತಾನೆ. ಅದನ್ನು ಮನ್ನಿಸಿ, ಗುರು ಅನುಗ್ರಹದೊಂದಿಗೆ ಶರಾವತೀ ತೀರದ, ಅಗಸ್ತ್ಯತೀರ್ಥದ ಬಳಿ ಮಠವೊಂದನ್ನು ಸ್ಥಾಪಿಸುತ್ತಾರೆ. ಆರಾಧ್ಯ ದೇವರೂ, ಸದರಿ ಪೀಠಾಧಿಪತಿಗಳ ಹೆಸರೂ ಆದ ಶ್ರೀರಾಮಚಂದ್ರಾಪುರಮಠವೆಂದೇ ಕಾಲಾಂತರದಲ್ಲಿ ಪ್ರಸಿದ್ಧಿಯಾಯಿತು.

 

ಪ್ರಥಮ ರಾಘವೇಶ್ವರಭಾರತೀ ಶ್ರೀಗಳ ಸಂನ್ಯಾಸಪ್ರಭೆಗೆ ಆಕರ್ಷಿತರಾದ ಮತ್ತೋರ್ವ ವಟು ಆಶ್ರಮ ಪ್ರವೇಶಕ್ಕೆ ಕೋರಿದ್ದುದರಿಂದ, ಆ ವಟುವಿಗೆ ರಘೂತ್ತಮಭಾರತೀ ಎಂಬ ಅಭಿನಾಮವನ್ನು ಅನುಗ್ರಹಿಸಿ ಶಿಷ್ಯರನ್ನಾಗಿ ಸ್ವೀಕರಿಸಿದರು. ಇವರು ಮುಂದೆ ಕೆಕ್ಕಾರು ಪ್ರಾಂತದಲ್ಲಿ ಮಠವೊಂದನ್ನು ಸ್ಥಾಪಿಸಿದ್ದು, ಈ ಪರಂಪರೆಯು ಹನ್ನೆರಡು ತಲೆಮಾರುಗಳ ಕಾಲ ಪೀಠಾಧಿಪತಿಗಳನ್ನು ನಿಯೋಜಿಸುತ್ತಾ, ಆ ಪರಿಸರದ ಸಮಾಜಕ್ಕೆ ಶಾಂಕರ ತತ್ತ್ವ ಬೋಧಿಸುತ್ತಾ ಬಂದಿತ್ತು.

 

ಕೆಕ್ಕಾರು ಪರಂಪರೆಯ ಹದಿಮೂರನೆಯ ಪೀಠಾಧಿಪತಿಗಳ ಅಭಿನಾಮ  ಶ್ರೀಶ್ರೀರಾಘವೇಶ್ವರಭಾರತೀ ಎಂಬುದಾಗಿ. ಇತ್ತ ಹೊಸನಗರದಲ್ಲಿ ಮೂವತ್ತೊಂದನೆಯ ಪೀಠಾಧಿಪತಿಗಳಾಗಿ ರಾಮಚಂದ್ರಭಾರತೀ ಶ್ರೀಗಳು ನಿಯುಕ್ತರಾಗಿ, ಇನ್ನೂ ಅಧ್ಯಯನ ಹಂತದಲ್ಲಿರುವಾಗಲೇ ಅವರ ಗುರುಗಳಾದ ೩೦ನೆಯ ಪೀಠಾಚಾರ್ಯರು (ಏಳನೆಯ ರಾಘವೇಶ್ವರಭಾರತೀ ಶ್ರೀಗಳು) ಮುಕ್ತರಾದರು. ಹಾಗಾಗಿ ಮೂವತ್ತೊಂದನೆಯ ಶ್ರೀಗಳ ಶಾಸ್ತ್ರಾಭ್ಯಾಸ, ಶ್ರೀಮಠದ ಆಡಳಿತ ಪಾಠಗಳನ್ನು ತಾವೇ ಗುರುಸ್ಥಾನದಲ್ಲಿ ನಿಂದು ಕೆಕ್ಕಾರಿನ ಹದಿಮೂರನೆಯ ಪೀಠಾಚಾರ್ಯರಾದ ರಾಘವೇಶ್ವರಭಾರತೀ ಶ್ರೀಗಳು ನಡೆಸಿದುದಲ್ಲದೇ,  ತಾವು ಬೇರೆ ಶಿಷ್ಯಸ್ವೀಕಾರ ಮಾಡುವುದಿಲ್ಲವೆಂದೂ ನಿರ್ಧರಿಸಿ, ಶಾ.ಶಕೆ 1787ರಲ್ಲಿ ಮುಕ್ತರಾದರು.

 

ಪರಂಪರೆಯ ಹನ್ನೊಂದನೇ ತಲೆಮಾರಿನ ಶ್ರೀರಾಘವೇಶ್ವರಭಾರತೀ-ಶ್ರೀರಾಮಚಂದ್ರಭಾರತೀ ಶ್ರೀಗಳ ಸಮಯದಲ್ಲಿ ಕವಲಾದ ಕೆಕ್ಕಾರು ಪರಂಪರೆ, ಮೂವತ್ತೊಂದರ ಶ್ರೀರಾಘವೇಶ್ವರಭಾರತೀ-ಶ್ರೀರಾಮಚಂದ್ರಭಾರತೀ ಶ್ರೀಗಳ ಸಮಯದಲ್ಲೇ ಪುನಃ ಒಂದಾಯಿತು.

 

ದೊಡ್ಡದಾದ ಬೆಟ್ಟದ ಹಿಂದೆ ಕವಲೊಡೆದ ನದಿಯೊಂದು ಪುನಃ ಬೆಟ್ಟದಾಚೆ ಒಂದಾಗುವಂತೆ, ಶ್ರೀರಂಗಪಟ್ಟಣದ ಕಾವೇರಿ ನದಿಯಂತೆ,  ಒಂದೇ ಪರಂಪರೆಯ ಎರಡು ಕವಲು ಕೆಕ್ಕಾರು-ಹೊಸನಗರ ಮತ್ತೆ ಒಂದಾಗಿ ಮುಂದುವರಿಯುತ್ತಿದೆ. ಗೋಕರ್ಣಮಂಡಲವೆಂಬ ಸಮಾಜದ ಬೆಟ್ಟವನ್ನು ಸದಾ ಧರ್ಮಜಲದಿಂದ ಪೋಷಿಸುತ್ತಿದೆ.

 

ವರ್ಗಾವಣೆ:

ಅಶೋಕೆಯಿಂದ ಕೆಳದಿ ಆಶ್ರಯಕ್ಕೆ ಮಠವು ವರ್ಗಾವಣೆಗೊಂಡುದುದಕ್ಕೆ ಐತಿಹಾಸಿಕ, ರಾಜನೈತಿಕ ಕಾರಣವೂ ಇದೆಯೆಂಬುದು ಇತಿಹಾಸಕಾರರ ಅಭಿಪ್ರಾಯ. ಗೋಕರ್ಣದ ಸನಿಹದಲ್ಲೇ ಬೀಡುಬಿಟ್ಟಿತ್ತು ಧರ್ಮಾಂಧ ಪೋರ್ಚುಗೀಸರ ಪಡೆ. ಅವಿಚ್ಛಿನ್ನ ಪರಂಪರೆಯ ಉಳಿವಿಗಾಗಿ ಯೋಗ್ಯ ಆಶ್ರಯದ ಅವಕಾಶವೂ ದೊರಕಿಬಂದಿತ್ತು. ಒಟ್ಟಾಗಿ, ಕಾಲನ ಪ್ರವಾಹದಲ್ಲಿ ಅಶೋಕೆಯ ಪರಿಸರವು ನಮ್ಮ ಐತಿಹ್ಯಗಳಲ್ಲಿ ಹಾಗೂ ಕುರುಹುಗಳಲ್ಲಿ ಮಾತ್ರ ಉಲ್ಲೇಖವಾಗಿತ್ತು. ಶ್ರೀಪೀಠ ಹಾಗೂ ಶ್ರೀಕರಾರ್ಚಿತ ದೇವರುಗಳು ಶ್ರೀರಾಮಚಂದ್ರಾಪುರಮಠದಲ್ಲಿ ಶೋಭಿಸುತ್ತಿತ್ತು. ಅತ್ತ ಅಶೋಕೆಯ ಪರಿಸರವು ಅಗ್ರಹಾರವಾಗಿದ್ದುದು, ಕ್ರಮೇಣ ಜನವಸತಿಯಿಂದ ದೂರವಾಯಿತು. ಅಶೋಕೆಯಲ್ಲಿ ನಾಡು ದೂರವಾಗಿ ಕಾಡು ಹತ್ತಿರವಾಯಿತು.

 

ಆದರೂ ಪ್ರತಿ ಪೀಠಾಚಾರ್ಯರಿಗೂ ಅಶೋಕೆಯೆಂಬ ಮೂಲವು ಸೆಳೆಯುತ್ತಿತ್ತು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ. ಸಂಸಾರ ಪರಂಪರೆಯಲ್ಲಿ ಪಿತ್ರಾರ್ಜಿತ ಆಸ್ತಿಯು ತೀರ್ಥರೂಪರಿಂದ ಮಕ್ಕಳಿಗೆ ಹರಿಯುವಂತೆ, ಮಠದ ಗುರುಪರಂಪರೆಯಲ್ಲಿ ಶ್ರೀಕರಾರ್ಚಿತ ವಿಗ್ರಹಗಳಲ್ಲದೇ ಹಲವಾರು ಮಂತ್ರರಹಸ್ಯಗಳು, ಶಾಸನಗಳು, ದಾಖಲೆಗಳು, ಪೀಠಾಚಾರ್ಯರಲ್ಲಿ ಸುಪ್ತವಾಗಿ ಹರಿಯುತ್ತಿದೆ. ಅದರಲ್ಲಿ ಮೂಲಮಠದ ಉಲ್ಲೇಖವೂ ಒಂದಾಗಿರಬಹುದು.

 

Leave a Reply

Your email address will not be published. Required fields are marked *