ಬಂಗಾರದ ಭವ್ಯ ರಥವೇರಿ ಹೊರಟಿದ್ದ ಅರ್ಜುನ.ಅವನನ್ನು ಬಳಸಿ ಆತನ ನೂರು ಮಕ್ಕಳು ರಣಗರ್ಜನೆಯೊಂದಿಗೆ ಬಳಸಿ ಬರುತ್ತಿದ್ದರು. ದಿವ್ಯ ಧನುಸ್ಸು,ರಥದಲ್ಲಿ ತುಂಬಿಸಿದ ದಿವ್ಯಾಸ್ತ್ರಗಳು,ಬಗೆಬಗೆಯ
ಆಯುಧಗಳು.ಜೊತೆಗೆ ವಿಶೇಷವಾದ ಅನುಭವವಿರುವ ಮೂಲಬಲ.ವೈರಿಗಳ ಎದೆ ಬಿರಿಯುವ ಆರ್ಭಟ! ಸೈನ್ಯದ ಶಿಸ್ತುಬದ್ಧ ಚಲನೆ,ಆಯುಧಗಳ ವರಸೆ ಧನುಷ್ಟಂಕಾರ,ಸಿಂಹನಾದ . ಫಕ್ಕನೆ ಕಾರ್ತವೀರ್ಯ ಯಾರೋ ಒಬ್ಬ ಪ್ರಬಲ ವಿರೋಧಿಯಮೇಲೆ ದಾಳಿ ಇಡುತ್ತಾನೋ ಎಂಬ ಸಂದೇಹ ಬರುವಂತಿತ್ತು.
ಒಬ್ಬ ಮುನಿಕುಮಾರನನ್ನೆದುರಿಸಲು ಮಾಹಿಷ್ಮತಿಯ ಮಹಾಬಲವೇ ಹೊರಟು ನಿಂತಿತ್ತು. ಇಷ್ಟೆಲ್ಲ ಬಲವಿರುವವ ಮುನಿಯನ್ನಾದರೂ ಏಕೆ ಲಕ್ಷಿಸಬೇಕು ಎಂಬುದಕ್ಕೆ ಪುಷ್ಟಿಕೊಡುವಂತಿತ್ತು ಆ ನಡೆ.
ಮಾಹಿಷ್ಮತಿಯೇ ಎದ್ದುಬಂದಂತಿದ್ದ ಸೈನ್ಯದ ಪರಿಚಲನೆಯನ್ನು ಕಂಡು ಒಬ್ಬ ವ್ಯಕ್ತಿಯ ಅನ್ನಕ್ಕೆ ಎಷ್ಟೊಂದು ಜನರ ಬಲಿ ಎಂದು ಭಾರ್ಗವ ರಾಮನ ಮನದಲ್ಲಿ ಮೂಡಿದ ಚಿಂತನೆ ಮತ್ತೆ ಕ್ರೋಧಕ್ಕೇ ಒಳಗಾಯಿತು. ಅಕೃತವ್ರಣನಲ್ಲಿ ಧನುಸ್ಸನ್ನು ಕೇಳಿ ಪಡೆದು ಯುದ್ಧ ಸನ್ನದ್ಧನಾದ. ಒಬ್ಬ ಅರಸನ ಅಗಾಧ ಸಂಪತ್ತು ಎಂತಹ ಅನರ್ಥಕ್ಕೆ ಕಾರಣವಾದೀತು ಎಂಬುದರ ನಿಜದ ಪರಿಚಯದ ಅನಾವರಣವಿದು. ಧನುಷ್ಟಂಕಾರ ಮಾಡಿ ಯುದ್ಧ ಕ್ಕೆ ಸಿದ್ಧ ಎಂಬ ಸೂಚನೆ ನೀಡಿದ.
ಕಾರ್ತವೀರ್ಯ ಕ್ರೋಧದಿಂದ ಕುದಿದು ಹೋದ. ಆಕ್ರೋಶದಿಂದಲೇ ಜರೆಯತೊಡಗಿದ.
“ಮುನಿಕುಮಾರ!,ಗೌರವ ಪಡೆಯುವ ಅರ್ಹತೆಯನ್ನೂ ಕಳೆದುಕೊಂಡೆ. ನಿನ್ನ ಧೈರ್ಯವನ್ನು ಮೆಚ್ಚಬೇಕು. ಜಗತ್ತನ್ನಾಳುವ ದೊರೆಯೊಬ್ಬನನ್ನು ಈ ಬಗೆಯಲ್ಲಿ ಪ್ರತಿಭಟಿಸುವ ಯೋಚನೆಯೇ ವಿಚಿತ್ರ. ಜಗತ್ತಿನ ಅನೇಕರ ಹಣೆಬರಹವನ್ನು ತಿದ್ದಿದವನು ನಾನು. ನೀನು ಇಲ್ಲಿಬಂದು ನಡೆಸಿದ್ದು ರಾಜದ್ರೋಹ ಎಂಬ ಎಚ್ಚರವೂ ಇಲ್ಲದಾಯಿತೆ.ಭೃಗುವಂಶೀಯರು ಶಾಸ್ತ್ರಜ್ಞಾನ ಪರಿಣಿತರು ಎಂದು ಕೇಳಿದ್ದೇನೆ.ನಿನ್ನ ಅಪರಾಧಕ್ಕೆ ಎಂತಹ ಕಠಿಣ ಶಿಕ್ಷೆ ನೀಡಿದರೂ ಕಡಿಮೆಯೇ. ಮೈಮೇಲೆ ಬಿದ್ದು ಸಾಯಲು ಬಂದವನೊಬ್ಬ ಮುನಿಕುಮಾರ ಎಂಬುದು ಕನಿಕರದ ವಿಷಯ.ನನಗೆ ಧರ್ಮದ ನಡೆಯ ಆಸಕ್ತಿ ಆರಿಲ್ಲ.ಆಶ್ರಮಕ್ಕೆ ಹಿಂದಿರುಗು.ಇದು ನನ್ನ ಧರ್ಮಪ್ರಜ್ಞೆಗೆ ಮೀರಿದ ನಡೆ.”
” ಅರಸ,ಚೆನ್ನಾಗಿದೆ ಎಚ್ಚರಿಕೆ.ನನ್ನ ಬದುಕು ಏನಾದರೂ ಯಾರಿಗೇನೂ ಆಗಬೇಕಿಲ್ಲ. ನೀನು ಸತ್ತರೆ ಸಾವಿರಾರು ಸುತ್ತುಗಳು ನಿರ್ಗತಿಕವಾಗುತ್ತವೆ. ನನಗೂ ನಿನಗೂ ಮಾತ್ರ ಇಲ್ಲಿಯ ವ್ಯವಹಾರ.ಉಳಿದವರು ಬಂದು ಜೀವ ತೆತ್ತರು.ನೀನು ಉಳಿಯುವ ,ಮತ್ತೆ ಶಿಕ್ಷಿಸುವ ವಿಚಾರ ಮುಂದಿನದ್ದು.ತಂದೆಯವರ ಮರಣದ ಪರಿಮಾರ್ಜನೆ ನಿನ್ನ ಮರಣದಲ್ಲಿ ಎಂದು ನಿರ್ಧರಿಸಿಯೇ ಬಂದವನು ನಾನು.ಹೇಳಬೇಕಾದ್ದನ್ನು ಮೊದಲೇ ತಿಳಿಸಿದ್ದೇನೆ ನಿನ್ನ ಗರ್ವದ ಗಿರಿ ಮುರಿಯುತ್ತದೆ.ಆಳುವ ಅರಸ ಧರ್ಮಿಯಾದರೆ ನಿನ್ನ ಶಾಸ್ತ್ರದ ಮಾತಿಗೆ ಅರ್ಥವಿತ್ತು.ಹಾಲುಂಡು ವಿಷ ನೀಡುವ ವಿಷಜಂತು ನೀನು.ಇನ್ನು ಜಗತ್ತಿನಲ್ಲಿ ಉಳಿದರೆ ಜಗತ್ತೂ ಉಳಿಯದು.ಅಧರ್ಮಿಯಾದ ಅರಸನನ್ನು ನಿಯಂತ್ರಿಸುವುದು ಬ್ರಾಹ್ಮದ ಕರ್ತವ್ಯ.ನನಗೆಷ್ಟು ಧೈರ್ಯ ಎಂಬುದನ್ನು ತೋರಿಸುತ್ತೇನೆ.ಮರಣದ ವರೆಗೂ ನಿಲ್ಲುವ ಧೈರ್ಯ ತೋರಿಸು.
” ವೀರತನ ಎಂಬುದು ರಾಜಸಕ್ಕೆ ಹೊಂದುವ ಮಾತು.ಸಂಗ್ರಾಮ ,ಶಸ್ತ್ರವಿದ್ಯೆ ಅದನ್ನು ಹೊಂದಿ ಬರಬೇಕು. ಭೃಗುಗಳು ಸ್ವಲ್ಪ ರಾಜಸದತ್ತ ಒಲವು ಉಳ್ಳವರೆಂಬುದು ಪ್ರಸಿದ್ಧವಾದರೂ ಅದು ಶಾಪ,ಆಕ್ರೋಶಗಳ ಆಚೆ ವಿಸ್ತರಿಸಿದ್ದನ್ನು ಕೇಳಲಿಲ್ಲ. ಔರ್ವನೆಂಬೊಬ್ಬ ಋಷಿ ನರಮೇಧಕ್ಕೆ ಸಿದ್ಧನಾದರೂ ಅದು ಮಂತ್ರದ ವರ್ತುಲದಲ್ಲೇ ಇತ್ತು. ನೀನಿಲ್ಲಿ ಬ್ರಾಹ್ಮಕ್ಕೆ ವಿರೋಧವಾದ ಯುದ್ದದ ಕೊಲೆಗೆಲಸಕ್ಕೆ ತೊಡಗಿದ್ದೀಯೆ.ಈಗಾಗಲೇ ನಿನ್ನಿಂದ ಹತರಾದ ಕ್ಷತ್ರಿಯರು ಎಂತಹ ವೀರ್ಯವಂತರು ಬಲ್ಲೆಯ? ,.ಸಾಧಕರು,ಸಿದ್ಧರು,ಪರಾಕ್ರಮಿಗಳು.ಅದಕ್ಕೆ ಪರಿಹಾರ ನಾನೇ ಮಾಡಬೇಕಾಯಿತು.ಮೊದಲೇ ನಿನ್ನನ್ನು ವಿಚಾರಿಸಬಹುದಿತ್ತು.ನೀನು ಇಷ್ಟು ಮುಂದುವರಿಯುತ್ತೀ ಎಂದು ಭಾವಿಸಿರಲಿಲ್ಲ. ಜೀವನ ಪರ್ಯಂತ ನಾನು ಕೊಡುವ ಶಿಕ್ಷೆ ಅನುಭವಿಸಲು ಸಿದ್ಧನಾಗು .ದೂರ್ತನಾದ ಪ್ರಜೆ ಗುರುವೇ ಆದರೂ ಶಿಕ್ಷಾರ್ಹ ನೆನಪಿಡು. ”
“ರಾಜನಿಗೆ ಶಿಕ್ಷೆ ನೀಡುವ ಅರ್ಹತೆ ಉಳಿಯುವುದು ಧರ್ಮದ ದಾರಿಯಲ್ಲಿದ್ದಾಗ . ಗೋ ಬ್ರಾಹ್ಮಣ ವಿರೋಧಿಯೊಬ್ಬನ ನಿಗ್ರಹ ಇತರರಿಂದ ಸಾಧ್ಯವಾಗದಾಗ ,ಧರ್ಮವನ್ನು ರಕ್ಷಿಸುವ ಹೊಣೆಯನ್ನು ಬ್ರಾಹ್ಮಣನೇ ವಹಿಸಬೇಕಾಗುತ್ತದೆ. ನೀನು ಮಾಡಿದ ಅಪರಾಧ ಮಹರ್ಷಿ ಜಮದಗ್ನಿಗಳ ಹತ್ಯೆ.ದೇವಧೇನುವಿನ ಅಪಹಾರದಂತಹ ಘೋರಕೃತ್ಯ. ಅಂದರೆ ದೇವ ಬ್ರಾಹ್ಮಣ ಗೋವು ಮೂರನ್ನೂ ಅತಿಕ್ರಮಿಸುವ ದುರ್ವರ್ತನೆ. ಇದಕ್ಕೆ ಶಿಕ್ಷೆ ಆತತಾಯಿಯೊಬ್ಬನಿಗೆ ನೀಡಬಹುದಾದದಷ್ಟು ಪ್ರಬಲವಾದದ್ದು.ಅದು ಕಾಯ ಖಂಡ .!ಸಿದ್ಧನಾಗು.”
ಮುನಿಕುಮಾರನ ಮಾತು ಗಂಟೆ ಹೊಡೆದಷ್ಟು ಸ್ಪಷ್ಟ ಮತ್ತು ವೀರತನದ್ದಾಗಿತ್ತು.ಅರ್ಜುನನಿಗೆ ಕೋಪ ತಡೆಯದಾಯಿತು.ಹಾಗಿದ್ದರೆ ಯಾರು ಯಾರನ್ನು ಶಿಕ್ಷಿಸುವವರು ಎಂಬುದನ್ನು ನಿರ್ಣಯಿಸೋಣ.ಎನ್ನುತ್ತಾ ಧನುಸ್ಸನ್ನು ಎತ್ತಿಕೊಂಡ.
ದಿವ್ಯಾಸ್ತ್ರಗಳ ಸಿದ್ಧಿಯಲ್ಲಿ ಅರ್ಜುನನನ್ನು ಮೀರಿಸುವವರು ಆ ಕಾಲದಲ್ಲಿ ಮತ್ತೊಬ್ಬನಿರಲಿಲ್ಲ. ಪುಂಖಾನುಪುಂಖವಾಗಿ ರಾಮನ ಮೇಲೆ ಹರಿತವಾದ ಅಸ್ತ್ರ ಸಮೂಹವನ್ನೇ ತೂರಿ ಗರ್ಜಿಸಿದ. ರಾಮನ ಕೈಯ್ಯ ವೈಷ್ಣವ ಧನುವೇ ಕೋಪದಿಂದ ಕುದಿಯಿತೋ ಎಂಬಂತೆ ಉತ್ತರ ರೂಪದ ಬಾಣಗಳು ಅರ್ಜುನನ ಅಸ್ತ್ರಗಳನ್ನು ನಿರ್ಮೂಲಮಾಡಿದವು.ಇಬ್ಬರೂ ಸಾಮಾನ್ಯ ಶಸ್ತ್ರಗಳ ಬದಲು ಮಂತ್ರಾಸ್ತ್ರಗಳ ಮಳೆಯನ್ನೇ ಸುರಿಸಿದರು. ರಾಮನ ಮೂಡಿಗೆಯಲ್ಲಿ ಅಸ್ತ್ರಗಳ ರಾಶಿ ಇರದಿದ್ದರೂ ಮಂತ್ರದ ಸ್ಮರಣೆಯೊಂದಿಗೇ ಸಜೀವಾಸ್ತ್ರಗಳೋ ಎಂಬಂತೆ ಕೈಗೆಟಕುತ್ತಿದ್ದವು. ರಾಮನು ಅರ್ಜುನನ ಅಸ್ತ್ರಗಳನ್ನು ಖಂಡಿಸುತ್ತಿರುವಾಗಲೇ ಅಪಾರ ಸಂಖ್ಯೆಯ ಸೈನಿಕರೂ ಧರೆಗುರುಳುತ್ತಿದ್ದರು.ಪ್ರತಿಭಟನೆಯೇ ಅಸಾಧ್ಯವೆನಿಸಿದ ಪ್ರತಿಭಟನನ್ನು ತುಡುಕಲು ಬಂದ ಅರಸುಕುಮಾರರೂ ಅಸು ನೀಗಿದರು. ಇದನ್ನು ಗಮನಿಸಿದ ಕಾರ್ತವೀರ್ಯನು ಸಹನೆ ಕಳೆದುಕೊಂಡ. ಗೆಲ್ಲಲೇ ಬೇಕಾದರೆ ಬ್ರಹ್ಮಾಸ್ತ್ರ ಹೊರತು ಅನ್ಯ ಉಪಾಯವಿಲ್ಲ ಎಂಬುದನ್ನು ಅರಿತ.
ಮೂಡಿಗೆಗೆ ಕೈ ಇಕ್ಕಿ ಬ್ರಹ್ಮಾಸ್ತ್ರವನ್ನು ಅನುಸಂಧಾನ ಮಾಡಿ ಪ್ರಯೋಗಿಸಿ ಗೆಲುವಿನ ನಗೆ ಬೀರಿದ.
ಭಾರ್ಗವನ ಶಕ್ತಿಗೀಗ ಪರೀಕ್ಷೆಯ ಕಾಲ. ಆತನೂ ಪ್ರತಿಯಾಗಿ ಬ್ರಹ್ಮಾಸ್ತ್ರವನ್ನೇ ಹೂಡಿ ಪ್ರಯೋಗಿಸಿದ.
ಜಗತ್ತೇ ತಲ್ಲಣಗೊಳ್ಳುವ ಅಸ್ತ್ರಗಳ ಕಾಳಗ ಅಂಬರವನ್ನು ತುಂಬಿತು. ಉತ್ಪಾತಗಳು ಕಾಣಿಸಿಕೊಂಡವು. ಎಲ್ಲೆಂದರಲ್ಲಿ ಹಾಹಾಕಾರ ವಿಜೃಂಭಿಸಿತು.ದೇವತೆಗಳು ಮೊರೆ ಇಟ್ಟರು. ಅಸ್ತ್ರಗಳನ್ನು ಹಿಂಪಡೆಯಿರಿ.ಜಗದ ನಾಶಕ್ಕೆ ಕಾರಣವಾದೀತು ಎಂದು ಆಕ್ರಂದನ ಗೈದರು.ಮಾನವನಾದ ಅರ್ಜುನನಿಗೆ ಕೇಳಿಸದಿದ್ದರೂ ರಾಮನಿಗೆ ಅರಿವಾಯಿತು.ಪ್ರಯೋಗಿಸಿದ ಅಸ್ತ್ರವನ್ನು ಮರಳಿ ಕರೆಯುವ ಶಕ್ತಿ ಅರಸನಿಗೆ ಇರಲೇ ಇಲ್ಲ! ರಾಮ ವೈಷ್ಣವ ಶಕ್ತಿಯನ್ನು ನೆನೆದು ಶಸ್ತ್ರೋತ್ಪಾತ ನಿಗ್ರಹಕ್ಕೆ ಅನುಗ್ರಹ ಬೇಡಿ ಅಸ್ತ್ರಗಳನ್ನು ತನ್ನತ್ತ ದೃಷ್ಟಿಯ ಮೂಲಕವೇ ಸೆಳೆದ. ಈಗ ಎರಡೂ ಬ್ರಹ್ಮಾಸ್ತ್ರಗಳೂ ರಾಮನ ದೃಷ್ಟಿಯೊಂದಿಗೇ ಎಳೆಯಲ್ಪಟ್ಟು ಅವನ ಕಣ್ಣೊಳಗೇ ಇಂಗಿಹೋದವು!!!
ಮುಂದುವರಿಯುವುದು…….