ಪರವಶತೆಗೊಯ್ಯುವ ಶ್ರೀಕರಾರ್ಚಿತ ಪೂಜೆ – ಸಂಧ್ಯಾ ಕಾನತ್ತೂರು

ಲೇಖನ

ಸರ್ವಶಕ್ತನ ಮುಂದೆ ನಿಜಭಕ್ತ ಹಾಗೂ ಸರ್ವಭಕ್ತರ ಮುಂದೆ ಸರ್ವಶಕ್ತ – ಪರಸ್ಪರರ ದರ್ಶನ ಏಕಕಾಲದಲ್ಲಿ ಲಭ್ಯವಾಗುವ ಸಮಯವೆಂದರೆ ಮಹಾತ್ಮರು ದೇವತಾರ್ಚನೆಯಲ್ಲಿ ನಿರತವಾಗಿರುವ ಹೊತ್ತು!

 

ಈ ಅಲೌಕಿಕ ಅನುಭವ ಶ್ರೀಮಠದತ್ತ ನಿರಂತರಸೆಳೆಯುತ್ತದೆ ಎನ್ನುವುದು ಶ್ರೀಮಠದಲ್ಲಿ ನಡೆಯುವ ಶ್ರೀಕರಾರ್ಚಿತ ಪೂಜೆಯನ್ನು ಕಣ್ತುಂಬಿಕೊಂಡವರ ಸ್ಪಷ್ಟ ನುಡಿ.

 

ಸಾವಿರದ‌ ಮುನ್ನೂರು ವರ್ಷಗಳ ಇತಿಹಾಸವುಳ್ಳ ಜಗತ್ತಿನ ಏಕೈಕ ಅವಿಚ್ಛಿನ್ನ ಪರಂಪರೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ಸಪರಿವಾರ ಶ್ರೀರಾಮ, ಚಂದ್ರಮೌಳೇಶ್ವರ, ರಾಜರಾಜೇಶ್ವರಿಯರ ಪೂಜೆ ದಿನಕ್ಕೆರಡು ಬಾರಿ ನಿರಂತರವಾಗಿ ನಡೆದು ಬಂದಿದೆ. ಅಗಸ್ತ್ಯರಿಂದ ಅನುಗ್ರಹಿತವಾದ, ವರದಮುನಿಗಳಿಂದ ಅರ್ಚಿಸಲ್ಪಟ್ಟ , ಆದಿ ಶಂಕರರಿಂದ ಕೊಡಮಾಡಲ್ಪಟ್ಟ ಈ ವಿಗ್ರಹಗಳನ್ನೂ ಚಂದ್ರಮೌಳೇಶ್ವರನನ್ನೂ, ಶ್ರೀಚಕ್ರವನ್ನೂ
ಲೋಕಕಲ್ಯಾಣದ ಸಂಕಲ್ಪದೊಡನೆ ಶ್ರೀ ಗುರುಪರಂಪರೆ ಅರ್ಚಿಸುತ್ತಾ ಸಾವಿರದ ಮುನ್ನೂರು ಸಂವತ್ಸರಗಳೇ ಸಂದಿವೆ.
ಶ್ರೀಸಂಸ್ಥಾನದವರು ಪೀಠಾರೋಹಣಗೈದಾಗಿನಿಂದ ಇಡೀ ಸಮಾಜವನ್ನು ಸಂಘಟಿಸುತ್ತಾ ಹಲವಾರು ಕಾರ್ಯಕರ್ತರನ್ನು ಸಮಾಜದ ನಡುವಿನಲ್ಲಿ ಗುರುತಿಸಿ ಅವರಿಗೆ ಜವಾಬ್ದಾರಿಗಳನ್ನಿತ್ತು ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದುದರ ಪರಿಣಾಮವಾಗಿ ಶ್ರೀಮಠದ ಸಾಮಾನ್ಯ ಶಿಷ್ಯರೂ ಶ್ರೀಮಠದತ್ತ ಆಕರ್ಷಿತರಾದರು.
ಶ್ರೀಮಠಕ್ಕೆ ಹೋಗುವುದೆಂದರೆ ಫಲ ಸಮರ್ಪಣೆ ಮಂತ್ರಾಕ್ಷತೆಯೊಡನೆ ಎರಡು ಹೊತ್ತಿನ ಶ್ರೀಕರಾರ್ಚಿತ ಪೂಜೆಯನ್ನು ‌ತಪ್ಪಿಸಿಕೊಳ್ಳಬಾರದೆಂಬ ಪರಿಪಾಠ ಬೆಳೆದು ಬಂದುದು ಧರ್ಮಪ್ರಜ್ಞೆಯ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಕೂಡ ಹೌದು.
ಶ್ರೀಕರಾರ್ಚಿತ ಪೂಜೆ ಅಥವಾ ಸಾಮಾನ್ಯ ಮಾತಿನಲ್ಲಿ ಹೇಳುವುದಾದರೆ ಶ್ರೀರಾಮ ಪೂಜೆ ಎಂದರೆ ನೋಡುವ ಒಬ್ಬೊಬ್ಬರಲ್ಲೂ ಅವರವರದೇ ಭಾವ. ಗಂಭೀರವಾಗಿ ಪೂಜೆಯಲ್ಲಿ ತಲ್ಲೀನರಾಗುವ ಶ್ರೀಸಂಸ್ಥಾನದವರು ಶ್ರದ್ಧೆಯ ಮೂರ್ತರೂಪ! ಅಲಂಕೃತ ರಜತ ಮಂಟಪದಲ್ಲಿ (ಕೆಲವೊಮ್ಮೆ ಸ್ವರ್ಣ ಮಂಟಪದಲ್ಲಿ) ರಾರಾಜಿಸುವ ಸಪರಿವಾರ ಶ್ರೀರಾಮ, ದೀಪಗಳ ಬೆಳಕಿನಲ್ಲಿ ಸ್ವರ್ಣ ಕಾಂತಿಯಿಂದ ಶೋಭಿಸುತ್ತ ಭಕ್ತರಲ್ಲಿ ಭಕ್ತಿಯ ಭಾವವನ್ನು ಪ್ರಚೋದಿಸುತ್ತ ವಿರಾಜಮಾನವಾಗಿದ್ದರೆ ತಟ್ಟೆಗಳಲ್ಲಿ ಜೋಡಿಸಿಟ್ಟ ಪುಷ್ಪಗಳು ಅವನ ಪಾದಸ್ಪರ್ಷಕ್ಕಾಗಿ ಕಾಯುತ್ತಿರುತ್ತವೆ.

ಶ್ರೀಸವಾರಿಯ ಶಾಸ್ತ್ರಿಗಳೂ, ಶ್ರೀಪರಿವಾರವೂ, ಸೇರಿದ ವೈದಿಕ ವೃಂದವೂ ಶುದ್ಧ ಸ್ವರದೊಡನೆ ಮಂತ್ರೋಚ್ಛಾರ ಗೈಯುತ್ತಿರುವಂತೆಯೇ ಶ್ರೀಗುರುಗಳು ಒಂದೊಂದು ಸಾಲಿಗ್ರಾಮಗಳನ್ನೂ ತೊಳೆದು, ಚಂದ್ರಮೌಳೇಶ್ವರನಿಗೆ ಪಂಚಾಮೃತದಿಂದಲೂ, ಎಳನೀರಿನಿಂದಲೂ, ಗಂಗಾಜಲದಿಂದಲೂ, ಶುದ್ಧ ಜಲದಿಂದಲೂ ಅಭಿಷೇಕಗೈಯುವುದನ್ನು ನೋಡುತ್ತಾ ಮಂತ್ರಮುಗ್ಧರಾಗುವೆವು. ರುದ್ರ – ಚಮೆ – ಸೂಕ್ತಗಳು, ಶಾಂತಿ ಮಂತ್ರಗಳು ಭಕ್ತರ ಕರ್ಣಗಳನ್ನು ಪ್ರವೇಶಿಸಿ ಭಕ್ತಿ ಭಾವದಲ್ಲಿ ಲೀನವಾಗಿಸುತ್ತಿರುವಂತೆಯೇ, ತುಳಸಿ ಬಿಲ್ವಪತ್ರೆಗಳು ದೇವತಾ ಮುಡಿಯೇರತೊಡಗುತ್ತವೆ. ಒಂದೊಂದು ಪತ್ರೆ ಶಿವನಿಗರ್ಪಿತವಾಗುವಾಗಲೂ ಭಕ್ತಿ ಪರವಶತೆ! ನಂತರದಲ್ಲಿ ಶ್ರೀ ಗುರುಗಳು ಹೂವುಗಳಿಂದ ಅಲಂಕರಿಸುವುದನ್ನು ಭಕ್ತರು, ವಿಶೇಷವಾಗಿ ಮಾತೃವೃಂದ ಬಹಳ ಆಸಕ್ತಿಯಿಂದ ಕಣ್ತುಂಬಿಕೊಳ್ಳುವರು. ನಮ್ಮ ಗಿಡದ ದಾಸವಾಳ, ನಮ್ಮ ಮನೆಯ ಸಂಪಿಗೆ ರಾಮನಿಗೆ ಅರ್ಪಿತವಾಯಿತೆಂದು ಸಂಭ್ರಮಿಸುವರು.
ಶ್ರೀಸಂಸ್ಥಾನದವರ ಭಿಕ್ಷಾ ಕರ್ತೃಗಳು ಫಲ ಸಮರ್ಪಿಸಿದ ನಂತರ ಎಲ್ಲರಿಗೂ ಫಲಸಮರ್ಪಣೆಗೆ ಮುಕ್ತ ಅವಕಾಶ. ‌ತಮ್ಮ ಮನೋಭಿಲಾಷೆಯ ಈಡೇರಿಕೆಗಾಗಿ ಪ್ರಾರ್ಥಿಸಿಯೋ, ಭಕ್ತಿಯಿಂದಲೋ ಫಲಸಮರ್ಪಣೆ ಮಾಡುವರು, ಶ್ರೀರಾಮನನ್ನು ಕಣ್ಣು ತುಂಬಿಕೊಳ್ಳುವರು. ಧೂಪ, ನೈವೇದ್ಯ, ಮಂಗಳಾರತಿ ಎಲ್ಲವೂ ಕ್ರಮ ತಪ್ಪದೆ ನಡೆಯುತ್ತಿದ್ದರೆ ಭಕ್ತರು ಭಾವ ಪರವಶರಾಗುವರು. ಅಷ್ಟು ಹೊತ್ತೂ ಮೌನವಾಗಿದ್ದು ಪೂಜೆಯನ್ನು ಭಕ್ತಿಯಿಂದ ನೋಡುವ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಶ್ರೀರಾಮನಲ್ಲಿ ಪ್ರಾರ್ಥಿಸುವರು.

ಭಕ್ತಿಯಿಂದಲಾಗಲೀ ಅಥವಾ ತಮ್ಮ ಮಕ್ಕಳ ಜನ್ಮದಿನದಂದು, ವಿವಾಹ ವಾರ್ಷಿಕೋತ್ಸವದ ವಿಶೇಷ ದಿನಗಳಂದು, ಶ್ರೀಕರಾರ್ಚಿತ ದೇವತಾ ಸನ್ನಿಧಿಯಲ್ಲಿ ವಿಶೇಷ ಸೇವೆಗಳನ್ನು ನೆರವೇರಿಸುವ ಶಿಷ್ಯರು, ಭಕ್ತರು ಭಾವಪೂರ್ಣವಾಗಿ ಕುಳಿತು ಶ್ರೀಕರಾರ್ಚಿತ ಪೂಜೆಯನ್ನು ಕಣ್ಮನ ತುಂಬಿಕೊಳ್ಳುತ್ತಾರೆ.

ಶ್ರೀಸಂಸ್ಥಾನದವರ ಮತ್ತು ಶ್ರೀಕರಾರ್ಚಿತ ದೇವರುಗಳ ಸನ್ನಿಧಿಯಲ್ಲಿ ಹರಕೆ ಪ್ರಾರ್ಥನೆ ಎಂಬುದು ಇಲ್ಲಿನ ಇನ್ನೊಂದು ವೈಶಿಷ್ಟ್ಯ. ಕಡು ಕಷ್ಟದಲ್ಲಿರುವವರ ಕೈ ಬಿಡದೆ ಅವರ ಸಂಕಟವನ್ನು ದೂರಗೊಳಿಸಿದ ಭಗವಂತನೆದುರು ಮತ್ತೆ ಬಂದು ಹರಕೆ ಸಮರ್ಪಣೆ ಮಾಡುವವರ ಧನ್ಯತಾ ಭಾವವನ್ನು ನೋಡಿಯೇ ತಣಿಯಬೇಕು.
ತಮ್ಮಲ್ಲಿ ಸಪರಿವಾರ ಶ್ರೀರಾಮ, ಶ್ರೀಸಂಸ್ಥಾನದವರ ಮೊಕ್ಕಾಂ ಆಗಬೇಕೆಂದು ಪ್ರಾರ್ಥಿಸಿ ಫಲ ಇಡುವುದಕ್ಕಾಗಲೀ ಅಥವಾ ಮೊಕ್ಕಾಂನಲ್ಲಿ ನಡೆಸುವ ಶ್ರೀಭಿಕ್ಷಾ ಸೇವೆ ಆದಿಯಾಗಿ ನಡೆಸುವ ಸೇವೆಗಳಿಗೆ ಅಪ್ಪಣೆಯನ್ನು ಪ್ರಾರ್ಥಿಸಿ ಫಲ ಇಡುವುದಕ್ಕಾಗಲೀ ಅದೇ ಸಮಯ.

ಒಟ್ಟಿನಲ್ಲಿ ಸಕಲ ಫಲದಾಯಕನಾದ ಶ್ರೀರಾಮನನ್ನು ತನ್ನ ಶಿಷ್ಯರಿಗೆ ತೆರೆ ತೆರೆದು ತೋರುವ ಗುರುವಿನ ಕಾರುಣ್ಯದ ಪರಿಯ ವರ್ಣನೆಗೆ ಪದಗಳಿಲ್ಲ. ಭಕ್ತಿ ಭಾವ ಪರವಶತೆಗೊಯ್ಯುವ ಶ್ರೀಕರಾರ್ಚಿತ ಪೂಜೆ ನಿತ್ಯ ಅನಿರ್ವಚನೀಯ ಆನಂದದಾಯಕ.

Author Details


Srimukha

Leave a Reply

Your email address will not be published. Required fields are marked *