ಜಾತಸ್ಯ ಮರಣಂ ಧ್ರುವಮ್ !!

ಲೇಖನ

 

“ಬದುಕು ಪರೀಕ್ಷೆಯಾದರೆ ಸಾವು ಫಲಿತಾಂಶ. ಹೇಗೆ ಬದುಕಬೇಕೆಂಬ ನಿರ್ಧಾರವನ್ನು ಸಾಮಾನ್ಯರು ಮಾಡಬಹುದು; ಆದರೆ ಹೇಗೆ ಸಾಯಬೇಕೆಂದು ನಿರ್ಧರಿಸುವುದು ಅಸಾಮಾನ್ಯರಿಂದ ಮಾತ್ರ ಸಾಧ್ಯ!”- *ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.*

“ಜಂತೂನಾಂ ನರಜನ್ಮ ದುರ್ಲಭಮ್” ಪೂರ್ವಸುಕೃತದಿಂದ ನರಜನ್ಮದಲ್ಲಿ ಬಂದವನು ಮಾನವ. ಅನಾದಿಕಾಲದಿಂದಲೂ ಕುಟುಂಬ, ಧರ್ಮ, ಸಮಾಜ, ಶಿಕ್ಷಣಗಳೆಂಬ ಚತುರ್ಭದ್ರಗಳನ್ನು ರೂಪಿಸಿಕೊಂಡು ಆ ಚೌಕಟ್ಟಿನಲ್ಲಿ ಬದುಕುವ ಪ್ರಯತ್ನ ಮಾನವನದ್ದು. ಆದರೆ ನವಯುಗದ ಹರಿಕಾರನಾಗಬೇಕಿದ್ದ ಇವನ ನಡೆ, ನುಡಿ, ಮನಸು… ಇದೇನಾಗುತ್ತಿದೆ?

ತಂದೆ- ತಾಯಿಯಿಂದ ಬುವಿಗೆ ಬರುವ ಮಾನವನು, ತನಗೆ ದೊರೆತಿರಬಹುದಾದ ಉತ್ತಮ ಸಂಸ್ಕಾರಗಳನ್ನು ಮರೆತು ಈ ಜಗತ್ತು ತನ್ನ ಅಂಕೆಯಲ್ಲಿಯೇ ಇರಬೇಕೆಂದು ಹೋರಾಡುತ್ತಾನೆ, ಹಾರಾಡುತ್ತಾನೆ. ಪ್ರೀತಿ, ಸ್ನೇಹ, ವಾತ್ಸಲ್ಯ, ಕರುಣೆಗಳ ಬದಲು ದ್ವೇಷ, ಅಸೂಯೆ, ಕೋಪ, ಸ್ವಾರ್ಥಗಳನ್ನು ಬೆಳೆಸಿಕೊಳ್ಳುತ್ತಾ ನಿತ್ಯ ನೋಯುತ್ತಾನೆ, ನೋಯಿಸುತ್ತಾನೆ. ಸಮಾಜದಲ್ಲಿರುವ ಪ್ರತಿಯೊಬ್ಬನೂ ಹಾಗಲ್ಲವಾದರೂ ಮಾನವೀಯತೆ, ಭಾವನೆ, ಬಾಂಧವ್ಯಗಳನ್ನು ಮರೆತು ಸ್ವಾರ್ಥ ಮೆರೆಯುವವರ ಪಾಲು ಬಹು ತೀವ್ರಗತಿಯಲ್ಲಿ ಹೆಚ್ವುತ್ತಿದೆ!

‘ಕರ್ಮೇಣ್ಯೇ$ವಾಧಿಕಾರಸ್ತೇ ಮಾ ಫಲೇಷು ಕದಾಚನ’ ಎಂದು ಶ್ರೀಕೃಷ್ಣ ಬದುಕಿನ ಸತ್ಯವನ್ನು ತೆರೆದಿಟ್ಟಿದ್ದರೂ, ಕಾರ್ಯ ಮಾಡದೇ ಫಲ ಬಯಸುವವರೇ ಹೆಚ್ಚುತ್ತಿರುವುದು ಆತಂಕಕಾರಿ!
“ಪುಣ್ಯಸ್ಯ ಫಲಮಿಚ್ಛಂತಿ ಪುಣ್ಯಂ ನೇ$ಚ್ಛಂತಿ ಮಾನವಾ:! ನ ಪಾಪ ಫಲಮಿಚ್ಛಂತಿ ಪಾಪಂ ಕುರ್ವಂತಿ ಯತ್ನತಃ!!” ಪುಣ್ಯದ ಕಾರ್ಯ ಬೇಡ, ಪುಣ್ಯದ ಫಲ ಬೇಕು. ಪಾಪದ ಫಲ ಬೇಡ..‌ಆದರೆ ಪ್ರಯತ್ನಪೂರ್ವಕವಾಗಿಯಾದರೂ ಪಾಪಕಾರ್ಯ ಮಾಡುತ್ತಾನೆ” ಎಂಬ ಈ ಸುಭಾಷಿತವು ಮಾನವನ ಮನೋಲಹರಿಯನ್ನು ಅನಾವರಣಗೊಳಿಸುತ್ತದೆ. ಪರರ ಕಣ್ಣೀರೇ ಆಹಾರವಾದವರೂ, ಪರರ ನೋವೇ ಆನಂದವಾದವರೂ, ಪರರ ಬದುಕೇ ಗುರಿಯಾದವರೂ ಎಷ್ಟಿಲ್ಲ ಹೇಳಿ? ಕಷ್ಟ ಅನುಭವಿಸಿದವರು ಸುಮ್ಮನಿದ್ದರೆ ಅದನ್ನು ದೌರ್ಬಲ್ಯವೆಂದು ಭಾವಿಸಿ, ಮತ್ತಷ್ಟು ಕಷ್ಟಕೊಡುವ ನಮ್ಮವರ ವೈಚಾರಿಕಕ್ರೌರ್ಯ ಅತಿ ದುಃಖಕರ ಸಂಗತಿ! ಒಟ್ಟಿನಲ್ಲಿ ಸಮಾಜದ ಸಾಂಸ್ಕೃತಿಕ ಆರೋಗ್ಯ ಹದಗೆಟ್ಟು, ಒಟ್ಟಂದ ಕುಸಿಯುತ್ತಿದೆ.

ಮನೆ- ಮನಗಳಲ್ಲಿ ಸಂಸ್ಕಾರವಿಲ್ಲ, ಶಾಲಾ- ಕಾಲೇಜುಗಳಲ್ಲಿ ಉತ್ತಮ ಜೀವನಶಿಕ್ಷಣವಿಲ್ಲ… ಬೇವು ಬಿತ್ತಿ ಮಾವು ಪಡೆಯಬೇಕೆಂದರೆ ಹೇಗೆ? ಬಿತ್ತಿದ ಬೇವು- ಭ್ರಷ್ಟಾಚಾರ, ಅತ್ಯಾಚಾರ,
ಕೊಲೆ, ಸುಲಿಗೆ, ದೊಂಬಿಗಳಿಗೂ ತೃಪ್ತಿ ಕಾಣದೇ, ಕೌಟುಂಬಿಕ ಬಾಂಧವ್ಯ- ಒಳಹರಿವು ಛಿದ್ರವಾಗಿಸುತ್ತಿರುವುದು ಕಳವಳಕಾರಿಯಾದ ಅಭದ್ರ ಭವಿಷ್ಯವನ್ನು ಸಾಕ್ಷೀಕರಿಸುತ್ತಿದೆ. ತಂದೆ- ತಾಯಿ, ಸೋದರ ಸೋದರಿಯರು, ಅಜ್ಜ, ಅಜ್ಜಿ, ಮೊಮ್ಮಕ್ಕಳು, ಚಿಕ್ಕಪ್ಪ, ದೊಡ್ಡಪ್ಪ ಇತ್ಯಾದಿ ಬಾಂಧವ್ಯಗಳು ಅರ್ಥ ಕಳೆದುಕೊಳ್ಳುತ್ತಿವೆ. ತಂದೆ- ತಾಯಿಯರ ಸೇವೆಗೆ ಮಕ್ಕಳಿಗೆ ಮನವಿಲ್ಲ, ಮನವಿದ್ದರೆ ಸಮಯವಿಲ್ಲ, ಎಲ್ಲ ಇದ್ದರೂ ನೆಪಗಳು ನೂರಾರು. ‘ಹುಟ್ಟುತ್ತ ಸೋದರರು- ಬೆಳೆಯುತ್ತ ದಾಯಾದಿಗಳು’ ಎಂಬುದನ್ನು ಸಮರ್ಥಿಸುವ ಅಣ್ಣತಮ್ಮಂದಿರು!! ಕುಲ- ಕುಲದ ಹಿರಿಮೆ- ಕುಲಗುರು- ಕುಲದೇವರು- ಮನೆತನದ ಹೆಸರು ಇತ್ಯಾದಿಗಳು ನಗೆಪಾಟಲಿಗೀಡಾಗುತ್ತಿವೆ. ಇಂದು ಯಾರಿಗೆ- ಹೇಗೆ ಮೋಸ ಮಾಡೋಣ, ಪರರ ಸಂಪತ್ತನ್ನು ಹೇಗೆ ಲಪಟಾಯಿಸೋಣ, ಪರಸ್ತ್ರೀಯರನ್ನು ಹೇಗೆ ವಶಪಡಿಸಿಕೊಳ್ಳೋಣ, ಆಸ್ತಿಯನ್ನು ತನ್ನೊಬ್ಬನ ಸ್ವತ್ತಾಗಿಸಿಕೊಳ್ಳಲು ಏನೆಲ್ಲ ಕುತಂತ್ರ ಮಾಡೋಣ, ಯಾರೆಲ್ಲರ ಮನದಿ ಏನೆಲ್ಲ ವಿಷಬೀಜ ಬಿತ್ತೋಣ, ಯಾರ್ಯಾರಿಗೆ ಹುಳಿ ಹಿಂಡೋಣ, ತನಗೇ ಅಧಿಕಾರ- ಕೀರ್ತಿ ದೊರೆಯುವಂತಾಗಲು ಯಾರೆಲ್ಲರನ್ನೂ ಮಟ್ಟಹಾಕೋಣ, ಕೊಂಕುಮಾತು- ನಿಂದೆ- ಅಪಹಾಸ್ಯ- ಅಪಮಾನಗಳಿಂದ ಪರರ ತೇಜೋವಧೆ ಮಾಡೋಣ… ಒಂದೇ ಎರಡೇ? ಅನ್ಯಾಯವೋ, ಅನಾಚಾರವೋ… ಒಟ್ಟಿನಲ್ಲಿ ತನಗೆ ಸರಿಯಾಗಿ ವ್ಯವಸ್ಥೆ ಇರಬೇಕು- ಜಗತ್ತು ತನ್ನಿಚ್ಛೆಯಂತೆ ನಡೆಯಬೇಕು- ಕುಣಿಯಬೇಕು!! ಹೀಗೆ ವಿಚಾರ ಮಾಡಿದ್ದರ ಪರಿಣಾಮವಾಗಿ ಇಂದು ‘ನಾವು- ನಮ್ಮವರು’ ಎಂಬ ಭಾವ ಕರಗಿ, ‘ನಾನು- ನನ್ನದು’ ಎಂಬುದೊಂದೇ ವಿಜೃಂಭಿಸುತ್ತಿದೆ. ಪರಿಣಾಮವಾಗಿ ಭಾರತೀಯ ಕೌಟುಂಬಿಕ ವ್ಯವಸ್ಥೆಯ ಭದ್ರ ನೆಲೆಗಟ್ಟು ಪಲ್ಲಟವಾಗುತ್ತಿದೆ. ಜನರ ಸಾಂಸ್ಕೃತಿಕ ನಿಲುವು ಕಲುಷಿತಗೊಳ್ಳುತ್ತಿದೆ!

ತಂದೆ-ತಾಯಿ-ಗುರು-ಹಿರಿಯರನ್ನು ಗೌರವಿಸದ ಮಕ್ಕಳು, ಹೆಣ್ಣುಮಕ್ಕಳನ್ನು ಪ್ರೀತಿಸದ ತವರು, ಆಸ್ತಿಗಾಗಿ ಮೋಸ ಮಾಡುವ ಸೋದರರು, ಮನೆತನದ ಗೌರವವನ್ನು ಮಣ್ಣುಪಾಲಾಗಿಸಿ ತಮ್ಮದಲ್ಲದ ಸಂಸ್ಕಾರದವರೊಂದಿಗೆ ಪಲಾಯನಗೈವ ಮಕ್ಕಳು, ವಿನಾಕಾರಣ ಸಜ್ಜನರ ಮೇಲೆ ಅಪವಾದ ಹೊರಿಸುವವರು, ಮಾನವೀಯ ಮೌಲ್ಯಗಳನ್ನು ಮರೆತು ಹಿಂಸೆ-ಅಪರಾಧ-ಲೈಂಗಿಕತೆಯನ್ನೇ ಆಹಾರವಾಗಿಸಿಕೊಂಡು ವಿಜೃಂಭಿಸಿ ಜನಮಾನಸವನ್ನು ಕಿರಿದಾಗಿಸಿ ಕರಿದಾಗಿಸುವ ಸುದ್ದಿ ಮಾಧ್ಯಮಗಳು… ಕೃತಕ ಆವರಣ ಸೃಷ್ಟಿಸಿಕೊಂಡು ಬದುಕುತ್ತಿರುವ ಸಾಮಾಜಿಗರ ಪರಿ ಸಖೇದಾಶ್ಚರ್ಯಜನಕವಾದುದು!!

ವಿಚಿತ್ರವೆಂದರೆ ಪ್ರತಿಯೊಬ್ಬನೂ ‘ತಾನು ಶಾಶ್ವತವಾಗಿ ಬದುಕಿರುತ್ತೇನೆ’ ಎಂಬ ಭ್ರಮೆಯಲ್ಲಿರುವುದು! ನೋಡನೋಡುತ್ತಿರುವಾಗಲೇ ಹತ್ತಿರದವರೂ, ದೂರದವರೂ ಮರಣಹೊಂದುತ್ತಿರುವುದು ಕಾಣುತ್ತಿದ್ದರೂ ‘ನನ್ನ ದಿನವೂ ಯಾವುದೋ ಒಂದು ಕ್ಷಣದಲ್ಲಿ ಮುಗಿಯುತ್ತದೆ’ ಎಂಬ ವಿಚಾರ ಒಮ್ಮೆಯಾದರೂ ಬರದಿರುವುದೆಂದರೆ… ! ಆಶ್ಚರ್ಯವಲ್ಲವೇ? ಹತ್ತಿರದವರ ಶವವನ್ನು ಸುಟ್ಟು ಬರುತ್ತಿರುವಾಗಲೇ ಮನೆಯ ಆಸ್ತಿಯನ್ನು ಲಪಟಾಯಿಸುವುದು ಹೇಗೆಂಬ ಚಿಂತೆಯಲ್ಲಿ ಬರುವವರೂ ಇದ್ದಾರೆಂದರೆ!! ತನ್ನ ಬದುಕೂ ಅನಿಶ್ಚಿತ ಎಂದು ಒಮ್ಮೆಯಾದರೂ ಯೋಚಿಸಿದ್ದರೆ….!
ಈ ವಿಚಾರ ಎಂದು ಅರಿವಾಗುವುದೋ ಆಗ ಕಾಲ ಮಿಂಚಿರಬಾರದಷ್ಟೇ?

ಕಾಲ ಮಿಂಚುವ ಮುನ್ನ ನಮ್ಮ ವಿಚಾರಧಾರೆಯ ಹರಿವನ್ನು ನಾವೇಕೆ ಬದಲಾಯಿಸಿಕೊಳ್ಳಬಾರದು? ನಮ್ಮ ವೈಯಕ್ತಿಕ ಬದುಕಿಗೆ ಪರರಿಂದ ತೊಂದರೆ ಆಗದಿದ್ದರೆ ಶಾಂತವಾಗಿ ಬದುಕಬಹುದಲ್ಲವೇ? ಅದು ಬಿಟ್ಟು ಪರರ ಬದುಕಿನಲ್ಲಿ ಇಣುಕಿ ನೋಡುವ ಚಟವೇಕೆ? ನಮ್ಮ ದೇಶಕ್ಕೋ, ಸನಾತನತೆಗೋ ಧಕ್ಕೆಯಾಗುವ ಸಂದರ್ಭವನ್ನು ಮಾತ್ರ ಗಂಭೀರವಾಗಿ ಪರಿಗಣಿಸಬೇಕೇ ವಿನಾ, ಉಳಿದಂತೆ
ಪರರಿಂದ ತೊಂದರೆ ಆಗುತ್ತಿದ್ದರೆ ಅದನ್ನು ಸೌಜನ್ಯಯುತವಾಗಿ, ಹಿರಿಯರ ಸಮಕ್ಷಮದಲ್ಲಿ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಬಹುದು. ಹಾಗಿದ್ದೂ ಪರಿಹಾರವಾಗದಿದ್ದರೆ “ಇದು ಭಗವಂತನಿಚ್ಛೆ… ಹಾಗಾಗಬೇಕಿತ್ತು, ಹಾಗಾಯಿತು” ಎಂದು ಸುಮ್ಮನಿರುವುದೇ ಒಳ್ಳೆಯದು! ಏಕೆಂದರೆ “ಹರಿಣಾಪಿ ಹರೇಣಾಪಿ ಬ್ರಹ್ಮೇಣಾಪಿ ಸುರೈರಪಿ! ಲಲಾಟಲಿಖಿತಾ ರೇಖಾ ಪರಿಮಾಷ್ಟುಂ ನ ಶಕ್ಯತೇ!” ಹಣೆಯಲ್ಲಿ ಬರೆದುದನ್ನು
ಹರಿಯಿಂದಲೂ, ಹರನಿಂದಲೂ, ಸುರರಿಂದಲೂ, ನರರಿಂದಲೂ ಅಳಿಸಲು ಸಾಧ್ಯವಿಲ್ಲ- ಎಂಬ ಮಾತು ಯಾವುದನ್ನೂ ನಾವು ಅತಿರೇಕದತ್ತ ಒಯ್ಯದೇ, ಸಮಾಧಾನಚಿತ್ತರಾಗಿಯೇ ವ್ಯವಹರಿಸಿ ಪರಿಹಾರ ಕಾಣುವ ಮನಮಾಡಲು ಪ್ರೇರೇಪಿಸುತ್ತದೆ. ನಿನ್ನೆಯವರೆಗೆ ಬಾಂಧವ್ಯ ಇಟ್ಟುಕೊಂಡವನು ಇಂದು ವಿನಾಕಾರಣ ಬಾಂಧವ್ಯ ಮುರಿದನೇ? ‘ನಿನ್ನೆ ಆ ಬುದ್ಧಿಯನ್ನೂ, ಇಂದು ಈ ಬುದ್ಧಿಯನ್ನೂ ಭಗವಂತನೇ ಕೊಟ್ಟಿದ್ದು’ ಎಂದು ಸಮಾಧಾನವಾಗಿ ಇರುವುದೇ ಸರಿ. ಅಗತ್ಯವಿದ್ದಾಗ ಅದೇ ವ್ಯಕ್ತಿ ಮತ್ತೆ ಬಂದರೆ ಆಗಲೂ ಗೌರವಯುತ ವ್ಯವಹಾರವೇ ನಮ್ಮದಾಗಬೇಕು. ಪರರ ಏಳ್ಗೆಯನ್ನು ಕಂಡು, ಪರರ ಸಂತಸದ ಬದುಕನ್ನು ಕಂಡು ಅಸೂಯೆ, ಮತ್ಸರಪಡುತ್ತಾ, ಅವರ ನಡೆ- ನುಡಿಗಳಿಗೆ ಅರ್ಥವಿಲ್ಲದ ವ್ಯರ್ಥ ಬಣ್ಣ ಹಚ್ಚಿ, ಕಾಮಾಲೆ ಕಣ್ಣಿನಲ್ಲಿ ಕಂಡು, ಒಡಲೊಳಗೆ ಬೆಂಕಿಯನ್ನು ಧಗಧಗನೆ ಉರಿಸಿಕೊಂಡು, ಹೊಟ್ಟೆಕಿಚ್ಚಿನಿಂದ ಸತ್ತೇ ಹೋಗುವ ಬದಲು ‘ಇದು ಭಗವಂತ ಬರೆದದ್ದು’ ಎಂಬ ಭಾವದಿಂದ ಇರಲಾಗದೇ? ಈ ಮತ್ಸರಕ್ಕೆ ನಮ್ಮ ಹಿರಿಯರು “ಹೊಟ್ಟೆಕಿಚ್ಚು” ಎಂದಿದ್ದಾರೆ. ವಾಸ್ತವವಾಗಿ ಯಾರಿಗೆ ಅತಿಯಾದ ಮತ್ಸರವೋ ಅವರ ಜಠರವು ಆ ದಾವಾನಲದಿಂದ ಸುಟ್ಟೇ ಹೋಗುತ್ತದೆ. ಇಂಥದ್ದನ್ನು ಕಂಡೇ ಡಿವಿಜಿಯರು ಹೇಳಿದ್ದಾರೆ-
“ಹೊಟ್ಟೆಯೊಂದರ ರಗಳೆ ಸಾಲದೆಂದೇನೋ ವಿಧಿ! ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್! ಹೊಟ್ಟೆ ತುಂಬಿದ ತೋಳ ಮಲಗೀತು, ನೀಂ ಪರರ !
ದಿಟ್ಟಿಸುತ ಕರುಬುವೆಯೊ- ಮಂಕುತಿಮ್ಮ!!”

ಆದ್ದರಿಂದ, “ಅವರವರ ಬದುಕು ಅವರವರ ಜೀವನಕ್ರಮ ವಿಧಿಯಿಚ್ಛೆ, ನನಗೆ ಈ ಜನ್ಮದಲ್ಲಿ ಇಂಥ ಬದುಕು ಅವನಿಚ್ಛೆಯೇ” ಎಂದು ಭಾವಿಸಿ ಬದುಕುವುದನ್ನು ಕಲಿಯೋಣವಲ್ಲ? ಪ್ರೀತಿಯ ಮಾತುಗಳಿಂದ ಜಗತ್ತನ್ನೇ ಗೆಲ್ಲಬಹುದು ಎಂಬುದನ್ನು ಅರಿತು ಸ್ವಚ್ಛ, ಶುದ್ಧ, ಶುಭ್ರ ಭಾವದಿಂದ ಮುಗುಳ್ನಕ್ಕು, ಸೌಮ್ಯ- ಶಾಂತ ನಡೆ- ನುಡಿಗಳಿಂದ ನಮ್ಮವರನ್ನು ಒಲಿಸಿಕೊಂಡು ಎಲ್ಲರೂ ಪ್ರೀತಿಯಿಂದ ಬದುಕಲಾಗದೇ? “ಮಾತಿನಿಂ ನಗೆ ನುಡಿಯು ಮಾತಿನಂ ಹಗೆ ಕೊಲೆಯು! ಮಾತಿನಿಂ ಸರ್ವ ಸಂಪದವು, ಲೋಕಕ್ಕೆ! ಮಾತೇ ಮಾಣಿಕವು- ಸರ್ವಜ್ಞ! ಅಹುದಲ್ಲವೇ?” “ಪೋತೀ ಪಡ ಪಡ ಜಗ್ ಮುಆ ಪಂಡಿತ ಹುಆ ನ ಕೋಈ! ಧಾಈ ಅಚ್ಚರ್ ಪ್ರೇಮ್ ಕಾ ಪಡೇ ಸೋ ಪಂಡಿತ ಹೋಈ” ಅಲ್ಲವೇ? “No one can confidently say that he will still be living tomorrow- Euripides”- ಅಲ್ಲವೇ?

ಸುತ್ತಲಿನ ವಾತಾವರಣವನ್ನೂ, ಪರಿಸರವನ್ನೂ, ಪ್ರಾಣಿ ಪಕ್ಷಿಗಳ ಜೀವನಕ್ರಮವನ್ನೂ ನೋಡಿ ಕಲಿಯುವಂಥದ್ದು ಸಾವಿರಾರು ಸಂಗತಿಗಳಿವೆ. ಹಕ್ಕಿಯ ಕಲರವ, ಸಲಿಲದ ಜುಳುಜುಳು, ಮಾರುತನ ಇನಿದಂಪು, ಪುಷ್ಪರಾಜಿಯ ಮೃದುಮಧುರ ಪರಿಮಳ ಇವುಗಳೆಲ್ಲ ನಮ್ಮ ಮನದಂಗಳವ ಅರಳಿಸಲಿ. ಸ್ನೇಹ- ಬಾಂಧವ್ಯಗಳ ಮಹತಿಯರಿತು ಬಾಳುವ ಮತಿಯುದಿಸಲಿ! “ಪರೋಪಕಾರಾರ್ಥಮಿದಂ ಶರೀರಮ್” ಎಂಬ ಭಾವದ ಅನ್ವಯದಿಂದ ಬದುಕು ಹಸನಾಗಲಿ! ಕೊಂಕು, ಅಪಮಾನ, ಅಪನಿಂದೆ, ಕೋಪ, ಸ್ವಾರ್ಥ, ದ್ವೇಷ, ಮತ್ಸರಗಳಳಿದು ಬದುಕು ಹಸನಾಗಿಸಿಕೊಂಡು, ಆರೋಗ್ಯ, ನೆಮ್ಮದಿಗಳಿಂದ ಬದುಕಿ, ಸುಖದ ಮರಣ ಸ್ವಾಗತಿಸುವ ಮನೋವಾಂಛೆಯುದಿಸಲಿ!

ಮೃತ್ಯುವಿಗೆ ಬಡವ- ಶ್ರೀಮಂತ, ಪಂಡಿತ- ಪಾಮರ, ಹಿರಿಯ- ಕಿರಿಯ, ಅಜ್ಞ- ತಜ್ಞ, ಮಹಡಿಮನೆ- ಬೀದಿಬದಿ, ಹಗಲು-ಇರುಳು ಎಂಬ ಭೇದವಿಲ್ಲ. ಇತ್ತೀಚೆಗೆ ಮದುವೆಯಾಗಿದ್ದೇನೆ, ಈಗಷ್ಟೇ ಹೊಸ ಮನೆ ಕಟ್ಟಿದ್ದೇನೆ, ಇಂದಷ್ಟೇ ಮಗ ಹುಟ್ಟಿದ್ದಾನೆ, ಮದುವೆ- ಉಪನಯನವಿದೆ, ಹೊಸ ಆಸ್ತಿಯಲ್ಲಿ ಬೆಳೆ ಬಂದಿದೆ, ಈಗ ಊಟ ಮಾಡಲಿದೆ, ಮಲಗಬೇಕಿನ್ನು… ಊಹೂಂ… ಇಂಥ ಅಥವಾ ಇಂತಹ ಇನ್ಯಾವುದೇ ಕಾರಣಗಳನ್ನು ಕೊಟ್ಟರೆ ಯಮ ಕಾಯುತ್ತಾನೆಯೇ? ನಮಗಿರುವ ಕಾರ್ಯಗಳು ಮುಗಿಯಲಿ ಎಂದು ವಿಧಿ ಕಾದು ಕುಳಿತರಾಗುತ್ತದೆಯೇ? ಇಟ್ಟ ಮುಹೂರ್ತಕ್ಕೆ, ಕೊಟ್ಟ ಅವಧಿ ಮುಗಿದ ತಕ್ಷಣ ಯಮಕಿಂಕರರು ಬಂದೇ ಬರುವರು! ಸ್ವರ್ಗ- ನರಕಗಳು ಸಾವಿನಾಚೆಯ ಹರಹು, ಕಂಡುಬಂದವರಿಲ್ಲ. ಇದ್ದಾಗ ಸಕಲರಿಗೂ ನೋವು ಕೊಟ್ಟು, ನರಕ ಸೃಷ್ಟಿಸಿ, ಸತ್ತ ಮೇಲೆ ” ಇವನೊಬ್ಬ ಸತ್ತು ನಮ್ಮನ್ನು ಬದುಕಗೊಟ್ಟ” ಎಂದು ಜನರು ನಿಟ್ಟುಸಿರು ಬಿಡುವಂತಹ, ಸತ್ತವನ ಹೆಸರಲ್ಲಿ ಹಾಲು ಕುಡಿಯುವಂತಹ ಬದುಕು ಬದುಕಬೇಕೇ? “ಶರಣರ ಬದುಕನ್ನು ಮರಣದಲ್ಲಿ ಕಾಣು- ಸಾಯುವಾಗ ನರಳಿ, ನರಳಿ ಸಾಯಬೇಕೇ ಅಥವಾ ಚೆಂದದ ಬದುಕು ಬದುಕಿ, ನಮ್ಮ ಸಾವು ನಾಲ್ವರ ಕಂಗಳಲ್ಲಿ ನೀರು ತುಂಬಬೇಕೇ? ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಮ್ ಆಗಬೇಕೇ ಅಥವಾ ಸತ್ತಮೇಲೂ ಶವ ಹೊರಲು ಜನವಿಲ್ಲವಾಗಿ ದಿಕ್ಕುದಿಶೆಯಿಲ್ಲದೇ ಮಣ್ಣಾಗಬೇಕೇ? ಆಯ್ಕೆ ನಮ್ಮದು… ಏಕೆಂದರೆ ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ- ಬರಲಿರುವ ಸಾವು ಸಂತಸವಾಗಿರುವಂತೇ ಬದುಕೋಣ! ಸಾವಿನ ಅರಿವು ಇರಲಿ- ಭಯ ಬೇಡ! ಏಕೆಂದರೆ “ಜಾತಸ್ಯ ಮರಣಂ ಧ್ರುವಮ್!”

 

Author Details


Srimukha

Leave a Reply

Your email address will not be published. Required fields are marked *