ಮನವೆಂದೂ ಶ್ರೀಮಠದ ಸೇವೆಯಲ್ಲಿ ತಲ್ಲೀನ ” : ಪ್ರೇಮಲತಾ ಜಿ. ಭಟ್ , ಕಜೆಹಿತ್ತಿಲು

ಮಾತೃತ್ವಮ್

 

” ನಮ್ಮ ಸಮಾಜವನ್ನು ಒಗ್ಗೂಡಿಸಿ, ಗೋಮಾತೆಯ ಮಹತ್ವವನ್ನು ತಿಳಿಸಿ, ಅದರ ಉಳಿವಿಗಾಗಿ ಅವಿರತ ಶ್ರಮಿಸುವ ನಮ್ಮ ಶ್ರೀಗುರುಗಳ ಮಹೋನ್ನತ ಪರಿಕಲ್ಪನೆಯಾದ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾಗಿ ಸೇವೆ ಮಾಡುವ ಅವಕಾಶ ದೊರಕಿದ್ದು ಮನಸ್ಸಿಗೆ ಅತ್ಯಂತ ಸಂತಸ ನೀಡಿದೆ. ಮನದ ಪ್ರಾರ್ಥನೆಯನ್ನು ತಾನೇ ಅರಿತು ಅದಕ್ಕೆ ಕೂಡಲೇ ಪರಿಹಾರ ದೊರಕುವಂತೆ ಮಾಡುವ ಶ್ರೀಚರಣ ಸೇವೆಯಲ್ಲಿ ಮನಸ್ಸು ಸದಾ ತಲ್ಲೀನವಾಗಲು ಬಯಸುತ್ತಿದೆ.‌ ಆ ಖುಷಿಯನ್ನು ವರ್ಣಿಸಲು ಸಾಧ್ಯವಿಲ್ಲ , ಬದುಕಿನಲ್ಲಿ ನೆಮ್ಮದಿ, ಶಾಂತಿಯ ಆಶ್ರಯಧಾಮವೇ ಶ್ರೀರಾಮದೇವರು. ಇದು ನಾನು ಬದುಕಿನಲ್ಲಿ ಕಂಡುಕೊಂಡ ಸತ್ಯ ” ಎನ್ನುವವರು ಬೆಂಗಳೂರು ಉತ್ತರ ಮಂಡಲದ ವರ್ತೂರು ವಲಯದ ಪ್ರೇಮಲತಾ ಜಿ. ಭಟ್.

ನಿಡುಗಳ ಗೋಪಾಲಕೃಷ್ಣ ಭಟ್ ಹಾಗೂ ಸೌಭದ್ರೆ ಅಮ್ಮ ಇವರ ಪುತ್ರಿಯಾದ ಪ್ರೇಮಲತಾ ಕಜೆಹಿತ್ತಿಲು ಮೂಲದ ಪೊನ್ನೂರುಕಜೆಯ ಪ್ರಸ್ತುತ ಬೆಂಗಳೂರು ನಿವಾಸಿಗಳಾಗಿರುವ ಗಣಪತಿ ಭಟ್ಟರ ಪತ್ನಿ.

” ಹಿರಿಯ ಗುರುಗಳ ಕಾಲದಿಂದಲೇ ಶ್ರೀಮಠದ ಸಂಪರ್ಕದಲ್ಲಿ ಇದ್ದೆವು. ವರ್ತೂರು ವಲಯದ ಮಾತೃ ಪ್ರಧಾನೆಯಾಗಿ, ಕುಂಕುಮಾರ್ಚನೆ ಸಂಚಾಲಕಿಯಾಗಿ ಸೇವೆ ಸಲ್ಲಿಸಿದ ಅನುಭವವಿದೆ. ಮಾಸದ ಮಾತೆಯಾಗಿ ಸೇವೆ ಗೈಯಲು ಶ್ರೀಗುರುಗಳ ಮಾತುಗಳೇ ನನಗೆ ಪ್ರೇರಣೆ. ಶ್ರೀಗುರು ಚರಣಗಳನ್ನು ಸ್ಮರಿಸುತ್ತಲೇ ಗೋಮಾತೆಯ ಸೇವೆಯಲ್ಲಿ ನಿರತಳಾದೆ. ಶ್ರೀಗುರು ಕೃಪೆಯಿಂದ ಸುಲಲಿತವಾಗಿ ಗುರಿ ತಲುಪಿದೆ ” ಎನ್ನುವ ಪ್ರೇಮಲತಾ ಒಂದು ವರ್ಷದ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

ಈ ಹಿಂದೆ ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷಭಾಗಿನಿಯಾಗಿ ಬಾಗಿನ ಸ್ವೀಕಾರವನ್ನೂ ಮಾಡಿದವರು.

” ಭಾರತೀಯ ಗೋತಳಿಗಳ ಮಹತ್ವದ ಬಗ್ಗೆ ಸಮಾಜ ಎಚ್ಚರಗೊಂಡಿದೆ. ಗೋಮಾತೆಯ ಸೇವೆಗೆ ಅನೇಕ ಮಂದಿ ಸಂತಸದಿಂದ ಕೈ ಜೋಡಿಸಿದ್ದಾರೆ.‌ ನನ್ನ ಇಬ್ಬರು ಮಕ್ಕಳು, ಸ್ನೇಹಿತರು, ಬಂಧುಗಳು ಸೇರಿದಂತೆ ಅನೇಕ ಮಂದಿ ಗೋಸೇವೆಗೆ ಕೈಜೋಡಿಸಿದ್ದಾರೆ ” ಎನ್ನುವ ಪ್ರೇಮಲತಾ ಅವರಿಗೆ ಧಾರ್ಮಿಕ ಕ್ಷೇತ್ರದಲ್ಲಿ ತುಂಬಾ ಆಸಕ್ತಿಯಿದೆ.

ಸ್ತೋತ್ರ ಪಠಣ, ಕುಂಕುಮಾರ್ಚನೆ ,ಭಜನೆಗಳಲ್ಲಿ ಆಸಕ್ತಿಯಿರುವ ಇವರು ತಮ್ಮ ಬಿಡುವಿನ ವೇಳೆಯಲ್ಲಿ ಧಾರ್ಮಿಕ ವಿಚಾರಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

ಹಳ್ಳಿಯಲ್ಲಿರುವಾಗ ಹಸುಕರುಗಳ ಒಡನಾಟದಲ್ಲಿದ್ದ ಪ್ರೇಮಲತಾಗೆ ನಗರದ ಜೀವನದ ನಡುವೆಯೂ ಗೋಮಾತೆಯ ಸೇವೆಗೆ ಅವಕಾಶ ದೊರಕಿದ ಬಗ್ಗೆ ಸಂತೃಪ್ತಿಯಿದೆ. ಬದುಕಿನಲ್ಲಿ ತೊಡಕುಗಳು ಬಂದಾಗ ಶ್ರೀಗುರು ಚರಣ ಸ್ಮರಣೆ ಮಾಡುವ ಮೂಲಕ ಅದರಿಂದ ಪಾರಾದ ಅನೇಕ ಅನುಭವಗಳನ್ನು ಮಾತುಗಳ ಮೂಲಕ ಹೇಳಲು ಅಸಾಧ್ಯ ಎನ್ನುವ ಇವರಿಗೆ ಯುವ ಜನಾಂಗವನ್ನು ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡಿ, ಅವರನ್ನು ಶ್ರೀಮಠದ ಸಂಪರ್ಕಕ್ಕೆ ಬರುವಂತೆ ಮಾಡಬೇಕು ಎಂಬುದೇ ಜೀವನದ ಗುರಿಯಾಗಿದೆ.

 

Author Details


Srimukha

Leave a Reply

Your email address will not be published. Required fields are marked *