ಶ್ರೀ ಗುರುಗಳ ಗೋವಿನ ಬಗ್ಗೆ ಇರುವ ಕಾಳಜಿಯ ಪ್ರೇರಣೆ, ಶ್ರೀ ಗುರು ವಚನದ ಮೇಲಿನ ಶ್ರದ್ಧೆ, ಬಾಲ್ಯದಿಂದಲೂ ಗೋವಿನ ಮೇಲೆ ಇದ್ದಂತಹ ಪ್ರೀತಿ ಇವುಗಳ ಪ್ರೇರಣೆಯಿಂದ ಮಾಸದ ಮಾತೆಯಾಗಿ ಸೇವೆ ಗೈಯಲು ಮುಂದೆ ಬಂದೆ. ಶ್ರೀ ಗುರುಗಳ ಅನುಗ್ರಹದಿಂದ ನಿರೀಕ್ಷೆಗೂ ಮುನ್ನವೇ ಗುರಿ ಸೇರಿದ ಸಾರ್ಥಕ ಭಾವ ಮನದಲ್ಲಿ ಮೂಡಿದೆ ಎನ್ನುತ್ತಾರೆ ಕರ್ಕಿ ಹೊನ್ನಾವರ ಮೂಲದ ಪ್ರಸ್ತುತ ಶಿರಸಿಯಲ್ಲಿ ವಾಸ್ತವ್ಯವಿರುವ ವಿಜಯಲಕ್ಷ್ಮಿ ಅಂಗಡಿ ಅವರ ಮಾತುಗಳು.
ಸಿದ್ಧಾಪುರ ಮಂಡಲದ ಅಂಬಾಗಿರಿ ವಲಯದ ವಿಜಯಲಕ್ಷ್ಮಿ ಅವರು ಮಾಸದ ಮಾತೆಯಾಗಿ ಕರ್ತವ್ಯ ನಿರ್ವಹಿಸಿ ಎರಡು ವರ್ಷಗಳ ಕಾಲ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಭರಿಸಿ ತಮ್ಮ ಗುರಿ ತಲುಪಿದ್ದಾರೆ.
ಮಂಗಲ ಗೋಯಾತ್ರೆಯಲ್ಲಿ ಭಾಗವಹಿಸಿದ ಅನುಭವವಿರುವ ವಿಜಯಲಕ್ಷ್ಮಿ ಅಂಗಡಿ ಅವರ ಕುಟುಂಬ ನಿರಂತರವಾಗಿ ಶ್ರೀ ಮಠದ ಸಂಪರ್ಕದಲ್ಲಿ ಇರುವುದರಿಂದ ಅವರು ಶ್ರೀ ಮಠಕ್ಕೆ ಬಂದರೆ ಹೂವಿನಮಾಲೆ ಕಟ್ಟುವುದು, ದೀಪಸೇವೆಯಲ್ಲಿ ಹಣತೆ ಹಚ್ಚುವುದೇ ಮುಂತಾದ ಕಾರ್ಯಗಳನ್ನು ಬಹಳ ಆಸಕ್ತಿಯಿಂದ ಮಾಡುತ್ತಾರೆ.
“ಸಮಾಜದಲ್ಲಿ ಗೋವುಗಳ ಬಗ್ಗೆ ಆಸಕ್ತಿ ಬೆಳೆಸುವ ಕಾರ್ಯ ನಡೆಯ ಬೇಕಿದೆ. ಶ್ರೀ ಗುರುಗಳ ಗೋ ಸಂರಕ್ಷಣಾ ಕಾರ್ಯದಲ್ಲಿ ಒಂದು ಬಿಂದುವಾಗಿ ಸೇವೆ ಮಾಡುತ್ತಿರುವುದು ಮನಸ್ಸಿಗೆ ನೆಮ್ಮದಿ ತಂದಿದೆ ” ಎನ್ನುವ ಇವರಿಗೆ ಜನರನ್ನು ಧೈರ್ಯವಾಗಿ ಎದುರಿಸಿ ಮಾತನಾಡಿಸಲು ಪ್ರೇರಣೆ ನೀಡಿರುವುದು ಸಹಾ ಶ್ರೀ ಗುರುಗಳ ಆಶೀರ್ವಾದ ಎಂಬ ಭದ್ರ ಭರವಸೆ.
ಶಿರಸಿ, ಅಂಬಾಗಿರಿ, ಗಿರಿನಗರಗಳಿಗೆ ಆಗಾಗ ಭೇಟಿಯಿತ್ತು ಶ್ರೀ ಮಠದ ಸೇವೆ ಗೈಯುವುದೇ ಪುಣ್ಯ ಎಂದು ಭಕ್ತಿಯಿಂದ ಹೇಳಿಕೊಳ್ಳುವ ವಿಜಯಲಕ್ಷ್ಮಿ ಅವರಿಗೆ ಪತಿ ಮಂಜುನಾಥ ಅಂಗಡಿ, ಪುತ್ರ ಶಿಶಿರ ಅಂಗಡಿ ಅವರ ಸಂಪೂರ್ಣ ಸಹಕಾರದಿಂದ ಇದು ಸಾಧ್ಯವಾಯಿತು ಎಂಬ ಸಂತಸವೂ ಇದೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಗೋ ಸೇವಾ ಕಾರ್ಯ ಮಾಡಬೇಕು, ಜನರಲ್ಲಿ ಗೋವಿನ ಬಗ್ಗೆ ಅರಿವು ಮೂಡಿಸಬೇಕು ಎಂಬ ಹಂಬಲ ವಿಜಯಲಕ್ಷ್ಮಿ ಅಂಗಡಿ ಅವರದ್ದು. ಶ್ರೀ ಗುರುಗಳ ಕಾರುಣ್ಯದಿಂದ ತನ್ನ ಕಾರ್ಯ ಸಫಲವಾಗ ಬಹುದು ಎಂಬ ಭರವಸೆಯೂ ಅವರಿಗಿದೆ.