ಗೋಸೇವೆಗೆ ಪ್ರೇರಣೆ ಮಹಾನಂದಿ : ಶೈಲಾ ರಾಮಚಂದ್ರ ಭಟ್ ,ಪದ್ಯಾಣ

ಮಾತೃತ್ವಮ್

 

” ಬಾಲ್ಯದಲ್ಲೇ ಗೋವುಗಳ ಮೇಲೆ ತುಂಬಾ ಪ್ರೀತಿ ನನಗೆ. ೯೯ ರಿಂದ ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ಇದು ಮತ್ತಷ್ಟು ಹೆಚ್ಚಾಯಿತು. ಹೊಸನಗರದ ಗೋಶಾಲೆಗಾಗಿ ವೈವಿಧ್ಯಮಯ ತಳಿಗಳ ಅನ್ವೇಷಣೆಗಾಗಿ ಅನೇಕ ಊರುಗಳಿಗೆ ತೆರಳಿದ‌ ಅನುಭವವಿದೆ. ಸಂತೆಗಳಲ್ಲಿ ಹಸುಗಳನ್ನು ಮಾರಾಟಕ್ಕಾಗಿ ಕಟ್ಟಿ ಹಾಕುವುದನ್ನು ಕಂಡಾಗ ಮನಸ್ಸು ಕರಗಿ ಕಣ್ಣೀರು ಸುರಿಸಿದ್ದೂ ಇದೆ. ನನ್ನ ಇಷ್ಟದ ಗೋವು ಮಹಾನಂದಿ. ಅವನನ್ನು ನಾನು ‘ ದೊಡ್ಡಣ್ಣ’ ಎಂದೇ ಕರೆಯುತ್ತಿದ್ದೆ. ಅವನೇ ನನ್ನ ಗೋಸೇವೆಗೆ ಪ್ರೇರಣೆ ” ಎಂದವರು ಮಂಗಳೂರು ಮಂಡಲ ಮಧ್ಯ ವಲಯದ ಪಂಜಿಮುಗೇರು ನಿವಾಸಿಗಳಾಗಿರುವ ಪದ್ಯಾಣ ರಾಮಚಂದ್ರ ಭಟ್ ಅವರ ಪತ್ನಿ ಶೈಲಾ ರಾಮಚಂದ್ರ.

 

ಅನೇಕ ವರ್ಷಗಳಿಂದ ಶ್ರೀಮಠದ ನಿಕಟ ಸಂಪರ್ಕ ಹೊಂದಿರುವ ಅವರು ನೂಜಿಬೈಲು ಗೋಪಾಲಕೃಷ್ಣ ಭಟ್ , ಕೃಷ್ಣಕುಮಾರಿ ದಂಪತಿಗಳ ಪುತ್ರಿ.

 

” ಗೋವುಗಳ ಜೊತೆಗಿನ ಒಡನಾಟ ನನಗೆ ಅತ್ಯಂತ ಇಷ್ಟದ ವಿಚಾರ. ಹೊಸನಗರದ ಗೋಶಾಲೆಗೆ ಆಗಾಗ ಭೇಟಿ ಕೊಡುತ್ತಿರುತ್ತೇನೆ. ಅಲ್ಲಿರುವ ಗೋವುಗಳ ಮೇಲೆ ಅದೇಕೋ‌ ನನಗೆ ಅಪರಿಮಿತ ಪ್ರೀತಿ. ಅಳು ನಗುಗಳನ್ನು ಅಲ್ಲಿರುವ ಗೋವುಗಳ ಜೊತೆ ಹಂಚಿಕೊಳ್ಳುವಷ್ಟು ಆತ್ಮಬಂಧ ” ಎನ್ನುವ ಶೈಲಾ ರಾಮಚಂದ್ರ ಅವರು ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

 

ಶ್ರೀರಾಮಾಯಣ ಮಹಾಸತ್ರ, ವಿಶ್ವ ಗೋಸಮ್ಮೇಳನ, ಮಂಗಲ ಗೋಯಾತ್ರೆಯೇ ಮೊದಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಇವರ ಶ್ರೀಮಠದ ಸೇವೆಗಳಿಗೆ ಮನೆಯವರೆಲ್ಲರ ಸಂಪೂರ್ಣ ಸಹಕಾರವಿದೆ. ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾದ ಇವರು ಗುರಿ ತಲುಪಿದ್ದು ಮಗಳು ಆತ್ಮಿಕಾ ರ ಸಹಕಾರದಿಂದ. ಎರಡೂ ವರ್ಷಗಳ ಸಂಪೂರ್ಣ ವೆಚ್ಚವನ್ನು ನೀಡುವ ಮೂಲಕ ಆತ್ಮಿಕಾ ತಾಯಿಯ ಗೋಸೇವೆಗೆ ಕೈ ಜೋಡಿಸಿದ್ದಾರೆ.

 

” ನಾಳೆ ಏನು ‘ ಮುಂದಿನ ಜೀವನ ಹೇಗೆ ಸಾಗಿಸುವುದು ‘ ಎಂಬ ಚಿಂತೆಯಲ್ಲಿದ್ದ ನಾವು ಇಂದು ನೆಮ್ಮದಿಯ ಜೀವನ ನಡೆಸುತ್ತಿರುವುದು ಶ್ರೀಗುರುಗಳ ಅನುಗ್ರಹದಿಂದ. ಬದುಕಿನ ಅದೆಷ್ಟೋ ಸಮಸ್ಯೆಗಳು ಶ್ರೀಗುರು ಕಾರುಣ್ಯದಿಂದ ಕರಗಿ ಹೋಗಿ ಬದುಕಿನಲ್ಲಿ ಸಂತಸ, ಶಾಂತಿ ನೆಲೆಸಿದೆ. ಗೋವುಗಳ ಮೇಲಿನ ಮಮತೆ ನನ್ನ ಬದುಕಿನ ಅವಿಭಾಜ್ಯ ಅಂಗ. ಆಗಾಗ ಗೋಸ್ವರ್ಗಕ್ಕೂ ಭೇಟಿ ನೀಡುತ್ತಿರುತ್ತೇನೆ.‌ ಸಾಧ್ಯವಿರುವಷ್ಟು ಕಾಲ ಗೋಸೇವೆ, ಶ್ರೀಮಠದ ಸೇವೆಯಲ್ಲಿ ಮುಂದುವರಿಯಬೇಕೆಂಬ ಅಭಿಲಾಷೆ ನನ್ನದು ” ಎನ್ನುವ ಶೈಲಾ ರಾಮಚಂದ್ರ ಅವರು ಈ ಹಿಂದೆ ಶ್ರೀಮಠದ ರಕ್ಷಣೆ, ಬಿಂದು ಸಿಂಧು ಮೊದಲಾದ ವಿಭಾಗಗಳಲ್ಲಿ ಸೇವೆ ಸಲ್ಲಿಸಿದವರು.

 

 

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *