” ಶ್ರದ್ಧಾಭಕ್ತಿಯಿಂದ ಶ್ರೀಗುರು ಸೇವೆ ಮಾಡುತ್ತಾ ಇದ್ದರೆ ನಮ್ಮ ಮನಃಸಂಕಲ್ಪ ಮಾತ್ರದಿಂದಲೇ ಉದ್ದೇಶಿತ ಕಾರ್ಯ ಕೈಗೂಡಲು ಶ್ರೀಗುರು ಕಾರುಣ್ಯ ದೊರಕುತ್ತದೆ. ಗುರುಸೇವೆಗೆ ನಮ್ಮನ್ನು ನಾವು ಪೂರ್ತಿಯಾಗಿ ಸಮರ್ಪಿಸಿದಾಗ ದೊರಕುವ ಅನುಭೂತಿಯೇ ಆನಂದದಾಯಕ. ಇದನ್ನು ವಿವರಿಸಲು ಅಸಾಧ್ಯ, ಅನುಭವಿಸಿಯೇ ತಿಳಿಯಬೇಕಷ್ಟೆ ” ಎಂದು ಶ್ರೀಗುರುಗಳ ಮಹತ್ವದ ಬಗ್ಗೆ ಶ್ರದ್ಧಾಭಕ್ತಿಗಳಿಂದ ನುಡಿದವರು ಸಾಗರ ಮಂಡಲ, ಪೂರ್ವ ವಲಯದ ವಿಜಯನಗರ ‘ ಸೌರಭ ‘ ಮನೆ ನಿವಾಸಿಗಳಾಗಿರುವ ಲಕ್ಷ್ಮೀನಾರಾಯಣ ಅವರ ಪತ್ನಿ ಪ್ರಗತಿ.
ಸಾಗರದ ಹುಲೀಮನೆ ವೆಂಕಟಗಿರಿ ರಾವ್ ಎಚ್.ಕೆ, ಶ್ರದ್ಧಾದೇವಿ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.
” ಹೊಸನಗರದಲ್ಲಿ ನಡೆದ ಶ್ರೀರಾಮಾಯಣ ಮಹಾಸತ್ರ, ವಿಶ್ವ ಗೋಸಮ್ಮೇಳನಗಳಲ್ಲಿ ನಮ್ಮವರ ಜೊತೆ ಕಾರ್ಯಕರ್ತೆಯಾಗಿ ಸೇವೆ ಮಾಡಿದ್ದೇನೆ. ಈಗ ನಮ್ಮ ವಲಯ ಮಟ್ಟದಲ್ಲಿ ಅಗತ್ಯವಿರುವ ಸೇವೆಗಳನ್ನು ಮಾಡಲು ಕೈ ಜೋಡಿಸುತ್ತೇನೆ. ಶ್ರೀಮಠದಲ್ಲಿ ವಿಶೇಷ ಕಾರ್ಯಕ್ರಮಗಳಿದ್ದರೆ ಇಬ್ಬರೂ ಹೋಗಿ ನಮ್ಮಿಂದ ಸಾಧ್ಯವಾದ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇವೆ ” ಎನ್ನುವ ಪ್ರಗತಿಯವರ ಗೋಸೇವೆಗೆ ಅನೇಕ ಮಂದಿ ಕೈ ಜೋಡಿಸಿದ್ದಾರೆ.
ಬದುಕಿನಲ್ಲಿ ಎದುರಾಗುವ ಸಮಸ್ಯೆಗಳಿಗೆಲ್ಲ ಶ್ರೀಗುರುಗಳನ್ನು ಮನಸಾರೆ ಸ್ಮರಿಸುವ ಮೂಲಕವೇ ಪರಿಹಾರ ಕಂಡುಕೊಂಡ ಇವರ ಶ್ರದ್ಧಾಭಕ್ತಿ ಹಿರಿದು. ಶ್ರೀಮಠದ ವಿವಿಧ ಯೋಜನೆಗಳಿಗೂ ಕೈ ಜೋಡಿಸುತ್ತಾ, ಕುಂಕುಮಾರ್ಚನೆ, ಸ್ತೋತ್ರ ಪಾರಾಯಣಗಳಲ್ಲಿ ತೊಡಗಿಸಿಕೊಳ್ಳುತ್ತಾ ಇರುವ ಇವರ ಎಲ್ಲಾ ಕಾರ್ಯಗಳಿಗೂ ಮನೆಯವರು, ಮಗಳು, ಅಳಿಯ ಬೆಂಬಲವಾಗಿದ್ದಾರೆ.
ಪ್ರಸನ್ನಾ ವಿ ಚೆಕ್ಕೆಮನೆ