” ಗೋಸೇವೆಯಲ್ಲಿ ನಮ್ಮ ಮಕ್ಕಳಿಗೆ ನಾವೇ ಮಾದರಿಯಾಗಬೇಕು ” : ಹೇಮಾ ಶ್ರೀನಿವಾಸ ಮೂರ್ತಿ ಹೊನ್ನೇಸರ

ಮಾತೃತ್ವಮ್

 

 

” ನಮ್ಮ ಜೀವನದಲ್ಲಿ ಗೋಮಾತೆಯ ಸ್ಥಾನ ಹಿರಿದು. ಭಾರತೀಯ ತಳಿಯ ಹಸುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಜಗತ್ತಿನ ಭವ್ಯ ಭವಿಷ್ಯಕ್ಕಾಗಿ ದೇಶೀಯ ತಳಿಗಳನ್ನು ಉಳಿಸಿಕೊಳ್ಳಲೇಬೇಕು. ಗೋ ಸಂರಕ್ಷಣೆಯ ಪಾಠ ಮಕ್ಕಳಿಗೆ ಮನೆಯಿಂದಲೇ ದೊರಕಬೇಕು. ಈ ವಿಚಾರದಲ್ಲಿ ನಮ್ಮ ಮಕ್ಕಳಿಗೆ ನಾವೇ ಮಾದರಿಯಾಗಬೇಕು ” ಎಂದವರು ಬೆಂಗಳೂರು ದಕ್ಷಿಣ ಮಂಡಲ ಅನ್ನಪೂರ್ಣೇಶ್ವರಿ ವಲಯದ ಶ್ರೀನಿವಾಸ ಮೂರ್ತಿ ಹೊನ್ನೇಸರ ಅವರ ಪತ್ನಿ ಹೇಮಾ ಶ್ರೀನಿವಾಸ್.

 

ಸಾಗರ ತಾಲೂಕಿನ ಹುಲಿಸರ ಕೃಷ್ಣಯ್ಯ ,ಲಕ್ಷ್ಮಮ್ಮ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಮೂರು ಹಸುಗಳ ನಿರ್ವಹಣಾ ವೆಚ್ಚವನ್ನು ಸಂಗ್ರಹಿಸಿದ ಮಾಸದ ಮಾತೆಯಾಗಿದ್ದಾರೆ.

 

” ಸುಮಾರು ಎರಡು ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನಾನು ಮಾತ್ರವಲ್ಲ ನನ್ನ ಯಜಮಾನರು ಹಾಗೂ ಇಬ್ಬರು ಮಕ್ಕಳೂ ಶ್ರೀಮಠದ ಸೇವೆಯಲ್ಲಿ ನಿರತರಾಗಿದ್ದಾರೆ. ಬದುಕಿನ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಮುನ್ನಡೆದು ಇಂದು ಈ‌ ಸ್ಥಿತಿ ತಲುಪುವಂತಾಗಿದ್ದು ಶ್ರೀಗುರುಗಳ ಅನುಗ್ರಹ. ನಾವು ಎಲ್ಲಿ ಸೋತು ಹೋದೆವು ಎಂದು ಭಾವಿಸುತ್ತೇವೋ ಅಲ್ಲಿಂದ ಕೈ ಹಿಡಿದು ನಡೆಸುವ ಶ್ರೀಗುರುಗಳ ಕೃಪೆಯ ಬಗ್ಗೆ ವಿವರಿಸಲು ಅಸಾಧ್ಯ. ಜೀವನದಲ್ಲಿ ಅನೇಕ ಅನುಭವಗಳಾದರೂ ಅವುಗಳನ್ನು ವಿವರಿಸಲು ಕಷ್ಟ. ಆದರೆ ಅನುಭವಿಸಿದವರಿಗೆ ಆ ಅನುಭೂತಿಯ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ ” ಎನ್ನುವ ಹೇಮಾ ಬೆಂಗಳೂರು ಪ್ರಾಂತ್ಯ ಮಾತೃತ್ವಮ್ ಅಧ್ಯಕ್ಷೆ ಹಾಗೂ ವಲಯ ಬಿಂದು ಸಿಂಧು ಪ್ರಧಾನೆಯಾಗಿದ್ದಾರೆ.

 

ಶ್ರೀರಾಮಾಯಣ ಮಹಾಸತ್ರ, ವಿಶ್ವ ಗೋಸಮ್ಮೇಳನಗಳಲ್ಲಿ ಭಾಗವಹಿಸಿದ ಇವರು ಹಾಲು ಹಬ್ಬದಲ್ಲಿ ತಮ್ಮ ತಂಡದೊಂದಿಗೆ ಅಮೃತಾನ್ನ, ದೋಸೆ ಕ್ಯಾಂಪ್ ಗಳನ್ನು ನಡೆಸಿದ್ದಾರೆ.

 

ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷಭಾಗಿನಿಯಾಗಿ ಶ್ರೀಸಂಸ್ಥಾನದವರಿಂದ ಬಾಗಿನವನ್ನು ಸ್ವೀಕರಿಸುವ ಸೌಭಾಗ್ಯ ಇವರಿಗೆ ದೊರಕಿದೆ.

 

” ಶ್ರೀಗುರುಗಳು ತೋರುವ ದಾರಿಯಲ್ಲಿ ಮುನ್ನಡೆಯುವವರು ನಾವು. ಶ್ರೀಮಠದ ಸೇವೆ ನಾವು ಮಾಡಿದ್ದು ಅತ್ಯಲ್ಪವಾದರೂ ಪಡೆದ ಶ್ರೀಗುರು ಕರುಣೆಯ ಅನುಗ್ರಹ ಅಪಾರ.‌ ಶ್ರೀಗುರುಗಳ ಪ್ರೇರಣೆ ಹಾಗೂ ಗೋವುಗಳ ಮೇಲಿನ ಮಮತೆಯಿಂದ ಮಾಸದ ಮಾತೆಯಾದೆ. ಗೋಮಾತೆಯ ಸೇವೆಯಲ್ಲಿ ಅನೇಕ ಮಂದಿ ಸಹಕಾರ ನೀಡಿದ್ದಾರೆ.ವಿದೇಶದಲ್ಲಿರುವ ಗೋಪ್ರೇಮಿಗಳೂ ಕೈ ಜೋಡಿಸುತ್ತಿದ್ದಾರೆ. ಮಾತೃತ್ವಮ್ ಯೋಜನೆಯ ಬಗ್ಗೆ ಅನೇಕ ಸೋದರಿಯರಿಗೆ ವಿವರಿಸಿ ಅವರ ಮೂಲಕ ಗೋಸೇವೆ ಮಾಡಿಸುವ ಅವಕಾಶ ಒದಗಿಬಂದಿದೆ. ಸ್ವಯಂ ಪ್ರೇರಿತರಾಗಿ ಗೋಸೇವೆ ಮಾಡುವುದರಿಂದ ದೊರಕುವ ಫಲವೂ ಉತ್ತಮವಾಗಿರುತ್ತದೆ ” ಎನ್ನುವ ಇವರಿಗೆ ಇನ್ನಷ್ಟು ಮತ್ತಷ್ಟು ಗೋಸೇವೆ, ಗುರುಸೇವೆ ಮಾಡುವ ಮೂಲಕ ಶ್ರೀಗುರುಗಳ ಕರುಣಾ ಕಟಾಕ್ಷಕ್ಕೆ ಪಾತ್ರರಾಗುವ ಹಂಬಲ.

 

 

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *