” ಗೋವುಗಳ ಜೊತೆ ಒಡನಾಡುತ್ತಿದ್ದ ನನಗೆ ಬೆಂಗಳೂರು ನಗರಕ್ಕೆ ಬಂದ ಮೇಲೆ ಅದು ಮರೀಚಿಕೆಯಾಯಿತು. ಆದರೆ ಈಗ ನಮ್ಮ ಶ್ರೀಗುರುಗಳ ಗೋಸೇವಾ ಯೋಜನೆಯಲ್ಲಿ ಕೈ ಜೋಡಿಸಿದ ಮೇಲೆ ಅಸಾಧ್ಯ ಎನಿಸಿದ ಕಾರ್ಯವೂ ಸುಲಲಿತವಾಗಿ ಕೈಗೂಡಿತು ” ಎನ್ನುತ್ತಾರೆ ಬೆಂಗಳೂರು ದಕ್ಷಿಣ ಮಂಡಲದ ,ವಿಜಯನಗರ ವಲಯದ ಸವಿತಾ ದತ್ತಾತ್ರೇಯ ಅವರು.
ಕುಮಟಾದ ಕತ್ತಗಾಲು ನಾರಾಯಣ ಭಟ್ ಹಾಗೂ ಗೋದಾವರಿ ಭಟ್ ಇವರ ಪುತ್ರಿಯಾದ ಸವಿತಾ ಅವರ ಪತಿ ದತ್ತಾತ್ರೇಯ ಮಹಾದೇವ ಭಟ್. ಸುಮಾರು ನಲುವತ್ತು ವರ್ಷಗಳಿಂದ ಬೆಂಗಳೂರು ನಗರದಲ್ಲಿ ಔಷಧ ಮಳಿಗೆ ನಡೆಸುತ್ತಿರುವ ದತ್ತಾತ್ರೇಯ ಭಟ್ ಪತ್ನಿಯ ಗೋಸೇವೆಗೆ ಸದಾ ಬೆಂಬಲ ನೀಡಿದವರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಸವಿತಾ ಶ್ರೀಮಠದ ಎಲ್ಲಾ ಸೇವೆಗಳಲ್ಲೂ ಕೈ ಜೋಡಿಸಿದವರು. ತನು ಮನ ಧನಗಳಿಂದ ಸಹಕರಿಸಿದವರು. ಶ್ರೀಮಠದ ಸೇವಾ ಕಾರ್ಯದಲ್ಲಿ ನೆಮ್ಮದಿ ಕಂಡುಕೊಂಡವರು.
” ಶ್ರೀಗುರುಗಳ ಆಶೀರ್ವಾದದ ಬೆಂಬಲ ಇರುವ ಕಾರಣ ಬದುಕಿನಲ್ಲಿ ನೆಮ್ಮದಿ ಶಾಂತಿ ನೆಲೆಸಿದೆ, ಶ್ರೀಮಠದ ಸೇವೆಯಲ್ಲಿ ಭಾಗಿಯಾಗುವ ಅವಕಾಶ ದೊರಕಿರುವುದು ಸಹಾ ಶ್ರೀಗುರುಗಳ ಅನುಗ್ರಹ ಎಂದು ನಂಬಿರುವವಳು ನಾನು, ಸೇವೆ ಮಾಡಬೇಕೆಂದು ಬಯಸಿದರೂ ಅದು ಕೈಗೂಡಬೇಕಿದ್ದರೆ ಶ್ರೀಗುರು ಕೃಪೆ ಖಂಡಿತ ಜೊತೆಗಿರಬೇಕು ” ಎನ್ನುವ ಸವಿತಾ ಅವರ ಮಗಳು ಸಹಾ ಶ್ರೀಮಠದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾಳೆ.
” ಗೋಸೇವೆ ಮಾಡಲೆಂದೇ ಮಾತೃತ್ವಮ್ ಯೋಜನೆಯಲ್ಲಿ ಭಾಗಿಯಾದೆ. ಅನೇಕ ಪರಿಚಿತರು, ಮಿತ್ರರು, ಬಂಧುಗಳು , ಗೋಪ್ರೇಮಿಗಳು ಗೋಮಾತೆಯ ಸೇವೆಗೆ ಕೈ ಜೋಡಿಸಿದ್ದಾರೆ. ನನ್ನ ಬಿಡುವಿನ ವೇಳೆಯಲ್ಲಿ ಗಿರಿನಗರದ ರಾಮಾಶ್ರಮಕ್ಕೆ ಹೋಗಿ ಅಲ್ಲಿ ಗೋವುಗಳ ಸೇವೆ ಮಾಡಿ ಬರುತ್ತೇನೆ. ಗೋಸೇವೆ ಎಂಬ ಕೈಂಕರ್ಯ ನನಗೆ ಅತ್ಯಂತ ಖುಷಿ ತರುವ ಕಾರ್ಯ ” ಎಂದು ತಮ್ಮ ಗೋಪ್ರೀತಿಯನ್ನು ತಿಳಿಸುವ ಇವರು ಒಂದು ವರ್ಷದ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.
ಕೊರೋನಾ ಮಾರಿಯ ಕಾರಣದಿಂದ ಗೋಸೇವೆಗೆ ಸ್ವಲ್ಪ ತೊಡಕು ಉಂಟಾದರೂ ಇನ್ನಷ್ಟು ಕಾಲ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಹಂಬಲ ಇವರಿಗಿದೆ. ಶ್ರೀಮಠದ ಸೇವೆಯಿಂದ ಆತ್ಮವಿಶ್ವಾಸ, ಮನಸ್ಸಿನ ನೆಮ್ಮದಿ ವೃದ್ದಿಸುತ್ತದೆ ಎಂಬ ನಂಬಿಕೆಯಿರುವ ಸವಿತಾ ಅವರ ಮನಸ್ಸು ಸದಾ ಶ್ರೀರಾಮ ದೇವರ , ಗೋಮಾತೆಯ ಅನುಗ್ರಹವನ್ನೇ ಹಂಬಲಿಸುತ್ತಿರುತ್ತದೆ. ಆ ಮೂಲಕ ಶ್ರೀಗುರುಗಳ ಅನುಗ್ರಹ ಸದಾ ದೊರಕುತ್ತದೆ ಎಂಬ ಭರವಸೆ ಇವರಿಗಿದೆ.