ಚಿಕ್ಕವಯಸ್ಸಿನಲ್ಲೇ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಗಮನಾರ್ಹ ಸಾಧನೆಗೈಯ್ಯುತ್ತಿರುವ ಪ್ರತಿಭೆ ವಿನೀತ್ ಕಶ್ಯಪ್.
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಗುಂಜಗೋಡಿನ ಗಣಪತಿ ಹೆಗಡೆ ಮತ್ತು ಪ್ರವೀಣಾ ಹೆಗಡೆ ದಂಪತಿಯ ಪುತ್ರ ವಿನೀತ್ ಕಶ್ಯಪ್ ಯಕ್ಷಲೋಕದಲ್ಲಿ ಹೆಜ್ಜೆ ಗುರುತು ಮೂಡಿಸುವತ್ತ ದಾಪುಗಾಲು ಹಾಕಿದ್ದಾನೆ.ಒಂಬತ್ತು ವರ್ಷದವನಿದ್ದಾಗಲೇ ಯಕ್ಷರಂಗಕ್ಕೆ ಪಾದಾರ್ಪಣೆ ಮಾಡಿದ ಈತ, ಪ್ರಾರಂಭದಲ್ಲಿ ಯಕ್ಷಗುರು ತೃಯಂಬಕ ಹೆಗಡೆ ಇಡುವಾಣಿ ಅವರಲ್ಲಿ ಅಭ್ಯಾಸ ಮಾಡಿ, ಬಳಿಕ ತಂದೆಯ ಬಳಿಯಲ್ಲೇ ಅಧ್ಯಯನ ಮುಂದುವರಿಸಿದ್ದಾನೆ.
ಕೃಷ್ಣ, ರುಕ್ಮಾಂಗ, ವಿಭೀಷಣ, ಲೋಹಿತಾಶ್ವ, ಅಭಿಮನ್ಯು, ಸೀತೆ, ರುಕ್ಮಿಣಿ… ಹೀಗೆ ವಿವಿಧ ಪಾತ್ರಗಳಲ್ಲಿ ಮಿಂಚಿದ್ದಾನೆ.
ಪೌರಾಣಿಕ ಮತ್ತು ಸಂಸ್ಕೃತ ನಾಟಕಗಳಲ್ಲೂ ಅಭಿನಯಿಸಿರುವ ವಿನೀತ್, ಪೌರಾಣಿಕ ನಾಟಕದಲ್ಲಿ ಕಯಾದು ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾನೆ.ಲಾಕ್‌ಡೌನ್ ಸಮಯದಲ್ಲಿ ತಾಳಮದ್ದಳೆ ಅಭ್ಯಸಿಸಿ, ಇದೀ ತಾಳಮದ್ದಲೆಯಲ್ಲೂ ಅರ್ಥಧಾರಿಯಾಗಿ ಗುರುತಿಸಿಕೊಂಡಿದ್ದಾನೆ.
ಪ್ರಸ್ತುತ ಸಿದ್ದಾಪುರದ ಪ್ರಶಾಂತಿ ಗುರುಕುಲ ವಿದ್ಯಾಕೇಂದ್ರದಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈತ, ಮುಂದಿನ ದಿನಗಳಲ್ಲಿ ಓದಿನ ಜೊತೆ ಯಕ್ಷಗಾನ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗೈಯ್ಯಬೇಕೆಂಬ ಆಸೆ ಇದೆ ಎನ್ನುತ್ತಾನೆ.
ಮಗನ ಸಾಧನೆಯ ಕುರಿತು ತುಂಬಾ ಖುಷಿ ಇದೆ ಎನ್ನುತ್ತಾರೆ ತಂದೆ ಗಣಪತಿ ಹೆಗಡೆ ಗುಂಜಗೋಡು.ಪುಟ್ಟವಯಸ್ಸಿನಲ್ಲಿಯೇ ದೊಡ್ಡ ಸಾಧನೆಯತ್ತ ದಾಪುಗಾಲು ಹಾಕುತ್ತಿರುವ ಈತನಿಗೆ ಇನ್ನಷ್ಟು ಯಶಸ್ಸು ದೊರೆಯಲಿ ಎಂಬ ಹಾರೈಕೆ ನಮ್ಮದು.