ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೩೩

ಅರಿವು-ಹರಿವು
ಅರಿವಿನ ಆನಂದಸಾಗರದ ಸಿಂಧುವಿನಲ್ಲಿ ಶಿಷ್ಯಕೋಟಿ ಬಿಂದುಗಳು ಲೀನಗೊಳ್ಳಲು ಹಪಹಪಿಸುತ್ತಿರುವಾಗ ಅಲ್ಲಿಗೆ ಸೇರಿಸಲು ಸರಿಸುಗಮ ಮಾರ್ಗದರ್ಶಕ ವರವಾಗಿ ಬಂದ ಅವಿಚ್ಛಿನ್ನ ಗುರುಪರಂಪರೆಯ ಇಪ್ಪತ್ತಮೂರನೆಯ ಜಗದ್ಗುರು ಶಂಕರಾಚಾರ್ಯರು ಶ್ರೀ ಶ್ರೀಪರಮೇಶ್ವರ ಭಾರತೀ ಮಹಾಸ್ವಾಮಿಗಳು. ಅರಿವೇ ತಾವಾಗಿ ಬಂದ ಶ್ರೀಗುರುಗಳು ‘ಆಚಾರ್ಯ’ ಶಬ್ದಾರ್ಥಕ್ಕನುಗುಣವಾಗಿ ಶಿಷ್ಯಭಕ್ತಜನತೆಗೆ ಅರಿವಿನಾಗರ ದರ್ಶನದ ಮೂಲಗುರಿಗೆ ಸಮ್ಯಕ್ ತಲುಪಿಸಲು ಅಗತ್ಯವಾದ ಧರ್ಮಶಾಸನ ವಿಧಿಗಳನ್ನು ನಿಯಮಿಸಲು ತಮ್ಮ ಪೂರ್ವಾಚಾರ್ಯರ ಕಾಲಘಟ್ಟದಲ್ಲಿ ಸ್ಥಾಪಿತವಾಗಿದ್ದ ಬಿದ್ರಕಾನು, ಕೆಕ್ಕಾರು, ತೀರ್ಥಹಳ್ಳಿ ಮೊದಲಾದ ಶಾಖಾಮಠಗಳಲ್ಲಿ ಸಾಕಷ್ಟು ದೀರ್ಘಕಾಲ ವಸತಿ ಮಾಡಿದರು. ತಮ್ಮ ಅಂತ್ಯಕಾಲದಲ್ಲಿ ಹಿಂದಿನ ಗುರುಗಳಂತೆಯೇ ಅವಿಚ್ಛಿನ್ನ ಅರಿವಿನ ಪರಂಪರೆಯನ್ನು ಮುಂದುವರೆಸಲಿಕ್ಕೋಸ್ಕರ ಯೋಗ್ಯ ವಟುವೋರ್ವನಿಗೆ ಯೋಗಪಟ್ಟವನ್ನಿತ್ತು ಶ್ರೀ ಶ್ರೀಮದ್ರಾಘವೇಶ್ವರ ಭಾರತೀ(೪)(೨೪) ಎಂಬ ನಾಮಕರಣವನ್ನು ಮಾಡಿ ಮುಕ್ತರಾದರು.
 ಅವಿಚ್ಛಿನ್ನ ಗುರುಪರಂಪರೆಯ ಇಪ್ಪತ್ನಾಲ್ಕನೆಯ ಗುರುಗಳಾಗಿ ಜವಾಬ್ದಾರಿ ಹೊತ್ತ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು(೪) ತಮ್ಮ ದೀಕ್ಷಾಗುರುಗಳಾದ ಪರಂಪರೆಯ ಇಪ್ಪತ್ಮೂರನೇ ಶ್ರೀಗಳಾದ ಶ್ರೀ ಶ್ರೀ ಪರಮೇಶ್ವರ ಭಾರತಿಗಳಿಂದಲೇ ವೇದಾಂತಾಧ್ಯಯನವನ್ನು ಮಾಡಿ, ಯೋಗ ಮೀಮಾಂಸ ಮೊದಲಾದ ಶಾಸ್ತ್ರಗಳಲ್ಲಿ ಪಾಂಡಿತ್ಯವನ್ನು ಪಡೆದಿದ್ದರು. ಪೂಜ್ಯರಿಗೆ ಶ್ರೀ ಶ್ರೀ ವೆಂಕಟೇಶ್ವರ ಭಾರತೀ ಎಂಬ ಮತ್ತೊಂದು ಶುಭಾಭಿಧಾನವೂ ಇತ್ತು. ಧಾರ್ಮಿಕವಾದ ವಿಷಯಗಳಲ್ಲಿ ಮಾತ್ರವಲ್ಲದೇ ಶ್ರೀಮಠದ ಅಭಿವೃದ್ಧಿಗೆ ಅಗತ್ಯವಾದ ವ್ಯಾವಹಾರಿಕ ವಿಷಯಗಳಲ್ಲಿಯೂ ಪೂಜ್ಯ ಶ್ರೀಗಳು ಅತ್ಯಂತ ಚತುರಮತಿಗಳಾಗಿದ್ದರು. ಇಂತಹ ಶ್ರೇಷ್ಠ ಉತ್ತರಾಧಿಕಾರಿಯನ್ನು ಶ್ರೀ ಶ್ರೀಪರಮೇಶ್ವರ ಭಾರತೀ ಶ್ರೀಗಳು ಸ್ವೀಕರಿಸಿದುದನ್ನು ಗುರುಕೃಪಾತರಂಗಿಣಿ ಕಾವ್ಯವು ಈ ರೀತಿಯಾಗಿ ಉಲ್ಲೇಖಿಸಿದೆ –
ಧರ್ಮಾದೇಶೇ ರಘುಪದಯುಜಾ ಚೋತ್ತಮೇನಾತ್ತದೀಕ್ಷಃ
 ಪ್ರಾಚಾರ್ಯೋsಭೂತ್ತದನು ಪರಮೇಶಾನಭಾರತ್ಯಭಿಖ್ಯಃ ।
ವೃದ್ಧಾಚಾರಾನನುಸೃತವತಾ ತೇನ ದತ್ವಾಥ ದೀಕ್ಷಾಂ
ವ್ಯಾಖ್ಯಾಪೀಠೇ ನಿಶಿತಧಿಷಣೋ ರಾಘವೇಶೋಭ್ಯಷೇಚಿ।।
ಪೂಜ್ಯ ಶ್ರೀಗಳು ಗುರುಪರಂಪರೆಯ ಧ್ಯೇಯವಾದ ಅರಿವಿಗಾಗಿಯೇ ಜೀವನವನ್ನು ಮುಡಿಪಾಗಿಟ್ಟು, ಕಾಲ ಸನ್ನಿಹಿತವಾಯಿತೆಂದೆನಿಸಿದಾಗ ನೂತನ ಅರಿವಿನ ಪಾತ್ರದೊಳಗೆ ಪಾತ್ರವಾಗಿ ಅರಿವಿನಾಗರದಲ್ಲಿ ಲೀನವಾದರು ಮತ್ತು ಐಹಿಕ ಪಾಂಚಭೌತಿಕ ನಿರ್ಮಿತ ಈ ದೇಹವನ್ನು ಪಂಚಭೂತಗಳಲ್ಲಿಯೇ ಸಮ್ಮಿಲನಗೊಳಿಸಿದರು.

Author Details


Srimukha

Leave a Reply

Your email address will not be published. Required fields are marked *