ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೯

ಅರಿವು-ಹರಿವು
ವೇದವ್ಯಾಸರಿಂದ ಅರಿವು ಅವಿಚ್ಛಿನ್ನವಾಗಿ ಶುಕರಿಗೆ ಹೇಗೆ ಹರಿದು ಗುರುಪರಂಪರೆಯನ್ನು ಉದ್ಧರಿಸಿತು ಎಂದು ಚರ್ಚಿಸುವಾಗ ಶುಕರ ಪಾತ್ರಪರಿಚಯ ಮಾಡಿಕೊಳ್ಳುತ್ತಾ ಜಾತಮಾತ್ರವೇ ಶುಕರಿಗೆ ಉಪನಯನವಾಯಿತು ಎನ್ನುವಲ್ಲಿಗೆ ಬಂದು ನಿಂತಿದ್ದೆವು. ಹೌದು ಅರಣೀಗರ್ಭಸಂಭೂತನಾದ ಶುಕನಿಗೆ ಸಾಕ್ಷಾತ್ ಪರಮೇಶ್ವರ ಪಾರ್ವತಿಯೇ ಬಂದು ಮಾತಾಪಿತೃ ಸ್ಥಾನದಲ್ಲಿ ನಿಂತು ಬ್ರಹ್ಮೋಪದೇಶಗೈದರು. ಸವಿತೃ ದೇವತೆಗಳಿಂದ ಸಾವಿತ್ರಿಯೇ ಭೂಷಣಳಾಗಿ ಬಂದಳು. ದೇವಾಚಾರ್ಯ ಬೃಹಸ್ಪತಿ ಬ್ರಹ್ಮಸೂತ್ರವನ್ನಿತ್ತರು. ಕಾಶ್ಯಪರು ಮೇಖಲ (ಮುಮುಂಜಿ)ಯನ್ನು ಪ್ರದಾನ ಮಾಡಿದರು. ದ್ಯೌಃ (ದಿವಿಗಳು) ಕೌಪೀನ ಆಚ್ಛಾದನ ಮಾಡಿದರು. ಶ್ವೇತಾಂಬರದರೆ ವಿದ್ಯಾದಾಯಿ ಸರಸ್ವತಿ ತನ್ನ ಅಕ್ಷಮಾಲೆಯನ್ನೇ ಕೊಟ್ಟಳು. ಈ ವಿಶಿಷ್ಟ ವಟುವಿಗೆ ಉಮೆ ಭಿಕ್ಷೆ ಹಾಕಿದಳು. ಈ ಮಹಾಮಹೋನ್ನತವಾದ ಬ್ರಹ್ಮೋಪದೇಶಕ್ಕೆ ಸಾಕ್ಷಿಯಾಗಿ ಹಂಸಗಳು, ಶತಪತ್ರಗಳು, ಸಾರಸಗಳು ಪ್ರದಕ್ಷಿಣೆ ಮಾಡಿದವು. ಹಂಸಗಳಿಂದ ಪರಮಹಂಸರ ಪ್ರದಕ್ಷಿಣೆ. ಪ್ರಕೃತಿ ಪುರಷನತ್ತೆಡೆಮಾಡಿ ಸಮ್ಮಿಲನಗೊಂಡು ಆನಂದವೊಂದೇ ಆದ ಸೂಚನೆ. ಬ್ರಹ್ಮೋಪದೇಶವಾದ ತತ್ ಕ್ಷಣವೇ ಪರಮಾತ್ಮನ ಉಸಿರೇ ಆದ ಎಲ್ಲಾ ವೇದಗಳೂ ರಹಸ್ಯಸಹಿತವಾಗಿ ತಮ್ಮಾತ್ಮವ ತೆರೆದು ಬಂದು ನಿಂದು ಶುಕರನ್ನು ವರಿಸಿದವು. ಒಟ್ಟಿನಲ್ಲಿ ಪರಮಶ್ರೇಷ್ಠ ಉಪನಯನವಾಯಿತು. ಭುವಿಯಲ್ಲಿ ದಿವ್ಯಜನ್ಮ ಪ್ರಾಪ್ತವಾದಂತಾಯಿತು. ಕುಲಕ್ಕೆ ಪರಮಪವಿತ್ರತೆಯ ಸುಸಂವೇದನೆಯಾಯಿತು. ವಸುಂಧರೆಯೇ ಪುಣ್ಯವತಿಯೆನಿಸಿ ಧನ್ಯತಾಭಾವವನ್ನು ಸವಿದಳು.
ದಿವ್ಯಜನ್ಮ  ಪ್ರಾಪ್ತ ಶ್ರೇಷ್ಠ ಬ್ರಹ್ಮಚಾರಿಗೆ ಉತ್ಕೃಷ್ಟ ರೀತಿಯಲ್ಲಿ ಬ್ರಹ್ಮೋಪದೇಶವಾಯಿತು ಎನ್ನುವುದು ಸರಿ ಆದರೆ ಅಯೋನಿಜ ಜನ್ಮಸಹಜ ಬ್ರಹ್ಮಜ್ಞಾನಿಗೆ ಉಪನಯನ ಸಂಸ್ಕಾರದ ಅಗತ್ಯವೇನೆಂದು ಪ್ರಶ್ನೆ ಹುಟ್ಟಿದರೆ ಉತ್ತರವಿಷ್ಟೆ.. ಪ್ರತಿ ಜೀವಿಯ ಆಂತರ್ಯದಲ್ಲೂ ಅರಿವು ಆನಂದ ಸಹಜವಾಗಿ ಇದ್ದೇ ಇದೆ.ಆದರೆ ಮಣ್ಣಿನ ಮಡಿಕೆಯಲ್ಲಿಟ್ಟ ದೀಪಕ್ಕೂ ಗಾಜಿಸ ಪಾತ್ರೆಯೊಳಗಿಟ್ಟ ದೀಪಕ್ಕೂ ವ್ಯತ್ಯಾಸವಿದೆ. ಗಾಜಿನ ಪಾತ್ರೆಯಲ್ಲಿಟ್ಟ ದೀಪ ತನ್ನ ಪ್ರಾಜ್ವಲ್ಯಮಾನ ಕಿರಣಗಳನ್ನು ಯಾವುದೇ ತಡೆಯಿಲ್ಲದೆ ನಾನಾ ದಿಶೆಗಳಿಗೆ ಹರಡುವಂತೆ ಶುಕಚೈತನ್ಯದ ಆನಂದಸಿಂಧು ಅದೇ ಅನುಭೂತಿಯನ್ನು ಜೀವಕೋಟಿಗಳಿಗೆ ನಿರರ್ಗಳವಾಗಿ ನೀಡಲು ಪ್ರಕೃತಿ ಧರ್ಮದಂತೆ ಉಪನಯನ ಸಂಸ್ಕಾರ ನಡೆಯಿತು.
 ದಿವ್ಯಜನ್ಮದ ಮಹಾದ್ಯುತಿಯೆನಿಸಿದ್ದರೂ ಧರ್ಮವೊಂದಕ್ಕಾಗಿ  ದೇವಗುರು ಬೃಹಸ್ಪತಿಯನ್ನು ಗುರುವಾಗಿ ಸ್ವೀಕರಿಸಿದರು. ಶುಕರು ಬಾಲನಾದರೂ ಸಹ ತಪಸ್ಸಿನಿಂದ, ಜ್ಞಾನದಿಂದ ವೃದ್ಧರೆನಿಸಿ ದೇವದೇವತೆಗಳಿಗೆ , ಋಷಿಗಳಿಗೆ ಸಮ್ಮಂತ್ರಣೀಯ ಮತ್ತು ಮಾನ್ಯರಾಗಿದ್ದರು. ದೇವಗುರು ಬೃಹಸ್ಪತಿಯಲ್ಲಿ ಮೊದಲ ಅಧ್ಯಯನವನ್ನು ಮಾಡಿ ಸಮಾಧಾನವನ್ನು ತಾಳಿದರು. ಶುಕರು ಗೃಹಸ್ಥಾದಿ ಬೇರೆ ಧರ್ಮಗಳಲ್ಲಿ ನಿರಾಸಕ್ತಿ ಹೊಂದಿ ಮೋಕ್ಷಧರ್ಮದಲ್ಲೊಂದೇ ತಲ್ಲೀನರಾಗಿ ತನ್ನ ಮನಸ್ಸಿಗೆ ಪರಮಶಾಂತಿ ಲಭಿಸಬೇಕೆಂದು ಮುಮುಕ್ಷಾರ್ಥಿಯಾಗಿ ತಂದೆಯಲ್ಲಿಗೆ ಧಾವಿಸಿದರು. ಶುಕಮುನಿಗಳಿಗೆ ಶುದ್ಧ ಅರಿವು ಸಹಜವಾಗಿದ್ದು ಅದರ ಬೆಳಕು ಜಗವೆಲ್ಲೆಡೆ ಪಸರಿಸುತ್ತಿದ್ದರೂ, ಪರಿಪೂರ್ಣ ಅರಿವಿಗಾಗಿ ಧರ್ಮವೊಂದನ್ನೇ ಅನುಚಿಂತಿಸಿದ ವ್ಯಾಸರು  ಪುತ್ರನ ಬ್ರಹ್ಮತುಲ್ಯವಾದ ಪರಾಕ್ರಮವನ್ನು ನೋಡಿ ನಿಖಿಲವಾದ ಯೋಗಶಾಸ್ತ್ರವನ್ನು, ಸಾಂಖ್ಯಶಾಸ್ತ್ರವನ್ನೂ ಅನುಗ್ರಹಿಸಿದರು.  ಪ್ರೇಮಪುತ್ರನಿಗೆ ಪರಮಶಾಂತಿಗಾಗಿ ವೇದವ್ಯಾಸರು ಯಾವ ಮಾರ್ಗವನ್ನು ಸೂಚಿಸಿದರು ಅಂತೆಯೇ ಶುಕರು ನಿರುಪಾಧಿಕವಾದ ಮೋಕ್ಷಧರ್ಮಕ್ಕಾಗಿ ಹೇಗೆ ಹೆಜ್ಜೆ ಹಾಕಿದರು ಎಂದು  ಮುಂದಿನ ಸಂಚಿಕೆಯಲ್ಲಿ ತಿಳಿಯೋಣ…

Leave a Reply

Your email address will not be published. Required fields are marked *