“ಕಷ್ಟ ಪರಂಪರೆಯಿಂದ ಮುಕ್ತಿ ದೊರಕಿದ್ದು ಶ್ರೀ ಗುರು ಕಾರುಣ್ಯದಿಂದ ” : ಕೃಷ್ಣಕುಮಾರಿ ಬದನಾಜೆ

ಮಾತೃತ್ವಮ್

“ಶ್ರೀ ಗುರುಚರಣಗಳನ್ನು ನಂಬಿದವರಿಗೆ ಬದುಕಿನಲ್ಲಿ ಸೋಲಿಲ್ಲ.ಎಂಥಹ ಕಷ್ಟದ ಹೊಡೆತವನ್ನು ನಿವಾರಿಸುವ ಶಕ್ತಿ ಗುರು ಕೃಪೆಗಿದೆ.ಇದು ನಮ್ಮ ಬದುಕಿನಲ್ಲಿ ಅನುಭವಿಸಿ ಅರಿತುಕೊಂಡ ಸತ್ಯ. ಆದುದರಿಂದಲೇ ಬದುಕಿನಲ್ಲಿ ಮೊದಲ ಆದ್ಯತೆ ಗುರು ಸೇವೆ,ಗೋಸೇವೆಗೆ” ಎನ್ನುತ್ತಾರೆ ಮಿಂಚಿನಡ್ಕ ಮೂಲದ ಪ್ರಸ್ತುತ ವಿಟ್ಲ ಸಮೀಪ ಬದನಾಜೆ ನಿವಾಸಿಗಳಾಗಿರುವ ಕೃಷ್ಣಕುಮಾರಿ ಬದನಾಜೆ.

ಶ್ರೀಮಠದ ಸಂಪರ್ಕ ಅವರಿಗೆ ಎಳವೆಯಿಂದಲೇ ದೊರಕಿತ್ತು. ತಂದೆ ಶೇಂತಾರು ಗೋಪಾಲಕೃಷ್ಣ ಭಟ್ ಉರುವಾಲು ವಲಯದ ಗುರಿಕ್ಕಾರರಾಗಿ ಸೇವೆ ಸಲ್ಲಿಸಿದವರು.

ಪತಿ ಬದನಾಜೆ ಪುರುಷೋತ್ತಮ ಭಟ್ ಮಂಗಳೂರು ಹೋಬಳಿಯ ಅಮೃತಸತ್ವ ಸಂಚಾಲಕರಾಗಿ, ವಿಟ್ಲ ವಲಯದ ಅಧ್ಯಕ್ಷರಾಗಿ ಹಾಗೂ ಅಶೋಕೆ ಮೂಲ ಮಠ ವಲಯ ಸಂಚಾಲಕರಾಗಿ ಸೇವೆ ಸಲ್ಲಿಸಿದವರು.

ಕೃಷ್ಣಕುಮಾರಿ ಶ್ರೀಮಠದ ಸೇವೆಯಲ್ಲಿ ಅತ್ಯಂತ ಆಸಕ್ತಿ ಹೊಂದಿದವರು. ಕುಂಕುಮಾರ್ಚನೆ ಮಾಡುತ್ತಾ,ಸೌಂದರ್ಯಲಹರಿಯೇ ಮೊದಲಾದ ಪಾರಾಯಣಗಳನ್ನೂ ಶ್ರದ್ಧೆಯಿಂದ ಮಾಡುತ್ತಾ ಸದಾ ಗುರುಸೇವೆಯಲ್ಲಿ ತೊಡಗಿಸಿಕೊಳ್ಳುವ ಶಿಷ್ಯಭಕ್ತೆ. ಮಾಣಿ ಮಠದ ಚಾತುರ್ಮಾಸ್ಯದ ಸಂದರ್ಭದಲ್ಲಿ ಅವರಿಗೆ ಮಠದ ಸಂಪರ್ಕ ಮತ್ತಷ್ಟು ನಿಕಟವಾಗಿ ಇನ್ನಷ್ಟು ಸೇವೆ ಮಾಡುವ ಅವಕಾಶ ಒದಗಿ ಬಂತು .

“ಬದುಕಿನಲ್ಲಿ ಕಷ್ಟ ಅನುಭವಿಸದ ಮನುಜರು ವಿರಳ. ಆದರೆ ಶ್ರೀಗುರುಗಳ, ಶ್ರೀರಾಮ ದೇವರ ಅನುಗ್ರಹದಿಂದ ಅದರಿಂದ ಶೀಘ್ರವಾಗಿ ಮುಕ್ತಿ ಗಳಿಸುವಂತಾಗಿದ್ದು ನಾವು ಮಾಡುತ್ತಿರುವ ಗುರುಸೇವೆಯ ಫಲದಿಂದ ಎಂಬ ನಂಬಿಕೆ ನನಗೆ” ಎನ್ನುವ ಕೃಷ್ಣಕುಮಾರಿ ಅವರಿಗೆ ಕೆಲವು ವರ್ಷಗಳ ಹಿಂದೆ ಹೊಸನಗರಕ್ಕೆ ಶಪಥ ಪರ್ವದಲ್ಲಿ ಭಾಗವಹಿಸಲು ತೆರಳುವಾಗ ಉಂಟಾದ ಅಪಘಾತದಿಂದ ತೀವ್ರವಾದ ಗಾಯಗಳುಂಟಾಗಿತ್ತು. ಆದರೂ ಶ್ರೀ ಗುರುಗಳು ನೀಡಿದ ಮಂತ್ರಾಕ್ಷತೆಯ ಅನುಗ್ರಹದಿಂದ ಶೀಘ್ರವಾಗಿ ಗುಣಹೊಂದಿ ಮತ್ತೊಮ್ಮೆ ಗೋಸೇವೆ, ಗುರುಸೇವೆಯಲ್ಲಿ ತೊಡಗಿಸಿಕೊಳ್ಳುವಂತಾಗಿದ್ದು ಮನಸ್ಸಿಗೆ ಅತ್ಯಂತ ಖುಷಿ ನೀಡಿದೆ ಎನ್ನುವ ಅವರು ಈ ಹಿಂದೆ ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾದವರು.

ಅಪಘಾತದ ನಂತರ ಆರೋಗ್ಯ ತುಸು ಹದಗೆಟ್ಟ ಕಾರಣ ಹಿಂದಿನಂತೆ ಗುರು ಸೇವೆ, ಗೋಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದು ಎಂಬ ಚಿಂತೆ ಅವರನ್ನು ಕಾಡುತ್ತಿತ್ತು. ಆದರೂ ಶ್ರೀರಾಮ ದೇವರ ಅನುಗ್ರಹದಿಂದ ಜನಿಸಿದ ಮೊಮ್ಮಗುವನ್ನು ಮೊದಲ ಬಾರಿಗೆ ಶ್ರೀಗುರುಗಳ ಸಾನ್ನಿಧ್ಯಕ್ಕೆ ಕರೆ ತಂದ ಸಮಯದಲ್ಲಿ ಮನಸ್ಸು ಮಾತೃತ್ವಮ್ ಯೋಜನೆಯ ಮಾಸದ ಮಾತೆಯಾಗಿ ಸೇವೆ ಮಾಡಲು ಸೇರಲೇ ಬೇಕೆಂದು ಹಠ ಹೂಡಿತು. ಕೊನೆಗೂ ಮಗನ ಅನುಮತಿ ಪಡೆದು ಶ್ರೀಗುರುಗಳ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.

“ಮಾಸದ ಮಾತೆಯಾಗಿ ಸೇರಿದ ಮೇಲೆ ಗುರಿ ತಲುಪಲು ಸಾಧ್ಯವೇ ಎಂಬ ಆತಂಕವನ್ನು ಶ್ರೀಗುರುಗಳ ಬಳಿ ಹೇಳಿದಾಗ “ಅತೀ ಶೀಘ್ರವಾಗಿ ಗುರಿ ತಲುಪುವೆ ” ಎಂದು ಆಶೀರ್ವಾದ ಮಾಡಿದರು. ಆ ಭರವಸೆಯೊಂದಿಗೆ ಗೋಸೇವೆ ಮಾಡಲು ಆರಂಭಿಸಿದೆ. ಮೊದಲ ಕೊಡುಗೆ ಮಗನಿಂದಲೇ ದೊರಕಿತು. ಮುಂದೆ ನೆಂಟರ ಬಳಿ, ಮಿತ್ರರ ಬಳಿ ಮಾತೃತ್ವಮ್ ಯೋಜನೆಯ ಬಗ್ಗೆ ವಿವರಿಸಿದೆ. ಆಗಲೇ ವಿದೇಶದಲ್ಲಿ ನೆಲೆಸಿರುವ ಗೆಳತಿಯ ಮಗಳಿಗೆ ಮಾತೃತ್ವಮ್ ಯೋಜನೆಯ ಬಗ್ಗೆ, ನಮ್ಮ ಗುರುಗಳ ಗೋ ಸೇವೆಯ ಬಗ್ಗೆ, ದೇಶೀಯ ಹಸುಗಳ ಮಹತ್ವದ ಬಗ್ಗೆ, ಗೋಸ್ವರ್ಗದ ಬಗ್ಗೆ ಪೂರ್ಣ ವಿವರಗಳನ್ನು ತಿಳಿಸಿ ವ್ಯಾಟ್ಸಪ್ ಮೂಲಕ ಪೋಟೋ, ವೀಡಿಯೋಗಳನ್ನು ಕಳಿಸಿದೆ. ನನ್ನ ನಿರಂತರ ಶ್ರಮ ವ್ಯರ್ಥವಾಗಲಿಲ್ಲ . ಎರಡು ವರ್ಷಗಳ ಕಾಲ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಪೂರ್ಣವಾಗಿ ಅವರೊಬ್ಬರೇ ನೀಡಿದ ಕಾರಣ ನಾನು ಶ್ರೀಗುರುಗಳ ಅನುಗ್ರಹದಿಂದ ಬಹಳ ಬೇಗನೆ ಗುರಿ ತಲುಪುವಂತಾದೆ” ಎನ್ನುತ್ತಾರೆ ಕೃಷ್ಣಕುಮಾರಿ.

ಅಷ್ಟು ಮಾತ್ರವಲ್ಲದೆ ಇತರ ಸಮಾಜದವರಲ್ಲೂ ಗೋವಿನ ಮಹತ್ವದ ಅರಿವು ಮೂಡಿಸಿ ಅವರು ಕೂಡ ಗೋಸೇವೆಗೆ ಕೈ ಜೋಡಿಸುವಂತೆ ಮಾಡಿದರು. ತಾನು ಗುರಿ ತಲುಪಿದ ಮೇಲೆ ತನ್ನ ತಂಗಿಯನ್ನು ಮಾಸದ ಮಾತೆಯಾಗಿಸಿ ಈ ಹಿಂದೆ ತನಗೆ ಸಹಕರಿಸಿದ ಗೆಳತಿಯ ಇನ್ನೊಬ್ಬ ಮಗಳು ನೀಡಿದ ಒಂದು ವರ್ಷದ ಮೊತ್ತವನ್ನು ತಂಗಿಗೆ ಕೊಡುವಂತೆ ಮಾಡಿ ಅವರು ಕೂಡ ಒಂದು ವರ್ಷದ ಗುರಿ ತಲುಪುವಂತೆ ಮಾಡಿದ ಹಿರಿಮೆ ಇವರದ್ದು.

ತಮ್ಮ ಬಂಧುಬಳಗದವರಿಗೆ ಶ್ರೀ ರಾಮಚಂದ್ರಾಪುರ ಮಠದ ವಿಶೇಷತೆಗಳನ್ನು ತಿಳಿಸಿ,ಗೋಸ್ವರ್ಗದ ಬಗ್ಗೆ ವಿವರಿಸಿ ಶ್ರೀಮಠದ ಸಂಪರ್ಕದಿಂದ ದೂರ ಇರುವವರನ್ನು ಮಠಕ್ಕೆ ಕರೆದುಕೊಂಡು ಬಂದು ಮಠ ಹಾಗೂ ಶಿಷ್ಯ ಭಕ್ತರ ನಡುವೆ ಸಂಪರ್ಕ ಬೆಸೆಯುವಂತೆ ಮಾಡಿದವರು ಕೃಷ್ಣಕುಮಾರಿ.

“ನಮ್ಮ ಸಮಾಜದವರೆಲ್ಲ ಶ್ರೀಮಠದ ನಿಕಟ ಸಂಪರ್ಕದಲ್ಲಿರ ಬೇಕೆಂಬುದೇ ನನ್ನ ಆಸೆ. ಇದಕ್ಕಾಗಿಯೇ ನನ್ನ ಶ್ರಮ. ಇದುವರೆಗೂ ಮಠಕ್ಕೆ ಬಾರದವರು ಒಂದು ಬಾರಿ ಬಂದರೆ ಮತ್ತೊಮ್ಮೆ ಬರಲು ಕಾತರಿಸುತ್ತಾರೆ. ಸಮಯ ಹೊಂದಾಣಿಕೆ ಮಾಡಿಕೊಂಡು ಅವರು ಆಗಾಗ್ಗೆ ಮಠಕ್ಕೆ ಬಂದು ಹೋಗುವಾಗ ನನ್ನ ಮನಸ್ಸಿನಲ್ಲಿ ಸಾರ್ಥಕ ಭಾವ ಮೂಡುತ್ತದೆ” ಎನ್ನುವ ಕೃಷ್ಣಕುಮಾರಿಗೆ ಇನ್ನು ಮುಂದೆಯೂ ಶ್ರೀಮಠದ, ಗೋಮಾತೆಯ ಸೇವೆಯನ್ನು ಮಾಡಬೇಕೆಂಬುದೇ ಗುರಿ.

ಸಾಧ್ಯವಾದಷ್ಟು ಕಾಲ ಶ್ರೀಮಠದ ಸೇವೆ, ಗೋಸೇವೆ ಮಾಡಬೇಕೆಂಬ ಅಭಿಲಾಷೆಯಿದೆ ಎನ್ನುವ ಇವರ ಸೇವಾಕಾರ್ಯಕ್ಕೆ ಪತಿ ಹಾಗೂ‌ ಮಕ್ಕಳ ಸಂಪೂರ್ಣ ಸಹಕಾರವಿದೆ. ಬದುಕಿನ ಏಳುಬೀಳುಗಳಲ್ಲಿ ನೆಮ್ಮದಿ, ಸಂತಸ ಗುರುಚರಣ ಸೇವೆಯಿಂದ ದೊರಕುತ್ತದೆ ಎಂಬ ಭದ್ರ ಭರವಸೆ ಹೊಂದಿರುವ ಕೃಷ್ಣಕುಮಾರಿ ಅವರ ಬದುಕು ಇತರ ಮಾಸದ ಮಾತೆಯರಿಗೆ ಸ್ಪೂರ್ತಿದಾಯಕ.

Author Details


Srimukha

Leave a Reply

Your email address will not be published. Required fields are marked *