” ಬಾನ್ಕುಳಿಯ ಗೋಸ್ವರ್ಗಕ್ಕೆ ಹೋಗಬೇಕೆಂದು ಅನೇಕ ಬಾರಿ ಬಯಸಿದ್ದೆ. ಆ ಕನಸು ಈಡೇರಿತು. ಅಲ್ಲಿಗೆ ಹೋದಾಗ ಅಲ್ಲಿರುವ ಹಸುಗಳನ್ನು ಕಂಡು ಮನಸ್ಸಿಗೆ ತುಂಬ ಆನಂದವಾಯಿತು. ಇಷ್ಟು ಹಸುಗಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳುವುದು ಸುಲಭವಲ್ಲ ಎಂದೆನಿಸಿತು. ನನ್ನಿಂದ ಸಾಧ್ಯವಾದಷ್ಟು ಗೋಮಾತೆಯ ಸೇವೆ ಮಾಡೋಣ ಎಂದು ತೀರ್ಮಾನಿಸಿ ಮಾತೃತ್ವಮ್ ಮೂಲಕ ಮಾಸದ ಮಾತೆಯಾದೆ. ಆಗ ಮಗ ಮುಂಬೈಯಲ್ಲಿದ್ದ. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿತ್ತು. ಒಂದಿಬ್ಬರು ಸಣ್ಣ ಪ್ರಮಾಣದ ಸಹಕಾರ ನೀಡಿರುವುದು ಬಿಟ್ಟರೆ ಉಳಿದಂತೆ ಒಂದು ಹಸುವಿನ ಸಂಪೂರ್ಣ ನಿರ್ವಹಣಾ ವೆಚ್ಚವನ್ನು ನಾನೇ ನೀಡಿದೆ. ಆದರೆ ಜಗತ್ತಿಗೆ ಕಾಲಿರಿಸಿದ ಕೊರೋನಾ ನಮ್ಮ ಬದುಕನ್ನೂ ಹಳಿ ತಪ್ಪಿಸಿತು. ಮಗ ಕೆಲಸ ಬಿಟ್ಟು ಊರಿಗೆ ಬಂದ. ಹೊಸ ಮನೆಯ ನಿರ್ಮಾಣ ಕಾರ್ಯ ಅರ್ಧದಲ್ಲೇ ನಿಂತು ಹೋಯಿತು. ಪ್ರತಿದಿನವೂ ಶ್ರೀಗುರುಗಳ ಚರಣಗಳನ್ನು ಮನಸಾರೆ ಸ್ಮರಿಸಿಕೊಂಡು ಪ್ರಾರ್ಥಿಸುತ್ತಿದ್ದೇನೆ. ಶ್ರೀಗುರುಪೀಠವನ್ನು ನಂಬಿದವರು ಬದುಕಿನಲ್ಲಿ ಉನ್ನತಿ ಹೊಂದಿದ್ದಾರೆ ಎಂಬುದು ನನಗೆ ಗೊತ್ತು. ಆ ಭರವಸೆಯಿಂದ ಕಾಯುತ್ತಿದ್ದೇನೆ ” ಎಂದು ಕಣ್ಣೀರು ತುಂಬಿ ಗದ್ಗದಿತರಾದವರು ಮಂಗಳೂರು ಮಂಡಲ ಕನ್ಯಾನ ವಲಯದ ‘ ಬಾಲ ಸರಸ್ವತಿ ನಿವಾಸ’ ದ ರಾಮಕೃಷ್ಣ ಭಟ್ಟರ ಪತ್ನಿ ಲಕ್ಷ್ಮಿ ಅಮ್ಮ.
ನಿಡ್ಲೆ ತಿಮ್ಮಣ್ಣ ಭಟ್ ಶಂಕರಿ ಅಮ್ಮ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.
ಸುಮಾರು ಎರಡು ದಶಕಗಳಿಂದ ಶ್ರೀಮಠದ ಸಂಪರ್ಕ ಹೊಂದಿರುವ ಇವರು ಪ್ರತಿದಿನವೂ ಬಿಂದು ಸಿಂಧು ಕಾಣಿಕೆ, ಮುಷ್ಟಿ ಭಿಕ್ಷೆಯನ್ನು ತೆಗೆದಿರಿಸುತ್ತಾರೆ.
” ಗೋಸೇವೆಯನ್ನು ಇನ್ನೂ ಮುಂದುವರಿಸಬೇಕೆಂಬ ಅಭಿಲಾಷೆಯಿದೆ. ಆದರೆ ಆರ್ಥಿಕ ಪರಿಸ್ಥಿತಿ ತುಸು ಹದಗೆಟ್ಟ ಕಾರಣ ಸದ್ಯ ಕೈ ಕಟ್ಟಿದಂತಾಗಿದೆ. ಶ್ರೀಗುರುಗಳ ಕೃಪೆಯಿಂದ ಎಲ್ಲಾ ಕಾರ್ಯಗಳೂ ಕೈಗೂಡಬಹುದು ಎಂಬ ದೃಢವಾದ ನಂಬಿಕೆಯಿದೆ ” ಎನ್ನುವ ಲಕ್ಷ್ಮಿ ಅಮ್ಮನಿಗೆ ಶ್ರೀಮಠದ ಸೇವೆಯಲ್ಲಿ ಸದಾ ತೊಡಗಿಸಿಕೊಳ್ಳುವ ಹಂಬಲವಿದೆ .
ಪ್ರಸನ್ನಾ ವಿ ಚೆಕ್ಕೆಮನೆ