“ಮಾಸದ ಮಾತೆಯಾಗಲು ಕಾರಣ, ಪ್ರೇರಣ ಹಾಗೂ ಧಾರಣಾಶಕ್ತಿ ಶ್ರೀಚರಣ” ಲಲಿತಾಲಕ್ಷ್ಮೀ ಭಟ್ಟ ಸಿದ್ಧಾಪುರ

ಮಾತೃತ್ವಮ್

ಲಲಿತಾಲಕ್ಷ್ಮೀ ಎಂಬ ಹೆಸರು ಶ್ರೀಮಠದ ಶಿಷ್ಯರಿಗೆ ಸದಾ ಸುಪರಿಚಿತ. ಅದರಲ್ಲೂ ಗುರುಚರಣ ಸೇವಕಿ ಲಲಿತಾಲಕ್ಷ್ಮೀ ಎಂಬ ಕಾವ್ಯನಾಮದಿಂದ ಸದಾ ಶ್ರೀಗುರುಗಳ ಬಗ್ಗೆ, ಶ್ರೀಮಠದ ಬಗ್ಗೆ, ಶ್ರೀಮಠದ ಶಿಷ್ಯಬಂಧುಗಳ ಅನುಭವಗಳ ಬಗ್ಗೆ ಬಹಳ ಸೊಗಸಾದ ಭಾಷೆಯಲ್ಲಿ ಆಸ್ತಿಕರ ಮನಸ್ಸಿನಲ್ಲಿ ಭಾವುಕತೆ ತುಂಬುವಂತಹ ಆಪ್ತ ಶೈಲಿಯ ಬರಹವನ್ನು ಮಾಧ್ಯಮಗಳಲ್ಲಿ ಪ್ರಸ್ತುತ ಪಡಿಸುವ ಇವರ ಲೇಖನಗಳನ್ನು ಓದದ ಶಿಷ್ಯಬಂಧುಗಳು ವಿರಳ.

ಶ್ರೀಮಠದ ಸೇವೆಯಲ್ಲಿ ಅತೀವ ಆಸಕ್ತಿ, ಶ್ರದ್ಧೆ,ಭಕ್ತಿ ಹೊಂದಿರುವ ಇವರು ಮಾತೃತ್ವಮ್ ಯೋಜನೆಯಲ್ಲಿ ಮಾಸದ ಮಾತೆಯಾಗಿ ಸೇವೆ ಸಲ್ಲಿಸಲು ಆರಂಭಿಸಿ ಒಂದೇ ತಿಂಗಳಲ್ಲಿ ತಮ್ಮ ಗುರಿ ತಲುಪಿದವರು.

ಲಲಿತಾಲಕ್ಷ್ಮೀ ಭಟ್ಟ ಇವರಿಗೆ ಶ್ರೀಮಠದ ಸೇವೆಯ ಸುಕೃತ ತವರುಮನೆಯಿಂದಲೇ ಆರಂಭವಾಯಿತು. ಶ್ರೀರಾಮಚಂದ್ರಾಪುರ ಮಠದ ೩೨ ಹಾಗೂ ೩೩ ನೆಯ ಪೀಠಾಧಿಪತಿಗಳನ್ನು ಜಗತ್ತಿಗೆ ನೀಡಿದ್ದು ಇವರ ತವರುಮನೆ ಕುಟುಂಬ. ಇದರಿಂದಾಗಿ ಅವರಿಗೆ ಹುಟ್ಟಿನಿಂದಲೇ ಗುರುಭಕ್ತಿ ಒಡಮೂಡಿತು ಎನ್ನಬಹುದು.

ಕೆಕ್ಕಾರು ಗುರು ಅನಂತ ಭಟ್ಟ ಹಾಗೂ ಯಮುನಾ ಅನಂತ ಭಟ್ಟರ ಪುತ್ರಿಯಾದ ಲಲಿತಾಲಕ್ಷ್ಮೀ ಅವರು ವೃತ್ತಿಯಲ್ಲಿ ಉಪನ್ಯಾಸಕಿ. ಹಾಡು, ಬರವಣಿಗೆಗಳು ಅವರ ಇತರ ಹವ್ಯಾಸಗಳು.

“ಸೇವಕ ಭಾವ ಅತ್ಯಂತ ಖುಷಿ. ಶ್ರೀಗುರು ಕೊಟ್ಟ ಬದುಕಿದು. ಗುರುವಿತ್ತ ಮಾತು, ಗುರು ನಿರ್ದೇಶಾನುಸಾರ ಸಾಗಿಸುವ ಬದುಕು ನಮ್ಮದು. ಎಲ್ಲವೂ ಗುರು ಚಿತ್ತ. ಗುರು ಪ್ರೇರಿತ. ಅದಕ್ಕೇ ನನ್ನ ಬರವಣಿಗಳಲ್ಲಿ ‘ಗುರುಚರಣ ಸೇವಕಿ’ ಎಂದೇ ಬರೆಯುತ್ತೇನೆ. ಅದೇ ನನಗೆ ಪ್ರಿಯವಾದ ಕಾವ್ಯನಾಮ” ಎನ್ನುವ ಲಲಿತಾಲಕ್ಷ್ಮೀ ಅವರು ಅತ್ಯತ್ತಮ ಭಾಷಣಗಾರರೂ ಹೌದು.

ಹೊನ್ನಾವರ ತಾಲೂಕಿನ ಖರ್ವಾದ ನಾರಾಯಣ ಭಟ್ ಅವರನ್ನು ವಿವಾಹವಾದ ಇವರು ಪ್ರಸ್ತುತ ಸಿದ್ಧಾಪುರ ನಿವಾಸಿಗಳು. ಮಗಳು ಅರುಂಧತಿ ವಸಿಷ್ಠ ,ಮಗ ಅನಂತ ಹಾಗೂ ಅಳಿಯ ಮನೋಜ್ ವಸಿಷ್ಠ ಎಲ್ಲರೂ ಹಾಡುಗಾರರು. ಶ್ರೀಗುರುಗಳು ನಡೆಸಿಕೊಟ್ಟ ರಾಮಕಥೆಯಲ್ಲಿ ಸಂಗೀತ ಸೇವೆ ಸಲ್ಲಿಸಿದವರು.

” ಬಾಲ್ಯದಿಂದಲೇ ಗೋವುಗಳೆಂದರೆ ನನಗೆ ವಿಶೇಷ ಪ್ರೀತಿ. ಅವುಗಳ ಒಡನಾಟದಲ್ಲೇ ಬೆಳೆದವಳು ನಾನು. ಮುಂದೆ ಉದ್ಯೋಗ ನಿಮಿತ್ತ ಪೇಟೆವಾಸ ಆರಂಭಿಸಿದ ನಂತರ ಗೋಸೇವೆಯ ಅವಕಾಶ ತಪ್ಪಿತು. ಆದರೂ ಶ್ರೀ ಗುರುಗಳ ಅನುಗ್ರಹದಿಂದ ಶ್ರೀಮಠದ ಸೇವೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಗೋಸೇವೆ ಅವಕಾಶ ಮತ್ತೆ ದೊರಕುವಂತಾಯಿತು. ವಿಶ್ವ ಗೋಸಮ್ಮೇಳನ, ವಿಶ್ವ ಮಂಗಲ ಗೋಯಾತ್ರೆಗಳಲ್ಲಿ ಭಾಗವಹಿಸಲು ಸಾಧ್ಯವಾಯಿತು. ಅಭಯಾಕ್ಷರ ಅಭಿಯಾನದ ಮೂಲಕ ವಿವಿಧ ಇಲಾಖೆಗಳ ಜನರಿಂದ ಅತಿ ಹೆಚ್ಚು ಅಭಯಾಕ್ಷರ ಸಹಿ ಸಂಗ್ರಹಿಸಿದ್ದು ಅತ್ಯಂತ ಖುಷಿ ನೀಡಿದೆ” ಎ‌ನ್ನುವ ಲಲಿತಾಲಕ್ಷ್ಮೀ ಅವರ ಗೋವಿಗೆ ಸಂಬಂಧಿಸಿದ ಹಲವಾರು ಬರಹಗಳು ವಿವಿಧ ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ. ಗೋವಿನ ಬಗ್ಗೆ ಗೇಯ ರೂಪದ ಗೀತೆಗಳನ್ನೂ ರಚಿಸಿದ್ದಾರೆ.

ಮೊತ್ತ ಮೊದಲಾಗಿ ಶ್ರೀ ಸಂಸ್ಥಾನದವರ ಮಾರ್ಗ ನಿರ್ದೇಶಾನುಸಾರವಾಗಿ ಆರಂಭಗೊಂಡ ಮಹಿಳಾ ಪರಿಷತ್ ಉಗಮವಾಗಿದ್ದು ಬಿಳಗಿ ಸೀಮೆಯಲ್ಲಿ. ಅಂದು ಮಹಿಳಾ ಪರಿಷತ್ತಿನ ಕಾರ್ಯದರ್ಶಿಯಾಗಿ ನಿಯೋಜಿತರಾಗಿದ್ದು ಲಲಿತಾಲಕ್ಷ್ಮೀ ಅವರು. ಅಂದಿನಿಂದ ಆರಂಭಗೊಂಡ ಅವರ ಸೇವೆ ವಿವಿಧ ವಿಭಾಗಗಳಲ್ಲಿ ವಿವಿಧ ರೀತಿಯಲ್ಲಿ ಶ್ರೀಮಠಕ್ಕೆ ಸದಾ ಸಲ್ಲುತ್ತಲೇ ಇದೆ.

“ಬದುಕಿನ ಏರಿಳಿತಗಳಲ್ಲಿ ಸದಾ ಕಾಪಾಡಿದ್ದು ಗುರು ಮಹಿಮೆ. ಶ್ರೀರಾಮ ಕಾರುಣ್ಯ” ಎನ್ನುವ ಇವರಿಗೆ ಬದುಕಿನಲ್ಲಿ ಹಲವಾರು ಬಾರಿ ಅತಿ ವಿಶಿಷ್ಟ ಅನುಭವಗಳ ಮೂಲಕ ಗುರುಕೃಪೆಯ ಆಳದ ಅರಿವಾಗಿದೆ.

“ಮಗನ ಉದ್ಯೋಗದ ಸಂದರ್ಭದಲ್ಲಂತೂ ಹತಾಶರಾಗಿ ಕುಳಿತಿದ್ದ ನಮಗೆ ಬೆಳಕಾಗಿ ಬಂದು ಕೈ ಹಿಡಿದು ನಡೆಸಿದ್ದು ಗುರು ಕರುಣೆ. ‘ನಿನಗೆ ಯಾವುದು ಉಚಿತ ಅನಿಸುತ್ತದೋ ಅದೇ ದಾರಿ ತೋರು ಗುರುವೇ’ ಎಂದು ಪ್ರಾರ್ಥಿಸುವವಳು ನಾನು. ಪತಿಯ ಅನಾರೋಗ್ಯದ ಸಂದರ್ಭದಲ್ಲೂ ಇದೇ ರೀತಿಯ ಅನುಭವವಾಗಿದೆ. ನಮ್ಮ ನಂಬಿಕೆ ಎಂದೂ ಅಚಲ. ಅದಕ್ಕೇ ಗುರುಕರುಣೆಯೂ ವಿಪುಲವಾಗಿ ದೊರಕಿದೆ” ಎಂದು ಭಾವ ತುಂಬಿ ನುಡಿಯುತ್ತಾರೆ ಲಲಿತಾಲಕ್ಷ್ಮೀ.

“ಗುರು ಭಕ್ತಿ, ಗುರು ನಿಷ್ಠೆ, ಶ್ರದ್ಧೆ ರಕ್ತಗತವಾಗಿ ಬಂದಿದೆ. ಇದು ಮಕ್ಕಳಲ್ಲೂ ಮುಂದುವರಿದಿದೆ ಎಂಬುದು ತುಂಬಾ ನೆಮ್ಮದಿಯ ವಿಚಾರ ಎನ್ನುತ್ತಾರೆ ಇವರು.

“ಮಾಸದ ಮಾತೆಯಾಗಿ ಸೇವೆ ಮಾಡಲು ಸೇರುವುದಕ್ಕೂ ಮೊದಲು ಮನದಲ್ಲಿ ತುಸು ಆತಂಕ ಭಯ ನೆಲೆಸಿತ್ತು. ನನ್ನ ದುಡಿತದಲ್ಲಿ ತೃಪ್ತಿ ಹೊಂದಿದವಳು ನಾನು. ಗುರು ಕರುಣೆಯೊಂದೇ ನಮ್ಮನ್ನು ಮುನ್ನಡೆಸುವುದು ಎಂಬ ಭರವಸೆ ಹೊಂದಿದವಳು. ಆದರೂ ಮಾಸದ ಮಾತೆಯಾಗಿ ಸೇವೆ ಸಲ್ಲಿಸುವಾಗ ಇತರರ ಬಳಿ ಹೇಗೆ ಹಣ ಕೇಳುವುದು ಎಂಬ ಆತಂಕ ಸಹಜವಾಗಿ ಮೂಡಿತ್ತು. ಆ ಸಂದರ್ಭದಲ್ಲಿ ಮಗಳು ಕನ್ನಡ ಕೋಗಿಲೆ ರಿಯಾಲಿಟಿ ಶೋ ಒಂದರ ಅಂತಿಮ ಸುತ್ತಿನಲ್ಲಿ ಭಾಗವಹಿಸುವ ಸಂದರ್ಭದಲ್ಲಿ ತೀವ್ರ ಅನಾರೋಗ್ಯಕ್ಕೀಡಾಗಿ ವೇದಿಕೆಯಲ್ಲಿ ನಿಂತುಕೊಳ್ಳಲೂ ತನ್ನಿಂದ ಅಸಾಧ್ಯ ಎಂದಾಗ ತಕ್ಷಣ ನೆನಪಾಗಿದ್ದು ಶ್ರೀಚರಣಗಳು.

ಮಗಳು ಅಲ್ಲಿ ಪ್ರಶಸ್ತಿ ಗಳಿಸುವಂತಾದರೆ ಮಾಸದ ಮಾತೆಯಾಗಿ ಸೇವೆ ಮಾಡುವೆನೆಂದು ಶ್ರೀಗುರುಗಳ ಭಾವಚಿತ್ರಕ್ಕೆ ನಮಿಸಿ ಸಂಕಲ್ಪ ಮಾಡಿದೆ. ಅಂತೆಯೇ ಮಗಳು ಆಯ್ಕೆಯಾದಳು. ಅದೇ ಸಂದರ್ಭದಲ್ಲಿ ಬೇರ್ಕಡವು ಈಶ್ವರಿ ಅಕ್ಕ, ವೀಣಕ್ಕ ಅವರ ಮಾರ್ಗದರ್ಶನವನ್ನು ಪಡೆದುಕೊಂಡೆ. ಗೋಪಾಡ್ಯದ ಶುಭದಿನದಂದು ಶ್ರೀ ಸಂಸ್ಥಾನದವರ ಭಾವಚಿತ್ರಕ್ಕೆ ವಂದಿಸಿ,ಸುಲಲಿತವಾಗಿ ಕಾರ್ಯ ಸಿದ್ಧಿಯಾಗುವಂತೆ ಪ್ರಾರ್ಥಿಸಿ, ಸಿದ್ಧಾಪುರದ ಹಿರಿಯ ದಂಪತಿಗಳಾದ ಅನಂತ ಭಟ್ ಹಾಗೂ ಪಾರ್ವತಕ್ಕ ಅವರಲ್ಲಿಗೆ ಹೋಗಿ ಮಾಸದ ಮಾತೆಯಾಗಿ ಸೇವೆ ಸಲ್ಲಿಸಲು ಆರಂಭಿಸಿದ ವಿಚಾರವನ್ನು ತಿಳಿಸಿ ಅವರ ಆಶೀರ್ವಾದ ಪಡೆದೆ. ಮೊದಲ ದೇಣಿಗೆ ಅವರಿಂದಲೇ ಆಶೀರ್ವಾದ ರೂಪದಲ್ಲಿ ದೊರಕಿತು.

ಮುಂದೆ ಪರಿಚಿತರು, ಆತ್ಮೀಯರು,ಸಹಪಾಠಿಗಳು…..ಹೀಗೇ ಗೋಮಾತೆಯ ಸೇವೆಗಾಗಿ ಅವರೆಲ್ಲ ಕೈ ಜೋಡಿಸಿದಾಗ ನನ್ನ ಕಾರ್ಯ ಹೂವೆತ್ತಿದಷ್ಟು ಸರಳವಾಯ್ತು” ಎನ್ನುವ ಲಲಿತಾಲಕ್ಷ್ಮೀ ಅವರ ಮಾತುಗಳಲ್ಲಿ ಬಹಳ ಬೇಗನೆ ಗುರಿ ತಲುಪಿದ ಸಂತಸ ಎದ್ದು ಕಾಣುತ್ತದೆ.

ಸಂಸ್ಕೃತ ಉಪನ್ಯಾಸಕಿಯಾಗಿರುವ ಇವರು ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದವರು. ಭಾಮಿನಿ ಷಟ್ಪದಿಯಲ್ಲಿ ಇವರು ಬರೆದ ರಾಮಾಯಣಕ್ಕೆ ಶ್ರೀಗುರುಗಳು ‘ ಲಲಿತ ರಾಮಾಯಣ’ ಎಂದು ಅಭಿಧಾನ ನೀಡಿ ಲೋಕಾರ್ಪಣೆ ಮಾಡಿದ್ಧಾರೆ.

ಇದಲ್ಲದೆ ೩೨ ನೆಯ ಹಾಗೂ ೩೩ ನೆಯ ಪೀಠಾಧಿಪತಿಗಳ ಬಗ್ಗೆ ಬರೆದ ಪುಸ್ತಕಗಳು, ಶ್ರೀ ಶಂಕರಾಚಾರ್ಯರ ಜೀವನದ ಕುರಿತು ಗೇಯರೂಪದಲ್ಲಿ ಬರೆದ ‘ ಶಂಕರಗೀತ’ ಪುಸ್ತಕಗಳೂ ಶ್ರೀ ಸಂಸ್ಥಾನದವರಿಂದಲೇ ಲೋಕಾರ್ಪಣೆಗೊಂಡಿವೆ.

ಧಾರಾ ರಾಮಾಯಣದ ಸಂದರ್ಭದಲ್ಲಿ ಪ್ರತಿದಿನವೂ ಫೇಸ್ ಬುಕ್ ನಲ್ಲಿ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ಬಗ್ಗೆ, ಧಾರಾ ರಾಮಾಯಣದ ಪ್ರತಿ ನಿತ್ಯದ ಕಥಾಧಾರೆಯ ಬಗ್ಗೆ ಬರೆದುದು ಬದುಕಿನ ವಿಶಿಷ್ಟ ಅನುಭವ ಎನ್ನುವ ಲಲಿತಾಲಕ್ಷ್ಮೀ ಅವರ ಶ್ರೀಗುರು ಸೇವೆಗೆ ಸದಾ ಪತಿ ಹಾಗೂ ಮಕ್ಕಳ ಸಂಪೂರ್ಣ ಪ್ರೋತ್ಸಾಹ, ಬೆಂಬಲವಿದೆ.

“ಮಾಸದ ಮಾತೆಯಾಗಿ ಸೇವೆ ಗೈಯಲು ಪ್ರೇರಣೆ ನೀಡಿದ ಬೇರ್ಕಡವು ಈಶ್ವರಿ ಅಕ್ಕ ಹಾಗೂ ವೀಣಕ್ಕನವರ ಸಹಕಾರ ಸದಾ ಸ್ಮರಣೀಯ ” ಎನ್ನುವ ಇವರ ಬದುಕು,ಬರಹ ಎಲ್ಲವೂ ಇತರರಿಗೆ ಮಾದರಿಯಾಗಿದೆ.

Author Details


Srimukha

Leave a Reply

Your email address will not be published. Required fields are marked *