“ಶ್ರೀಮಠದ ಸೇವೆಯೇ ಹೃದಯದುಸಿರು” : ಸುಶೀಲಾ ಜಿ.ಕೆ.ಭಟ್ ಮತ್ತು ಗೀತಾ ಪ್ರಸನ್ನ

ಮಾತೃತ್ವಮ್

ಹೊಸಮನೆ ಮಹಾಲಿಂಗ ಭಟ್, ಪಾರ್ವತಿ ದಂಪತಿಗಳ ಪುತ್ರಿಯಾದ ಸುಶೀಲಾ ಜಿ.ಕೆ. ಭಟ್ ಮೂಲತಃ ಮುಳ್ಳೇರಿಯ ಮಂಡಲದ ವಳಕ್ಕುಂಜದ ಗೋಪಾಲಕೃಷ್ಣ ಭಟ್ ಅವರ ಪತ್ನಿ. ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ಆರ್. ಆರ್ . ಪುರ ನಿವಾಸಿಗಳಾಗಿರುವ ಇವರು ಹಾಗೂ ಇವರ ಪುತ್ರಿ, ಧರ್ಮತ್ತಡ್ಕ ಸಮೀಪದ ಪೂಕಳ ಕಂಪ ಸುಬ್ರಹ್ಮಣ್ಯ ಪ್ರಸನ್ನ ಇವರ ಪತ್ನಿಯಾದ ಗೀತಾ(ಪ್ರಸ್ತುತ ಬೆಂಗಳೂರು ನಿವಾಸಿಗಳು) ಇಬ್ಬರೂ ಗುರುಸೇವೆಯಲ್ಲಿ ಸದಾ ನಿರತರಾದವರು.

“ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪೀಠಾರೋಹಣದ ನಂತರ ನಾವು ಶ್ರೀಮಠದ ನಿಕಟ ಸಂಪರ್ಕಕ್ಕೆ ಬಂದೆವು. ಅಂದಿನಿಂದ ಇಂದಿನ ವರೆಗೂ ಸುಮಾರು ಇಪ್ಪತ್ತು ವರ್ಷಗಳಿಂದ ನಾವಿಬ್ಬರೂ ಶ್ರೀಮಠದ ಸೇವೆಯಲ್ಲಿ ನಿರಂತರ ನಿರತರಾಗಿದ್ದೇವೆ” ಎನ್ನುವ ಸುಶೀಲಾ ಭಟ್ ಹಾಗೂ ಗೀತಾ ಪ್ರಸನ್ನ ಶ್ರೀರಾಮಾಯಣ ಸತ್ರ,ವಿಶ್ವ ಗೋ ಸಮ್ಮೇಳನವೇ ಮೊದಲಾದ ಕಾರ್ಯಕ್ರಮಗಳಲ್ಲಿ ಹಗಲಿರುಳು ಕಾರ್ಯಕರ್ತೆಯರಾಗಿ ಸೇವೆ ಸಲ್ಲಿಸಿದವರು.

ಶ್ರೀಮಠದ ಸೇವೆಯಿಂದ ಬದುಕಿನಲ್ಲಿ ಮಹತ್ತರ ಬದಲಾವಣೆ ಉಂಟಾಗಿದೆ ಎನ್ನುವ ಇವರು ಬಾಳಿನ ಏರಿಳಿತಗಳಲ್ಲಿ ದಿಟ್ಟವಾಗಿ ನಿಲ್ಲುವ ಧೈರ್ಯ ತುಂಬಿದವರು ಶ್ರೀಗುರುಗಳು. ಅವರ ಕಾರುಣ್ಯದಿಂದಲೇ ಇಂದು ನಾವು ನೆಮ್ಮದಿಯಾಗಿದ್ದೇವೆ ಎನ್ನುತ್ತಾರೆ.

” ಮಹಿಳಾ ಪರಿಷತ್ ರೂಪೀಕರಣದ ನಂತರ ಬೇರ್ಕಡವು ಈಶ್ವರಿ ಅಕ್ಕನ ಮಾರ್ಗದರ್ಶನದ ಮೂಲಕ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳುವ ಸೌಭಾಗ್ಯ ಒದಗಿಬಂತು. ನಮ್ಮಿಬ್ಬರನ್ನೂ ಬಹಳ ಮುತುವರ್ಜಿಯಿಂದ ಎಲ್ಲಾ ಕಡೆಗಳಿಗೂ ಕರೆದೊಯ್ದು ಗುರುಸೇವೆಯಲ್ಲಿ ಭಾಗವಹಿಸುವ ಅವಕಾಶವನ್ನು ಒದಗಿಸಿಕೊಟ್ಟರು” ಎಂಬುದು ತಾಯಿ ಮತ್ತು ಮಗಳ ಹೃದಯ ತುಂಬಿದ ನುಡಿಗಳು.

ಬದಿಯಡ್ಕದ ಮಹಿಳೋದಯ ಸಂಸ್ಥೆ ಪ್ರಾರಂಭವಾದ ಅಂದಿನಿಂದಲೂ ಅದರ ಸದಸ್ಯೆಯಾಗಿ ಸೇರಿದ ಸುಶೀಲಾ ಭಟ್ ತಮ್ಮ ಮಗಳ ಸಹಕಾರದೊಂದಿಗೆ ತಿಂಡಿ, ತಿನಿಸುಗಳನ್ನು ಮಾಡಿ, ಮಹಿಳೋದಯದ ಮೂಲಕ ವಿಕ್ರಯಿಸಿ,ದೊರಕಿದ ಮೊತ್ತವನ್ನು ಶ್ರೀಮಠದ ವಿವಿಧ ಯೋಜನೆಗಳಿಗೆ ನೀಡಿ ತಮ್ಮ ಸೇವಾ ಭಾವವನ್ನು ಮೆರೆದಿದ್ದಾರೆ.

“ಶ್ರೀಗುರುಗಳ ಮಾರ್ಗದರ್ಶನದಲ್ಲಿ ಆರಂಭವಾದ ಎಲ್ಲಾ ಯೋಜನೆಗಳಿಗೂ ನಮ್ಮದೇ ದುಡಿತದ ಮೊತ್ತವನ್ನು ಸಮರ್ಪಣೆ ಮಾಡಿದೆವು ಎನ್ನುವ ಸಂತೃಪ್ತಿ ಇದೆ, ಮಠದ ಸೇವೆಯಲ್ಲಿ ನಿರತವಾಗಿರುವಾಗ ದೊರಕುವ ನೆಮ್ಮದಿ, ಶಾಂತಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಅದಕ್ಕೇ ಬದುಕಿನಲ್ಲಿ ಮೊತ್ತ ಮೊದಲ ಆಯ್ಕೆ ಶ್ರೀಮಠದ ಸೇವೆಗೆ. ನನ್ನ ಎಲ್ಲಾ ಕೆಲಸಗಳಿಗೂ ಮಗಳು ಕೈ ಜೋಡಿಸುತ್ತಿದ್ದಾಳೆ” ಎನ್ನುವ ಸುಶೀಲಾ ಭಟ್ ಅವರ ಮಠದ ಸೇವೆ ಅನನ್ಯ.

“ತಾಯಿಯ ಜೊತೆಯಲ್ಲಿ ಶ್ರೀಮಠದ ಸೇವೆಯಲ್ಲಿ ಭಾಗಿಯಾದವಳು ನಾನು. ಎಲ್ಲಾ ಯೋಜನೆಗಳಲ್ಲೂ ಮುಕ್ತವಾಗಿ ತೊಡಗಿಸಿಕೊಳ್ಳಲು ಧೈರ್ಯ ತುಂಬುವವರು ಅಮ್ಮ. ಮದುವೆಗೆ ಮೊದಲೇ ಗುರುಸೇವೆಯಲ್ಲಿ ತೊಡಗಿಸಿಕೊಂಡವಳು,ಮದುವೆಯ ನಂತರವೂ ಅದೇ ರೀತಿಯಲ್ಲಿ ಮುಂದುವರಿಯುವ ಅವಕಾಶ ದೊರಕಿದ್ದು ನಿಜಕ್ಕೂ ಶ್ರೀಗುರುಗಳ, ಶ್ರೀಕರಾರ್ಚಿತ ದೇವರುಗಳ ಅನುಗ್ರಹ” ಎನ್ನುವ ಗೀತಾ ಪ್ರಸನ್ನ ಅವರು ಪತಿ,ಪುತ್ರನ ಜೊತೆಗೆ ಗುರುಸೇವೆಯಲ್ಲಿ ನಿರತರಾದವರು. ತಾಯಿಯ ಜೊತೆಗೆ ಸೌಂದರ್ಯ ಲಹರಿ ಪಾರಾಯಣ, ಕುಂಕುಮಾರ್ಚನೆ,ವಿವಿಧ ಸ್ತೋತ್ರ ಪಠಣಗಳನ್ನೂ ಮಾಡುವ ಗೀತಾ ಅವರಿಗೆ ಹಾಲುಹಬ್ಬ, ಕೋಟಿ ನೀರಾಜನದಲ್ಲೂ ಭಾಗವಹಿಸಿದ ಅನುಭವವಿದೆ.

ಶ್ರೀಗುರುಗಳ ಆದೇಶಾನುಸಾರವಾಗಿ ದೊರಕಿದ ಎಲ್ಲಾ ಕಾರ್ಯಗಳಲ್ಲೂ ಅಳಿಲು ಸೇವೆ ಗೈಯುವ ಅವಕಾಶ ದೊರಕಿದೆ. ಮಂಗಲ ಗೋಯಾತ್ರೆಯ ಸಂದರ್ಭದಲ್ಲಿ ಗೋರಥವನ್ನು ಅನುಗಮಿಸಿದ ಅನುಭವ ನಿಜಕ್ಕೂ ವೈಶಿಷ್ಟ್ಯ ಪೂರ್ಣ ಎನ್ನುವ ಇವರಿಬ್ಬರೂ ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾಗಿ ಬಾಗಿನವನ್ನು ಸ್ವೀಕರಿಸಿದವರು.

“ಅಭಯಾಕ್ಷರ ಅಭಿಯಾನದ ಸಂದರ್ಭದಲ್ಲಿ ನೂರಾರು ಜನರ ಪರಿಚಯವಾಯಿತು. ಹಳ್ಳಿಯಿಂದ ಬಂದ ನಮಗೆ ಈ ನಗರದಲ್ಲಿ ತುಸು ಕಷ್ಟವಾದರೂ ಶ್ರೀ ಗುರು ಕಾರುಣ್ಯದಿಂದ ಎಲ್ಲವೂ ಸುಲಲಿತವಾಯಿತು. ಸಾವಿರದ ಸುರಭಿ ಯೋಜನೆಯಲ್ಲಿ ತೊಡಗಿಸಿಕೊಳ್ಳುವಾಗಲೇ ಗುರಿ ತಲುಪಲು ಸಾಧ್ಯವಾಗದಿದ್ದರೆ ಎಂಬ ಆತಂಕವಿತ್ತು. ಆದರೂ ಗೋಸೇವೆ ಮಾಡಬೇಕೆಂಬ ಹಂಬಲದಿಂದ ಪ್ರಯತ್ನ ಮಾಡಿದೆವು. ಗುರಿ ತಲುಪುವ ಬಗ್ಗೆ ಹೆಚ್ಚು ಕಳವಳ ಪಟ್ಟ ಮಗಳೇ ಮೊದಲು ಗುರಿ ತಲುಪಿದಳು” ಎಂದು ತಮ್ಮ ಬದುಕಿನ ಕೆಲವು ವಿಶೇಷ ಅನುಭವಗಳನ್ನು ಉಲ್ಲೇಖಿಸುತ್ತಾರೆ ಸುಶೀಲಾ ಜಿ.ಕೆ ಭಟ್.

ಬೆಂಗಳೂರಿನಲ್ಲಿ ನಡೆದ ಎಲ್ಲಾ ಚಾತುರ್ಮಾಸ್ಯದ ಸಂದರ್ಭಗಳಲ್ಲೂ ತಾಯಿ,ಮಗಳು ಇಬ್ಬರೂ ಕಾರ್ಯಕರ್ತೆಯರಾಗಿ ಸೇವೆ ಸಲ್ಲಿಸಿದ್ದಾರೆ. ಈ ಬಾರಿಯ ಚಾತುರ್ಮಾಸ್ಯದ ಆರಂಭದಲ್ಲಿ ಶ್ರೀಗುರುಗಳು ಉಲ್ಲೇಖಿಸಿದ ಮಾತೃತ್ವಮ್ ಯೋಜನೆಯಲ್ಲಿ ಭಾಗವಹಿಸುವ ಬಗ್ಗೆ ಆಸಕ್ತಿ ಮೂಡಿತು. ಗುರಿ ತಲುಪುವ ಬಗ್ಗೆ ಭರವಸೆಯಿಲ್ಲದಿದ್ದರೂ ಎಷ್ಟು ಸಾಧ್ಯವೋ ಅಷ್ಟು ಎಂದು ಮಾಸದ ಮಾತೆಯಾಗಿ ಸೇವೆಗೈಯಲು ಆರಂಭಿಸಿದ ಇವರಿಗೆ ಹಿಂದೆ ಸಾವಿರದ ಸುರಭಿಯ ಮೂಲಕ ಪರಿಚಿತರಾದ ಅನೇಕರು ಸಹಕಾರ ನೀಡಿದರು.

“ಅಭಯಾಕ್ಷರ ಅಭಿಯಾನದ ಸಹಿಸಂಗ್ರಹ ಸೇವೆಯ ಸಂದರ್ಭದಲ್ಲಿ ಹಲವಾರು ಜನರ ಮನವೊಲಿಸಿ ಶ್ರೀಮಠದ ವಿವಿಧ ಸಮಾಜಮುಖಿ ಯೋಜನೆಗಳ ಪರಿಚಯ ಮಾಡಿಸಿ,ಜನಮಾನಸದಲ್ಲಿ ಮೂಡಿದ್ದ ಗೊಂದಲ ನಿವಾರಿಸುವ ಅವಕಾಶ ಒದಗಿ ಬಂತು. ಇದರಿಂದಾಗಿ ಜನ ಸ್ವಯಂ ಇಚ್ಛೆಯಿಂದ ಗೋಸೇವೆಗೆ ಕೈ ಜೋಡಿಸಿದರು” ಎನ್ನುವ ಇವರಿಗೆ ತಮ್ಮ ಸೇವೆಯಲ್ಲಿ ಸಾರ್ಥಕ ಭಾವವಿದೆ.

” ಶ್ರೀಗುರು ಕೃಪಾದೃಷ್ಟಿ ದೊರಕಿದ ಕಾರಣ ಇಂದು ಬದುಕು ಹಸನಾಗಿದೆ. ಮಠದ ಪ್ರತಿಯೊಂದು ಯೋಜನೆಗಳಿಗೂ ಸಮರ್ಪಣೆ ಮಾಡುವ ಅವಕಾಶ ಒದಗಿ ಬಂದಿದೆ. ಭಿಕ್ಷಾಸೇವೆ, ಪಾದಪೂಜೆಗಳನ್ನೂ ಮಾಡುವ ಸುಯೋಗ ಒದಗಿ ಬಂತು. ಶ್ರೀಗುರುಗಳ ಕಾರುಣ್ಯ ಮಾತೃ ವಾತ್ಸಲ್ಯದಂತೆ. ಒಂದು ಬಾರಿ ಶ್ರೀ ಮಠದ ಸೇವೆಯಲ್ಲಿ ಭಾಗಿಯಾದವರು ಮುಂದೆಯೂ ಅದನ್ನು ಮುಂದುವರಿಸಲು ಕಾರಣ ನಮ್ಮ ಶ್ರೀಗುರುಗಳು. ಶ್ರೀಪೀಠದ ಸಂಪೂರ್ಣ ಅನುಗ್ರಹದಿಂದ ಮನದ ದುಃಖ ಮರೆಯಾಗಿ ಆತ್ಮವಿಶ್ವಾಸ ಮೂಡಿದೆ. ನಮಗಂತೂ ಶ್ರೀಮಠದ ಸೇವೆ ಎಂದರೆ ಉಸಿರಿನಷ್ಟು ಸಹಜವಾಗಿದೆ” ಎನ್ನುವ ಸುಶೀಲಾ ಜಿ.ಕೆ ಭಟ್ ಅವರಿಗೆ ತಮ್ಮ ಮಗ ಹಾಗೂ ಮಗಳು ಗುರುಸೇವೆಯಲ್ಲಿ ನಿರತರಾಗಿರುವುದೇ ಅತ್ಯಂತ ಹರ್ಷದ ವಿಚಾರ. ಗುರುಸೇವೆಯಲ್ಲಿ ನಿರತವಾಗಿರುವಾಗ ಕೇಳಬೇಕಾಗಿ ಬಂದ ಚುಚ್ಚುಮಾತುಗಳೆಲ್ಲ ಮುಳ್ಳಿನ ಬಳ್ಳಿಯಲ್ಲಿ ಅರಳಿದ ಹೂಗಳೆಂದೇ ಭಾವಿಸಿದವರು ಅವರು. ಸಾಧ್ಯವಿರುವಷ್ಟು ಕಾಲ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳ ಬೇಕೆಂಬ ಹಂಬಲ ಹೊಂದಿರುವ ಅವರಿಗೆ ತಮ್ಮ ಮುಂದಿನ ತಲೆಮಾರಿನವರು ಸಹಾ ಶ್ರೀಮಠದ ಸೇವೆಗಳಲ್ಲಿ ಕೈ ಜೋಡಿಸುವಂತಾಗ ಬೇಕೆಂಬುದೇ ಮನದ ಅಭಿಲಾಷೆ . ಸುಶೀಲಾ ಜಿ.ಕೆ ಭಟ್ ಹಾಗೂ ಗೀತಾ ಪ್ರಸನ್ನ ಅವರ ನಿರಂತರ ಸಮರ್ಪಣಾ ಭಾವದ ಸೇವೆಯು ಎಲ್ಲಾ ಶಿಷ್ಯಭಕ್ತರಿಗೂ ಸ್ಪೂರ್ತಿದಾಯಕ.

Author Details


Srimukha

1 thought on ““ಶ್ರೀಮಠದ ಸೇವೆಯೇ ಹೃದಯದುಸಿರು” : ಸುಶೀಲಾ ಜಿ.ಕೆ.ಭಟ್ ಮತ್ತು ಗೀತಾ ಪ್ರಸನ್ನ

  1. ಸುಶೀಲಕ್ಕನ ಕುಟುಂಬದ ಇನ್ನೊಂದು ಕವಲು ನಮ್ಮದು ಹೇಳಲು ಹೆಮ್ಮೆ

Leave a Reply

Your email address will not be published. Required fields are marked *