ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೧

ಅರಿವು-ಹರಿವು
“नारायणं पद्मभवं वसिष्टं शक्तिञ्च तत् पुत्र पराशरं च।
व्यासं शुकं गौडपदं महान्तं गोविन्द योगीन्द्रमथास्य शिष्यम्।।
श्री शङ्कराचार्य मथास्य पद्मपादञ्च हस्तामलकञ्च शिष्यम्। तं तोटकं वार्तिककारमन्यानस्मद्गुरून्‌  सन्तत मानतोस्मि ।।”
ಎಂದು ಗುರುಪರಂಪರೆಯನ್ನು ವಂದಿಸುತ್ತಾ… ಗುರುಪರಂಪರೆಯ ಸರಣಿಯಲ್ಲಿ ಶುಕರ ನಂತರ ಮುಂದಿನ ಪಾತ್ರವಾಗಿ ಪರಿಗಣನೆಯಾಗುವುದು ಶ್ರೀ ಗೌಡಪಾದಾಚಾರ್ಯರದ್ದು. ಪ್ರತಿ ಗುರುವು ಶ್ರೀಮನ್ನಾರಾಯಣನ ಪ್ರತಿರೂಪವೇ.. ಪ್ರಕೃತಿಧರ್ಮಕ್ಕನುಸಾರವಾಗಿ ಗುರುಸ್ವರೂಪದ ಭಿನ್ನತೆ ಅಂದರೆ ಪಾತ್ರಬದಲಿಕೆಯ ಕಾರಣ, ಅದೇ ಏಕಮೇವಾದ್ವಿತೀಯವಾದ ಅರಿವನ್ನು ಆ ಗುರುರೂಪಕ್ಕೂ ಸ್ವಾನುಭೂತಿಗೊಳಿಸಲು ಮತ್ತು ಅದು ತನ್ನಾತ್ಮವಿಸ್ತಾರವನ್ನು ಯೋಗ್ಯ ಜೀವದೇಹಭೂಮಿಕೆಯಲ್ಲಿ ಕೈಗೊಂಡು ಪರಂಪರೆಯನ್ನು ಮುಂದುವರೆಸಿ ಸಮಾಜವನ್ನು ಅರಿವಿನ ಶುದ್ಧಾನಂದದಿಂದ ಬೆಳಗಲು ಈ ಅವಿಚ್ಛಿನ್ನ ಗುರುಪರಂಪರೆಯ ಉಪಕಾರವನ್ನು ಹಿಂದಿನ ಸಂಚಿಕೆಗಳಲ್ಲೇ ಚರ್ಚಿಸಿದ್ದೇವೆ. ಅದಕ್ಕೆ ಕನ್ನಡಿಯೆಂಬಂತೆಯೇ ನಡೆದ ಶ್ರೀಗೌಡಪಾದಾಚಾರ್ಯರ ಜೀವನ ಘಟನಾವಳಿಗಳನ್ನು ಈ ಸಂಚಿಕೆಯಲ್ಲಿ ಅವಲೋಕಿಸೋಣ.
ಗೌಡಪಾದರು ಉನ್ನತ ವಿದ್ಯಾಭ್ಯಾಸಕ್ಕೆಂದು ಗೌಡದೇಶವನ್ನು ಬಿಟ್ಟು ಬರುತ್ತಾರೆ. ನಂತರ ಗಂಗಾನದಿ ತೀರದಲ್ಲಿ ಪತಂಜಲಿ ಮಹರ್ಷಿಗಳು ಪಾಠ ಹೇಳುತ್ತಾರೆಂದು ತಿಳಿದು ಬರುತ್ತದೆ. ಹಾಗೆಯೇ ಅಲ್ಲಿ ಇವರನ್ನೂ ಒಳಗೊಂಡು ಸಾವಿರ ವಿದ್ಯಾರ್ಥಿಗಳು ನೆರೆದಿರುತ್ತಾರೆ. ವಿದ್ಯಾರ್ಜನೆಯೇನೋ ಸರಿ, ಆದರೆ ಷರತ್ತೆಂದರೆ ಶಿಷ್ಯಂದಿರಿಗೆ ಬೋಧನೆ ಪರಸ್ಪರ ನೇರ ಮುಖಭೇಟಿಯಿಂದಲ್ಲ. ಪತಂಜಲಿ ಮಹಾಗುರುಗಳ ಹೃದಯಕಮಲದಿಂದರಳಿದ ಪಾಠ ಪ್ರವಚನಗಳು ಶಿಷ್ಯರ ಶ್ರವಣೇಂದ್ರಿಯವ ತಲುಪಿ ಅವರಿಗೂ ಹೃದಯಸ್ಥವಾಗಬೇಕಷ್ಟೆ. ಆದ್ದರಿಂದ ಗುರುಗಳ ಆಜ್ಞೆ ತಾವು ಪರದೆಯ ಹಿಂದೆ, ತಮ್ಮನ್ಯಾರೂ ನೋಡಬಾರದೆಂದು. ಅಂತೆಯೇ ಈ ಶಿಷ್ಯರದನ್ನು ಅನುಸರಿಸುತ್ತಾರೆ. ಈ ಸಾವಿರ ಶಿಷ್ಯರಲ್ಲಿ ಒಂಭೈನೂರಾ ತೊಂಭತ್ತೊಂಭತ್ತು ಶಿಷ್ಯರು ತಮ್ಮ ತಮಗೆ ಬೇಕಾದ್ದೊಂದನ್ನು ಮಾತ್ರ ಕೇಳಿ ತಿಳಿದುಕೊಂಡು ಹೊರಟುಬಿಡುತ್ತಾರೆ. ಆದರೆ ಗೌಡಪಾದರೊಬ್ಬರೇ  ಪೂರ್ತಿ ಮುಗಿಯುವ ತನಕ ಅಷ್ಟೂ ಪಾಠವ ಕೇಳಿ ಅದನ್ನು ನಮೂದಿಸಿಟ್ಟುಕೊಳ್ಳುತ್ತಾರೆ. ಆದರೆ ಕೊನೆಯಲ್ಲಿ ಹೊರಡುವ ಮುನ್ನ ಗುರುಗಳ ಮುಖವ ನೋಡಿ ನಮಿಸಬೇಕೆಂದು ಪರದೆಯನ್ನು ಸರಿಸುತ್ತಾರೆ. ಅಲ್ಲೇನಾಶ್ಚರ್ಯ!!.. ಅವರಿಗೆ ಕಂಡದ್ದು ಸಾವಿರ ಹೆಡೆಗಳ ಆದಿಶೇಷ ತನ್ನ ಒಂದೊಂದು ಹೆಡೆಗಳಿಂದ ಸಾವಿರ ಶಿಷ್ಯರಿಗೆ ಬೋಧಿಸಿದ್ದು. (ಪಂತಂಜಲಿಗಳೂ ಆದಿಶೇಷನ ಅವತಾರವೇ ಅಲ್ಲವೇ!) ಆದರೆ ಷರತ್ತುಲ್ಲಂಘನೆಯಿಂದಾಗಿ ಪತಂಜಲಿಗಳು ಬ್ರಹ್ಮರಾಕ್ಷಸತ್ವ ಪ್ರಾಪ್ತಿಯಾಗಲೆಂದು ಗೌಡಪಾದರನ್ನು ಶಪಿಸುತ್ತಾರೆ. ಪ್ರತಿಯಾಗಿ ಗೌಡಪಾದರು ಅವರನ್ನು ನಮಿಸಿ, ಶಾಪ ದೊರಕಿ ಆಗಿದೆ ಅದರ ವಿಮೋಚನಾ ಮಾರ್ಗವನ್ನು ತಿಳಿಸಿ ಎಂದು ವಿನಂತಿಸಿಕೊಳ್ಳುತ್ತಾರೆ. ಆಗ ಮಹಾಗುರುಗಳು, ನಿನ್ನಂತೆಯೇ ಅರಿವನ್ನು ಸ್ವೀಕರಿಸಿ ಅದನ್ನು ಹರಿಸುವ ಮತ್ತು ಈ ಗುರುಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಯೋಗ್ಯತೆಯುಳ್ಳ ವಿದ್ಯಾರ್ಥಿಯು ಶಿಷ್ಯನಾಗಿ ಯಾವಾಗ ಬರುತ್ತಾನೋ ಮತ್ತು ಅವನಿಗೆ ಯಾವಾಗ ನೀನು ನಾನು ಹೇಳಿದ ಈ ಪಾಠಗಳನ್ನು ಬೋಧಿಸುತ್ತೀಯೋ ಆಗ ಬ್ರಹ್ಮರಾಕ್ಷಸತ್ವ ವಿಮೋಚನೆಯಾಗುತ್ತದೆಂದು ಹೇಳಿ ಅದೃಶ್ಯರಾಗುತ್ತಾರೆ. ಅದಾದ ಬಳಿಕ ಬಹುದೂರ ಸಾಗಿಬಂದು ಒಂದು ಅರಳೀಮರದ ಮೇಲೆ ಬ್ರಹ್ಮರಾಕ್ಷಸ ರೂಪದಲ್ಲಿ ಗೌಡಪಾದರು ವಾಸವಾಗುತ್ತಾರೆ. ಬಹುವರ್ಷಗಳ ಇವರ ಪ್ರತೀಕ್ಷೆಯ ಬಳಿಕ, ವಿದ್ಯಾರ್ಥಿಯೊಬ್ಬ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕಂಚೀ ಕ್ಷೇತ್ರಕ್ಕೆ ಹೊರಟಿದ್ದು ಕತ್ತಲು ಕಳೆಯುವ ತನಕ ಇದೇ ಅರಳಿಮರದ ಬುಡದಲ್ಲಿ ತಂಗುತ್ತಾನೆ. ಬ್ರಹ್ಮರಾಕ್ಷಸ ರೂಪದಲ್ಲಿದ್ದ ಗೌಡಪಾದರು ಈ ವಿದ್ಯಾರ್ಥಿಯ ಗೋತ್ರಪ್ರವರವೆಲ್ಲ ವಿಚಾರಿಸಿ ಕಂಚಿಗೇಕೆ ಹೋಗಬೇಕು ತಾವೇ ಉಪದೇಶ ಮಾಡುತ್ತೇವೆಂದು ಹೇಳಿ ರಾತ್ರಿ ಕಳೆಯುವಷ್ಟರಲ್ಲಿ ಸಂಪೂರ್ಣ ವಿದ್ಯಾದಾನ ಮಾಡಿ ಆ ಶಿಷ್ಯನ ಆಂತರ್ಯದ ಕತ್ತಲ ರಾತ್ರಿಯನ್ನು ಅರಿವಿನ ಬೆಳಕಲ್ಲಿ ಬೆಳಗಿಸುತ್ತಾರೆ. ಅಲ್ಲಿಗೆ ಗೌಡಪಾದರ ಶಾಪವಿಮೋಚನೆಯಾಯಿತು. ಯೋಗ್ಯಶಿಷ್ಯನಿಗೆ ಅರಿವಿನ ಹರಿವಾಯ್ತು. ಇಷ್ಟಾದಮೇಲೆ ತಾವು ಬದರಿಕಾಶ್ರಮವನ್ನು ಸೇರಿ ಧ್ಯಾನಸ್ಥರಾಗುತ್ತೇವೆ, ನೀನು ಯಾವಾಗ ಬೇಕಾದರೂ ಬರಬಹುದೆಂದು ತಿಳಿಸಿ ಅಲ್ಲಿಗೆ ನಡೆಯುತ್ತಾರೆ. ಅರಿವಿನ ಹರಿವಿಗೆ ಪಾತ್ರೆಯಾಗಿ ಅವಿಚ್ಛಿನ್ನ ಗುರುಪರಂಪರೆಯಲ್ಲಿ ಪಾತ್ರವಾದ ಗೌಡಪಾದರ ತರುವಾಯು ಆ ಶಿಷ್ಯ ಯಾರೆಂಬುದನ್ನು ಮುಂದಿನ ಸಂಚಿಕೆಯಲ್ಲಿ ಅವಲೋಕಿಸೋಣ..

Author Details


Srimukha

Leave a Reply

Your email address will not be published. Required fields are marked *