ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೭

ಅರಿವು-ಹರಿವು
ಅವಿಚ್ಛಿನ್ನ ಅರಿವಿನ ಹರಿಯುವಿಕೆಯ ಕಾಪಿಡಲೋಸ್ಕರವೇ ಎಂಬಂತೆ ಗುರುಪರಂಪರೆಯಲ್ಲಿ ಆಗಿಹೋದ ಪ್ರತಿಪಾತ್ರವೂ ಆ ಶುದ್ಧ ಪ್ರಕೃತಿಯನ್ನೇ ಆಯ್ದು, ಆ ಚೇತನವನ್ನು ಪ್ರಚೋದಿಸಿ ಪ್ರಕಾಶಿಸಿ ಜಗಕ್ಕೆ ಇದು ಗುರುಸ್ಥಾನ ಎಂದು ತೋರಿಸಿ ಸಂದಿಗ್ಧತೆಯನ್ನು ಅಳಿಸಿ ನಮ್ಮನ್ನುಳಿಸಿದ್ದಾರೆ. ಅಂತೆಯೇ ಗುರುಪರಂಪರಾ ಸರಣಿಯಲ್ಲಿ ಶಂಕರರ ಪಾತ್ರವಾಗಿ ಬಂದ ಚೈತನ್ಯವು ತಮ್ಮ ಶಿಷ್ಯಶ್ರೇಷ್ಠನನ್ನು ಆಯ್ದು ಪರಂಪರೆಯ ಮುಂದುವರಿಕೆಗೆ ಪಾತ್ರವನ್ನು ತೋರಿಸಿದೆ. ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ಗುರುಗೋವಿಂದರಲ್ಲಿ ಕ್ರಮಸಂನ್ಯಾಸವನ್ನು ಪಡೆದ ಆಚಾರ್ಯ ಶಂಕರರು ವಿವಿಧ ಭಾಷ್ಯ ರಚಿಸುವ ಮತ್ತು ಅದ್ವೈತ ಸ್ಥಾಪನೆಯ ಹೊಣೆ ಹೊತ್ತು ಕಾಶಿಕ್ಷೇತ್ರಕ್ಕೆ ಬಂದಾಗ ದೊರೆತ ಶಿಷ್ಯಶ್ರೇಷ್ಠನನ್ನು ಈ ಸಂಚಿಕೆಯಲ್ಲಿ ಪ್ರದರ್ಶಿಸುವುದಕ್ಕಾಗಿ.
ಹೌದು, ಶಂಕರರ ಭಾಷ್ಯರಚನೆ ಲೋಕಕಲ್ಯಾಣಕ್ಕಾಗಿ ತಪೋನಿಮಗ್ನತೆ ಸಹಜವಾಗಿ ನಿತ್ಯವೂ ಜರುಗುತ್ತಿದ್ದಾಗ ಒಮ್ಮೆ ಒಬ್ಬ ಸನಂದನ ಎಂಬ ವಟುವು ಶಂಕರಾಚಾರ್ಯರ ಬಳಿ ಅವರ ಶಿಷ್ಯತ್ವವನ್ನು ಯಾಚಿಸಿ ಮತ್ತು ಸಂನ್ಯಾಸದೀಕ್ಷೆಯ ವಾಂಛೆ ಹೊತ್ತು ಬಂದನು. ಅವನ ದೇಶ ಕುಲಗಳನ್ನು ಶಂಕರರು ವಿಚಾರಿಸಿದಾಗ ಚೋಳದೇಶದವನಿವನು ಎಂದು ತಿಳಿಯಿತು. ಮತ್ತೆ ಶಿಷ್ಯನನ್ನಾಗಿ ಸ್ವೀಕರಿಸಿದರು. ಇವನೇ ಆಚಾರ್ಯ ಶಂಕರರ ಪ್ರಥಮ ಶಿಷ್ಯನೆಂದು ಪರಿಗಣನೆಗೊಳ್ಳುತ್ತಾನೆ. ಸಂಸಾರವೆಂಬ ಭಯಂಕರವಾದ ಸಮುದ್ರವನ್ನು ದಾಟುವುದಕ್ಕೆ ಸದಾ ನಾವಿಕನಾಗಿರಬೇಕೆಂದು ಪ್ರಾರ್ಥಿಸುತ್ತಿದ್ದ ಆ ಸನಂದನನನ್ನು ಉತ್ತಮವಾದ ಸಂನ್ಯಾಸಾಶ್ರಮವೆಂಬ ದೋಣಿಯಲ್ಲಿ ಕುಳ್ಳಿರಿಸಿ ದಯಾರಸವೆಂಬ ದೋಣಿಯ ಹುಟ್ಟಿನಿಂದ ಆಚಾರ್ಯರು ಆತನನ್ನು ಸಮುದ್ರದ ಇನ್ನೊಂದು ತೀರಕ್ಕೆ ಕರೆದೊಯ್ದರು. ಹಾಗೆಯೇ ಉತ್ತಮ ಯೋಗವಿರುವ ಇನ್ನು ಹಲವು ಪುರುಷರು ಆಚಾರ್ಯ ಶಂಕರರ ಶಿಷ್ಯರಾದರು. ಮುನೀಂದ್ರರಾದ ಶ್ರೀಶಂಕರರು ತಮ್ಮ ಪಾದಪದ್ಮಯುಗಳದಲ್ಲಿ ಅಸಾಧಾರಣ ಭಕ್ತಿಯನ್ನಿಟ್ಟಿದ್ದ ಆ ಸನಂದನನಲ್ಲಿ ಅಪಾರವಾದ ಅಂತಃಕರಣವನ್ನಿರಿಸಿದ್ದರು. ಆದ್ದರಿಂದ ವೇದಾಂತ ರಹಸ್ಯಗಳ ಭಂಡಾರವಾದ ತಮ್ಮ ಗ್ರಂಥವೆಲ್ಲವನ್ನೂ ಸನಂದನಿಗೆ ಮೂರು ಸಲ ಪಾಠ ಮಾಡಿದರು. ಶುದ್ಧ ಚಿನ್ನ ಶುದ್ಧಚಿನ್ನದೊಟ್ಟಿಗೆ ಮಾತ್ರ ಸೇರುತ್ತದಲ್ಲವೇ..ಬೆಳಕು ಪಾರದರ್ಶಕತೆಯಲ್ಲಿ ಮಾತ್ರ ಪ್ರತಿಫಲನವಾಗುತ್ತದಲ್ಲವೇ!!ಇದರಿಂದ ಉಳಿದ ಶಿಷ್ಯರ ಹೃದಯದಲ್ಲಿ ಮಾತ್ಸರ್ಯವುಂಟಾಯಿತು. ಶಂಕರಾಚಾರ್ಯರು ಒಂದು ದಿನ ಸನಂದನನ ಅಸದೃಶ ಭಕ್ತಿಯನ್ನು ಉಳಿದವರಿಗೆ ತೋರಿಸಿಕೊಡಬೇಕೆಂದು ಬಯಸಿ ನದಿಯ ಆಚೆಯ ದಡದಲ್ಲಿದ್ದ ಅವನನ್ನು ಕೂಡಲೇ ಬರಬೇಕೆಂದು ಕರೆದರು. ಆಗ ಸನಂದನನು ಶ್ರೀಗುರುಭಕ್ತಿಯು ಅಪಾರವಾದ ಸಂಸಾರ ಸಾಗರವನ್ನೇ ದಾಟಿಸಬಲ್ಲದು. ಈ ಹೊಳೆಯನ್ನು ದಾಟಿಸಲಾರದೇ ಎಂದುಕೊಳ್ಳುತ್ತಾ ಗಂಗಾನದಿಯ ನೀರಿನಲ್ಲಿ ಒಡನೆಯೇ ಕಾಲಿಟ್ಟು ಹೊರಟೇಬಿಟ್ಟನು. ಗಂಗೆಯು ಆತನ ಗುರುಭಕ್ತಿಗೆ ಮೆಚ್ಚಿ  ಎಂಬಂತೆ ಅವನ ಪಾದದ ಕೆಳಗೆ ಒಂದೊಂದು ಕಮಲವನ್ನು ಆಸರೆಯಾಗಿ ಇಡುತ್ತಿದ್ದಳು. ಈ ಪ್ರಕಾರವಾಗಿ ಕಮಲಗಳ ಮೇಲೆ ಪಾದವನ್ನಿಡುತ್ತಾ ತಮ್ಮ ಬಳಿಗೆ ಸನಂದನನು ಬಂದುದನ್ನು ನೋಡಿ ಅವನ ಅಸದೃಶವಾದ ಭಕ್ತಿಗೆ ಮೆಚ್ಚಿ ಆನಂದವಿಸ್ಮಯಗಳಿಂದ ತುಂಬಿತುಳುಕಿದ ಶ್ರೀಶಂಕರರು ಆ ಶಿಷ್ಯನಿಗೆ ಪದ್ಮಪಾದ ಎಂದು ಹೆಸರಿಟ್ಟರು. ಇವರೇ ಅವಿಚ್ಛಿನ್ನ ಗುರುಪರಂಪರೆಯ ಸರಣಿಯಲ್ಲಿ ಶಂಕರರ ನಂತರ ಗಣನೆಗೆ ಬರುವ ಗುರು.

Author Details


Srimukha

Leave a Reply

Your email address will not be published. Required fields are marked *