ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೩೯

ಅರಿವು-ಹರಿವು
ಅರಿವಿನ ಹರಿವು  ಸದ್ವ್ಯವಸ್ಥೆಯೊಂದರಲ್ಲಿ ನಿರಂತರ  ಸೆಲೆಯಾಗಿ ಸಮಾಜಕ್ಕೆಲ್ಲ ಶ್ರದ್ಧಾ ಕೇಂದ್ರವಾಗಿ   ಮುನ್ನೆಡೆಯುತ್ತಾ ಬರುತ್ತಿರುವುದು ನಾವು ಅವಲೋಕಿಸಿದ ವಿಷಯವೇ. ಅದರದೇ ಮುಂದುವರಿಕೆಯಾಗಿ  ಲೇಖನಮಾಲಿಕೆಯ ಈ ಸಂಚಿಕೆಯಲ್ಲಿ  ಅರಿವಿನಾಗರವನ್ನೊಮ್ಮೆ ಇಣುಕಿ ನೋಡಿ  ಪಾವನರಾಗೋಣ.
ಅವಿಚ್ಛಿನ್ನ   ಗುರುಪರಂಪರೆಯ ಮೂವತ್ತೆರಡನೆಯ ಅರಿವಿನಾಗರ ಶ್ರೀಶ್ರೀಮದ್ರಾಘವೇಂದ್ರಭಾರತೀ  ಮಹಾಸ್ವಾಮಿಗಳು(೧). ಶ್ರೀಗಳ ಪೂರ್ವಾಶ್ರಮದ ಜನನ ಕೆಕ್ಕಾರಿನ ‘ಹೊಸೂರುಮನೆ’ ಎಂಬ ಮನೆತನದಲ್ಲಿ.  ಪೀಠಕ್ಕೆ ಬಂದಾಗ ಪೂಜ್ಯ ಶ್ರೀಗಳ ವಯಸ್ಸು ಕೇವಲ ಹದಿನೈದು.  ಗುರುಪರಂಪರೆ ಸ್ವತಃ ನಾರಾಯಣ ಪ್ರತಿರೂಪವೇ ಆಗಿದ್ದರೂ  ಭುವಿಯ ನಿಯಮದ ಒಡಂಬಡಿಕೆಗೆ ಒಪ್ಪವಾಗುವಂತೆ, ಶಾಸ್ತ್ರಾಧ್ಯಯನವೆಂಬುದನ್ನು ಗುರುಗಳು ನೆರವೇರಿಸಿದರು. ಶ್ರೀಮಠದಲ್ಲಿ ಸ್ವಲ್ಪ ಕಾಲ ಅಧ್ಯಯನ ಮಾಡಿ ನಂತರ ಕಾಶೀ ಕ್ಷೇತ್ರದಲ್ಲಿದ್ದುಕೊಂಡು ಮುಂದಿನ ವಿದ್ಯಾಭ್ಯಾಸವನ್ನು ಸಂಪನ್ನಗೊಳಿಸಿದರು. ಪೂಜ್ಯರ ಅಧ್ಯಯನದ ಹರಹು ಎಷ್ಟಿತ್ತೆಂದರೆ ವೇದಾಂಗ, ವೇದಾಂತ, ಮೀಮಾಂಸ, ನ್ಯಾಯ, ಸಾಂಖ್ಯ, ಯೋಗ, ವ್ಯಾಕರಣ ಮೊದಲಾದ ಎಲ್ಲಾ ಶಾಸ್ತ್ರಗಳಲ್ಲಿಯೂ ತಲಸ್ಪರ್ಶಿಯಾದ  ಪಾಂಡಿತ್ಯವಿತ್ತು. ಆದ್ದರಿಂದ ಶ್ರೀಗಳಿಗೆ ‘ಪ್ರತಿವಾದಿ ಭಯಂಕರ’ ಎಂಬ ಪ್ರಸಿದ್ಧಿ ಇತ್ತು ಎಂಬ ಮಾತಿದೆ. ಕಾಶೀ  ಕ್ಷೇತ್ರದಲ್ಲಿದ್ದಾಗ ಇವರ ಅನಿತರಸಾಧಾರಣಾ ಪ್ರತಿಭೆ, ಅತಿಶಯವಾದ ತಪಃಸಿದ್ಧಿ, ಅಪೂರ್ವವಾದ ವಾಕ್ಸಿದ್ಧಿ  ಮೊದಲಾದ ವಿಚಾರಗಳನ್ನು ಕೇಳಿ ತಿಳಿದ  ಬ್ರಿಟಿಷ್ ವೈಸರಾಯ್ ಪೂಜ್ಯರನ್ನು ಸಂದರ್ಶಿಸಿ ತನ್ನ ವಿಶೇಷವಾದ ರಾಜಮರ್ಯಾದೆಯನ್ನು ಸಲ್ಲಿಸಿದ್ದರು. ಅಲ್ಲದೇ ಕಾಶಿಯಿಂದ ಶ್ರೀಮಠಕ್ಕೆ ಹಿಂದಿರುಗಿ ಬರಲು ಕುದುರೆ, ಪಾಲಕಿ, ನೂರಾರು ಸೇವಕರ ಸಮೂಹಕ್ಕೆ ಯಾವುದೇ ತೆರಿಗೆಯಿಲ್ಲದೇ ಶ್ರೀರಾಮಚಂದ್ರಾಪುರಮಠಕ್ಕೆ ಬರಲು ವಿಶೇಷವಾದ ರಹದಾರಿಯನ್ನು ಆಗಿನ ಗವರ್ನರ್ ಜನರಲ್ ಪ್ರತಿನಿಧಿಯಾದ ಸ್ಟುವರ್ಟ್ ಮೂಲಕ  ನೀಡಿದ್ದು ಮಠದ ದಾಖಲಾತಿಯಲ್ಲಿದೆ. ಇವೆಲ್ಲವನ್ನು ಗಮನಿಸಿದಾಗ ಪೀಠಸ್ಥ ಗುರುವಿನ ಅರಿವಿನ ಅವ್ಯಾಹತ ಹರಿವು ನಮಗೂ ವೇದ್ಯವಾಗುತ್ತದಲ್ಲವೇ..ನಮಗೆ ಸದ್ಯಕ್ಕೆ ದೊರೆತ ಆಧಾರದ ಪ್ರಕಾರ ಕಾಶೀಕ್ಷೇತ್ರದಲ್ಲಿದ್ದುಕೊಂಡು ವಿಶ್ವೇಶ್ವರನ ವಿಶೇಷ ಸಾನ್ನಿಧ್ಯದಲ್ಲಿ ಅಧ್ಯಯನ ಮಾಡಿದವರಲ್ಲಿ ಎರಡನೆಯವರು  ಶ್ರೀಶ್ರೀಮದ್ರಾಘವೇಂದ್ರ ಭಾರತೀ ಮಹಾಸ್ವಾಮಿಗಳು (೧). ಕಾಶಿಯಿಂದ ಬಂದು ಆಡಳಿತದ ಪೂರ್ಣ ಜವಾಬ್ದಾರಿಯನ್ನು ಹೊತ್ತ ಶ್ರೀಗಳು ಅಂದಿದ್ದ ಆರ್ಥಿಕ ಬಾಧೆಯನ್ನು ನಿವಾರಿಸಿದರು ಮಾತ್ರವಲ್ಲದೇ ಅನೇಕ ಸುಧಾರಣೆಗಳನ್ನು ಸಂಯೋಜಿದರು.
ಇವರ ಕಾಲದಲ್ಲಿ ಉಂಟಾದ ಮಠವೆಂಬ ವ್ಯವಸ್ಥೆಯಲ್ಲಿನ ಕೆಲ ಜರುಗುವಿಕೆಯನ್ನೂ ಉಲ್ಲೇಖಿಸುವುದಾದರೆ,, ಇಪ್ಪತ್ತನೆಯ ಪೀಠಾಧೀಶರ ಕಾಲದಲ್ಲಿ ಬೇರೆ ಬೇರೆ ಯತಿಗಳಿಂದ ಸ್ಥಾಪಿಸಲ್ಪಟ್ಟಿದ್ದ ಅನೇಕ ಮಠಗಳು ಶ್ರೀರಾಮಚಂದ್ರಾಪುರಮಠದಲ್ಲಿಯೇ ವಿಲೀನವಾದವು. ಇವುಗಳಲ್ಲಿ ಸಿದ್ಧಾಪುರದ ಕೊಂಬಿನಕೈ ಮಠ, ಕಳಸದ ರುದ್ರಪಾದ ಮಠ, ಸಾಗರ ತಾಲ್ಲೂಕಿನ ಅಮರಗೋಡ್ಲು ಮಠ, ಕೃಷ್ಣಾನಂದ ಮಠ, ಹೊಸಹಳ್ಳಿ ಮಠ ಮುಖ್ಯವಾದವು. ಪೂರ್ವಾಮ್ನಾಯಪೀಠದ  ಗೋವರ್ಧನಮಠದ ಪರಂಪರೆಗೆ ಸೇರಿದ ಮಠವೊಂದು ತೀರ್ಥಹಳ್ಳಿಯಲ್ಲಿತ್ತು. ಈ ಮಠದ ಸ್ವಾಮಿಗಳಾದ ಶ್ರೀಗಂಗಾಧರಪುರಿ ಉತ್ತರಾಧಿಕಾರಿಗಳಿಗೆ  ಪೂಜ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳೇ (೧) ೧೮೫೧ ರಲ್ಲಿ ಶ್ರೀಅಮರೇಂದ್ರಪುರಿ ಎಂಬ ಹೆಸರಿನಲ್ಲಿ ಸಂನ್ಯಾಸದೀಕ್ಷೆಯನ್ನಿತ್ತು ಮಹಾವಾಕ್ಯೋಪದೇಶವನ್ನನುಗ್ರಹಿಸಿದ್ದರು. ಕೆಲಕಾಲದ ನಂತರ ಅಮರೇಂದ್ರಪುರಿಗಳು ತಮ್ಮ ತೀರ್ಥಹಳ್ಳಿ ಮಠದ ಆಡಳಿತವನ್ನು ತಮ್ಮ ದೀಕ್ಷಾ ಗುರುಗಳಿಗೇ ಸಮರ್ಪಿಸಿದ್ದರಿಂದಾಗಿ ಈ ಮಠವೂ ಶ್ರೀರಾಮಚಂದ್ರಾಪುರಮಠದಲ್ಲಿಯೇ ವಿಲೀನವಾಯಿತು. ಇವೆಲ್ಲವನ್ನು ಈ ಲೇಖನದಲ್ಲಿ ಉಲ್ಲೇಖಿಸುವ ಔಚಿತ್ಯವೇನೆಂದರೆ,, ‘ಅರಿವು’, ತನ್ನರಸಿ ಬರಲು  ಇಲ್ಲಿ ಬಾ ಎಂತೆಂದು ತಾನೇ ವ್ಯಕ್ತವಾದ ವಾಹಕ ರೂಪದ  ಕುರಿತೊಂದಿನಿತು ಚಿತ್ತೈಸಿ ಅಲ್ಲಿ ಶ್ರದ್ಧೆಯನ್ನು ಸದೃಢಗೊಳಿಸಿ ಅರಿವಿನಾನಂದದ ಮಡುವಿಗೆ ನಾವೂ ಸೇರಿಹೋಗಲಷ್ಟೇ…
ಪೂಜ್ಯ ಶ್ರೀಗಳು ಕಾಶಿಯಿಂದ ಬಂದ ಮೇಲೂ ಸಹ ಉತ್ತರದೆಡೆಗೆ ಸಂಚಾರ ಮಾಡಿ ಅರಿವಿನ ಪ್ರಸಾರ ಮಾಡಿದರು. ಆ ಕಾಲದಲ್ಲಿ ತಮ್ಮ ಗುರುಗಳಾದ ಶ್ರೀಶ್ರೀಮದ್ರಾಮಚಂದ್ರಭಾರತೀ ಮಹಾಸ್ವಾಮಿಗಳಿಗೆ ಬರೆದುಕೊಂಡ ಬಿನ್ನಹ ಹಾಗೂ ತಮ್ಮ ಮೊಕ್ಕಾಮಿನಲ್ಲಿದ್ದ ಯಾವತ್ತು ವಸ್ತು ಒಡವೆಗಳನ್ನು ಗುರುಗಳ ಸನ್ನಿಧಾನಕ್ಕೆ ಕಳಿಸಿದುದು ದಾಖಲೆಗಳಿಂದ ವ್ಯಕ್ತವಾಗುತ್ತದೆ.
ಶ್ರೀಶ್ರೀಮದ್ರಾಘವೇಂದ್ರಭಾರತೀಮಹಾಸ್ವಾಮಿಗಳು(೧) ನಿಯತವಾಗಿ ಅರಿವಿನ ಪ್ರಭಾವಲಯದೊಳಗೆ ಶಿಷ್ಯರನ್ನಿರಿಸಲು ಮಲಯಾಳ, ಅನಂತಶಯನ, ಕೊಡಗು, ಚಿಕ್ಕಮಗಳೂರು, ಕೊಪ್ಪ, ಮೈಸೂರು, ಧಾರವಾಡ, ರಾಮೇಶ್ವರದವರೆಗೂ ಸಂಚಾರ ಮಾಡಿದುದನ್ನು ಆಗಿನ ಆಡಳಿತ ಮುಖ್ಯರಾದ  ಆಂಗ್ಲ ಅಧಿಕಾರಿಗಳು ಕೊಟ್ಟ ರಹದಾರಿಗಳಿಂದ ತಿಳಿಯಪಡುತ್ತದೆ.
ಪೂಜ್ಯರು ತಮ್ಮ  ಕಾಲಾಂತ್ಯದಲ್ಲಿ ಯೋಗ್ಯ ಶಿಷ್ಯರೋರ್ವರಿಗೆ ಯೋಗಪಟ್ಟವನ್ನಿತ್ತು ಸಾಗರದ ಮೆಳವರಿಗೆ ಎಂಬ ಊರಿನಲ್ಲಿ ಇಹ ದೇಹಕ್ಕೆ ಪಂಚತ್ವ ಪ್ರಾಪ್ತಿ ಮಾಡಿ ಅರಿವಿನೊಳಗರಿವಾದರು ಎಂಬಲ್ಲಿಗೆ ಈ ಸಂಚಿಕೆಯ ಸಮಾಪ್ತಿ.

Leave a Reply

Your email address will not be published. Required fields are marked *