ಪೂರ್ವ ಜನ್ಮದ ಸುಕೃತದಿಂದ ಶ್ರೀಮಠದ ಸೇವೆಯ ಅವಕಾಶ ದೊರಕಿದೆ ” : ದೀಪಾ ಆನಂದ ಭಟ್ಟ

ಮಾತೃತ್ವಮ್

” ನನಗೆ ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ದೊರಕಿದಂತೆ ನಮ್ಮ ಮಕ್ಕಳಿಗೂ ಆ ಸೌಭಾಗ್ಯ ಒದಗಿಬಂತು. ಶ್ರೀಗುರುಗಳ ಆಶೀರ್ವಚನಗಳನ್ನು ನಿರಂತರವಾಗಿ ಕೇಳಿದ ನನ್ನ ಮಗ ಸ್ವಯಂ ಇಚ್ಛೆಯಿಂದ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ವಿದ್ಯಾರ್ಥಿಯಾಗಿ ಸೇರಿದ್ದಾನೆ. ಇದು ಅತ್ಯಂತ ಖುಷಿಯ ವಿಚಾರ ” ಎಂದು ಹರ್ಷದಿಂದ ನುಡಿಯುವವರು ಗೇರುಸೊಪ್ಪ ಮೂಲದ ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ಕೋರಮಂಗಲ ವಲಯ ನಿವಾಸಿಗಳಾಗಿರುವ ಆನಂದ ಭಟ್ಟ ಗದ್ದೆ ಇವರ ಪತ್ನಿಯಾದ ದೀಪಾ ಆನಂದ ಭಟ್ಟ.

ಹೊನ್ನಾವರದ ಕಾಸರಕೋಡು ನಾರಾಯಣ ಮಂಜುನಾಥ ಹೆಗಡೆ ಹಾಗೂ ತ್ರಿವೇಣೀ ಮಂಜುನಾಥ ಹೆಗಡೆಯವರ ಪುತ್ರಿಯಾದ ದೀಪಾ ಅವರ ತವರುಮನೆಯವರು ಅಪ್ಸರಕೊಂಡ ಮಠದ ಮೊಕ್ತೇಸರರಾಗಿದ್ದ ಕಾರಣ ಎಳವೆಯಿಂದಲೇ ಶ್ರೀಮಠದ ಸಂಪರ್ಕ ಅವರಿಗೆ ದೊರಕಿತ್ತು.

” ಕಾಲೇಜ್ ದಿನಗಳಲ್ಲೇ ಹೆತ್ತವರೊಂದಿದೆ ಶ್ರೀಮಠಕ್ಕೆ ಬರುತ್ತಿದ್ದೆ. ಮದುವೆಯ ನಂತರ ಈ ರೀತಿಯ ಭಾಗ್ಯ ಸಿಗಬಹುದೇ ಎಂದು ಆತಂಕವಾಗುತ್ತಿತ್ತು. ಪೂರ್ವ ಜನ್ಮದ ಸುಕೃತದಿಂದ ಶ್ರೀಮಠದ ಭಕ್ತರ ಮನೆಗೆ ಮದುವೆಯಾಗಿ ಬಂದೆ. ಮನೆಯವರ ಸಹಕಾರದಿಂದ ಶ್ರೀಗುರುಸೇವೆಯಲ್ಲಿ ಮತ್ತೆ ಮುಂದುವರಿಯುವ ಅವಕಾಶ ದೊರೆಯಿತು. ಎಷ್ಟೇ ಕೆಲಸದ ಒತ್ತಡವಿದ್ದರೂ ನಮ್ಮವರು ಶ್ರೀಮಠಕ್ಕೆ ಕರೆದುಕೊಂಡು ಬರುತ್ತಾರೆ ಎಂಬುದೇ ಖುಷಿ. ಗಿರಿನಗರ ರಾಮಾಶ್ರಮ ಎಂದರೆ ತವರುಮನೆಗೆ ಬಂದಷ್ಟೇ ನಿರಾಳತೆ. ಮಕ್ಕಳನ್ನು ತಾಯಿಯ ಜೊತೆಗೆ ಬಿಟ್ಟಾಗ ನೆಮ್ಮದಿಯಿಂದ ಇರುವಂತೆ ಇಲ್ಲಿ ಸೇವೆ ಮಾಡುವಾಗಲೂ ನಾನು ನೆಮ್ಮದಿಯಿಂದ ಇರುತ್ತೇನೆ. ಮಕ್ಕಳಿಗೂ ಸಂಸ್ಕಾರಗಳ ಬಗ್ಗೆ ಆಸಕ್ತಿ ಬಂದಿದ್ದು, ಧಾರ್ಮಿಕ ಕಾರ್ಯಗಳಲ್ಲಿ ಇಷ್ಟದಿಂದ ಭಾಗವಹಿಸುವಂತಾಗಿದ್ದು ನಿರಂತರವಾಗಿ ಶ್ರೀಗುರುಗಳ ಆಶೀರ್ಚನಗಳ ಶ್ರವಣದಿಂದ. ಮಗ ಆದಿತ್ಯ ಸ್ವಯಂ ಇಚ್ಛೆಯಿಂದ ವಿ ವಿ ವಿಯಲ್ಲಿ ವ್ಯಾಸಂಗ ಮಾಡುವ ಅಭಿಲಾಷೆ ವ್ಯಕ್ತಪಡಿಸಿದಾಗ ಖುಷಿಯೆನಿಸಿತು ” ಎನ್ನುವ ದೀಪಾ ಅಭಯಾಕ್ಷರ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದವರು.

ಗೋವುಗಳ ಮೇಲಿನ ವಿಶೇಷ ಮಮತೆ ಹಾಗೂ ಶ್ರೀಗುರುಗಳ ಆಶೀರ್ವಚನಗಳ ಸ್ಪೂರ್ತಿಯಿಂದ ಮಾತೃತ್ವಮ್ ಯೋಜನೆಯ ಮಾಸದ ಮಾತೆಯಾಗಿ ಸೇವೆಗೈಯಲಾರಂಭಿಸಿದ ದೀಪಾ ಅವರಿಗೆ ಪತಿ ಆನಂದ ಭಟ್ಟ ಅವರೇ ಒಂದು ವರ್ಷದ ಒಂದು ಗೋವಿನ ವೆಚ್ಚವನ್ನು ನೀಡಿದ್ದಾರೆ.

” ಶ್ರೀಮಠದ ಎಲ್ಲಾ ಯೋಜನೆಗಳಿಗೂ ನಮ್ಮಿಂದ ಸಾಧ್ಯವಾದ ರೀತಿಯಲ್ಲಿ ಕೈ ಜೋಡಿಸುತ್ತೇವೆ. ಮಾಸದ ಮಾತೆಯಾಗಿ ಸೇವೆಗೈಯಲು ಆರಂಭಿಸಿದಾಗ ಒಂದು ವರ್ಷದ ಮೊತ್ತವನ್ನು ನಮ್ಮವರೇ ನೀಡಿದ್ದಾರೆ. ಮನೆಯಲ್ಲಿ ಹಸು ಸಾಕಲು ನಗರ ವಾಸಿಗಳಾದ ನಮಗೆ ಸುಲಭ ಸಾಧ್ಯವಿಲ್ಲ. ಅದಕ್ಕಾಗಿ ಗಿರಿನಗರದ ರಾಮಾಶ್ರಮಕ್ಕೆ ಹೋದಾಗಲೆಲ್ಲ ಹಸುಗಳ ಬಳಿಗೆ ಹೋಗುವೆ. ದೇಶೀ ಹಸುಗಳ ಸಾಮೀಪ್ಯ ಮನಸ್ಸನ್ನು ಮುದಗೊಳಿಸುತ್ತದೆ ” ಎನ್ನುವ ದೀಪಾ ಅವರಿಗೆ ಮಾಸದ ಮಾತೆಯಾಗಿ ಇನ್ನಷ್ಟು ಸೇವೆಗೈಯುವ ಹಂಬಲವಿದೆ. ಮಕ್ಕಳಿಬ್ಬರಿಗೂ ಶ್ರೀಮಠದ ಸೇವೆಯಲ್ಲಿರುವ ಉತ್ಸಾಹ ಕಂಡಾಗ ಸಾರ್ಥಕ ಭಾವ ಮೂಡುತ್ತಿದೆ.

Author Details


Srimukha

Leave a Reply

Your email address will not be published. Required fields are marked *