ಗೋ ಸೇವೆಯಲ್ಲಡಗಿದೆ ನೆಮ್ಮದಿಯ ಸೆಲೆ: ಸಿರಿ ಕೂಡೂರು

ಮಾತೃತ್ವಮ್
ಬೆಂಗಳೂರು ಮಹಾನಗರದಲ್ಲಿ ಹುಟ್ಟಿ,ಬೆಳೆದು  ಮಂಗಳೂರು ಹೋಬಳಿಯ ಉರಿಮಜಲು ಮೂಲದ ಕೂಡೂರು ಮನೆತನದ ಲಕ್ಷ್ಮೀ ನಾರಾಯಣ ಕೂಡೂರು(ಎಲ್.ಎನ್.ಕೂಡೂರು) ಅವರನ್ನು ವಿವಾಹವಾದ ಸಿರಿ ಅವರಿಗೆ ಶ್ರೀ ಮಠದ ಸಂಪರ್ಕ ದೊರಕಿದ್ದು ಮದುವೆಯ ನಂತರ.

“ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪೀಠಾರೋಹಣ ಮಾಡಿದ ನಂತರ ಶ್ರೀಮಠದ ಸಂಪರ್ಕ ಮತ್ತಷ್ಟು ನಿಕಟವಾಯಿತು. ಶ್ರೀಗುರುಗಳ  ನಿರ್ದೇಶನದಂತೆ ಮಹಿಳಾ ಪರಿಷತ್ ರೂಪೀಕರಣಗೊಂಡಾಗ ನಾನು ವಿಟ್ಲ ಸೀಮಾ ಪರಿಷತ್ ನ ಮಾತೃ ಪ್ರಧಾನೆಯಾಗಿದ್ದೆ. ಅಂದು ಸಂಘಟನೆ ಬಲಪಡಿಸಲು ಹಲವಾರು ಕಡೆಗೆ ಭೇಟಿ ನೀಡಿದೆ. ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಾಗ ಮನಸ್ಸಿಗೆ ದೊರಕುವ ನೆಮ್ಮದಿ, ಶಾಂತಿ ಇತರ ಕಡೆಗಳಲ್ಲಿ ದೊರಕುವುದಿಲ್ಲ ಎಂಬುದು ನನ್ನ ಸ್ವಂತ ಅನುಭವ” ಎನ್ನುವ ಸಿರಿ ಕೂಡೂರು ಮಡಿಕೇರಿ ಮೂಲದ ಬೆಂಗಳೂರು ನಿವಾಸಿಗಳಾಗಿರುವ ಕಶ್ಯಪ್ ಹಾಗೂ ಸಾವಿತ್ರಿ ದಂಪತಿಗಳ ಪುತ್ರಿ.

ಇವರು ಸೀಮಾ ಪರಿಷತ್ ನ ಮಾತೃ ಪ್ರಧಾನೆಯಾಗಿದ್ದ ಸಂದರ್ಭದಲ್ಲಿ ಮಾತೆಯರಿಗೆ ಸೌಂದರ್ಯ ಲಹರಿ ಪಠಣದ ತರಗತಿಗಳು ನಡೆಸಲ್ಪಟ್ಟಿತು. ನೂರಾರು ಮಾತೆಯರು ಸೌಂದರ್ಯ ಲಹರಿಯ ನೂರು ಶ್ಲೋಕಗಳನ್ನು ಕಂಠಪಾಠ ಮಾಡಿ, ಹೊಸನಗರ ಶ್ರೀ ರಾಮಚಂದ್ರಾಪುರ ಮಠಕ್ಕೆ ತೆರಳಿ, ಶ್ರೀಸಂಸ್ಥಾನದವರಿಂದ ಮಂತ್ರಾಕ್ಷತೆ ಸ್ವೀಕರಿಸಿ, ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಹೋಗಿ ಶ್ರೀಮಾತೆಯ ಮುಂದೆ ಸೌಂದರ್ಯ ಲಹರಿ ಪಾರಾಯಣ ಮಾಡಿ ಬಂದ ವಿಶಿಷ್ಟ ಅನುಭವಗಳನ್ನು ತಮ್ಮ ನೆನಪಿನ ಪುಟಗಳಿಂದ ಆಯ್ದು ಹೇಳುವ ಸಿರಿ ಅವರಿಗೆ ನಗರದ ಆಡಂಬರದ ಜೀವನಕ್ಕಿಂತಲೂ ಹಳ್ಳಿಯ ಸರಳ ಜೀವನವೇ ಪ್ರಿಯ.

” ಹಳ್ಳಿಯ ನಿರ್ಮಲ ವಾತಾವರಣ, ತೋಟ,ಹಟ್ಟಿ, ಹಸುಗಳು ಬದುಕಿಗೆ ಮಹತ್ವಪೂರ್ಣ ಬದಲಾವಣೆಯನ್ನು ನೀಡಿವೆ. ಮಾವನವರಾದ ಕೂಡೂರು ಕೃಷ್ಣ ಭಟ್ಟರ ಮಾರ್ಗದರ್ಶನವು ಬಾಳಿಗೆ ಸ್ಪೂರ್ತಿಯಾಯಿತು. ಶ್ರೀಮಠ,ಹಸುಗಳು, ಗೋಸೇವೆ, ಮಠದ ಸೇವೆ ಎಂದು ಆರಂಭದ ಕೆಲವು ವರ್ಷಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರೂ ಮಕ್ಜಳಿಬ್ಬರ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸುವುದಕ್ಕಾಗಿ ಶ್ರೀಮಠದ ಸೇವೆಯಿಂದ ತುಸು ದೂರ ನಿಲ್ಲಬೇಕಾಯಿತು. ಇಂದು ಶ್ರೀಗುರುಗಳ ಕಾರುಣ್ಯದಿಂದ ಮಕ್ಕಳಿಬ್ಬರೂ ಉನ್ನತ ಉದ್ಯೋಗ ಗಳಿಸಿದ್ದಾರೆ. ಬದುಕಿನಲ್ಲಿ ನೆಮ್ಮದಿ ನೆಲೆಸಿದೆ. ಕೆಲವು ವರ್ಷದ ವಿರಾಮದ ನಂತರ ಮತ್ತೊಮ್ಮೆ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಅತ್ಯಂತ ಖುಷಿ ಅನಿಸುತ್ತಾಯಿದೆ” ಎನ್ನುವ ಸಿರಿ ಅವರು ಸಾವಿರದ ಸುರಭಿ ಯೋಜನೆಯ ಮೂಲಕವೂ ಗೋಸೇವೆ ಮಾಡಿದವರು. ಮಾತೃತ್ವಮ್ ಯೋಜನೆಯ ಮಾಸದ ಮಾತೆಯಾಗುವ ಮೂಲಕ ಎರಡು ವರ್ಷಗಳ ಕಾಲ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಹೊತ್ತು ಗುರಿ ತಲುಪಿದವರು.

“ಗೋವುಗಳ ವಿಚಾರದಲ್ಲಿ ಸಮಾಜದಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಗೋಸ್ವರ್ಗದ ಬಗ್ಗೆ ಹಲವಾರು ಜನರು ಬಹಳ ಕುತೂಹಲದಿಂದ ಕೇಳಿ ತಿಳಿದು ದೇಶೀಯ ಹಸುಗಳ ರಕ್ಷಣಾ ಕಾರ್ಯ ಶ್ಲಾಘನೀಯ ಎಂದು ದೊಡ್ಡ ಮೊತ್ತವನ್ನೇ ನೀಡಿದರು. ಇದು ಬಹಳ ಬೇಗ ಗುರಿ ತಲುಪಲು ಸುಲಭದ ಹಾದಿಯಾಯಿತು” ಎನ್ನುವ ಸಿರಿಗೆ ಪತಿ ಎಲ್.ಎನ್ ಕೂಡೂರು ಅವರು ಸಹಾ ಮಾತೃತ್ವಮ್ ಯೋಜನೆಗೆ ಕೈ ಜೋಡಿಸಿದ್ದು  ಮಾತ್ರವಲ್ಲದೆ ಸಂಪೂರ್ಣ ಸಹಕಾರ ನೀಡಿದ್ದಾರೆ.

“ಶ್ರೀ ಮಠದ ಸೇವೆಯಿಂದ ಅನಿವಾರ್ಯವಾಗಿ ದೂರವುಳಿಯ ಬೇಕಾಗಿ ಬಂದಾಗ ತಳಮಳವಾಗಿತ್ತು. ಹಿಂದೆ ಆಗಾಗ ಶ್ರೀಮಠಕ್ಕೆ ಭೇಟಿ ನೀಡುತ್ತಿದ್ದೆವು. ಶ್ರೀಗುರುಗಳ ಕಾರುಣ್ಯದಿಂದ ಬೆಟ್ಟದಂತೆ ಬಂದ ಕಷ್ಟಗಳೆಲ್ಲ ಮಂಜಿನಂತೆ ಕರಗಿ ಹೋಗಿದೆ. ಒಂದೊಮ್ಮೆ ಹೊರನೋಟಕ್ಕೆ ಸೋಲು ಎಂದು ಕಂಡರೂ ಬಳಿಕ ಎಲ್ಲಾ ಕಷ್ಟಗಳೂ ಬದುಕಿನಲ್ಲಿ ಬಂದ ಪರೀಕ್ಷೆಗಳು ಎಂದು ಅವು ನಿವಾರಣೆಯಾದಾಗ ತಿಳಿಯಿತು. ಇಂದು ಬದುಕಿನಲ್ಲಿ ಯಾವುದನ್ನು ಅನುಭವಿಸುತ್ತಿದ್ದೇವೆಯೋ ಅದೆಲ್ಲವೂ ಶ್ರೀಗುರುಗಳ ಅನುಗ್ರಹ. ಸೇವೆಗಳೆಲ್ಲ ಶ್ರೀಚರಣಕ್ಕೆ ಸಮರ್ಪಿತ” ಎಂದು ಹೃದಯ ತುಂಬಿ ನುಡಿಯುವ ಸಿರಿ ಅವರಿಗೆ ಕೆಲವು ಸಂಕಷ್ಟಗಳಿಂದ ಪವಾಡ ಸದೃಶವಾಗಿ ಪಾರಾಗಿದ್ದು ಶ್ರೀಗುರುಗಳ ಅನುಗ್ರಹ ಎಂಬುದು ದೃಢವಾದ ನಂಬಿಕೆ.

ಗೃಹಿಣಿಯಾಗಿರುವ ಸಿರಿ ಕೂಡೂರು ಹಲವು ವರ್ಷಗಳಿಂದ ಮಂಗಳೂರು ನಗರದಲ್ಲಿ ವಾಸಿಸುತ್ತಿದ್ದರೂ ಇತ್ತೀಚೆಗೆ ಕೆಲವು ವರ್ಷಗಳಿಂದ ಹಳ್ಳಿಯ ಬದುಕಿಗೆ ಆದ್ಯತೆ ನೀಡಿ  ವಿಟ್ಲ ಸಮೀಪದ ಕೂಡೂರಿನಲ್ಲಿ ನೆಲೆಸಿದ್ದಾರೆ. ಹೊಲಿಗೆ, ಕಸೂತಿಗಳಲ್ಲಿ ಅತ್ಯಂತ ಆಸಕ್ತಿ ಹೊಂದಿರುವ ಇವರು ಹಸಿರು ಪ್ರಕೃತಿಯನ್ನು ಇಷ್ಟಪಡುವವರು. ವಿಟ್ಲ ವಲಯದ ಮಾತೃಪ್ರಧಾನೆಯಾಗಿಯೂ ಸೇವೆ ಸಲ್ಲಿಸುತ್ತಿರುವ ಇವರಿಗೆ ಸದಾ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳ ಬೇಕೆಂಬುದೇ ಅಭಿಲಾಷೆ.

Leave a Reply

Your email address will not be published. Required fields are marked *