ಸಾಗರ ಪ್ರಾಂತ್ಯದ ಮಾತೃತ್ವಮ್ ನ ಅಧ್ಯಕ್ಷೆಯೂ, ಸಂಪನ್ಮೂಲ ಖಂಡದ ಸಂಯೋಜಕಿಯೂ ಆಗಿರುವ ವೀಣಾ ಪ್ರಭಾಕರ ಭಟ್ಟ ಅವರಿಗೆ ಮಾಸದ ಮಾತೆಯಾಗಿ ಗುರಿ ತಲುಪಿದುದಕ್ಕಿಂತಲೂ ಹೆಚ್ಚು ಸಂತಸ ಶ್ರೀ ಗುರುಗಳ ಸೇವೆಯಲ್ಲಿ ಒಂದು ಬಿಂದುವಾಗಿ ಸೇರಿದೆ ಎಂಬುದರ ಬಗ್ಗೆ.
ಅಂಬಾಗಿರಿ ಮಠಕ್ಕೆ ಶ್ರೀ ಸಂಸ್ಥಾನದವರು ಭೇಟಿಯಿತ್ತ ಸಂದರ್ಭದಲ್ಲಿ ಮೊದಲ ಬಾರಿಗೆ ಮಂತ್ರಾಕ್ಷತೆ ಪಡೆದು ಕೊಂಡಾಗಲೇ ತನ್ನ ಬದುಕಿನ ಪಥ ಬದಲಾಯಿತು. ಗುರು ಚರಣ ಸೇವೆಯಿಂದ ಇಂದು ಬಾಳಿನಲ್ಲಿ ನೆಮ್ಮದಿ , ಸಂತಸ ಮನೆಮಾಡಿದೆ. ಅಂತರಂಗದಲ್ಲಿ ಬಚ್ಚಿಟ್ಟ ಕನಸುಗಳು ಸಹಾ ನನಸಾಗುವಂತಹ ಸೌಭಾಗ್ಯ ದೊರಕಿದ್ದು ಶ್ರೀ ಗುರುಗಳ ಅನುಗ್ರಹದಿಂದ ಎಂದು ಹೃದಯ ತುಂಬಿ ಹೇಳುತ್ತಾರೆ ವೀಣಾ ಭಟ್.
“ಶ್ರೀ ಗುರುಗಳ ಯೋಜನೆಗಳ ಹಿಂದೆ ಯಾವುದೋ ಉತ್ತಮ ಗುರಿಯಿದೆ. ಆದುದರಿಂದಲೇ ಶ್ರೀ ಸಂಸ್ಥಾನದವರ ಮೇಲಿನ ಅಖಂಡ ಶ್ರದ್ಧೆಯಿಂದ ಕಾರ್ಯಕ್ಕೆ ತೊಡಗಿಸಿಕೊಂಡೆ. ಎರಡು ವರ್ಷ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಭರಿಸುವ ಜೊತೆಗೆ ನೂರಕ್ಕೂ ಹೆಚ್ಚು ಮಾತೆಯರನ್ನು ಮಾಸದ ಮಾತೆಯರಾಗಿ ಸೇವೆ ಮಾಡಲು ನೇಮಿಸಲು ಸಾಧ್ಯವಾಯಿತು” ಎಂಬುದು ಅವರ ಧನ್ಯತೆಯ ನುಡಿಗಳು.
ಶಿರಸಿ ನಗರದಲ್ಲಿ ವಾಸಿಸುವುದರಿಂದ ಸ್ವಯಂ ಗೋ ಪಾಲನೆಯ ಅವಕಾಶದಿಂದ ವಂಚಿತಳಾದೆ ಎನ್ನುವ ಇವರು ತಮ್ಮ ಬಿಡುವಿನ ಸಮಯವನ್ನೆಲ್ಲ ಗೋಸ್ವರ್ಗದ ಗೋವುಗಳಿಗೆ ಮೀಸಲಿರಿಸಿದ್ದಾರೆ.
ಈ ಹಿಂದೆ ಮಾತಾ ಸಹಸ್ರ ಯೋಜನೆಯಲ್ಲಿ ಭಾಗವಹಿಸಿದ ಇವರು ಕೇವಲ ಒಂದೇ ತಿಂಗಳಲ್ಲಿ ಗುರಿ ಮುಟ್ಟಿದವರು.
ಪತಿ ಪ್ರಭಾಕರ ಗಣಪತಿ ಭಟ್ಟ ಅವರು ಶಾಲಾ ಅಧ್ಯಾಪಕರಾಗಿದ್ದಾರೆ. ಜೊತೆಯಲ್ಲಿಯೇ ಜ್ಯೋತಿಷಿಗಳೂ ಆಗಿರುವುದರಿಂದ ವೀಣಾ ಭಟ್ ಅವರಿಗೆ ಮನೆಯಲ್ಲಿಯೇ ಹಲವಾರು ಜನರ ಪರಿಚಯ ಸಾಧ್ಯವಾಯಿತು. ಮನೆಗೆ ಬಂದವರ ಬಳಿ ಗೋಸ್ವರ್ಗದ ಬಗ್ಗೆ, ಶ್ರೀ ಗುರುಗಳ ಯೋಜನೆಗಳ ಬಗ್ಗೆ ವಿವರಿಸಿ, ಅವರ ಮನವೊಲಿಸಿದರು. ಮಾತೆಯರ ಮನವೊಲಿಸಿ ಮಾತೃತ್ವಮ್ ಯೋಜನೆಯ ಮೂಲಕ ಗೋ ಸೇವೆ ಮಾಡಲು ಪ್ರೇರಣೆ ನೀಡಿದರು.
“ಶ್ರೀ ಮಠದಲ್ಲಿ ಪರಿಚಿತರಾದ ಸೋದರಿಯರು ಸಹಾ ಮಾತೃತ್ವಮ್ ಯೋಜನೆಗೆ ಮಾಸದ ಮಾತೆಯಾಗಲು ಮುಂದೆ ಬನ್ನಿ ಎಂದಾಗ ವಿಮುಖರಾಗದೆ ಮುಂದೆ ಬಂದಿದ್ದು ಮನಸ್ಸಿಗೆ ಖುಷಿ ಎನಿಸಿದೆ” ಎಂದು ಹರ್ಷ ಪಡುವ ಅವರ ಮನ ಸದಾ ಗೋ ಮಾತೆಗಾಗಿಯೇ ತುಡಿಯುತ್ತಿದೆ ಎಂದರೆ ತಪ್ಪಲ್ಲ.
ಕೋಟಿ ದೇವರ ನಿವಾಸವಾದ ಗೋಮಾತೆಯ ರಕ್ಷಣೆಗಾಗಿ ಕೈ ಜೋಡಿಸುವಂತೆ ಹಲವಾರು ಜನರಲ್ಲಿ ಮನವಿ ಮಾಡಿ ವ್ಯಾಟ್ಸಾಪ್ ಗ್ರೂಪ್ ಗಳನ್ನು ಮಾಡುವ ಮೂಲಕವೂ ದೇಶೀಯ ಗೋವುಗಳ ಮಹತ್ವವನ್ನು ಜನಮನ ತಲುಪಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಗೋಧನ ಹುಂಡಿಗಳನ್ನಿರಿಸಿ ಗೋಸ್ವರ್ಗದ ಹಸುಗಳತ್ತ ಇತರ ಸಮಾಜದ ಬಂಧುಗಳು ಸಹಾ ಗಮನ ಹರಿಸುವಂತೆ ಮಾಡಿ, ಗೋ ಸ್ವರ್ಗ ಸಂವಾದದಂತಹ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಮುಂಚೂಣಿಯಲ್ಲಿ ಶ್ರಮಿಸಿದರು.
ಅದೆಷ್ಟೋ ಜನರನ್ನು ಸಂಪರ್ಕಿಸಿ ಗೋ ಸ್ವರ್ಗದ ಬಗ್ಗೆ ಮಾಹಿತಿ ನೀಡಿ “ದೂರ ದೂರದ ಪ್ರವಾಸೀ ತಾಣಗಳಿಗೆ ಭೇಟಿ ನೀಡುವ ನೀವು ಒಂದು ಬಾರಿ ಗೋಸ್ವರ್ಗಕ್ಕೆ ಬನ್ನೀ” ಎಂದು ಆಮಂತ್ರಿಸಿ ತಾವೇ ಅವರ ಜೊತೆಗೆ ಗೋಸ್ವರ್ಗಕ್ಕೆ ಬಂದು ಅಲ್ಲಿನ ವಿಶೇಷತೆಗಳನ್ನು ಮನವರಿಕೆ ಮಾಡಿಸಿದ ಹಿರಿಮೆ ಇವರದ್ದು.
“ಮಾತಾ ಸಹಸ್ರದ ಗುರಿ ತಲುಪಿ ಶ್ರೀಗುರುಗಳಿಂದ ಬಾಗಿನ ಸ್ವೀಕರಿಸಿದ ಅತ್ಯಮೂಲ್ಯ ನಿಮಿಷಗಳೇ ಬದುಕಿನಲ್ಲಿ ಪಾವನ ಕ್ಷಣಗಳು” ಎಂಬುದು ವೀಣಾ ಭಟ್ಟರ ಹೃದಯದ ಮಾತುಗಳು.
ಕೆಲವು ವರ್ಷಗಳ ಹಿಂದೆ ತಮ್ಮ ಮನೆಯಲ್ಲಿ ಭಿಕ್ಷಾ ಸೇವೆ ಮಾಡಿಸಿದಂದಿನಿಂದ ಸಂಪೂರ್ಣವಾಗಿ ಶ್ರೀ ಮಠದ ಸೇವೆಗೆ ಮೊದಲ ಆದ್ಯತೆ ನೀಡಿದ ಇವರಿಗೆ ಬದುಕಿನಲ್ಲಿ ಎದುರಿಸ ಬೇಕಾಗಿ ಬಂದ ಸಂಕಷ್ಟಗಳು ನಿವಾರಣೆಯಾಗಿದ್ದು ಗುರು ಚರಣ ಸೇವೆಯಿಂದ ದೊರೆತ ಪುಣ್ಯ ಎಂಬ ಭದ್ರ ಭರವಸೆಯಿದೆ.
“ನನ್ನ ಕೊನೆಯುಸಿರಿರುವ ತನಕವೂ ಗುರು ಪೀಠದ ಸೇವೆ ಮಾಡುವ ಭಾಗ್ಯ ಕರುಣಿಸು ಎಂಬುದೇ ಭಗವಂತನಲ್ಲಿ ನನ್ನ ನಿರಂತರ ಕೋರಿಕೆ” ಎಂದು ವಿನಯಪೂರ್ವಕ ಹೇಳುವ ಇವರಿಗೆ ಗೋಸ್ವರ್ಗದ ಉನ್ನತಿಗಾಗಿ ಮತ್ತಷ್ಟು ಶ್ರಮಿಸಬೇಕು. ಇನ್ನಷ್ಟು ಮಾಸದ ಮಾತೆಯರನ್ನು ಮಾತೃತ್ವಮ್ ಯೋಜನೆಯ ಮೂಲಕ ನಿಯೋಜಿಸಿ ದೇಶೀ ಗೋವುಗಳ ರಕ್ಷಣೆಗಾಗಿ ತಮ್ಮಿಂದ ಸಾಧ್ಯವಾದಷ್ಟು ಸೇವೆ ಮಾಡ ಬೇಕೆಂಬುದೇ ಮುಂದಿನ ಗುರಿ. ಶ್ರೀ ಗುರುಗಳ ಕೃಪೆಯಿಂದ ಆ ಗುರಿ ಸೇರುವ ಭರವಸೆಯೂ ವೀಣಾ ಅವರಿಗಿದೆ.